ಸೋಮವಾರ, ಏಪ್ರಿಲ್ 6, 2020
19 °C

ಕಛ್‌ನಲ್ಲಿ ‘ರಾಬರ್ಟ್‌’: ಜೈಶ್ರೀರಾಮ್‌ ಎಂದ ಹನುಮ ವೇಷಧಾರಿ ದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದರ್ಶನ್‌ ನಾಯಕನಾಗಿರುವ ‘ರಾಬರ್ಟ್‌’ ಎಮೋಷನ್‌, ಥ್ರಿಲ್ಲರ್‌, ಆ್ಯಕ್ಷನ್‌ ಚಿತ್ರ. ತರುಣ್‌ ಸುಧೀರ್‌ ನಿರ್ದೇಶನದ ಈ ಸಿನಿಮಾಕ್ಕೆ ಕನ್ನಡತಿ ಆಶಾ ಭಟ್‌ ನಾಯಕಿ. ನಾಯಕ ಮತ್ತು ನಾಯಕಿಯ ರೊಮ್ಯಾಂಟಿಕ್‌ ಸಾಂಗ್‌ನ ಚಿತ್ರೀಕರಣಕ್ಕೆ ಚಿತ್ರತಂಡ ಸ್ಪೇನ್‌ಗೆ ತೆರಳಲು ನಿರ್ಧರಿಸಿತ್ತು. ಆದರೆ, ‘ಕೋವಿಡ್‌ 19’ ಭೀತಿಯ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಹಿಂದಡಿ ಇಟ್ಟಿತ್ತು.

ಈಗಾಗಲೇ ಬೆಂಗಳೂರು, ಮೈಸೂರು, ಹೈದರಾಬಾದ್‌, ಚೆನ್ನೈ, ಪುದುಚೇರಿ, ವಾರಾಣಸಿ, ಲಖನೌದಲ್ಲಿ ಶೂಟಿಂಗ್‌ ನಡೆಸಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಪ್ರಸ್ತುತ ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಕೊನೆಯ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿನ ಸುಂದರ ತಾಣಗಳಲ್ಲಿ ದರ್ಶನ್‌ ಮತ್ತು ಆಶಾ ಭಟ್‌ ಅವರ ರೊಮ್ಯಾಂಟಿಕ್‌ ಕ್ಷಣಗಳನ್ನು ಸೆರೆ ಹಿಡಿಯಲಾಗುತ್ತಿದೆಯಂತೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ಈ ಸಾಂಗ್‌ನೊಂದಿಗೆ ಚಿತ್ರದ ಶೂಟಿಂಗ್‌ ಮುಕ್ತಾಯವಾಗಲಿದ್ದು, ಏಪ್ರಿಲ್‌ 9ರಂದು ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು.

ಇಲ್ಲಿಯವರೆಗೂ ದರ್ಶನ್‌ ಇಂತಹ ಜಾನರ್‌ನಲ್ಲಿ ಕಾಣಿಸಿಕೊಂಡಿಲ್ಲ. ಇದೇ ಚಿತ್ರದ ಬಹುಮುಖ್ಯ ಅಂಶ. ಅವರ ಇಮೇಜ್‌ನಲ್ಲಿಯೇ ಚಿತ್ರದ ಕಥೆ ಹೆಣೆಯಲಾಗಿದೆ ಎಂಬುದು ಚಿತ್ರತಂಡದ ವಿವರಣೆ. 

ಉಮಾಪತಿ ಫಿಲ್ಮ್ಸ್ ಬ್ಯಾನರ್‌ನಡಿ ಉಮಾಪತಿ ಶ್ರೀನಿವಾಸಗೌಡ ನಿರ್ಮಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಒಳ್ಳೆಯ ಗಳಿಕೆ ಕಂಡಿದೆಯಂತೆ. ಇದರಲ್ಲಿ ಟಾಲಿವುಡ್‌ನ ಖ್ಯಾತ ಖಳನಟ ಜಗಪತಿಬಾಬು ಅವರು ದರ್ಶನ್‌ ವಿರುದ್ಧ ತೊಡೆತೊಟ್ಟಿದ್ದಾರೆ. ವಿನೋದ್ ಪ್ರಭಾಕರ್, ಸೋನಾಲ್ ಮಾಂತೆರೊ, ಶಿವರಾಜ್ ಕೆ.ಆರ್. ಪೇಟೆ, ರವಿಕಿಶನ್, ಚಿಕ್ಕಣ್ಣ, ರವಿಶಂಕರ್ ತಾರಾಗಣದಲ್ಲಿದ್ದಾರೆ.

ಜೈ ಶ್ರೀರಾಮ್‌ ಹಾಡು ಬಿಡುಗಡೆ
ಚಿತ್ರೀಕರಣದ ಆರಂಭದಿಂದಲೂ ‘ರಾಬರ್ಟ್‌’ ಕುತೂಹಲ ಹೆಚ್ಚಿಸಿದೆ. ಕಥೆಯ ಬಗ್ಗೆ ನಿರ್ದೇಶಕರು ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ತಿಂಗಳ ಮೊದಲ ವಾರದಲ್ಲಿ ಚಿತ್ರದ  ‘ಬಾ ಬಾ ಬಾ ನಾ ರೆಡಿ...’ ಮೊದಲ ಹಾಡನ್ನು ಬಿಡುಗಡೆಗೊಳಿಸಲಾಗಿತ್ತು.

ಈಗ ಆನಂದ್‌ ಆಡಿಯೊದಲ್ಲಿ ಎರಡನೇ ಹಾಡು ‘ಜೈ ಶ್ರೀರಾಮ್‌...’ ಬಿಡುಗಡೆಯಾಗಿದೆ. ದರ್ಶನ್‌ ಹನುಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಾನರ ಸೇನೆಯೊಟ್ಟಿಗೆ ಅವರು ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಹೋಳಿ ಹುಣ್ಣಿಮೆ ಪ್ರಯುಕ್ತ ಬಿಡುಗಡೆಯಾಗಿರುವ ಹಾಡು ಇದು. ಜೈಶ್ರೀರಾಮ್‌... ಜಪ ಮಾಡುತ್ತಾ ಎಲ್ಲರಲ್ಲೂ ಭಕ್ತಿ ಮತ್ತು ಉತ್ಸಾಹ ಹೆಚ್ಚಿಸುವ ಶಕ್ತಿ ಇದರಲ್ಲಿದೆ. ವಿ. ನಾಗೇಂದ್ರಪ್ರಸಾದ್‌ ಬರೆದಿರುವ ಈ ಹಾಡಿಗೆ ದಿವ್ಯಕುಮಾರ್‌ ಧ್ವನಿಯಾಗಿದ್ದಾರೆ.

‘ಮನಸ್ಸಿಗೆ ಜೋಷ್ ನೀಡುವ ನಮ್ಮ ರಾಬರ್ಟ್ ಚಿತ್ರದ ಒಂದು ಎನರ್ಜೆಟಿಕ್‌ ಗೀತೆ ‘ಜೈ ಶ್ರೀರಾಮ್...’ ಈಗ ಬಿಡುಗಡೆಯಾಗಿದೆ. ನೋಡಿ ಆನಂದಿಸಿ’ ಎಂದು ದರ್ಶನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)