ಕೆಜಿಎಫ್ ಹೊಳಪಿನ ರೂಪಾ

7

ಕೆಜಿಎಫ್ ಹೊಳಪಿನ ರೂಪಾ

Published:
Updated:

ಆಕೆಗೆ ಬಾಲ್ಯದಿಂದಲೂ ಸಿನಿಮಾ ಎಂದರೆ ಹುಚ್ಚು. ಸಿನಿಮಾಗಳನ್ನು ನೋಡುತ್ತಾ ಬೆಳೆದ ಆಕೆ, ತಾನೂ ಸಿನಿಮಾ ನಟಿಯಾಗಬೇಕು ಎಂದು ಕನಸು ಕಾಣುತ್ತಿದ್ದರು. ಶಾಲಾ ದಿನಗಳಿಂದಲೇ ಆ ಕನಸಿಗೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು. ಬಾಲ್ಯದಿಂದಲೇ ನಾಟಕ, ನೃತ್ಯದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಟನೆಯ ಕನಸಿಗೆ ರೆಕ್ಕೆ ಮೂಡಿಸುತ್ತಿದ್ದರು. ಬಾಲ್ಯದ ಆ ಕನಸು ನನಸಾಗಿದ್ದು ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ.

ಕೆಜಿಎಫ್ ಸಿನಿಮಾದ ದ್ವಿತೀಯಾರ್ಧದಲ್ಲಿ ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡು, ಆ ಮೂಲಕ ನಟನೆಯ ಭರವಸೆ ಮೂಡಿಸಿದ್ದ ಬೆಡಗಿ ರೂಪಾ ರಾಯಪ್ಪ. ಬೆಂಗಳೂರಿನವರಾದ ಇವರು ಎಂಜಿನಿಯರಿಂಗ್ ಓದುತ್ತಿದ್ದ ದಿನಗಳಿಂದ ರಂಗತಂಡಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಟನಾ ಬದುಕಿಗೆ ತೆರೆದುಕೊಂಡವರು. 

ಕೆಜಿಎಫ್‌ ಸಿನಿಮಾಕ್ಕೆ ಆಯ್ಕೆಯಾಗುವ ಮೊದಲು ಕೆಲವು ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದಿದ್ದರೂ ಅವರು ನಟಿಸಿರಲಿಲ್ಲ.
ಈ ಬಗ್ಗೆ ಹೇಳುವ ರೂಪಾ, ‘ನಾನು ನಟಿಸುವ ಚೊಚ್ಚಲ ಚಿತ್ರ ತುಂಬಾ ಮಹತ್ತರ ಸಿನಿಮಾ ಆಗಿರಬೇಕು. ಅದು ಇತಿಹಾಸ ನಿರ್ಮಿಸುವಂತಿರಬೇಕು. ಪಾತ್ರ ಚಿಕ್ಕದಾಗಿದ್ದರೂ ಕತೆಗೆ ತಿರುವು ನೀಡುವಂಥದ್ದಾಗಿರಬೇಕು ಎಂಬೆಲ್ಲಾ ಕನಸುಗಳಿದ್ದವು. ಆ ಕಾರಣಕ್ಕೆ ನಾನು ಬೇರೆ ಅವಕಾಶಗಳು ಬಂದರೂ ಒಪ್ಪಿರಲಿಲ್ಲ. ಕೆಜಿಎಫ್ ನನ್ನ ಕನಸನ್ನು ನನಸಾಗಿಸಿದ ಸಿನಿಮಾ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಸಿನಿಮಾದಲ್ಲಿ ನಟಿಸುವ ಮೊದಲು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು ರೂಪಾ. ಕೆಜಿಎಫ್‌ನ ನಂತರ ಅವರಿಗೆ ಅನೇಕ ಸಿನಿಮಾ ಅವಕಾಶಗಳು ಬಂದಿದ್ದು ಸದ್ಯ ‘ಮೈಸೂರು ಡೈರೀಸ್‌’ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಮೊದಲ ಬಾರಿ ಕ್ಯಾಮೆರಾ ಎದುರಿಸಿದ ಅನುಭವವನ್ನು ಹೇಳುತ್ತಾ, ‘ನಾನು ಕೆಜಿಎಫ್ ಸಿನಿಮಾಗೆ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದಾದರೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರಿಂದ ನನಗೆ ಕ್ಯಾಮೆರಾ ಎದುರಿಸುವುದು ಅಷ್ಟೊಂದು ಕಷ್ಟ ಎನ್ನಿಸಲಿಲ್ಲ. ನಮ್ಮ ನಿರ್ದೇಶಕರು ಕೂಡ ಚೊಚ್ಚಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಭಯದ ಭಾವನೆ ಬಾರದಂತೆ ನೋಡಿಕೊಂಡಿದ್ದರು. ನನ್ನ ಮನದಲ್ಲಿ ನಾನು ಚೆನ್ನಾಗಿ ನಟಿಸಬೇಕು ಎಂಬುದಷ್ಟೇ ಇದ್ದ ಕಾರಣ ಕ್ಯಾಮೆರಾ ಮುಂದೆ ನಿಂತಿದ್ದೇನೆ ಎಂಬುದನ್ನು ಮರೆತು ನಟಿಸಿದ್ದೆ’ ಎನ್ನುತ್ತಾರೆ.

ಕೆಜಿಎಫ್‌ನಲ್ಲಿ ಮುಗ್ಧ, ಅಸಹಾಯಕ, ಜೀತದಾಳು ಹೆಣ್ಣುಮಗಳೊಬ್ಬಳ ಪಾತ್ರ ಮಾಡಿದ್ದ ರೂಪಾ ಅವರಿಗೆ ಚಿತ್ರದ ಶೂಟಿಂಗ್ ವೇಳೆ ಸವಾಲು ಎನ್ನಿಸಿದ್ದು ಶೂಟಿಂಗ್ ಸ್ಥಳದ ವಾತಾವರಣವಂತೆ. ಅಲ್ಲಿನ ದೂಳು, ಗಾಳಿ, ಬಿಸಿಲು ಇವೆಲ್ಲವೂ ಸೇರಿ ಒಂದು ರೀತಿಯ ಸವಾಲನ್ನೇ ಒಡ್ಡಿತ್ತು. ಕೆಲವೊಮ್ಮೆ ಬಿರುಗಾಳಿ ಬಂದು ತತ್ತರಿಸಿದ ಉದಾಹರಣೆಯೂ ಇದೆ. ಜೊತೆಗೆ ಪಾತ್ರಕ್ಕೆ ತಕ್ಕಂತಹ ಮೇಕಪ್ ಹಾಕಿಕೊಂಡು ನಟಿಸುವುದು ಸವಾಲು ಎನ್ನಿಸಿತ್ತು’ ಎನ್ನುತ್ತಾ ಅಂದಿನ ದಿನಗಳನ್ನು ನೆನೆಸಿಕೊಳ್ಳುತ್ತಾರೆ.

ಡಯಟ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ಇವರು ಮನೆಯ ಆಹಾರವನ್ನು ಬಿಟ್ಟು ಹೊರಗಡೆ ಆಹಾರವನ್ನು ಸೇವಿಸುವುದಿಲ್ಲ. ಸಕ್ಕರೆ ಅಂಶ ಅಧಿಕವಿರುವ ಪದಾರ್ಥಗಳು ಇವರ ಆಹಾರದ ಪಟ್ಟಿಯಿಂದ ಸದಾ ದೂರವಿರುತ್ತವೆ.  ಫಿಟ್‌ನೆಸ್‌ಗಾಗಿ ಪ್ರತಿದಿನ ಒಂದು ಗಂಟೆ ಓಡುತ್ತಾರೆ. 30 ನಿಮಿಷ ದೇಹ ದಂಡಿಸುತ್ತಾರೆ. 

ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವ ಇವರು ದೇಶ, ವಿದೇಶಗಳ, ಎಲ್ಲಾ ಭಾಷೆಗಳ ಸಿನಿಮಾಗಳನ್ನು ನೋಡುತ್ತಾರೆ. ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುವುದು ಇವರ ಹವ್ಯಾಸಗಳಲ್ಲಿ ಒಂದು. 

ಕೆಜಿಎಫ್ ಸಿನಿಮಾದ ಬಗ್ಗೆ ಖುಷಿಯಿಂದ ಮಾತನಾಡುವ ಇವರು ‘ಇದು ನನ್ನ ಮೊದಲ ಸಿನಿಮಾ ಎಂಬ ಕಾರಣಕ್ಕೆ ಅದರ ಮೇಲೆ ಯಾವಾಗಲೂ ಪ್ರೀತಿ ಇರುತ್ತದೆ. ನಾನು ಎಷ್ಟೇ ಸಿನಿಮಾಗಳನ್ನು ಮಾಡಿದರು ಈ ಸಿನಿಮಾವನ್ನು ಮರೆಯುವುದಿಲ್ಲ. ಇದರಿಂದ ನನಗೆ ಒಂದು ಮಾನ್ಯತೆ ಸಿಕ್ಕಿದೆ. ಈ ಸಿನಿಮಾದ ಅನುಭವವೇ ಬಹಳ ದೊಡ್ಡದು’ ಎಂದು ಋಣಿಯಂತೆ ಮಾತನಾಡುತ್ತಾರೆ. 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !