ಬುಧವಾರ, ಆಗಸ್ಟ್ 21, 2019
27 °C

ಕೋಸ್ಟಲ್‌ವುಡ್‌ಗೆ ಖಡಕ್ ವಿಲನ್ ‘ರೋಶನ್ ಶೆಟ್ಟಿ’

Published:
Updated:
Prajavani

ಕರಾವಳಿಯಲ್ಲಿ ಹೊಸ ಅಲೆಯ ತುಳು ಚಿತ್ರಗಳು ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಪ್ರತಿಭಾವಂತ ಕಲಾವಿದರಿಗೆ ವಿವಿಧ ಅವಕಾಶಗಳು ಒದಗಿ ಬರುತ್ತಿವೆ. ಇಂದು ಅನೇಕ ತುಳು ಚಿತ್ರಗಳು ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರಪಂಚದ ಮೂಲೆ ಮೂಲೆಗೂ ತಲುಪುತ್ತಿವೆ. ಹಾಸ್ಯದ ಜೊತೆ ಉತ್ತಮ ಸಂದೇಶ ರವಾನಿಸುವ ಅನೇಕ ಪ್ರಯತ್ನಗಳು ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹಲವು ಹೊಸ ಮುಖಗಳು ನಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಅನುಭವಿ ಕಲಾವಿದರಿಗೆ ಸೆಡ್ಡು ಹೊಡೆಯುವಂತೆ ತುಂಬು ಉತ್ಸಾಹದಿಂದ ಕೋಸ್ಟಲ್‌ವುಡ್‌ಗೆ ಬಂದಿಳಿಯುತ್ತಿದ್ದಾರೆ. ಹೊಸ ಖದರ್, ಎತ್ತರದ ಕಾಯ, ಹುರಿಗಟ್ಟಿಸಿದ ಮೈಕಟ್ಟು, ರಗಡ್ ಲುಕ್‌ನೊಂದಿಗೆ ಖಡಕ್ ವಿಲನ್‌ಗಳು ಈಗ ಕೋಸ್ಟಲ್‌ವುಡ್‌ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಟೀಸರ್‌ನಿಂದಲೇ ಸಾಕಷ್ಟು ಸದ್ದು ಮಾಡುತ್ತಿರುವ ‘ಗಿರಿಗಿಟ್’ ಸಿನಿಮಾದ ಖಳನಾಯಕನಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ರೋಶನ್ ಶೆಟ್ಟಿ.

ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ವಿಲನ್ ಆಗಿ ಕೋಸ್ಟಲ್‌ವುಡ್ ಪ್ರವೇಶಿಸಿರುವ ರೋಶನ್, ಕಾಲೇಜು ದಿನಗಳಲ್ಲಿಯೇ ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ಕನಸು ಹೊತ್ತವರು. ಶಾಲಾ ಕಾಲೇಜು ದಿನಗಳಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಸ್ಯಾಂಡಲ್‌ವುಡ್‌ನ ‘ಅನುಕ್ತ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹರೇನ್‌ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರೋಶನ್ ಈಗ ಕೋಸ್ಟಲ್‌ವುಡ್‌ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಭಿನಯದಲ್ಲಿನ ಆಸಕ್ತಿಯೇ ಅವರನ್ನು ಕೋಸ್ಟಲ್‌ವುಡ್‌ ಕೈ ಬೀಸಿ ಕರೆದಿದೆ. ಹಲವು ಕನಸುಗಳನ್ನು ಹೊತ್ತು ಬಣ್ಣ ಹಚ್ಚಿರುವ ರೋಶನ್ ಅವರು ಶಿವರಾಮ ಶೆಟ್ಟಿ, ರಜನಿ ಶೆಟ್ಟಿ ದಂಪತಿ ಪುತ್ರ. 

Post Comments (+)