ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಎಸ್‌. ರಾಜಮೌಳಿಗೆ ಮೊದಲ ಆಘಾತ!

ಮುಂಗಡ ಹಣ ವಾಪಸ್‌ಗೆ ಬೇಡಿಕೆ ಇಟ್ಟ ಆರ್‌ಆರ್‌ಆರ್‌ ಸಿನಿಮಾ ವಿತರಕರು
Last Updated 15 ಜೂನ್ 2020, 10:04 IST
ಅಕ್ಷರ ಗಾತ್ರ

ಚಿತ್ರೋದ್ಯಮಕ್ಕೆ ಕೊರೊನಾ ಭಾರೀ ಪೆಟ್ಟು ನೀಡಿದೆ. ಇದು ಭಾರತೀಯ ಚಿತ್ರರಂಗಕ್ಕಷ್ಟೇ ಸೀಮಿತಗೊಂಡಿಲ್ಲ; ಹಾಲಿವುಡ್‌ ಸೇರಿದಂತೆ ವಿವಿಧ ದೇಶಗಳ ಚಿತ್ರೋದ್ಯಮಗಳು ನಲುಗಿ ಹೋಗಿವೆ. ಸಾಕಷ್ಟು ಬದಲಾವಣೆಗೂ ಮುನ್ನುಡಿ ಬರೆದಿದೆ.

ಈಗ ಸಿನಿಮಾ ವಿತರಕರು ದೊಡ್ಡ ಮೊತ್ತ ಪಾವತಿಸಿ ಸಿನಿಮಾಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಬಿಗ್‌ ಬಜೆಟ್‌ ಸಿನಿಮಾಗಳ ಗೋಳು ಹೇಳತೀರದು. ಒಂದೆಡೆ ಈ ಚಿತ್ರಗಳ ಶೂಟಿಂಗ್‌ ಅರ್ಧಕ್ಕೆ ಸ್ಥಗಿತಗೊಂಡಿದ್ದರೆ; ಮತ್ತೊಂದೆಡೆ ಯಾವಾಗ ಬಿಡುಗಡೆಯಾಗುತ್ತವೆ ಎಂಬ ಖಾತ್ರಿಯೂ ವಿತರಕರಿಗೆ ಇಲ್ಲ. ಹಾಗಾಗಿ, ಚಿತ್ರ ಬಿಡುಗಡೆಗೂ ಮೊದಲೇ ಹೂಡಿರುವ ಬಂಡವಾಳ ವಾಪಸ್‌ ಕೈ ಸೇರುತ್ತದೆಯೇ ಎಂಬುದು ಅವರ ಆತಂಕ.

ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ (ರೌದ್ರಂ ರಣಂ ರುಧಿರಂ) ಸಿನಿಮಾ ಕುತೂಹಲ ಹೆಚ್ಚಿಸಿರುವುದು ದಿಟ. ರಾಮ್‌ಚರಣ್‌, ಜೂನಿಯರ್‌ ಎನ್‌ಟಿಆರ್‌, ಬಾಲಿವುಡ್‌ ನಟಿ ಅಲಿಯಾ ಭಟ್‌ ಮತ್ತು ಅಜಯ್‌ ದೇವಗನ್‌ ಇದರಲ್ಲಿ ನಟಿಸಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ಇದು ಬಿಡುಗಡೆಯಾಗಿದೆ. ಇದರ ಶೂಟಿಂಗ್‌ಗೂ ಕೊರೊನಾ ಬಿಸಿ ತಟ್ಟಿದೆ. ಸದ್ಯಕ್ಕೆ ತೆಲಂಗಾಣ ಸರ್ಕಾರ ಅನುಮತಿ ನೀಡಿರುವುದರಿಂದ ಶೀಘ್ರವೇ ಚಿತ್ರೀಕರಣ ಶುರುವಾಗುವನಿರೀಕ್ಷೆಯಿದೆ.

ರಾಜಮೌಳಿ ಕೂಡ ಶೂಟಿಂಗ್‌ಗೆ ಸಿದ್ಧತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಮೊದಲ ಆಘಾತ ಎದುರಾಗಿದೆ. ‘ಆರ್‌ಆರ್‌ಆರ್‌’ ಶೂಟಿಂಗ್‌ ಯಾವಾಗ ಪೂರ್ಣಗೊಳ್ಳುತ್ತದೆ ಮತ್ತು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ನಿಖರವಾಗಿ ಗೊತ್ತಿಲ್ಲ. ಹಾಗಾಗಿ, ಮುಂಗಡವಾಗಿ ನೀಡಿರುವ ಹಣ ವಾಪಸ್‌ ನೀಡುವಂತೆ ವಿತರಕರು ರಾಜಮೌಳಿ ಮುಂದೆ ಬೇಡಿಕೆ ಮುಂದಿಟ್ಟಿದ್ದಾರಂತೆ. ಇದು ‘ಆರ್‌ಆರ್‌ಆರ್‌’ ಚಿತ್ರ ನಿರ್ಮಿಸುತ್ತಿರುವ ಡಿ.ವಿ.ವಿ. ದಾನಯ್ಯಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಭಾರತದಲ್ಲಿ ಚಿತ್ರಮಂದಿರಗಳು ಯಾವಾಗ ಬಾಗಿಲು ತೆರೆಯುತ್ತವೆ ಎಂಬುದು ಯಾರಿಗೂ ತಿಳಿದಿಲ್ಲ. ಅಂದಹಾಗೆ ವಿದೇಶಗಳಲ್ಲಿ ಸಿನಿಮೋದ್ಯಮದ ವಹಿವಾಟು ಚೇತರಿಸಿಕೊಳ್ಳಲು ಇನ್ನೂ ಒಂದೂ ವರ್ಷ ಬೇಕಿದೆ. ಹಾಗಾಗಿ, ವಿತರಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಒಂದು ವರ್ಷದ ಹಿಂದೆಯೇ ಅಮೆರಿಕದಲ್ಲಿ ‘ಆರ್‌ಆರ್‌ಆರ್‌’ ಚಿತ್ರ ಪ್ರದರ್ಶನದ ಹಕ್ಕುಗಳು ₹ 60 ಕೋಟಿಗೆ ಮಾರಾಟವಾಗಿದ್ದವು. ವಿತರಣೆಯ ಹಕ್ಕು ಪಡೆದ ಕಂಪನಿಯು ಇತ್ತೀಚೆಗೆ ₹ 3 ಕೋಟಿ ಮುಂಗಡವನ್ನೂ ಪಾವತಿಸಿತ್ತು. ಅಂದಹಾಗೆ 2021ರ ಜನವರಿ 8ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಒಪ್ಪಂದ ಮೇರೆಗೆ ಈ ಹಣ ನೀಡಲಾಗಿತ್ತಂತೆ. ಆದರೆ, ಶೂಟಿಂಗ್‌ ಮತ್ತಷ್ಟು ವಿಳಂಬವಾದರೆ ಸಿನಿಮಾದ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗಲಿದೆ ಎಂಬುದು ವಿತರಕರ ಆತಂಕ. ಹಾಗಾಗಿಯೇ, ಮುಂಗಡ ಹಣ ವಾಪಸ್‌ ಪಡೆಯಲು ಅವರು ನಿರ್ಧರಿಸಿದ್ದಾರೆ.

ಈ ಬೆಳವಣಿಗೆಯು ಕೇವಲ ‘ಆರ್‌ಆರ್‌ಆರ್‌’ ಸಿನಿಮಾಕ್ಕಷ್ಟೇ ಸೀಮಿತಗೊಂಡಿಲ್ಲ. ತೆಲುಗಿನ ವಿವಿಧ ಪ್ರೊಡಕ್ಷನ್ಸ್‌ನಡಿ ಸಿನಿಮಾಗಳ ಬಿಡುಗಡೆ ಸಂಬಂಧ ಮುಂಗಡ ಪಾವತಿಸಿರುವ ವಿತರಕರು ತಮ್ಮ ಹಣವನ್ನು ವಾಪಸ್‌ ನೀಡುವಂತೆ ನಿರ್ಮಾಪಕರಿಗೆ ದುಂಬಾಲು ಬಿದ್ದಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT