ಸೋಮವಾರ, ಜುಲೈ 4, 2022
25 °C

'ಆರ್‌ಆರ್‌ಆರ್' ಸಿನಿಮಾ: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆದ #BoycottRRR

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆ ಕ್ಷಣಗಣನೆ ಶುರುವಾಗಿರುವ ಬೆನ್ನಲೇ ರಾಜ್ಯದಲ್ಲಿ ಕನ್ನಡ ಅವತರಿಣಿಕೆಯ ಸಿನಿಮಾ ಎರಡು, ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ #ಬಾಯ್‌ಕಾಟ್RRRಇನ್‌ಕರ್ನಾಟಕ (#BoycottRRRinKarnataka) ಅಭಿಯಾನ ಶುರುಮಾಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌‘ ಕನ್ನಡದಲ್ಲಿ ಡಬ್ ಆಗಿ ತೆರೆಗೆ ಬರುತ್ತಿದೆ. ಬೆಂಗಳೂರಿನಲ್ಲಿ ಕೇವಲ ಎರಡು ಅಥವಾ ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಆದರೆ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು ಕನ್ನಡವನ್ನು ಕಡೆಗಣಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ರಾಜ್ಯದಲ್ಲಿ ಹಿಂದಿ, ತೆಲುಗು, ತಮಿಳಿನ ಸಿನಿಮಾಗಳಿಗಿಂತ ಕನ್ನಡ ಆವೃತ್ತಿ ಸಿನಿಮಾ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದಾರೆ. 

ಕನ್ನಡಪರ ಹೋರಾಟಗಾರರು, ಪ್ರೇಕ್ಷಕರು ಸೇರಿದಂತೆ ಕನ್ನಡಿಗರು ಸಾಮಾಜಿಕ ಜಾಲತಾಣಗಳ ಮೂಲಕ #ಬಾಯ್‌ಕಾಟ್RRR ಅಭಿಯಾನ ನಡೆಸುತ್ತಿದ್ದಾರೆ. ಇದು ಟ್ವಿಟರ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಟ್ರೆಂಡ್‌ ಆಗಿದೆ. ‌

ಕನ್ನಡದಲ್ಲಿ ಡಬ್ ಆಗಿದ್ರೂ ಬಿಡುಗಡೆ ಮಾಡದೆ ಬರೀ ತೆಲುಗು, ತಮಿಳು, ಹಿಂದಿಯಲ್ಲಿ ಬಿಡುಗಡೆ ಮಾಡಿ ಕನ್ನಡದ್ರೋಹ ಕೆಲಸ ಮಾಡಲಾಗುತ್ತಿದೆ. ಕೂಡಲೇ ಎಲ್ಲಾ ಕಡೆ ಕನ್ನಡ ಆವೃತ್ತಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಆಗ್ರಹಿಸಿದ್ದಾರೆ.

ಕನ್ನಡಿಗರಿಗೆ ಅವಮಾನ ಮಾಡಲಾಗಿದೆ. ರಾಜ್ಯದಲ್ಲಿ ಆರ್‌ಆರ್‌ಆರ್‌ ಬಾಯ್‌ಕಾಟ್‌ ಮಾಡುವುದಕ್ಕೆ ಇದು ಸಕಾಲ. ಕನ್ನಡ ಅವತರಿಣಿಕೆಯ ಸಿನಿಮಾವನ್ನು ಮಾತ್ರ ಸ್ವಾಗತ ಮಾಡೋಣ ಎಂದು ಮಂಜುನಾಥ್‌ ಟ್ವೀಟ್‌ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು