ರಫ್‌ ನೋಟದ ರಫಲ್‌ ಸೀರೆ

ಶುಕ್ರವಾರ, ಏಪ್ರಿಲ್ 26, 2019
35 °C

ರಫ್‌ ನೋಟದ ರಫಲ್‌ ಸೀರೆ

Published:
Updated:
Prajavani

ಟ್ರೆಂಡ್‌

ಸೀರೆಗೆ ಮೆರುಗು ನೀಡುವುದೂ, ಹೆಚ್ಚಿಸುವುದೂ ಅದರ ಅಂಚು ಮತ್ತು ಸೆರಗು. ಬಣ್ಣ ಸಂಯೋಜನೆ ಮತ್ತು ವಿನ್ಯಾಸವೇ ಇಲ್ಲಿ ಆಕರ್ಷಣೆಯ ಕೇಂದ್ರ. ರೇಷ್ಮೆ ಸೀರೆಯಲ್ಲೂ ಡಿಸೈನರ್‌ ಸೀರೆಯಲ್ಲೂ ಅತಿ ಹೆಚ್ಚು ಪ್ರಯೋಗಗಳು ನಡೆಯುವುದೂ ಸೆರಗು ಮತ್ತು ಅಂಚಿನಲ್ಲಿಯೇ.

ರಫಲ್‌ ಸೀರೆ 

ರಫಲ್‌ ಸೀರೆಯನ್ನು ಫ್ರಿಲ್ಡ್‌ ಸೀರೆ ಎಂದು ಆಡುಭಾಷೆಯಲ್ಲಿ ಹೇಳುತ್ತೇವೆ. ಈ ವಿನ್ಯಾಸದಲ್ಲಿ ವಸ್ತ್ರ ವಿನ್ಯಾಸಕರು ನಾನಾ ಬಗೆಯ ಪ್ರಯೋಗಗಳನ್ನು ಪರಿಚಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಫಲ್‌ ಸೀರೆಗೆ ಬೇಡಿಕೆ ಹೆಚ್ಚಿದೆ.

ರಫಲ್‌ ಸೀರೆಯಲ್ಲಿ ಎರಡು ಬಗೆ ಹೆಚ್ಚು ಚಾಲ್ತಿಯಲ್ಲಿದೆ. ಒಂದು– ಇಡೀ ಸೀರೆಯ ಅಂಚಿಗೆ ಫ್ರಿಲ್‌ ಇರುವುದು, ಇನ್ನೊಂದು– ಸೆರಗಿಗೆ ಮಾತ್ರ ಫ್ರಿಲ್‌ ಇರುವುದು.

ಎರಡು ಇಂಚು ಅಗಲದ ಫ್ರಿಲ್‌ ಅಳವಡಿಸಿದರೆ ಸೀರೆ ಮತ್ತು ನೀರೆಗೆ ತುಂಬಾ ಸರಳವಾದ ಆದರೆ ಟ್ರೆಂಡಿ ನೋಟ ಸಿಗುತ್ತದೆ. ಫ್ರಿಲ್‌ ಅಗಲವಾಗಿದ್ದು ದಟ್ಟವಾದ ನೆರಿಗೆಯಿಂದ ಕೂಡಿದ್ದರೆ ಅದೇ ಸೀರೆಯ ಫ್ಯಾನ್ಸಿ ನೋಟ ಹೆಚ್ಚುತ್ತದೆ. ಹಾಗಾಗಿ, ರಫಲ್‌ ಸೀರೆಯನ್ನು ಫ್ಯಾನ್ಸಿಯಾಗಿಸಲು ಬಯಸುವವರು ಫ್ರಿಲ್‌ಅನ್ನು ವಿಭಿನ್ನವಾಗಿಸಿದರಾಯಿತು.

ಅಂಚಿಗೆ ದಟ್ಟವಾದ ನೆರಿಗೆ ಬರುವಂತೆ ಫ್ರಿಲ್‌ ಅಳವಡಿಸಿದರೆ ಈ ಫ್ರಿಲ್‌ ಪದರ ಪದರವಾಗಿ ದೇಹವನ್ನು ಸುತ್ತಿಕೊಳ್ಳುತ್ತದೆ. ಮಂಡಿಯಿಂದ ಕೆಳಗೆ ಕನಿಷ್ಠ ಮೂರು ಪದರ ಕೂರುವ ಕಾರಣ ಸೀರೆಯ ನೋಟ ಲೇಯರ್ಡ್‌ ಸ್ಕರ್ಟ್‌ ಅಥವಾ ಗೌನ್‌ಗೆ ದುಪಟ್ಟಾ ಹೊದ್ದುಕೊಂಡಂತೆ ಕಾಣುತ್ತದೆ.

ಬೆಟ್ಟದಷ್ಟು ಸೆರಗು

ಸೆರಗಿಗೆ ಮಾತ್ರ ರಫಲ್‌ ವಿನ್ಯಾಸ ಮಾಡುವಾಗ ನಾಲ್ಕು ಉಪಾಯಗಳನ್ನು ಅನುಸರಿಸಬಹುದು. ಒಂದು– ಸರಳವಾದ ಮತ್ತು ಅಗಲ ಕಡಿಮೆ ಇರುವ ಫ್ರಿಲ್‌, ಅಂಗೈಯಷ್ಟು ಅಗಲಕ್ಕೆ ನೆರಿಗೆ ಕಡಿಮೆ ಇರುವ ಫ್ರಿಲ್‌, ಅಂಚಿನಲ್ಲಿ ದಟ್ಟವಾದ ನೆರಿಗೆಯುಳ್ಳ ಫ್ರಿಲ್‌ ಹಾಗೂ ಇಡೀ ಸೆರಗಿಗೆ ಲೇಯರ್ಡ್‌ ಫ್ರಿಲ್‌ ಕೊಡುವುದು.

ಸೀರೆಯ ಅಂಚನ್ನೇ ಕತ್ತರಿಸಿ ತಮ್ಮಿಷ್ಟದ ಬಣ್ಣದ ಫ್ಯಾನ್ಸಿ ಲೇಸ್‌ ಅಥವಾ ಜರಿ ಲೇಸ್‌ನೊಂದಿಗೆ ರಫಲ್‌ ವಿನ್ಯಾಸ ಮಾಡಬಹುದು. ಸೀರೆಯಲ್ಲಿ ರವಿಕೆಗಾಗಿ ಮೀಸಲಿರುವ ಬಟ್ಟೆಯನ್ನೂ ಬಳಸಬಹುದು. 

ರಫಲ್‌ ವಿನ್ಯಾಸಕ್ಕೆ ಕಾಂಟ್ರಾಸ್ಟ್‌ ಬಣ್ಣದ ರೇಷ್ಮೆ, ನೆಟ್ಟೆಡ್‌ ಅಥವಾ ಯಾವುದೇ ಫ್ಯಾಬ್ರಿಕ್‌ನ್ನೂ ಬಳಸಬಹುದು. ಕಾಂಟ್ರಾಸ್ಟ್‌ ಬಣ್ಣದಲ್ಲಿಯೂ ತಮ್ಮಿಷ್ಟದ ಚಮತ್ಕಾರಗಳನ್ನು ಮಾಡಬಹುದು.

ಒಂದಿಷ್ಟು ಜಾಣ್ಮೆ ಮತ್ತು ಚಮತ್ಕಾರಗಳನ್ನು ಮಾಡಬಲ್ಲ ಕೌಶಲ ಇದ್ದರೆ ಸೀರೆ ಎಂಬ ಮಾಯಾವಿಯಿಂದ ಫ್ಯಾಷನ್‌ ಮತ್ತು ಟ್ರೆಂಡ್‌ಗೆ ತಕ್ಕಂತೆ ಜಾದೂ ಮಾಡಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !