ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಕಪ್‌ ಅರ್ಹತಾ ಫುಟ್‌ಬಾಲ್‌ ಟೂರ್ನಿಯ ಪಂದ್ಯ: ತವರಿನಲ್ಲಿ ಬಿಎಫ್‌ಸಿ ಪ್ರಾಬಲ್ಯ

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ಮನಮೊಹಕ ಆಟ ಆಡಿದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಮಂಗಳವಾರ ತವರಿನ ಅಂಗಳದಲ್ಲಿ ಜಯದ ತೋರಣ ಕಟ್ಟಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್‌ ಅರ್ಹತಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬಿಎಫ್‌ಸಿ 3-0 ಗೋಲುಗಳಿಂದ ಭೂತಾನ್‌ನ ಟ್ರಾನ್ಸ್‌ಪೋರ್ಟ್‌ ಯುನೈಟೆಡ್‌ ತಂಡವನ್ನು ಪರಾಭವಗೊಳಿಸಿತು.

ಡಿಫೆಂಡರ್‌ ಬೊಯಿತಾಂಗ್‌ ಹಾವೊಕಿಪ್‌, ಮುಂಚೂಣಿ ವಿಭಾಗದ ಆಟಗಾರರಾದ ಡೇನಿಯಲ್‌ ಲಾಲಿಂಪುಯಿಯಾ ಮತ್ತು ಹಾವೊಕಿಪ್‌ ಥೊಂಗ್‌ಕೊಶಿಯೆಮ್, ಆಕರ್ಷಕ ರೀತಿಯಲ್ಲಿ ಗೋಲು ಗಳಿಸಿ ಉದ್ಯಾನನಗರಿಯ ಫುಟ್‌ಬಾಲ್‌ ಪ್ರಿಯರನ್ನು ರಂಜಿಸಿದರು.

ಸುನಿಲ್‌ ಚೆಟ್ರಿ ಮತ್ತು ಮಿಕು ಅವರಂತಹ ಅನುಭವಿಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಬೆಂಗಳೂರಿನ ತಂಡ ಶುರುವಿನಿಂದಲೇ ಪ್ರವಾಸಿ ಪಡೆಯ ರಕ್ಷಣಾಕೋಟೆ ಭೇದಿಸುವ ತಂತ್ರ ಅನುಸರಿಸಿತು. ಆಟ ಶುರುವಾಗಿ 30 ಸೆಕೆಂಡುಗಳಾಗಿದ್ದಾಗ ಬಿಎಫ್‌ಸಿ ಗೋಲು ಗಳಿಸುವ ಅವಕಾಶ ಸೃಷ್ಟಿಸಿಕೊಂಡಿತ್ತು. ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿ ಹಾವೊಕಿಪ್‌ ಅದನ್ನು ಗುರಿ ಸೇರಿಸಲು ವಿಫಲರಾದರು.

9ನೇ ನಿಮಿಷದಲ್ಲಿ ಅಲ್ವಿನ್ ಜಾರ್ಜ್‌ ಮತ್ತು 12ನೇ ನಿಮಿಷದಲ್ಲಿ ಹಾವೊಕಿಪ್‌ ಅವರು ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ. ಆ ನಂತರವೂ ಆತಿಥೇಯರು ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡರು. ಆದರೆ ಗೋಲಿನ ಖಾತೆ ತೆರೆಯಲು ಮಾತ್ರ ಆಗಲಿಲ್ಲ.

26ನೇ ನಿಮಿಷದಲ್ಲಿ ಡಿಫೆಂಡರ್‌ ಬೊಯಿತಾಂಗ್‌ ಹಾವೊಕಿಪ್‌ ಮೋಡಿ ಮಾಡಿದರು. ಮುಂಚೂಣಿ ವಿಭಾಗದ ಆಟಗಾರ ಹಾವೊಕಿಪ್‌ ಥೊಂಗ್‌್‌ಕೊಸಿಯೆಮ್‌ ಒದ್ದು ಕಳುಹಿಸಿದ ಚೆಂಡನ್ನು ಎದುರಾಳಿ ಆವರಣದಲ್ಲಿ ಸನಿಹ ನಿಂತಿದ್ದ ಬೊಯಿತಾಂಗ್‌ ತಲೆತಾಗಿಸಿ ಗುರಿ ಮುಟ್ಟಿಸಿದಾಗ ಬಿಎಫ್‌ಸಿ ಪಾಳಯದಲ್ಲಿ ಸಂತಸ ಮೇಳೈಸಿತು. 41ನೇ ನಿಮಿಷದಲ್ಲಿ ಆತಿಥೇಯರಿಗೆ ಮುನ್ನಡೆ ಹೆಚ್ಚಿಸಿಕೊಳ್ಳುವ ಅವಕಾಶ ಇತ್ತು. ಹಾವೊಕಿಪ್‌ ಥೊಂಗ್‌್‌ಕೊಸಿಯೆಮ್‌ ಪ್ರಯತ್ನಕ್ಕೆ ಟ್ರಾನ್ಸ್‌ಪೋರ್ಟ್‌ ಗೋಲ್‌ಕೀಪರ್‌ ಗುರುಂಗ್ ಅಡ್ಡಿಯಾದರು.

ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ಆಟಗಾರರು ವೇಗದ ಆಟಕ್ಕೆ ಒತ್ತು ನೀಡಿದರು. 53ನೇ ನಿಮಿಷದಲ್ಲಿ ಡೇನಿಯಲ್‌ ಲಾಲಿಂಪುಯಿಯಾ ತಂಡದ ಮುನ್ನಡೆಗೆ ಕಾರಣರಾದರು. ಅವರು 30 ಗಜ ದೂರದಿಂದ ಒದ್ದ ಚೆಂಡು ಕಣ್ಣೆವೆ ಮುಚ್ಚಿ ತೆರೆಯುವಷ್ಟರೊಳಗೆ ಟ್ರಾನ್ಸ್‌ಪೋರ್ಟ್‌ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕಿತು.

54ನೇ ನಿಮಿಷದಲ್ಲಿ ಮಲಸ್ವಾಜುವಾಲ ಗಾಯಗೊಂಡು ಅಂಗಳ ತೊರೆದರು. 59ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಲು ಟ್ರಾನ್ಸ್ ಪೋರ್ಟ್‌ತಂಡಕ್ಕೆ ಆಗಲಿಲ್ಲ. 61ನೇ ನಿಮಿಷದಲ್ಲಿಖಾಬ್ರಾ ನೀಡಿದ ಪಾಸ್‌ನಲ್ಲಿ ಮುಂಚೂಣಿ ವಿಭಾಗದ ಆಟಗಾರ ಹಾವೊಕಿಪ್‌ ಥೊಂಗ್‌್‌ಕೊಸಿಯೆಮ್‌ ಚುರುಕಾಗಿ ಚೆಂಡನ್ನು ಗುರಿ ತಲುಪಿಸಿ ಆತಿಥೇಯರ ಗೆಲುವು ಖಾತ್ರಿ ಪಡಿಸಿದರು.

84ನೇ ನಿಮಿಷದಲ್ಲಿ ಟ್ರಾನ್ಸ್‌ಪೋರ್ಟ್‌ ತಂಡದ ಸಂಗಯ್‌ ದೊರ್ಜಿ ಕಾಲಿಗೆ ಪೆಟ್ಟು ಬಿತ್ತು. ಅವರನ್ನು ಸ್ಟ್ರೆಚರ್‌ ನೆರವಿನಿಂದ ಹೊರಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಯಿತು. ಆ ಬಳಿಕದ ಅವಧಿಯಲ್ಲೂ ಪ್ರಾಬಲ್ಯ ಮೆರೆದ ಬಿಎಫ್‌ಸಿ ಖುಷಿಯ ಕಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT