ಗುರುವಾರ , ಏಪ್ರಿಲ್ 9, 2020
19 °C

ಸಯೇಷಾ ಟೆಡ್ಡಿ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಸಯೇಷಾ ಕಾಲಿವುಡ್‌ನ ಮೋಹಕ ಬೆಡಗಿ. ಮುಂಬೈ ಮೂಲದ ಈ ಸುಂದರಿ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದು, ತೆಲುಗಿನ ‘ಅಖಿಲ್‌’ ಚಿತ್ರದ ಮೂಲಕ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ‘ಯುವರತ್ನ’ ಸಿನಿಮಾ ಮೂಲಕ ಈಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಸಯೇಷಾ, ‘ಯುವರತ್ನ’ ಚಿತ್ರದ ನೆನಪುಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಈ ಚಿತ್ರದ ಶೂಟಿಂಗ್‌ ನನ್ನ ವೃತ್ತಿಬದುಕಿನಲ್ಲಿಯೇ ವಿಶಿಷ್ಟವಾದುದು’ ಎನ್ನುವುದು ಅವರ ಒಂದು ಸಾಲಿನ ಒಕ್ಕಣೆ.

ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿರುವ ಈಕೆ ಅಭಿನಯಕ್ಕಿಂತ ಸ್ತಿಗ್ಧ ಸೌಂದರ್ಯದಿಂದಲೇ ಖ್ಯಾತಿ ಪಡೆದಿದ್ದಾರೆ. ಕಳೆದ ವರ್ಷ ನಟ ಆರ್ಯ ಅವರೊಟ್ಟಿಗೆ ಸಪ್ತಪದಿಯನ್ನೂ ತುಳಿದರು. ರಿಯಲ್‌ ಲೈಫ್‌ನಲ್ಲೂ ಒಂದಾಗಿರುವ ಈ ಜೋಡಿ ‘ಟೆಡ್ಡಿ’ ಸಿನಿಮಾ ಮೂಲಕ ರೀಲ್‌ ಲೈಫ್‌ನಲ್ಲೂ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. 

ಕಾಲಿವುಡ್‌ನಲ್ಲಿ ‘ಟೆಡ್ಡಿ’ ಜೋರಾಗಿಯೇ ಸದ್ದು ಮಾಡುತ್ತಿದೆ. ಅಂದಹಾಗೆ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಶಕ್ತಿ ಎಸ್‌. ರಾಜನ್‌. ಇದು ಅವರ ನಿರ್ದೇಶನದ ಐದನೇ ಸಿನಿಮಾ.

ನಾಯಕನೊಟ್ಟಿಗೆ ‘ಟೆಡ್ಡಿ’ ಕೂಡ ಕಾಣಿಸಿಕೊಳ್ಳುವುದು ಈ ಚಿತ್ರದ ವಿಶೇಷ. ತಮಿಳಿನಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಕಂಪನಿಯೇ ಈ ವಿಶೇಷವಾದ ಅನಿಮೇಟೆಡ್‌ ಪಾತ್ರವನ್ನು ಸೃಷ್ಟಿಸಿದೆಯಂತೆ. ಮೋಷನ್‌ ಕ್ಯಾಪ್ಚರ್‌ ತಂತ್ರಜ್ಞಾನ ಬಳಸಿಕೊಂಡು ತೆರೆಯ ಮೇಲೆ ಟೆಡ್ಡಿಗೆ ಜೀವ ತುಂಬುವ ಕೆಲಸಕ್ಕೆ ಚಿತ್ರತಂಡ ಮುಂದಾಗಿದೆ.

‘ಇದು ಅನಿಮೇಷನ್‌ ಸಿನಿಮಾವಲ್ಲ. ಟೆಡ್ಡಿಯ ಪಾತ್ರಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ತೆರೆಯ ಮೇಲೆ ಇದು ಎಂಬತ್ತು ನಿಮಿಷದವರೆಗೆ ಕಾಣಿಸಿಕೊಳ್ಳಲಿದೆ’ ಎನ್ನುತ್ತಾರೆ ನಿರ್ದೇಶಕರು.

ಕೆಲವು ವಾರದ ಹಿಂದೆ ಚಿತ್ರತಂಡ 3ಡಿ ಹಾಡೊಂದನ್ನು ಬಿಡುಗಡೆ ಮಾಡಿತ್ತು. ವೈರಲ್‌ ಆದ ಈ ಹಾಡಿಗೆ ಡಿ. ಇಮಾನ್‌ ಸಂಗೀತ ಸಂಯೋಜಿಸಿದ್ದಾರೆ. ಎಸ್. ಯುವ ಅವರ ಛಾಯಾಗ್ರಹಣವಿದೆ. ಸ್ಟುಡಿಯೊ ಗ್ರೀನ್‌ನಡಿ ಕೆ.ಇ. ಜ್ಞಾನವೇಲು ರಾಜು ಬಂಡವಾಳ ಹೂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)