ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನಕ್ಕಿಳಿದ ದುನಿಯಾ ವಿಜಯ್

Last Updated 11 ಜೂನ್ 2019, 9:14 IST
ಅಕ್ಷರ ಗಾತ್ರ

ದುನಿಯಾ ವಿಜಯ್‌ ಚಿತ್ರರಂಗ ಪ್ರವೇಶಿಸಿ ಒಂದೂವರೆ ದಶಕ ಉರುಳಿದೆ. ಸಣ್ಣಪುಟ್ಟ ಪಾತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದ ಅವರಿಗೆ ಹೆಸರು ತಂದುಕೊಟ್ಟಿದ್ದು ಸೂರಿ ನಿರ್ದೇಶನದ ‘ದುನಿಯಾ’ ಚಿತ್ರ. ಇದು ಅವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಸಿನಿಮಾ. ಈಗ ಅವರು ‘ಸಲಗ’ ಚಿತ್ರದ ಮೂಲಕ ನಿರ್ದೇಶನದ ಹಾದಿಗೂ ಹೊರಳಿದ್ದಾರೆ. ಅಂದಹಾಗೆ ಅವರೇ ಈ ಚಿತ್ರದ ನಾಯಕ.

ಇತ್ತೀಚೆಗೆ ‘ಸಲಗ’ ಚಿತ್ರದ ಮುಹೂರ್ತ ನೆರವೇರಿತು. ‘ಟೈಟಲ್‌ ಕೇಳಿದರೆ ಇದೊಂದು ಕಾಡಿನ ಕಥೆ ಅನಿಸುತ್ತದೆ. ಆದರೆ, ಆ ಕಥೆಯಲ್ಲ. ಒಬ್ಬ ಮುಗ್ಧ ಆರೋಪಿ ಹೇಗಿರುತ್ತಾನೆ’ ಎನ್ನುವುದೇ ಕಥಾಹಂದರ ಎಂದರು ವಿಜಯ್.

‘ಟಗರು ಚಿತ್ರದ ಡಾಲಿ, ಕಾಕ್ರೋಚ್ ಪಾತ್ರ ನೋಡಿ ಅವರೊಟ್ಟಿಗೆ ನಟಿಸಬೇಕು ಎನ್ನುವ ಆಸೆ ಈಡೇರಿದೆ. ಬೆಂಗಳೂರಿನಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ’ ಎಂದರು.

ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದ ನಟ ಸುದೀಪ್‌, ‘ವಿಜಯ್‌ ನನಗೆ ಹಳೆಯ ಪರಿಚಯ. ಅವರ ಕಷ್ಟದ ದಿನಗಳಿಂದಲೂ ನನಗೆ ಗೊತ್ತು. ಈಗ ನಿರ್ದೇಶಕನಾಗುವ ಮೂಲಕ ಒಳ್ಳೆಯ ದಾರಿಗೆ ಮರಳಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

‘ಪ್ರತಿಯೊಬ್ಬ ನಿರ್ದೇಶಕನ ಹಿಂದೆಯೂ ಕಲಾವಿದ ಇರುತ್ತಾನೆ. ಪ್ರತಿಯೊಬ್ಬ ಕಲಾವಿದನ ಹಿಂದೆ ನಿರ್ದೇಶಕ ಇರುತ್ತಾನೆ. ನಿರ್ದೇಶಕನ ಕ್ಯಾಪ್‌ ಧರಿಸಿದರೆ ಜವಾಬ್ದಾರಿ ಹೆಚ್ಚಿರುತ್ತದೆ. ವಿಜಯ್ ಅದನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು.

‘ಶ್ರೀಕಾಂತ್ ವಿಜಯ್‌ಗೆ ತಮ್ಮ ಇದ್ದಂಗೆ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಣ್ಣ– ತಮ್ಮಂದಿರು ಇದ್ದಾರೆ. ಅವರಿಂದ ಹೆಚ್ಚಿನ ಸಹಕಾರ ಸಿಗುತ್ತದೆ. ‘ಟಗರು’ ಚಿತ್ರತಂಡವೇ ಅವರೊಟ್ಟಿಗಿದೆ. ಹಾಗಾಗಿ, ಯಶಸ್ಸು ನಿಶ್ಚಿತ’ ಎಂದರು.

‘ಡಾಲಿ’ ಖ್ಯಾತಿಯ ಧನಂಜಯ್ ಇನ್‌ಸ್ಪೆಕ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಟಗರು ಚಿತ್ರದ ಬಳಿಕ ಸಿನಿಮಾಗಳಲ್ಲಿ ನನಗಾಗಿಯೇ ಪಾತ್ರ ಹೊಸೆಯುತ್ತಿರುವುದು ಖುಷಿ ತಂದಿದೆ’ ಎಂದರು ಧನಂಜಯ್.

ಸಂಜನಾ ಆನಂದ್ ಈ ಚಿತ್ರದ ನಾಯಕಿ. ತ್ರಿವೇಣಿ, ಸುಧಿ, ಯಶ್‌ ಶೆಟ್ಟಿ ತಾರಾಗಣದಲ್ಲಿದ್ದಾರೆ. ಚರಣ್‍ರಾಜ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್, ನಟ ರಾಘವೇಂದ್ರ ರಾಜ್‍ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಚಿತ್ರತಂಡಕ್ಕೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT