ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ಕಾಲು ಹಾದಿ ಸವೆಸಿದ ದುನಿಯಾ ವಿಜಯ್ 'ಸಲಗ' ಸಿನಿಮಾ

Last Updated 12 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ದುನಿಯಾ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸಿದವರು ನಟ ವಿಜಯ್‌. ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಅವರಿಗೆ ಈ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿತು. ನಿರ್ದೇಶಕ ಸೂರಿ ಸೃಷ್ಟಿಸಿದ ‘ಶಿವಲಿಂಗು’ ಪಾತ್ರ ದಿನ ಬೆಳಗಾಗುವುದರೊಳಗೆ ಅವರಿಗೆ ನಾಯಕನ ಪಟ್ಟವನ್ನು ದಯಪಾಲಿಸಿತು. ಈ ಚಿತ್ರ ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ಭದ್ರನೆಲೆ ಒದಗಿಸಿತು.

ಇದರ ಯಶಸ್ಸಿನ ಬಳಿಕ ವಿಜಯ್‌ ಅವರ ಅದೃಷ್ಟವೂ ಬದಲಾಯಿತು. ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಸೋಲು– ಗೆಲುವಿನ ರುಚಿಯನ್ನೂ ಅನುಭವಿಸಿದರು. ಅವರು ನಟಿಸಿದ ಕಳೆದ ವರ್ಷ ತೆರೆಕಂಡ ‘ಕನಕ’ ಮತ್ತು ‘ಜಾನಿ ಜಾನಿ ಯಸ್‌ ಪಪ್ಪಾ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬಂಪರ್‌ ಬೆಳೆ ತೆಗೆಯಲಿಲ್ಲ. ಹಾಗೆಂದು ವಿಜಯ್‌ ಕೂಡ ಸುಮ್ಮನೇ ಕೂರಲಿಲ್ಲ. ಅವರ ಮನದ ಮೂಲೆಯಲ್ಲಿ ಕುಳಿತಿದ್ದ ನಿರ್ದೇಶಕನಿಗೆ ಕ್ಯಾಪ್ ತೊಡಿಸಲು ಮುಂದಾದರು.

ಆಗ ಹೊಳೆದಿದ್ದೇ ‘ಸಲಗ’ ಚಿತ್ರದ ಕಥೆ. ಆ ಸಿನಿಮಾ ಮೂಲಕ ಅವರು ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ. ಸಂಜನಾ ಆನಂದ್ ಈ ಚಿತ್ರದ ನಾಯಕಿ. ‘ಡಾಲಿ’ ಖ್ಯಾತಿಯ ಧನಂಜಯ್ ಅವರದು ಎಸಿಪಿಯ ಪಾತ್ರ. ‘ಟಗರು’ ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಇದರಲ್ಲಿ ಕೆಲಸ ಮಾಡುತ್ತಿದೆ.

ಭೂಗತ ಲೋಕದ ಸುತ್ತ ‘ಸಲಗ’ದ ಕಥೆ ಹೆಣೆಯಲಾಗಿದೆಯಂತೆ. ಮೇಕಿಂಗ್‌ನಿಂದಲೇ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ, ಮುಕ್ಕಾಲು ಭಾಗದಷ್ಟು ಶೂಟಿಂಗ್‌ ಪೂರ್ಣಗೊಂಡಿದೆ.

ಚಿತ್ರದಲ್ಲಿ ಐದು ಹಾಡುಗಳಿವೆ. ಈಗಾಗಲೇ, ಎರಡು ಹಾಡುಗಳ ಶೂಟಿಂಗ್‌ ಮುಗಿದಿದೆ. ಧನಂಜಯ್‌ ಮತ್ತು ದುನಿಯಾ ವಿಜಯ್‌ ನಡುವಿನ‍ಪ್ರಮುಖ ದೃಶ್ಯಗಳ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇನ್ನು 30 ದಿನಗಳ ಅಂತಿಮ ಹಂತದ ಶೂಟಿಂಗ್‌ಗೆ ಸಿದ್ಧತೆ ನಡೆಸಿದೆ. ಬೆಂಗಳೂರು ಅಥವಾ ಮೈಸೂರಿನಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡದ್ದು.

ಚರಣ್‌ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT