ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಟ ಸಮೀರ್‌ ಖಾಖರ್‌ ನಿಧನ

Last Updated 15 ಮಾರ್ಚ್ 2023, 10:44 IST
ಅಕ್ಷರ ಗಾತ್ರ

ಮುಂಬೈ: ದೂರದರ್ಶನದ ಪ್ರಸಿದ್ಧ ಟಿ.ವಿ ಧಾರಾವಾಹಿ ‘ನುಕ್ಕಡ್‌’ನಲ್ಲಿ ಮದ್ಯವ್ಯಸನಿ ‘ಖೋಪ್ಡಿ’ ಪಾತ್ರಧಾರಿಯಾಗಿ ಹಾಗೂ ಕಮಲ್‌ ಹಾಸನ್‌ ನಟಿಸಿರುವ ಮೂಖಿ ಚಿತ್ರ ‘ಪುಷ್ಪಕ ವಿಮಾನ’ದಲ್ಲಿ (1987) ಶ್ರೀಮಂತ ವ್ಯಕ್ತಿಯಾಗಿ ನಟಿಸಿ ಗಮನ ಸೆಳೆದಿದ್ದ ಹಿರಿಯ ನಟ ಸಮೀರ್‌ ಖಾಖರ್‌ (71) ಬುಧವಾರ ನಿಧನರಾದರು.

ಉಸಿರಾಟದ ಸಮಸ್ಯೆ ಕಾರಣ ಅವರನ್ನು ಇಲ್ಲಿನ ಬೋರಿವ್ಲಿಯ ಎಂ.ಎಂ. ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿತ್ತು. ಬಹು ಅಂಗಾಂಗಗಳ ವೈಫಲ್ಯದಿಂದ ಅವರು ಬುಧವಾರ ಕೊನೆಯುಸಿರೆಳೆದರು.

ದೂರದರ್ಶನದಲ್ಲಿ 1986– 86ರಲ್ಲಿ ಪ್ರಸಾರವಾಗುತ್ತಿದ್ದ ಟಿ.ವಿ ಧಾರಾವಾಹಿ ‘ನುಕ್ಕಡ್‌’ನೊಂದಿಗೆ ಸಮೀರ್‌ ಜನಪ್ರಿಯರಾದರು. ನಗರ ಪ್ರದೇಶಗಳಲ್ಲಿ ಕಡಿಮೆ ಆದಾಯದ ಕಾರ್ಮಿಕ ವರ್ಗದವರ ಸಮಸ್ಯೆಗಳು ಮತ್ತು ಅವರ ಹೋರಾಟಗಳ ಬಗೆಯನ್ನು ಕಟ್ಟಿಕೊಡುತ್ತಿದ್ದ ಈ ಧಾರಾವಾಹಿಯಲ್ಲಿ ಮದ್ಯವ್ಯಸನಿ ‘ಖೋಪ್ಡಿ’ ಪಾತ್ರವನ್ನು ನಿರ್ವಹಿಸಿದ್ದರು. ಈ ಧಾರಾವಾಹಿಯನ್ನು ಕುಂದನ್‌ ಶಾ ಮತ್ತು ಸಯೀದ್‌ ಅಖ್ತರ್‌ ಮಿರ್ಜಾ ನಿರ್ದೇಶಿಸಿದ್ದರು.

ಸಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ‘ಪುಷ್ಪಕ ವಿಮಾನ’ದಲ್ಲಿ ಸಮೀರ್‌ ಅವರು ನಾಯಕನಿಂದ ಅಪಹರಣಕ್ಕೊಳಗಾದ ಮದ್ಯದ ಉದ್ಯಮಿಯ ಪಾತ್ರ ನಿರ್ವಹಿಸಿದ್ದರು. ಇದು ಅವರ ಅವಿಸ್ಮರಣೀಯ ಪಾತ್ರವಾಗಿತ್ತು.

‘ಸರ್ಕಸ್‌’, ‘ಶ್ರೀಮಾನ್‌ ಶ್ರೀಮತಿ’ ಧಾರವಾಹಿಗಳಲ್ಲಿ, ‘ಪರಿಂದಾ’, ಸಲ್ಮಾನ್‌ ಖಾನ್‌ ನಟಿಸಿರುವ ‘ಜೈ ಹೋ’, ಸಿದ್ಧಾರ್ಥ್‌ ಮಲ್ಹೋತ್ರಾ ಮತ್ತು ಪರಿಣಿತಿ ಚೋಪ್ರಾ ನಟಿಸಿರುವ ‘ಹಸೀ ತೋ ಫಸಿ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇತ್ತೀಚೆಗೆ ಅವರು ಅಮೆಜಾನ್‌ ಪ್ರೈಮ್‌ ವಿಡಿಯೊದ ‘ಫರ್ಜಿ’, ಜೀ5 ನಲ್ಲಿ ‘ಸನ್‌ಫ್ಲವರ್‌’ ಮತ್ತು ಸುಧೀರ್‌ ಮಿಶ್ರಾ ಅವರ ‘ಸೀರಿಯಸ್‌ ಮೆನ್‌’ನಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT