ಮಂಗಳವಾರ, ಮಾರ್ಚ್ 21, 2023
29 °C

‘ಅನೈತಿಕ ಪೊಲೀಸ್‌ ಗಿರಿ’: ಕವಿತಾ ಕ್ಷಮೆ ಮನ್ನಿಸಿದ ಸಂಯುಕ್ತಾ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಿರಿಕ್‌ ಪಾರ್ಟಿ’ ಚಿತ್ರ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಪಾರ್ಕಿನಲ್ಲಿ ವರ್ಕೌಟ್‌ ಮಾಡುವಾಗ ಸರಿಯಾದ ದಿರಿಸು ಧರಿಸಿಲ್ಲವೆಂದು ತಗಾದೆ ತೆಗೆದು  ‘ಅನೈತಿಕ ಪೊಲೀಸ್‌ ಗಿರಿ’ ಪ್ರದರ್ಶಿಸಿದ್ದ ಕವಿತಾ ರೆಡ್ಡಿ ಎಂಬುವವರು ನಟಿಯ ಕ್ಷಮೆಯಾಚಿಸಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

ಬೆಂಗಳೂರಿನ ಅಗರ ಕೆರೆ ಸಮೀಪದ ಉದ್ಯಾನದಲ್ಲಿ ಸೆ.‌ 4ರಂದು ಬೆಳಿಗ್ಗೆ ಸಂಯುಕ್ತಾ ಮತ್ತು ಆಕೆಯ ಸ್ನೇಹಿತೆ ವರ್ಕೌಟ್‌ ಮಾಡುತ್ತಿರುವಾಗ ಅಲ್ಲಿಯೇ ವ್ಯಾಯಾಮ ಮಾಡುತ್ತಿದ್ದ ಕವಿತಾ ರೆಡ್ಡಿ ಎಂಬುವವರು ‘ಸಂಯುಕ್ತಾ ಸರಿಯಾದ ಬಟ್ಟೆ ಧರಿಸಿಲ್ಲ’ ಎಂದು ಆಕ್ಷೇಪಿಸಿದ್ದರು. ಇವರ ನಡುವೆ ಮಾತಿನಚಕಮಕಿ ನಡೆದು, ಕವಿತಾ ರೆಡ್ಡಿ, ಸಂಯುಕ್ತಾಳ ಸ್ನೇಹಿತೆಯ ಮೇಲೆ ಹಲ್ಲೆ ಮಾಡಿದ್ದರು.

ಕವಿತಾ ರೆಡ್ಡಿ ದಾಳಿ ನಡೆಸಿದ್ದ ದೃಶ್ಯವನ್ನು ಸಂಯುಕ್ತ ತಮ್ಮ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ‘ನಾನು ಮತ್ತು ನನ್ನ ಸ್ನೇಹಿತೆ ವರ್ಕೌಟ್‌ ಮಾಡುತ್ತಿದ್ದೆವು. ನಮ್ಮ ವರ್ಕೌಟ್‌ ಉಡುಪುಗಳ ಬಗ್ಗೆ ಕವಿತಾ ರೆಡ್ಡಿ ಆಕ್ಷೇಪಿಸಿದರು. ನಿಂದನೆ ಮತ್ತು ಅಪಹಾಸ್ಯ ಮಾಡಿದರು. ಇಂತಹ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಪೊಲೀಸರನ್ನು ವಿನಂತಿಸಿದ್ದರು.

ನಿರ್ದೇಶಕ ಸಂತೋಷ್‌ ಆನಂದ್‌ರಾಮ್, ನಟರಾದ ಶ್ರೀಮುರಳಿ, ಚೇತನ್‌, ನಟಿ ಪಾರುಲ್‌ ಯಾದವ್ ಸೇರಿದಂತೆ ಹಲವು ಮಂದಿ ಚಿತ್ರರಂಗದಮಂದಿ ಈ ಘಟನೆ ಖಂಡಿಸಿ, ಕವಿತಾ ರೆಡ್ಡಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಕವಿತಾ ರೆಡ್ಡಿ ಘಟನೆಯ ವಿಷಾದ ವ್ಯಕ್ತಪಡಿಸಿ, ಸಂಯುಕ್ತಾ ಅವರಿಗೆ ಪತ್ರ ಬರೆದು ಬೇಷರತ್‌ ಕ್ಷಮೆಯಾಚಿಸಿದ್ದಾರೆ.‘ನಾನು ಅನೈತಿಕ ಪೊಲೀಸ್‌ಗಿರಿ ವಿರೋಧಿಸುವವಳೇ. ನಾನು ಪ್ರಗತಿಪರ ಮಹಿಳೆ ಮತ್ತು ಜವಾಬ್ದಾರಿಯುತ ನಾಗರಿಕಳಾಗಿ ಆ ರೀತಿ ವರ್ತಿಸಬಾರದಿತ್ತು. ಇದಕ್ಕಾಗಿ ನಾನು ನಟಿ ಸಂಯುಕ್ತ ಅವರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ’ ಎಂದು ಕವಿತಾ ಟ್ವೀಟ್‌ ಮಾಡಿದ್ದಾರೆ. ಸಂಯುಕ್ತಾ ಕೂಡ ಕವಿತಾ ಅವರನ್ನು ಮನ್ನಿಸಿದ್ದು, ಘಟನೆ ಸುಖಾಂತ್ಯಕಂಡಿದೆ. 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು