ಭಾನುವಾರ, ಆಗಸ್ಟ್ 1, 2021
27 °C

ಖಿನ್ನತೆಯಿಂದ ಬಳಲುತ್ತಿದ್ದ ನಟ ಸುಶೀಲ್ ಕುಮಾರ್ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಕಮರೊಟ್ಟು ಚೆಕ್‌ಪೋಸ್ಟ್‌’, ‘ಸಲಗ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ ಭರವಸೆ ಮೂಡಿಸಿದ್ದ ಯುವ ನಟ ಸುಶೀಲ್‌ಕುಮಾರ್‌ (32), ತಾಲ್ಲೂಕಿನ ಇಂಡುವಾಳು ಗ್ರಾಮದ ಸ್ನೇಹಿತನ ಮನೆಯಲ್ಲಿ ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಎಂಜಿನಿಯರಿಂಗ್‌ ಪದವೀಧರ ಆಗಿದ್ದ ಸುಶೀಲ್‌ ಕುಮಾರ್‌, ಬೆಂಗಳೂರಿನಲ್ಲಿ ಜಿಮ್‌ ತರಬೇತುದಾರರಾಗಿದ್ದರು.  ಹಲವು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮಾಡೆಲಿಂಗ್‌ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದರು. ದುನಿಯಾ ವಿಜಯ್‌ ಅಭಿನಯದ ‘ಸಲಗ’ ಚಿತ್ರದಲ್ಲಿ ಪೊಲೀಸ್ ಪಾತ್ರ ನಿರ್ವಹಿಸಿದ್ದರು. ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.

ಲಾಕ್‌ಡೌನ್‌ನಿಂದಾಗಿ ಜಿಮ್‌ ಮುಚ್ಚಿದ್ದ ಅವರು ನಗರದ ಕಲ್ಲಹಳ್ಳಿಯಲ್ಲಿರುವ ತಮ್ಮ ಮನೆಗೆ ಮರಳಿದ್ದರು. ಮೂರು ದಿನಗಳಿಂದ ಕಾಣೆಯಾಗಿದ್ದರು. ಈ ಬಗ್ಗೆ ಅವರ ತಾಯಿ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂಡುವಾಳು ಗ್ರಾಮದ ಸ್ನೇಹಿತನ ಮನೆಗೆ ತೆರಳಿದ್ದ ಅವರು, ಮನೆಯ ಪಕ್ಕದ ಕೊಠಡಿಯಲ್ಲಿ ಮಂಗಳವಾರ ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು ಜಿಲ್ಲೆಯ ಯುವತಿಯನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಕ್ಕಳು ಇರಲಿಲ್ಲ.

‘ಈ ಸರಣಿ ಮುಗಿಯುತ್ತದೆ ಎನಿಸುತ್ತಿಲ್ಲ’

ಸುಶೀಲ್‌ ಸಾವಿನ ಬಗ್ಗೆ ನಟ ದುನಿಯಾ ವಿಜಯ್ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. ‘ಆತ ನಮ್ಮ ಜೊತೆ ಬೆರಳೆಣಿಕೆಯಷ್ಟು ದಿನ ಇದ್ದ. ನಮಗೇ ಇಷ್ಟು ಬೇಸರವಾಗುತ್ತಿದ್ದರೆ, ಮನೆಯವರಿಗೆ ಇನ್ನೆಷ್ಟು ಬೇಸರವಾಗಿರಬೇಡ? ಈ ವರ್ಷದ ಸರಣಿ ಸಾವು ಇಲ್ಲಿಗೇ ಮುಗಿಯುತ್ತದೆ ಎಂದು ಅನ್ನಿಸುತ್ತಿಲ್ಲ’ ಎಂದು ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು