ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆ | ‘ಡೊಳ್ಳು’ ಸದ್ದೂ ಕಾರ್ತಿಕ್‌ ಹೆಜ್ಜೆಯೂ...

Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ಕನ್ನಡದ ಹಲವು ಧಾರಾವಾಹಿಗಳಲ್ಲಿ ಮಿಂಚಿದ ಮೈಸೂರಿನ ಹುಡುಗ ಕಾರ್ತಿಕ್‌ ಮಹೇಶ್‌ ಅವರು ನಾಯಕ ನಟನಾಗಿರುವ ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಬಿಎಸ್‌ಸಿ ಕಂಪ್ಯೂಟರ್‌ ವಿಜ್ಞಾನದ ವಿದ್ಯಾರ್ಥಿಗೆ ನಟನೆಯ ಗೀಳು ಅದ್ಹೇಗೆ ಹತ್ತಿತೋ ಗೊತ್ತಿಲ್ಲ. ಅಂತೂ ಬಣ್ಣದ ಬದುಕು ಕೈ ಹಿಡಿದಿದೆ. ‘ಡೊಳ್ಳು’ ಚಿತ್ರ ಆ. 19ರಂದು ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ಕಾರ್ತಿಕ್‌ ಜೊತೆ ಒಂದಿಷ್ಟು ಮಾತುಕತೆ.

***

ಬೆಳ್ಳಿ ತೆರೆಗೆ ಬರುವ ಮುನ್ನ ನಿಮ್ಮ ಸಿದ್ಧತೆ ಹೇಗಿತ್ತು?
ಕಾಲೇಜು ದಿನಗಳಲ್ಲಿ ನಾಟಕ, ಮೂಕಾಭಿನಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಪ್ರೇಕ್ಷಕರ ಚಪ್ಪಾಳೆ, ಪ್ರೋತ್ಸಾಹ ನೋಡಿದಾಗ ಇದನ್ನೇ ಮುಂದುವರಿಸಬೇಕು ಎಂಬ ತುಡಿತ ನಿಧಾನಕ್ಕೆ ನನ್ನಲ್ಲಿ ಮೂಡಿತು. ಜನರನ್ನು ಸೆಳೆಯಬಲ್ಲೆ ಎಂಬ ವಿಶ್ವಾಸವೂ ನನ್ನಲ್ಲಿತ್ತು. ನನ್ನೊಳಗೇ ಒಂದು ಕಿಡಿ ಹೊತ್ತಿತು. ರಂಗಕರ್ಮಿಯಾಗಿದ್ದ ಸೋದರ ಮಾವನ ಪ್ರಭಾವವೂ ಇತ್ತು. ಹಾಗಾಗಿಯೇ ಆಗಾಗ ಬೆಂಗಳೂರಿಗೆ ಬಂದು ಆಡಿಷನ್‌ನಲ್ಲಿ ಭಾಗವಹಿಸುತ್ತಿದ್ದೆ. ಸ್ಟಾರ್‌ ಸುವರ್ಣದ ‘ಖುಷಿ’, ‘ಅಕ್ಕ’ ‘ಮಹಾಕಾಳಿ’, ‘ರಾಜಿ’, ಕಲರ್ಸ್‌ ಕನ್ನಡದ ‘ಶನಿ’, ಜೀ ಕನ್ನಡದ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದೇನೆ. ಈಗಲೂ ‘ರಾಜಿ’ ಧಾರಾವಾಹಿಯಲ್ಲಿ ನಟನೆ ಮುಂದುವರಿದಿದೆ. ಈ ವೇಳೆಗೆ ಸುನೀಲ್‌ ಪುರಾಣಿಕ್‌ ಅವರ ಅಭಿನಯದ ಧಾರಾವಾಹಿಯಲ್ಲಿ ನಟಿಸಿದ್ದೆ. ಹಾಗೆ ಅವರ ಪುತ್ರ ಸಾಗರ್‌ ಜೊತೆ ಸ್ನೇಹ ಬೆಳೆಯಿತು. ಈಗ ಇಲ್ಲಿವರೆಗೆ ಬಂದಿದ್ದೇನೆ.

ಜೀವನ ಹೇಗಿದೆ?
ಈಗ ಪರವಾಗಿಲ್ಲ. ಕಷ್ಟದ ದಿನಗಳನ್ನು ನೋಡಿಯೇ ಬಂದಿದ್ದೇನೆ. ಈಗ ಕುಟುಂಬ ಸಲಹುವಷ್ಟರ ಮಟ್ಟಿಗೆ ಗಳಿಕೆ ಇದೆ. ಕೋವಿಡ್‌ನಿಂದಾಗಿ ತಂದೆ ತೀರಿಕೊಂಡರು. ಅವರ ಫ್ಯಾಬ್ರಿಕೇಷನ್‌ ಉದ್ಯಮವನ್ನೂ ನೋಡಿಕೊಳ್ಳುತ್ತಿದ್ದೇನೆ. ಸಹೋದರಿಯ ಮದುವೆ ಸಿದ್ಧತೆಯಲ್ಲಿದ್ದೇನೆ. ಕಲಾ ಬದುಕು ಎಲ್ಲವನ್ನೂ ಕೊಟ್ಟಿದೆ. ಕೊಡುತ್ತಲೂ ಇದೆ.

‘ಡೊಳ್ಳು’ ಚಿತ್ರಕ್ಕೆ ಪ್ರಶಸ್ತಿಯ ನಿರೀಕ್ಷೆ ಇತ್ತೇ?
ಖಂಡಿತಾ ಇರಲಿಲ್ಲ. ಆ ಸುದ್ದಿ ಕೇಳಿದಾಕ್ಷಣ ನನಗೇ ನಂಬಲಾಗಲಿಲ್ಲ. ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದಷ್ಟೇ ಹೇಳಬಲ್ಲೆ. ಇದಕ್ಕೆ ಕಾರಣರಾದವರು ನಿರ್ದೇಶಕ ಸಾಗರ್ ಪುರಾಣಿಕ್‌, ನಿರ್ಮಾಪಕ ಪವನ್‌ ಒಡೆಯರ್‌ ಸೇರಿದಂತೆ ಇಡೀ ಚಿತ್ರ ತಂಡ. ಅವರೆಲ್ಲರಿಗೆ ನಾನು ಕೃತಜ್ಞ.

ಈ ಚಿತ್ರದ ಅನುಭವ?
ತುಂಬಾ ಇದೆ. ‘ಡೊಳ್ಳು’ ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ವಾದ್ಯ. ಚಿತ್ರದಲ್ಲಿ ತೋರಿಸಿರುವ ವಸ್ತುವೂ ಅದೇ. ಹಾಗಾಗಿ ಚಿತ್ರದ ವಸ್ತುವಿನ ಮೇಲೆ ಪ್ರೀತಿಯಿದೆ. ನನಗೆ ಡೊಳ್ಳು ಬಾರಿಸಲು ಗೊತ್ತಿಲ್ಲ. ಅದನ್ನು ಆ ವೃತ್ತಿಯವರಿಂದ ಕಲಿತೆ. ಅವರಿಂದ ಕಲಿತು, ಶೂಟಿಂಗ್‌ ವೇಳೆ ಅವರ ಜೊತೆಗೇ ಹೆಜ್ಜೆ ಹಾಕಬೇಕಿತ್ತು. ತುಂಬಾ ಸವಾಲು ಇತ್ತು. ಒಂದೊಂದು ಷಾಟ್‌ ಮುಗಿದಾಗಲೂ ಸುಸ್ತು ಹೊಡೆಯುತ್ತಿದ್ದೆವು. ಬಿಸಿಲಿಗೆ ಚರ್ಮ ಸುಟ್ಟು ಹೋಗುತ್ತಿತ್ತು. ಕಾಲಿನಲ್ಲಿ ಬೊಬ್ಬೆ ಏಳುತ್ತಿದ್ದವು. ಹಾಗಿದ್ದರೂ ಎಲ್ಲ ನೋವುಗಳನ್ನು ಬದಿಗಿರಿಸಿ ಕೆಲಸ ಮಾಡಿದ್ದೇನೆ. ಉಳಿದವರೂ ಶ್ರಮವಹಿಸಿದ್ದಾರೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ ಬಂದೇ ಬರುತ್ತದೆ ಎಂಬುದಕ್ಕೆ ಇದೇ ಉದಾಹರಣೆ ನೋಡಿ.

ಮುಂದಿನ ಕನಸುಗಳೇನು? ಅಭಿಮಾನಿಗಳಿಗೆ ಏನು ಹೇಳುತ್ತೀರಿ?
ದೊಡ್ಡ ಕನಸುಗಳೇನೂ ಇಲ್ಲ. ಜನ ಭರವಸೆ ಇಟ್ಟುಕೊಳ್ಳುವ ಒಳ್ಳೆಯ ನಟ ಅನ್ನಿಸಿಕೊಳ್ಳಬೇಕು. ನಾನು ಕಲಿಯುವುದು ಇನ್ನೂ ತುಂಬಾ ಇದೆ. ಆಗಸ್ಟ್‌ 19ರಂದು ‘ಡೊಳ್ಳು’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಬಂದು ಚಿತ್ರ ನೋಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸುತ್ತೇನೆ. ಅವರ ಪ್ರತಿಕ್ರಿಯೆ ಏನು ಬರುತ್ತದೋ ಎಂಬ ಕುತೂಹಲ ಮತ್ತು ಆತಂಕ ಎರಡೂ ಇವೆ. ಆದರೂ ಅವರಿಟ್ಟ ನಂಬಿಕೆಯನ್ನು ನಮ್ಮ ಚಿತ್ರ ಉಳಿಸುತ್ತದೆ ಎಂಬ ವಿಶ್ವಾಸವೂ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT