ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಣ್ಣ ಮತ್ತು ಟೆನ್ತ್ ಕ್ಲಾಸ್ ಅಕ್ಕೋರು...

Last Updated 6 ಜುಲೈ 2018, 10:52 IST
ಅಕ್ಷರ ಗಾತ್ರ

"ಎಸ್‍ಎಸ್‍ಎಲ್‍ಸಿನಲ್ಲಿ ನನ್ನ ಕ್ಲಾಸ್‍ಮೇಟ್ಸ್ ಹುಡುಗೀರನ್ನ ಅಕ್ಕ ಅಂತ ಕರೀತಿದ್ದೆ. ಹುಡುಗೀರೆಲ್ಲ ಬಯ್ಯೋವು. ಆದರೆ ಮನೆಯಲ್ಲಿ ನನ್ನನ್ನ ಹಾಗೆ ಬೆಳೆಸಿಬಿಟ್ಟಿದ್ದರು. ಕಾಲೇಜಿಗೆ ಚಪ್ಪಲಿ ಹಾಕಿಕೊಂಡು ಹೋಗ್ತಿರಲಿಲ್ಲ. ಚಪ್ಪಲಿ ಹಾಕಿಕೊಂಡು ಹೋಗಬೇಕು ಅನ್ನೋ ಸೆನ್ಸೂ ಇರಲಿಲ್ಲ. ಬೆಂಗಳೂರಿಗೆ ಬಂದ ಮೇಲೇನೆ ಬುದ್ಧೀನು ಸ್ವಲ್ಪ ಮೆಚ್ಯೂರ್ ಆಗಿದ್ದು. ಅಲ್ಲೀವರೆಗೆ ಏನೂ ಗೊತ್ತಿರಲಿಲ್ಲ. ಬೆಂಗಳೂರಿಗೆ ಬಂದು ಮೂರು ವರ್ಷ ಆದ ಮೇಲೆ ಬಟ್ಟೆ ಗಿಟ್ಟೆ ಅಂತ ಸ್ವಲ್ಪ ಬದಲಾಗಿದ್ದು. ಅಲ್ಲೀವರೆಗೂ ಊರಲ್ಲಿ ಹೊಲ ಉಳೋವ್ರಂಗೇ ಇದ್ದಿದ್ದು...''

ಆ್ಯಕ್ಟರ್ಆಗದೆ ಇದ್ದಿದ್ದರೆ ಏನಾಗ್ತಿದ್ರಿ ಎನ್ನುವ ಪ್ರಶ್ನೆಗೆ ಚಿಕ್ಕಣ್ಣ ನೆನಪಿಸಿಕೊಂಡಿದ್ದು ತಮ್ಮ ಹೈಸ್ಕೂಲ್‍ ದಿನಗಳನ್ನು. ಈವರೆಗಿನ ಬದುಕಿನಲ್ಲಿ ಯಾವುದನ್ನೂ ಪ್ಲಾನ್‍ ಮಾಡಿರಲಿಲ್ಲ; ಹಾಗೆ ಮಾಡುವ ಬುದ್ಧಿಯೂ ಇರಲಿಲ್ಲ ಎನ್ನುವುದನ್ನು ಹೇಳಲಿಕ್ಕೆ ಅವರು ನೆನಪಿಸಿಕೊಂಡಿದ್ದು ತಮ್ಮ 10ನೇ ತರಗತಿಯ ಅಕ್ಕಂದಿರನ್ನು!

ಚಿಕ್ಕಣ್ಣನವರನ್ನು ಮಾತನಾಡಿಸಲು ಹೋಗಿ, ಅವರ ಮನೆಯ ಬೆಲ್ಲನ್ನು ಎಷ್ಟು ಸಾರಿ ಹೊತ್ತಿದರೂ ಬಾಗಿಲು ತೆರೆದುಕೊಳ್ಳಲಿಲ್ಲ. 'ಬಾಗಿಲು ತೆರೆ ಚಿಕ್ಕಣ್ಣ' ಎಂದು ಇನ್ನೇನು ಹಾಡಬೇಕು ಎನ್ನುವಷ್ಟರಲ್ಲಿ ಪಕ್ಕದ ಮನೆಯವರು ಹೇಳಿದ್ದು - 'ಅವರ ಮನೆಗೆ ಬೆಲ್‍ ಇಲ್ಲ. ತೆಗೆಸಿಬಿಟ್ಟಿದ್ದಾರೆ'. ಸರಿ, ಬಾಗಿಲು ತಟ್ಟಿದ್ದಾಯಿತು. ಅದು ತೆರೆದುಕೊಂಡಿತು.

ಟೀವಿಯಲ್ಲಿನ ಯಾವುದೋ ಧಾರಾವಾಹಿಯನ್ನು ಮ್ಯೂಟ್‍ ಮಾಡಿಕೊಂಡು ನೋಡುತ್ತಲೇ ಚಿಕ್ಕಣ್ಣ ಮಾತಿಗೆ ಕುದುರಿಕೊಂಡರು. 'ಐವತ್ತು ಸಿನಿಮಾ ಆಗಿರಬೇಕಲ್ಲ' ಎನ್ನುವ ಪ್ರಶ್ನೆಗೆ - 'ಜಾಸ್ತೀನೆ ಆಯ್ತು. ತೊಂಬತ್ತರ ಮೇಲಾದವು, ನೂರರ ಹತ್ತಿರ ಹತ್ತಿರ' ಎಂದರು.

'ಏಳು ವರ್ಷಗಳಲ್ಲಿ ಸೆಂಚುರಿ ಸ್ಟಾರ್‍ ಆಗಿಬಿಟ್ಟಿರಿ' ಎಂದರೆ, 'ಹೂಂ, ಸ್ವಲ್ಪ ಬೇಗಾನೇ ಆಯ್ತು' ಎಂದು ನಾಚಿಕೊಂಡರು.

ನೂರನೆಯ ಸಿನಿಮಾದ್ದಿರಲಿ, ಮೊದಲನೇ ಸಿನಿಮಾದ ಬಗ್ಗೆ ಹೇಳಿ ಎಂದಾಗ ಚಿಕ್ಕಣ್ಣ 'ಕಿರಾತಕ' ಚಿತ್ರದಲ್ಲಿ ಅವಕಾಶ ಸಿಕ್ಕಿದ್ದನ್ನು ನೆನಪಿಸಿಕೊಂಡರು. ಕನ್ನಡ ಚಿತ್ರೋದ್ಯಮದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಅಂಡ್‍ ಟೀಮ್‍ ಮಾಡಿದ್ದ ಕಾಮಿಡಿ ಸ್ಕಿಟ್‍ ಯಶ್‍ ಅವರಿಗೆ ಇಷ್ಟವಾಗಿತ್ತು. ಆ ಮೆಚ್ಚುಗೆಯೇ 'ಕಿರಾತಕ' ಚಿತ್ರಕ್ಕೆ ಬುಲಾವ್‍ ಬರಲು ಕಾರಣವಾಯಿತು. "ಅದಕ್ಕೂ ಮೊದಲು ಉದಯ ಟೀವಿಯಲ್ಲಿ ಆ್ಯಂಕರಿಂಗ್ ಮಾಡ್ತಿದ್ದೆ. ಕಾಮಿಡಿ ಕಿಲಾಡಿಗಳು ಷೋನಲ್ಲಿ ಮಾಡ್ತಿದ್ದೆ. ಕಾಮಿಡಿ ಸ್ಟೇಜ್‍ ಷೋ ಮಾಡ್ತಿದ್ದೆ" ಎಂದು ಏಳು ವರ್ಷಗಳ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಊರಿನ ಬಗ್ಗೆ ಹೇಳಿ ಎಂದರೆ, ಚಿಕ್ಕಣ್ಣ ಅವರ ನೆನಪು ಒಮ್ಮೆಗೇ ಬೆಂಗಳೂರಿನಿಂದ ಮೈಸೂರಿಗೆ ಜಿಗಿಯಿತು. ಮೈಸೂರಿನ ಬಲ್ಲಹಳ್ಳಿ (ಬೋಗಾದಿ ಪಕ್ಕದ್ದು) ಅವರು ಹುಟ್ಟಿ ಬೆಳೆದದ್ದು. "1986 ಹುಟ್ಟಿದ ವರ್ಷ. ಅದೂ ಕನ್ಫರ್ಮ್ ಇಲ್ಲ. ಕಿವಿ ಮುಟ್ಟಿಬಿಟ್ಟು ಸ್ಕೂಲಿಗೆ ಸೇರ್ಕೊಂಡೋರು. ಹುಟ್ಟಿದ ದಿನ ಎಲ್ಲ ಗೊತ್ತಿಲ್ಲ. ಸ್ಕೂಲಲ್ಲಿ ಬರಕೊಂಡಿರೋದಕ್ಕೆ ಹೂಂ ಎನ್ನಬೇಕು ಅಷ್ಟೇ" ಎಂದು ತಮ್ಮ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಹೇಳಿಕೊಂಡರು.

"ಬನುಮಯ್ಯ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ಆಯ್ತು. ಎರಡನೇ ವರ್ಷಕ್ಕೆ ಹೋಗಲೇ ಇಲ್ಲ. ನಾವೆಲ್ಲ ಆರ್ಟ್ಸ್! ಏನೇನೋ ಸಮಸ್ಯೆಗಳು. ಓದಲಿಕ್ಕೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಕಾಲೇಜಿಗೆ ಹೋಗಲಿಲ್ಲ. ಮೈಸೂರಿನಲ್ಲಿ ಒಂದು ಕಾಮಿಡಿ ಟ್ರೂಪ್‍ ಇತ್ತು. ರಾಜ್ಯೋತ್ಸವ ಸೇರಿದಂತೆ ಬೇರೆ ಬೇರೆ ಸಂದರ್ಭಳಲ್ಲಿ ಷೋ ಮಾಡ್ತಿದ್ದರು. ಆ ಟ್ರೂಪ್‍ ಸೇರಿಕೊಂಡೆ.

ನಮ್ಮೂರ ಹಬ್ಬಕ್ಕೆ ಒಂದು ಸಾಮಾಜಿಕ ನಾಟಕ ಮಾಡಿದೆವು. ಶ್ರೀಹರಿ ಎನ್ನುವವರು ನಾಟಕದ ನಿರ್ದೇಶಕರು. ನಾಟಕದಲ್ಲಿನ ಅಭಿನಯ ಮೆಚ್ಚಿಕೊಂಡು ದೃಶ್ಯ ಕಲಾವೇದಿಕೆ ಸೇರಿಕೊಂಡೆ. ಆನಂತರ ನಾಗರಾಜಕೋಟೆ ಅವರ ಗರಡಿ ಸೇರಿಕೊಂಡೆ. ಆಮೇಲೆ ಬೆಂಗಳೂರು ಸೇರಿಕೊಂಡೆ" ಎಂದರು.

ಸ್ಟೇಜ್‍ ಹತ್ತಿದ್ದೇನೋ ಸರಿ, ಹಾಸ್ಯದ ನಂಟು ಕುದುರಿದ್ದು ಹೇಗೆ ಎಂದು ಕೇಳಿದರೆ, ಚಿಕ್ಕಣ್ಣ ತಮ್ಮ ನನಸಾಗದ ಕನಸೊಂದನ್ನು ಹೇಳಿಕೊಳ್ಳುತ್ತ ನಿಟ್ಟುಸಿರುಬಿಟ್ಟರು. "ಕಾಮಿಡಿಯನ್‍ ಆಗಬೇಕು ಅಂದುಕೊಂಡಿರಲಿಲ್ಲ. ನನಗೆ ಆಸೆ-ಆಸಕ್ತಿ ಇದ್ದುದು ವಿಲನ್‍ ಆಗುವುದರಲ್ಲಿ. ಕಾಮಿಡಿಯನ್‍ ಹೇಗಾದೆ ಎಂದು ಕೇಳಿದರೆ ನನಗೆ ಹೇಳಲು ಗೊತ್ತಿಲ್ಲ. ಆ್ಯಕ್ಟ್ ಮಾಡಬೇಕು ಅಂತಿತ್ತು. ನೆಗೆಟಿವ್ ಕ್ಯಾರೆಕ್ಟರ್ ಮಾಡುವ ಆಸೆಯಿತ್ತು. ಆದರೆ, ಊರಲ್ಲಿ ನಾಟಕ ಮಾಡಿದಾಗ ನಮ್ಮ ಹುಡುಗರು ನನ್ನನ್ನು ಸೆಲೆಕ್ಟ್ ಮಾಡಿದ್ದು ಕಾಮಿಡಿ ಕ್ಯಾರೆಕ್ಟರ್‍ಗೆ. 'ನೀನು ಕಾಮಿಡಿ ಕ್ಯಾರೆಕ್ಟರೇ ಮಾಡು' ಎಂದರು. ಆಯ್ತು ಎಂದು ಒಪ್ಪಿಕೊಂಡೆ. ಅಲ್ಲಿಂದ ದೊರೆತದ್ದೆಲ್ಲ ಕಾಮಿಡಿ ಕಾಮಿಡಿಯೇ'' ಎಂದರು.

"ಹೂಮಾಲೆ ಎನ್ನುವ ಟೆಲಿಫಿಲ್ಮ್ ನಲ್ಲಿ ಎರಡು ಎಪಿಸೋಡ್ ಮಾಡಿದೆ. ಉದಯ ಟೀವಿಯ ಕುರಿಗಳು ಷೋನಲ್ಲಿ ಒಂದು ಹತ್ತು ಎಪಿಸೋಡ್ ಮಾಡಿದೆ. ಆಮೇಲೆ ಅವರು ಕರೆಯಲಿಲ್ಲ. ಫೈನಲ್ ಕಟ್‍ನ ಪಾಪ ಪಾಂಡು, ಸಿಲ್ಲಿ ಲಲ್ಲಿಯಲ್ಲೂ ಮಾಡಿದೆ. ತಿಂಗಳಿಗೋ ಎರಡು ತಿಂಗಳಿಗೂ ಒಮ್ಮೆ ಮಾಡುತ್ತಿದ್ದೆ" ಎಂದು ಚಿಕ್ಕಣ್ಣ ಕಿರುತೆರೆಯ ದಿನಗಳನ್ನು ನೆನಪಿಸಿಕೊಂಡರು. 'ಪಾಪ ಪಾಂಡು', 'ಸಿಲ್ಲಿ ಲಲ್ಲಿ' ಸೀರಿಯಲ್‍ಗಳಲ್ಲಿ ಚಿಕ್ಕಣ್ಣನವರಾ? ಅವರು ಮಾಡಿದ್ದು ಯಾವ ಪಾತ್ರ? ನಮ್ಮ ಅನುಮಾನ ಪರಿಹರಿಸುವಂತೆ, 'ಹಾಂ... ಗೊತ್ತಾಗಲ್ಲ... ನಾನೇ ಅಂತ' ಎಂದು ನಾಚಿಕೊಂಡರು.ಭಿಕ್ಷುಕ ಅಥವಾ ಕಳ್ಳನ ಪಾತ್ರಗಳಿಗೆ ಅವರನ್ನು ಕರೀತಿದ್ದರಂತೆ.

ವಿಲನ್‍ ಮಾಡುವ ಚಿಕ್ಕಣ್ಣನವರ ಆಸೆಯಿತ್ತಲ್ಲ; ಅದು ಶಿವಮಣಿ ನಿರ್ದೇಶನದ 'ಕ್ಲಾಸ್‍ಮೇಟ್ಸ್' ಹಾಗೂ ಕವಿತಾ ಲಂಕೇಶ್ ನಿರ್ದೇಶನದ 'ಶ್ರೀಮತಿ' ಸೀರಿಯಲ್‍ಗಳಲ್ಲಿ ಸ್ವಲ್ಪಮಟ್ಟಿಗೆ ನೆರವೇರಿತು. ಎರಡೂ ಸೀರಿಯಲ್‍ಗಳಲ್ಲಿ ಅವರು ನೆಗೆಟಿವ್ ರೋಲ್‍ಗಳಲ್ಲಿ ನಟಿಸಿದರು. ಆದರೆ, ಅವರ ಪ್ರಯತ್ನ ಯಾರ ಗಮನವನ್ನೂ ಸೆಳೆಯಲಿಲ್ಲ.

"ರಿಯಾಲಿಟಿ ಷೋಗಳಲ್ಲಿ ನಾವು ಮಾಡ್ತಿದ್ದ ಕಾನ್ಸೆಪ್ಟ್ ಗಳೆಲ್ಲ ನಮ್ಮವೇ. ಕಾಮಿಡಿ ಕಿಲಾಡಿಗಳಲ್ಲಿ 50-60 ಸ್ಕ್ರಿಪ್ಟ್ ಮಾಡಿದ್ದೇವೆ. ನಾನು ಮತ್ತು ಕುರಿ ಪ್ರತಾಪ್‍ ಸೇರಿಕೊಂಡು ಏನು ಮಾಡಬೇಕು ಅನ್ನೋದು ಮಾತನಾಡುತ್ತಿದ್ದೆವು. ಬರೆಯೋದು ಗಿರಿಯೋದೆಲ್ಲ ನಮಗೆ ಅಭ್ಯಾಸ ಇಲ್ಲ. ಚಾನಲ್‍ನೋರು ಕೂಡ ಈಗಿನಂತೆ ಆಗ ರೈಟರ್‍ಗಳನ್ನು ಕೊಡ್ತಿರಲಿಲ್ಲ. ದೃಶ್ಯ ಕಲಾವೇದಿಕೆಯಲ್ಲಿ ಪ್ರತಾಪ್‍ ಕೂಡ ಇದ್ದ. ನಮ್ಮಿಬ್ಬರ ಕೆಮಿಸ್ಟ್ರಿ ಆಗಿನಿಂದ ಚೆನ್ನಾಗಿತ್ತು. ಟೀವಿಯಲ್ಲೂ ಅನುಕೂಲ ಆಯ್ತು" ಎಂದು ಚಿಕ್ಕಣ್ಣ ಕಿರುತೆರೆಯ ದಿನಗಳನ್ನು ನೆನಪಿಸಿಕೊಂಡರು.

ಹೀಗೆ ಟೀವಿ ಮತ್ತು ಸ್ಟೇಜ್‍ ಷೋಗಳಲ್ಲಿ ತೊಡಗಿಕೊಂಡಿದ್ದ ಚಿಕ್ಕಣ್ಣ 'ಕಿರಾತಕ' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದದ್ದು ಈಗ ಇತಿಹಾಸ. ಆದರೆ, 'ಕಿರಾತಕ' ಚಿತ್ರದ ಬಗ್ಗೆ ಆಗ ಚಿಕ್ಕಣ್ಣನವರಲ್ಲಿ ಸಿಕ್ಕಾಪಟ್ಟೆ ಉತ್ಸಾಹವೇನೂ ಇರಲಿಲ್ಲ. "ಆಗ ನನಗೆ ಅಷ್ಟೇನೂ ಆಸಕ್ತಿಯಿರಲಿಲ್ಲ. ಹೊಸಬರು ಅಂದ್ರೆ ದುಡ್ಡಿರಲ್ಲ. ಸಿನಿಮಾದಲ್ಲಿ ನಾವೆಲ್ಲ ಸ್ಟಾಂಡ್‍ ಆಗಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿ ಇತ್ತು. ಅಲ್ಲದೆ ಸ್ಟೇಜ್‍ ಷೋ, ರಿಯಾಲಿಟಿ ಷೋಗಳಲ್ಲಿ ಒಳ್ಳೇ ಸಂಪಾದನೆಯೂ ಇತ್ತು. ಆ ಕಾಲದಲ್ಲೇ ಸ್ಟೇಜ್‍ನಲ್ಲಿ ದಿನಕ್ಕೆ 10 ಸಾವಿರ ರುಪಾಯಿ ದಡೀತಿದ್ವಿ. ಯಶ್‍ ಬೇಜಾರು ಮಾಡಿಕೊಳ್ತಾರೆ ಅನ್ನುವ ಕಾರಣಕ್ಕಾಗಿ ಕಿರಾತಕ ಒಪ್ಪಿಕೊಂಡೆ. ಅದರಿಂದ ನನಗೆ ಏನೂ ಉಪಯೋಗ ಆಗಲಿಲ್ಲ. ಈಗ ಎಲ್ಲರೂ ಕಿರಾತಕ ಚೆನ್ನಾಗಿದೆ ಅಂತಾರೆ. ಆಗ ನಾನು ಯಾರು ಅನ್ನೋದು ಯಾರಿಗೂ ಗೊತ್ತಿರಲಿಲ್ಲವಲ್ಲ. ಹಾಗಾಗಿ ಏನೂ ಉಪಯೋಗವಾಗಲಿಲ್ಲ. ಕಿರಾತಕ ಚಿತ್ರದಲ್ಲಿ ಅಭಿನಯಿಸಿದ ನಂತರ ಒಂದು ವರ್ಷ ಬೇರೆ ಯಾವ ಸಿನಿಮಾದಲ್ಲೂ ಅವಕಾಶ ಸಿಗಲಿಲ್ಲ" ಎಂದರು.

'ಕಿರಾತಕ' ನಂತರ ಚಿಕ್ಕಣ್ಣ ಅಭಿನಯಿಸಿದ ಒಂದೆರಡು ಸಿನಿಮಾಗಳಲ್ಲಿ ಯಾವುದೂ ಗೆಲ್ಲಲಿಲ್ಲ. ಮತ್ತೆ ಅವರ ಕೈ ಹಿಡಿದದ್ದು ಯಶ್‍ ಜೊತೆಗಿನ 'ರಾಜಾಹುಲಿ'. "ರಾಜಾಹುಲಿ ಚೆನ್ನಾಗಿ ಹೋಯ್ತು. ಅದು ನಂಗೆ ಟರ್ನಿಂಗ್ ಪಾಯಿಂಟ್‍. ಅದಾದ ಮೇಲೆ 'ಅಧ್ಯಕ್ಷ' ಚೆನ್ನಾಗಿ ಹೋಯ್ತು. ಅದಾದ ಮೇಲೆ ಫುಲ್‍ ಬಿಜಿ ಆದೆ. ಕಮರ್ಷಿಯಲ್‍ ಆಗಿ ಬಿಜಿ ಆಗಿದ್ದು, 'ಬಾಂಬೆ ಮಿಠಾಯಿ' ಅಂತ ಸಿನಿಮಾ ಬಂತಲ್ಲ... ಅದು ಸ್ವಲ್ಪ ಕಮರ್ಷಿಯಲೀನೂ ವರ್ಕ್ ಆಯ್ತು".

ಉಪೇಂದ್ರ ಅವರನ್ನು ಹೊರತುಪಡಿಸಿದರೆ ಕನ್ನಡದ ಬಹುತೇಕ ಪ್ರಮುಖ ನಾಯಕರ ಜೊತೆ ಚಿಕ್ಕಣ್ಣ ಅಭಿನಯಿಸಿದ್ದಾರೆ. ಆದರೆ, ಜನ ಹೆಚ್ಚು ಮೆಚ್ಚಿಕೊಂಡಿರುವುದು ಯಶ್‍ ಮತ್ತು ಶರಣ್‍ ಜೊತೆಯಲ್ಲಿ.

ಕನ್ನಡಕ್ಕೆ ಕಂಪೇರ್ ಮಾಡಿದರೆ ನೆರೆಭಾಷೆಯ ಚಿತ್ರಗಳಲ್ಲಿ ಕಾಮಿಡಿ ಹೇಗಿರುತ್ತದೆ ಎನ್ನುವ ಪ್ರಶ್ನೆಯನ್ನು ಚಿಕ್ಕಣ್ಣ ತಮ್ಮ ನಗುವಿನಲ್ಲೇ ತಳ್ಳಿಹಾಕಿದರು.

"ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೊಲ್ಲ. ರೀಮೇಕ್‍ ಸಿನಿಮಾ ಮಾಡುವಾಗಲೂ ಆ ಭಾಷೆಯ ಸಿನಿಮಾ ನೋಡೊಲ್ಲ. ನೆರೆಯ ಭಾಷೆಯ ಕೆಲವು ಹಿರಿಯ ನಟರ■┴ ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ಇಂಗ್ಲಿಷ್ ಸಿನಿಮಾ ಒಂದಷ್ಟು ನೋಡುತ್ತೇನೆ. ಲೈಫ್ ಆಫ್ ಪೈ ರೀತಿಯ ಪ್ಯಾಟ್ರನ್‍ ಸಿನಿಮಾಗಳು ನಂಗಿಷ್ಟ. ಇನ್ನು ನಮ್ಮ ಕನ್ನಡ ಸಿನಿಮಾಗಳು ತುಂಬಾನೇ ಚೆನ್ನಾಗಿವೆ" ಎಂದು ತಮ್ಮ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸಿದರು. ನೆರೆಭಾಷೆಯ ಚಿತ್ರಗಳನ್ನು ನೋಡದಿದ್ದರೆ ಬೇಡ, ನಿಮ್ಮ ಹಿಂದಿನ ತಲೆಮಾರಿನವರ ಚಿತ್ರಗಳನ್ನಾದರೂ ನೋಡುತ್ತೀರಲ್ಲ ಎಂದರೆ, "ಹಳೆಯ ತಲೆಮಾರಿನ ಹಾಸ್ಯಕ್ಕೂ ಈಗಿನ ಸಿನಿಮಾಗಳ ಹಾಸ್ಯಕ್ಕೂ ಹೋಲಿಸುವುದಾದರೆ, ಬದಲಾವಣೆ ಏನೂ ಇಲ್ಲ. ನಿರ್ದೇಶಕರ ಅಭಿರುಚಿ ಹಾಗೂ ಜನರ ಬೇಡಿಕೆಗೆ ತಕ್ಕಂತೆ ಸಿನಿಮಾಗಳು ಬರುತ್ತವಷ್ಟೇ. ಎಲ್ಲ ಕಾಲಕ್ಕೂ ಇರುವುದು ಒಂದೇ ಸೂತ್ರ - ಜನರನ್ನು ನಗಿಸಬೇಕು, ಅಷ್ಟೇ'' ಎಂದು ತಮ್ಮ ಹಾಸ್ಯಸೂತ್ರ ಮಂಡಿಸಿದರು.

ಈಗ ಕಾಮಿಡಿಯಲ್ಲಿ ಕ್ಲಿಕ್‍ ಆಗಿದ್ದೀರಿ. ವಿಲನ್ ಪಾತ್ರದ ಆಸೆ ಈಗಲೂ ಇದೆಯೇ? ಎನ್ನುವ ಪ್ರಶ್ನೆಗೆ, "ನಾನು ಕೇಳ್ತಾನೇ ಇದ್ದೀನಿ. ಯಾರೂ ಕೊಡಲ್ಲ. ಈಗ ಅದು ಆಗೋದು ಇಲ್ಲ ಬಿಡ್ರಿ. ನಾನೀಗ ವಿಲನ್ ಪಾತ್ರ ಮಾಡಿದ್ರೂ ಜನ ನಗ್ತಾರೆ" ಎಂದು ಚಿಕ್ಕಣ್ಣ ಕೂಡ ನಕ್ಕರು. ಬಹುಶಃ ಅವರು ವಿಲನ್ ಗೆಟಪ್‍ನಲ್ಲಿ ತಮ್ಮನ್ನು ಕಲ್ಪಿಸಿಕೊಂಡು ನಕ್ಕಿರಬೇಕು.

ವಿಲನ್ ಪಾತ್ರ ಬಿಡಿ, ನಾಯಕನಾಗಿ ಯಾಕೆ ಅಭಿನಯಿಸಬಾರದು. ಕೋಮಲ್‍, ಶರಣ್‍ರಂತೆ ನೀವು ನಾಯಕನಾಗುವುದು ಯಾವಾಗ ಎಂದು ಕೇಳಿದರೆ, ನಾಯಕನ ಪಾತ್ರದ ಸಹವಾಸವೇ ಬೇಡ ಎನ್ನುವಂತೆ ಮುಖಭಾವ ಮಾಡಿದರು.

"ನಾಯಕನಾಗುವಂತೆ ಸಾಕಷ್ಟು ಅವಕಾಶಗಳು ಬಂದಿತ್ತು. ನೆನ್ನೆಯೂ ತೆಲುಗಿನವರೊಬ್ಬರು ಬಂದಿದ್ದರು. ಆದರೆ, ಸದ್ಯಕ್ಕೆ ಹೀರೊ ಆಗುವುದು ಬೇಡ ಅಂದುಕೊಂಡಿರುವೆ. ಈಗ ನನಗೆ ತಲೆನೋವಿಲ್ಲ. ಆರಾಮಾಗಿರುವೆ. ಹೀರೊ ಆದರೆ ರಿಸ್ಕ್. ಗೆದ್ದರೂ ಸೋತರೂ ಹೀರೊ ತಲೆ ಮೇಲೆ ಬರುತ್ತದೆ. ಜನರನ್ನು ಎರಡೂವರೆ ಗಂಟೆ ಥಿಯೇಟರ್‍ನಲ್ಲಿ ಕೂರಿಸೋದು ತುಂಬಾನೇ ಕಷ್ಟ. ಬಂದ ಅವಕಾಶಗಳನ್ನು ಒಪ್ಪಿಕೊಂಡಿದ್ರೆ ಹೀರೊ ಆಗಿ ಒಂದ್ಹತ್ತು ಸಿನಿಮಾ ಆಗಿರ್ತಿದ್ದವು. ಈಗ ಕಾಮಿಡಿಯಲ್ಲೇ ಬಿಜಿ ಇರೋದರಿಂದ ಹೀರೊ ಆಗುವ ಬಗ್ಗೆ ಯೋಚಿಸಲು ಸಮಯವೂ ಇಲ್ಲ. ಇರೋದರಲ್ಲಿ ಖುಷಿ ಆಗಿರೋದು ನಂಗಿಷ್ಟ. ಜನ ಕೂಡ ಹೀರೊ ಆಗಬೇಡಿ ಎಂದು ಹೇಳ್ತಾರೆ. ಅವರಿಗೆ ನನ್ನನ್ನು ಕಾಮಿಡಿ ನಟನನ್ನಾಗಿಯೇ ನೋಡಲು ಇಷ್ಟ. ಒಂದುವೇಳೆ ಹೀರೊ ಆಗಬೇಕು ಅನ್ನೋದು ದೇವರ ನಿರ್ಧಾರ ಆಗಿದ್ರೆ ಆಗ್ತೀನಿ. ನನಗೆ ದೇವರ ಬಗ್ಗೆ ತುಂಬಾನೇ ಶಕ್ತಿ ಇದೆ. ಸುಮ್ಮನೆ ನಮ್ಮ ಕೆಲಸ ನಾವು ಮಾಡಿಕೊಂಡು ಹೋಗ್ತೇವೆ. ಮೇಲೆ ಹೋಗ್ತೇವೋ ಕೆಳಗೆ ಹೋಗ್ತೇವೋ ದೇವರಿಗೆ ಬಿಟ್ಟಿದ್ದು" ಎಂದ ಅವರ ಮಾತು, 'ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು' ಎಂದು ಎಲ್ಲ ಭಾರವನ್ನೂ ದೇವರಿಗೆ ಹೊರಿಸಿದಂತಿತ್ತು.

ನಾಯಕನ ಪಾತ್ರ ರಿಸ್ಕ್ ಎನ್ನುವುದನ್ನು ಒಪ್ಪಿಕೊಳ್ಳೋಣ, ಪೋಷಕ ಪಾತ್ರಗಳನ್ನಾದರೂ ಮಾಡಬಹುದಲ್ಲ ಎನ್ನುವುದು ನಮ್ಮ ಮುಂದಿನ ಕೆಣಕುಪ್ರಶ್ನೆ. "ಕಾಮಿಡಿ ಜೊತೆಗೆ ಬೇರೆ ರೀತಿಯ ಪಾತ್ರಗಳನ್ನು ಮಾಡಲಿಕ್ಕೂ ತುಂಬಾ ಇಷ್ಟ. ಎಮೋಷನಲ್‍ ಪಾತ್ರಗಳಲ್ಲಿ ಅಭಿನಯಿಸುವುದು ನಂಗಿಷ್ಟ. 'ಚೌಕ' ಸಿನಿಮಾದಲ್ಲಿನ ನನ್ನ ಪಾತ್ರದಲ್ಲಿ ಕಾಮಿಡಿಯೇ ಇಲ್ಲ. 'ರಾಜ್‍ಕುಮಾರ' ಸಿನಿಮಾದಲ್ಲೂ ನನ್ನ ಪಾತ್ರ ಬೇರೆಯ ರೀತಿಯಲ್ಲೇ ಇದೆ. ನನಗೆ ಇಂಥ ಪಾತ್ರಗಳು ತುಂಬಾ ಇಷ್ಟ. ನಿರ್ದೇಶಕರು ಮಾಡಿಸಬೇಕಷ್ಟೇ" ಎಂದು ಪ್ರಶ್ನೆಯನ್ನು ನಿರ್ದೇಶಕರ ಅಂಗಳಕ್ಕೆ ಒಗಾಯಿಸಿದರು.

ರಕ್ಷಣಾತ್ಮಕ ಆಟ ಪ್ರದರ್ಶಿಸುತ್ತಿದ್ದ ಚಿಕ್ಕಣ್ಣನವರ ಮೇಲೆ ಬೌನ್ಸರ್‍ ರೂಪದಲ್ಲಿ ಎಸೆದ ಪ್ರಶ್ನೆ, ಹೆಣ್ಣುಮಕ್ಕಳ ಕುರಿತಾದುದು. "ಹೀರೊ ಆಗದೆ ಇರೋದಕ್ಕೆ ಬೇರೆ ಕಾರಣಗಳೇನಾದರೂ ಇವೆಯೇ? ಹೆಣ್ಣು ಮಕ್ಕಳ ಜೊತೆಗೆ ಮಾತನಾಡಲಿಕ್ಕೆ ಮುಜುಗರ ಪಡ್ತೀರಂತೆ? ಚಿಕ್ಕಣ್ಣಂಗೆ ನಾಚಿಕೆ ಜಾಸ್ತಿ ಅಂತಾರೆ'' ಎಂದೆವು.

"ಹಂಗೇನಿಲ್ಲ. ಪರಿಚಯದವರ ಜೊತೆ ಚೆನ್ನಾಗಿಯೆ ಇರ್ತೇನೆ. ಗೊತ್ತಿಲ್ಲದವರ ಜೊತೆ ಮಾತನಾಡೋದು ಸ್ವಲ್ಪ ಕಷ್ಟ. ರಿಯಾಲಿಟಿ ಷೋಗಳಲ್ಲಿ ಗೊತ್ತಿಲ್ಲದವರ ಜೊತೆ ಮಾತನಾಡು ಅಂದ್ರೆ ಏನು ಮಾಡೋದು... ಹುಡುಗೀರ ಜೊತೆ ಹಗ್ ಮಾಡೋದು... ಆ ಥರದ್ದು ಈ ಥರದ್ದು ಎಲ್ಲ ಮಾಡೋಕೆ ಸ್ವಲ್ಪ ಸೆಪರೇಟ್‍ ಟ್ಯಾಲೆಂಟ್‍ ಇರಬೇಕು..." ಎಂದರು.

ತಕ್ಷಣವೇ ಉಡಾವಣೆಯಾದ, 'ಪಿಯುಸಿ ಸಮಯದಲ್ಲಿ ಆ ತರಹದ ಟ್ಯಾಲೆಂಟ್ ಬೆಳೆಸಿಕೊಳ್ಳಲಿಲ್ಲವಾ?' ಎನ್ನುವ ಉಪಪ್ರಶ್ನೆಗೆ ಚಿಕ್ಕಣ್ಣನವರು ನೀಡಿದ ಉತ್ತರ ಕರುಣಾಜನಕವಾಗಿತ್ತು. "ನಮ್ಮ ಕಾಲೇಜಲ್ಲಿ ಹುಡುಗೀರೇ ಇರಲಿಲ್ಲ. ನಮ್ಮ ಕಾಲೇಜಿಗೆ ಹುಡುಗೀರು ಬರಲಿಕ್ಕೆ ಭಯ ಬೀಳೋರು. ಇಡೀ ಕಾಲೇಜಿಗೆ ಅಮ್ಮಮ್ಮಾ ಅಂದ್ರೆ ಏಳೆಂಟು ಹುಡುಗೀರಿದ್ದರು ಅಷ್ಟೆ. ಆಮೇಲೆ, ನಾನಾಗ ಹುಡುಗೀರ ಹಿಂದೆ ಬಿದ್ದಿದ್ರೆ ಯಾರೂ ನನ್ನನ್ನ ತಿರುಗಿನೋಡ್ತಿರಲಿಲ್ಲ. ಅಷ್ಟು ಕೆಟ್ಟದಾಗಿದ್ದೆ ನಾನಾಗ. ಈಗ ಹಳೆ ಫೋಟೊ ನೋಡಿದ್ರೆ ಅಯ್ಯಯ್ಯೋ ಅನ್ಸುತ್ತೆ" ಎಂದರು.

ಅಂದಹಾಗೆ, ಚಿಕ್ಕಣ್ಣ ಸದ್ಯಕ್ಕೆ ಬೆಂಗಳೂರಿನಲ್ಲೇ ಒಬ್ಬರೇ ಇದ್ದಾರೆ. 'ಫೋರ್ಸ್ಡ್ ಮತ್ತು ಎಲಿಜಬಲ್ ಬ್ರಹ್ಮಚಾರಿ' ಎನ್ನುವ ವಿಶೇಷಣವನ್ನು ನಗುನಗುತ್ತಲೇ ಸ್ವೀಕರಿಸಿದರು. 'ಸದ್ಯಕ್ಕೆ ಮದುವೆ ಯೋಚನೆ ಇಲ್ಲ. ನನ್ನ ಕೆಲಸದಲ್ಲಿ ಖುಷಿ ಇದೆ' ಎಂದರು.

ಈಗ ಸಿನಮಾದಲ್ಲಿ ಕ್ಲಿಕ್ಕಾದ ಮೇಲೆ ಹೆಣ್ಣುಮಕ್ಕಳು ಯಾರೂ ಮೆಚ್ಚಿ ಪ್ರಪೋಸ್ ಮಾಡಿಲ್ಲವಾ? ಎನ್ನುವುದು ನಂತರದ ಉಪಪ್ರಶ್ನೆ. "ಎಲ್ಲಿ ಬರಬೇಕು. ಶೂಟಿಂಗ್ ಬಿಟ್ರೆ ಆಚೆ ಗೀಚೆ ಹೋಗುವ ಅಭ್ಯಾಸ ಇಲ್ಲ. ರಜೆ ಇದ್ರೆ ಊರಿಗೆ ಹೋಗಿ ಆರಾಮಾಗಿ ಮಲಗೋದೆ. ಈಚೆಗೆ ಸ್ವಲ್ಪ ತೋಟ ತಗೊಂಡಿದ್ದೇನೆ. ವ್ಯವಸಾಯ ನಂಗಿಷ್ಟ. ವ್ಯವಸಾಯ ನಂಗೆ ಬರುತ್ತೆ. ಹೊಲ ಉಳೋಕೆ, ಉಕ್ಕೆ ಹೊಡೆಯೋಕೆ ಎಲ್ಲ ಬರುತ್ತೆ'' ಎಂದು ನಿರುಮ್ಮಳವಾಗಿ ಹೇಳಿದರು.

ಚಿಕ್ಕಣ್ಣನವರನ್ನು ಬೀಳ್ಕೊಂಡು ಹೊರಡುವ ಸಂದರ್ಭದಲ್ಲಿ ನಡುಮನೆಯ ಮೂಲೆಯಲ್ಲಿದ್ದ ಗಿಟಾರ್‍ ಗಮನಸೆಳೆಯಿತು. ನಮ್ಮ ಕಣ್ಣಲ್ಲಿನ ಪ್ರಶ್ನೆ ಗಮನಿಸಿದವರಂತೆ, "ನಂಗೆ ಮ್ಯೂಸಿಕ್‍ನಲ್ಲಿ ತುಂಬಾನೇ ಇಂಟರೆಸ್ಟ್. ಗಿಟಾರ್ ಕಲಿಯೋಣ ಅಂತ ಒಬ್ಬರನ್ನು ಮನೆಗೆ ಕರೆಸಿದೆ. ಅವರು ಎಬಿಸಿಡಿ ಅಂತೆಲ್ಲ ಏನೇನೋ ಬರೆಸಿ ಹೆದರಿಸಿಬಿಟ್ರು. ಒಂದೇ ದಿನಕ್ಕೆ ಪಾಠ ನಿಂತ್ಹೋಯ್ತು" ಎಂದು ಹೇಳುತ್ತಲೇ ಗಿಟಾರ್‍ ತೆಗೆದುಕೊಂಡು ಕುಂಯ್‍ಗುಟ್ಟಿಸಿದರು.

ಬಾಗಿಲಿನಿಂದ ಹೊರಬಂದ ಮೇಲೆ ಕೇಳಿದ್ದು, ಬೆಲ್‍ ಬಗ್ಗೆ.

"ಅಯ್ಯೋ ಹುಡುಗ್ರು ತುಂಬಾ ತೊಂದ್ರೆ ಕೊಡ್ತಿದ್ರು. ಹಂಗಾಗಿ ಬೆಲ್ಲೇ ತೆಗೆಸಿಬಿಟ್ಟೆ" ಎಂದರು.

'ಬೆಲ್‍ ಇದ್ದರೆ ಒಳ್ಳೆಯದು. ಯಾವ ಚೆಲುವೆ ಯಾವಾಗ ಬಂದು ಬೆಲ್‍ ಒತ್ತುವಳೋ ಏನೋ... ಅವಕಾಶ ತಪ್ಪಿಸಿಕೊಳ್ಳಬೇಡಿ' ಎಂದು ಕಿಚಾಯಿಸಬೇಕೆನಿಸಿದ ಮಾತು ಮನಸಿನಲ್ಲಿಯೇ ಉಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT