ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದಲ್ಲಿ ರಾಜ್ ಮೊಮ್ಮಗಳ ಕಂಪು

Last Updated 4 ಜೂನ್ 2019, 19:31 IST
ಅಕ್ಷರ ಗಾತ್ರ

ಕನ್ನಡಕ್ಕೆ ಅಪ್ತವೆನಿಸುವ ಮೊಗ, ನೋಡಿದಾಕ್ಷಣ ಕಣ್ಸೆಳೆಯುವ ನೋಟ, ಅಭಿನಯದಲ್ಲಿ ಆತ್ಮವಿಶ್ವಾಸ, ಮಾತಿನಲ್ಲಿ ಸ್ಫಟಿಕದ ಬುಗ್ಗೆ.. ಇವಿಷ್ಟೂ ವಿಶೇಷಣಗಳು ಹೊಂದಿಕೆಯಾಗುವ ನಟಿ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಾಕ್ಲೆಟ್ ಹೀರೊ ರಾಮ್‌ಕುಮಾರ್ ಅವರ ಕುಡಿಯೇ ಧನ್ಯಾ ರಾಮ್‌ಕುಮಾರ್. ಹೊಸತನ ಹೊತ್ತು ಅವರು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.

ವರನಟ ಡಾ. ರಾಜ್‌ಕುಮಾರ್ ಅವರ ಕುಟುಂಬದ ಮತ್ತೊಂದು ಕುಡಿ ಚಂದನವನದಲ್ಲಿ ಕಂಪು ಬೀರಲು ಆರಂಭಿಸಿದೆ. ರಾಜ್ ಪುತ್ರಿ ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್ ಅವರ ಮಗಳು ಧನ್ಯಾ ರಾಮ್‌ಕುಮಾರ್ ಅವರು ಚಿತ್ರರಂಗಕ್ಕೆ ಅಧಿಕೃತವಾಗಿ ಅಡಿಯಿಡುತ್ತಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಅವರು ನಾಯಕಿ.

ಅಂದಹಾಗೆ ಮೂರು ತಲೆಮಾರುಗಳ ರಾಜ್ ಕುಟುಂಬದಿಂದ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿರುವ ಮೊದಲ ಹೆಣ್ಣುಮಗಳು ಇವರು. ಹೀಗಾಗಿ ಸಾಕಷ್ಟು ನಿರೀಕ್ಷೆ, ಕುತೂಹಲ ಇದ್ದೇ ಇದೆ.ಧನ್ಯಾ ಅವರಿಗೆ ಚಿತ್ರರಂಗ ಹೊಸದಲ್ಲ. ಮೇರು ನಟ ರಾಜ್‌ಕುಮಾರ್, ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ತಂದೆ ರಾಮ್‌ಕುಮಾರ್ ಸೇರಿದಂತೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದವರ ದೊಡ್ಡ ಪಡೆಯೇ ಮನೆಯಲ್ಲಿದೆ. ಚಿತ್ರರಂಗದ ಜತೆ ಧನ್ಯಾ ಅವರ ಅವಿನಾಭಾವ ನಂಟು ಆರಂಭದಿಂದಲೇ ಬೆಳೆದು ಬಂದಿದೆ.

ನಗುಮೊಗದಿಂದಲೇ ‘ಪ್ರಜಾವಾಣಿ’ ಜೊತೆ ಮಾತು ಆರಂಭಿಸಿದ ಧನ್ಯಾ,‘ಸಿನಿಮಾ ನನ್ನ ಪ್ಯಾಷನ್’ ಎಂದರು.ತಮ್ಮ ಹೊಸ ಚಿತ್ರದ ಬಗ್ಗೆ ಸಾಕಷ್ಟು ಪುಳಕಿತರಾಗಿದ್ದಾರೆ. ಒಂದೊಳ್ಳೆ ಕತೆ ಮೂಲಕ ತಮ್ಮ ಸಿನಿ ಯಾನ ಆರಂಭಿಸುತ್ತಿರುವ ಹುಮ್ಮಸ್ಸು ಅವರಲ್ಲಿತ್ತು.

ಅಭಿನೇತ್ರಿಯಾಗುವ ತಮ್ಮ ಕನಸಿಗೆ ನೀರೆರೆದು, ಬೆಂಬಲ ಸೂಚಿಸಿದ ಅಪ್ಪ–ಅಮ್ಮನನ್ನು ಅವರು ನೆನೆಯುತ್ತಾರೆ. ಅಮ್ಮ ನೀಡುವ ಸಲಹೆಗಳು ಹಾಗೂ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಧನ್ಯಾ ಪ್ರಾಮುಖ್ಯತೆ ನೀಡುತ್ತಿದ್ದಾರೆ. ‘ಬೇಗ ಏಳಬೇಕು, ಬೇಗ ನಿದ್ದೆ ಮಾಡಬೇಕು’ ಎಂದು ಶಿವಣ್ಣ ನೀಡುವ ಕ್ಯೂಟ್ ಕ್ಯೂಟ್ ಸಲಹೆಗಳನ್ನು ಶಿಸ್ತಿನಿಂದಲೇ ಪಾಲಿಸುವ ಮಾತನ್ನಾಡುತ್ತಾರೆ ಅವರು. ಪುನೀತ್ ರಾಜ್‌ಕುಮಾರ್ ಅವರು ಮನಸಾರೆ ಶುಭ ಕೋರಿದ್ದಾರೆ. ಅಭಿನಯದ ಎಲ್ಲ ಕ್ಷಣಗಳನ್ನೂ ಆನಂದಿಸುವಂತೆ ರಾಘವೇಂದ್ರ ರಾಜ್‌ಕುಮಾರ್ ಅವರು ಸಲಹೆಯಿತ್ತಿದ್ದಾರೆ.

ಈ ಮೊದಲು ಕ್ಯಾಮೆರಾವನ್ನು ಎದುರಿಸಿಲ್ಲವಾದರೂ, ಅಭಿನಯಿಸಿ ಸೈ ಎನಿಸಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ ಅವರ ಮಾತುಗಳಲ್ಲಿ ವೇದ್ಯವಾಗುತ್ತಿತ್ತು. ಗೌರಿ ದತ್ ಅವರ ‘ಅಭಿನಯ ತರಂಗ’ ಶಾಲೆಯಲ್ಲಿ ನಟನೆಯ ಪಟ್ಟುಗಳನ್ನುಕಲಿತಿದ್ದಾರೆ. ಕಂಟೆಂಪರರಿ ಹಾಗೂ ಬಾಲಿಹಾಪ್‌ ನೃತ್ಯ ಪ್ರಕಾರಗಳಲ್ಲಿ ಪಳಗಿದ್ದಾರೆ.

ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಸೂರಜ್‌ಗೌಡ ಅವರು ಇಲ್ಲಿ ಬರಹಗಾರರಾಗಿಯೂ ಪರಿಚಿತರಾಗುತ್ತಿದ್ದಾರೆ. ಚಿತ್ರಕ್ಕೆ ಅವರೇ ಕತೆ ಬರೆದಿದ್ದಾರೆ. ಸುಮನ್ ಜಾದೂಗಾರ್ ಅವರ ನಿರ್ದೇಶನ ಚಿತ್ರಕ್ಕಿದೆ. ಜುಲೈನಲ್ಲಿ ಚಿತ್ರೀಕಣರ ಆರಂಭವಾಗುತ್ತಿದ್ದು, ಈಗಾಗಲೇ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.‌

***
ಕತೆಯು ಬಯಸಿದ ಪಾತ್ರ ಹಾಗೂ ಆ ಪಾತ್ರ ಬಯಸಿದ ನಾಯಕಿಯೇ ಧನ್ಯಾ ರಾಮ್‌ಕುಮಾರ್. ಅವರನ್ನು ನೋಡಿದ ಕೂಡಲೇ ನಾಯಕಿ ಆಯ್ಕೆ ಮುಗಿದುಹೋಯಿತು. ಪಾತ್ರಕ್ಕೆ ಅವರು ಅತ್ಯಂತ ಆಪ್ತವಾಗಿ ಹೊಂದಿಕೆಯಾದರು. ಜುಲೈ ಮಧ್ಯಭಾಗದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇಡೀ ತಂಡ ಚಿತ್ರೀಕರಣ ಪೂರ್ವ ಚಟುವಟಿಕೆಗಳಲ್ಲಿ ತಲ್ಲೀನವಾಗಿದೆ. ಕನ್ನಡಿಗರಿಗೆ ನವಿರು ಕತೆ ಹೇಳುವ ತುಡಿತದಲ್ಲಿ ಇಡೀ ತಂಡ ಇದೆ.
-ಸುಮನ್ ಜಾದೂಗಾರ್, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT