ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಅರ್ಚನಾ ಕೊಟ್ಟಿಗೆ ಸಂದರ್ಶನ | ‘ಸಭ್ಯ, ಗೌರವಯುತ ಪಾತ್ರ ನನಗಿಷ್ಟ

Last Updated 27 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮೊದಲು ಒಳ್ಳೆಯ ನಟಿ ಅನ್ನಿಸಿಕೊಳ್ಳಬೇಕು. ಗೌರವಯುತವಾದ ಪ್ರಸ್ತುತಿ ಇರಬೇಕು. ಹಾಗಿದ್ದರೆ ಮಾತ್ರ ನಟನೆಗೆ ಒಪ್ಪಿಕೊಳ್ಳುವೆ. ನಿಧಾನವಾದರೂ ಸರಿ ಒಳ್ಳೆಯ ಅವಕಾಶಗಳಷ್ಟೇ ಸಿಗಲಿ ಎಂದು ಆಶಿಸುತ್ತಾ ಸಾಗಿದ ಅರ್ಚನಾ ಕೊಟ್ಟಿಗೆ ಅವರಿಗೆ ಕೊನೆಗೂ ನಾಯಕಿ ಪಟ್ಟ ಒಲಿದಿದೆ. ಅಭಿನಯಿಸಿದ ಚಿತ್ರಗಳು ಸುಮಾರು 18ರಷ್ಟಾಗಿವೆ. ಈಗಲೂ ಕಲಿಕೆ ಸಾಗಿದೆ ಎನ್ನುತ್ತಾರೆ ಅರ್ಚನಾ.

*ಸಿನಿಮಾ ಯಾನ ಹೇಗೆ ಸಾಗಿದೆ?
ಕಲಿಕೆಯಂತೆ ಸಾಗಿದೆ. ನಾನು ಓದಿದ್ದು ಡಿಜಿಟಲ್‌ ಫಿಲ್ಮ್‌ ಮೇಕಿಂಗ್‌ ಕೋರ್ಸ್‌. ಆಗಲೇ ಆಡಿಷನ್‌ಗಳಿಗೆ ಹೋಗುತ್ತಿದ್ದೆ. ಕೋರ್ಸ್‌ ಕೊನೆಯ ಹಂತದಲ್ಲಿದ್ದಾಗ ‘ಡಿಯರ್‌ ಸತ್ಯ’ ಅವಕಾಶ ಬಂದಿತು. ಮೊದಲು ‘ನಮ್ದುಕೆ’ ತಂಡದ ಹಾಸ್ಯ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ನಾನು ಈಗ ದೊಡ್ಡ ಕ್ಯಾಮೆರಾ ಎದುರಿಸುವವರೆಗೆ ಬಂದಿದ್ದೇನೆ. ಈಗಲೂ ಆಡಿಷನ್‌ಗಳಲ್ಲಿ ಭಾಗವಹಿಸುತ್ತಲೇ ಇದ್ದೇನೆ. ಧಾರಾವಾಹಿಗಳ ಆಡಿಷನ್‌ಗಳಲ್ಲೂ ಭಾಗವಹಿಸಿದ್ದೇನೆ. ಇನ್ನು ಒಂದಿಷ್ಟು ಚಿತ್ರಗಳು ಬಿಡುಗಡೆಯಾಗಿ ಜನ ನನ್ನನ್ನು ಗುರುತಿಸಬೇಕು. ಆಮೇಲೆ ಮುಂದಿನ ಹಾದಿ ಇದ್ದೇ ಇದೆ.

*ಈ ಕ್ಷೇತ್ರ ಆಕರ್ಷಿಸಿದ್ದು ಹೇಗೆ?
ಕಾಲೇಜು ದಿನಗಳಲ್ಲಿ ಸಿನಿಮಾ ಆಸಕ್ತಿಯಿತ್ತು. ಆದರೆ, ಮನೆಯಲ್ಲಿ ಆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಒಮ್ಮೆ ಮಯ್ಯಾಸ್‌ನ ಮೈಸೂರ್‌ ಪಾಕ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡೆ. ಕಾಲೇಜಿನಲ್ಲಿ ಎಲ್ಲರೂ ನನ್ನನ್ನು ಮೈಸೂರು ಪಾಕ್‌ ಹುಡುಗಿ ಎಂದೇ ಕರೆಯಲು ಆರಂಭಿಸಿದರು. ಗುರುತಿಸುವಿಕೆ, ಸ್ವಲ್ಪ ಹಣ ಇದನ್ನೆಲ್ಲಾ ನೋಡಿದಾಗ ಇದು ಒಳ್ಳೆಯ ಆಯ್ಕೆ ಎಂದು ಅನಿಸಿತು. ಹಾಗೇ ಮುಂದುವರಿದೆ. ಆಗ ಅಮ್ಮ ನನಗೆ ನಿರೂಪಕಿಯಾಗು, ನಟನೆ ಬೇಡ ಎಂದು ಹೇಳಿದ್ದರು. ಕಸ್ತೂರಿ ಟಿವಿ ವಾಹಿನಿಯಲ್ಲಿ ಹಾಸ್ಯ ಕಾರ್ಯಕ್ರಮ ನಿರೂಪಿಸುತ್ತಿದ್ದೆ. ಮುಂದೆ ಕಿರುತೆರೆ ಸಮಾರಂಭಗಳಲ್ಲಿಯೂ ನಿರೂಪಣೆ ಮಾಡುತ್ತಿದ್ದೆ. ಆದರೆ, ದೊಡ್ಡ ಕಾರ್ಯಕ್ರಮಗಳಲ್ಲಿ ನಿರೂಪಕರನ್ನು ಅಷ್ಟಕ್ಕಷ್ಟೇ ಎಂದು ಪರಿಗಣಿಸುವ ರೀತಿ ಬೇಸರವೆನಿಸಿತು. ಈಗ ಎಲ್ಲ ಶೋಗಳನ್ನು ಬಿಟ್ಟು ನಟನೆಯತ್ತ ಮಾತ್ರ ಗಮನ ಹರಿಸಿದ್ದೇನೆ.

*ಬ್ರೇಕ್‌ ಕೊಟ್ಟ ಸಿನಿಮಾಗಳು?
ಎಲ್ಲರ ಕಾಲೆಳೆಯುತ್ತೆ ಕಾಲ... ಅದ್ಭುತ ಅನುಭವ ಕೊಟ್ಟ ಚಿತ್ರ. ಸಾಕಷ್ಟು ಕಲಿಕೆ ಅಲ್ಲಿ ಆಯಿತು. ‘ಅರಣ್ಯಕಾಂಡ’, ‘ಡಿಯರ್‌ ಸತ್ಯ’ ಇವೆಲ್ಲಾ ಆರಂಭಿಕ ಹೆಜ್ಜೆಗಳು. ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರ ಕೂಡಾ ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲವೂ ಒಂದಕ್ಕಿಂತ ಒಂದು ಕಲಿಕೆಗೆ ನೆರವಾಗಿವೆ. ಪೋಷಕ ಪಾತ್ರ ಮಾಡುವಾಗಲೇ ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರೂ ನನ್ನ ಅಭಿನಯವನ್ನು ಶ್ಲಾಘಿಸುತ್ತಿದ್ದರು. ನಾಯಕಿಯಾಗುವ ಅರ್ಹತೆ ಇದೆ ಎಂದಿದ್ದರು. ಹಾಗೆಂದು ನಾಯಕಿ ಪಾತ್ರವೇ ಬೇಕು ಎಂದು ಪ್ರಯತ್ನಿಸಿದವಳಲ್ಲ. ಆದರೆ, ಯಾವುದಕ್ಕೂ ಕಾಲ ಕೂಡಿ ಬರಬೇಕಲ್ಲಾ.

*ಬೇಸರವೆನಿಸಿದ್ದು?

ಕೆಲವೆಡೆ ಪೋಷಕ ಪಾತ್ರ ಎಂದು ತಾತ್ಸಾರ ಮಾಡುವುದು, ಪ್ರತ್ಯೇಕವಾಗಿ ನೋಡುವುದನ್ನು ಗಮನಿಸಿದಾಗ ಬೇಸರವೆನಿಸುತ್ತದೆ. ಪೋಷಕ ಪಾತ್ರಕ್ಕೆ ಮಹತ್ವ ಇಲ್ಲವೇ? ಆದರೆ ನಾನು ಅದನ್ನು ಸಕಾರಾತ್ಮಕವಾಗಿಯೇ ತೆಗೆದುಕೊಂಡು ಕಲಿಯುತ್ತಾ ಹೋಗುತ್ತೇನೆ. ಇಂದು ನಾಯಕ–ನಾಯಕಿ ಸ್ಥಾನದಲ್ಲಿರುವವರೆಲ್ಲಾ ಅಷ್ಟೇ ಕಷ್ಟಪಟ್ಟವರಲ್ಲವೇ ಎಂದು ಭಾವಿಸುತ್ತೇನೆ. ನನ್ನ ಸಾಮರ್ಥ್ಯ ಮತ್ತು ಇತಿಮಿತಿಗಳು ಚೆನ್ನಾಗಿ ಗೊತ್ತಿವೆ. ನಾನು ಹೇಗಿದ್ದೇನೋ ಹಾಗೆಯೇ ಪ್ರಸ್ತುತಗೊಳ್ಳುವುದು ನನಗಿಷ್ಟ.

*‘ಯೆಲ್ಲೋ ಗ್ಯಾಂಗ್ಸ್‌’ನಲ್ಲಿ ತಾವು ಯಾರು?
‘ಯೆಲ್ಲೋ ಗ್ಯಾಂಗ್ಸ್‌’ 2019ರಲ್ಲಿ ಸಿದ್ಧವಾದ ಚಿತ್ರ. ಅದರಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ಈ ಪಾತ್ರಕ್ಕೆ ಹೇರ್‌ ಸ್ಟೈಲಿಸ್ಟ್‌ ಆಗಲಿ, ಮೇಕಪ್‌ ಕಲಾವಿದರಾಗಲಿ ಇರಲಿಲ್ಲ. ನನ್ನಲ್ಲೇ ಇರುವ ಕನಿಷ್ಠ ಪರಿಕರಗಳಿಂದ ಮೇಕಪ್‌ ಮಾಡಿಕೊಂಡಿದ್ದೆ. ಅದೇ ತರಹದ ಲುಕ್‌ನ್ನು ಪಾತ್ರ ಬಯಸುತ್ತಿತ್ತು. ನಿರ್ದೇಶಕ ರವೀಂದ್ರ ಅವರಂತೂ ಸಿಡಿಮಿಡಿ ಅನ್ನುತ್ತಲೇ ಎಲ್ಲವನ್ನೂ ಕಲಿಸಿದರು. ಸೆಟ್‌ನಲ್ಲಿ ಬಹಳ ಗಂಭೀರ ವ್ಯಕ್ತಿ ಅವರು. ಚಿತ್ರ ನೋಡಿದಾಗ ಆ ಪರಿಶ್ರಮ ಸಾರ್ಥಕ ಅನಿಸುತ್ತದೆ. ಅವರೆಲ್ಲರಿಗೆ ಕೃತಜ್ಞಳಾಗಿದ್ದೇನೆ.

*ಎಂತಹ ಸಿನಿಮಾ ನಿಮಗಿಷ್ಟ?
ತುಂಡುಡುಗೆ ಧರಿಸಲು ಅಥವಾ ಇಂಟಿಮೇಟ್‌ ಅನ್ನಿಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ನಾನು ಬಯಸುವುದಿಲ್ಲ. ಉಳಿದಂತೆ ಪಾತ್ರ ಗಟ್ಟಿತನದಿಂದ ಕೂಡಿದ್ದರೆ ಒಪ್ಪಿಕೊಳ್ಳುತ್ತೇನೆ. ನೋಡಿ ಊರ್ವಶಿ, ಉಮಾಶ್ರೀ ಅವರಂಥ ನಟಿಯರು ಒಳ್ಳೆಯ ಕಲಾವಿದರಾಗಿ ಗುರುತಿಸಿಕೊಂಡರು. ಅವರನ್ನು ಮಾದರಿಯಾಗಿ ನೋಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT