ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿರ್ದೇಶಕರ ನಟಿ: ರಚಿತಾ ರಾಮ್‌ ಬಿಚ್ಚುಮಾತು

Last Updated 29 ನವೆಂಬರ್ 2019, 4:30 IST
ಅಕ್ಷರ ಗಾತ್ರ

‘ನಮ್ಮ ತಟ್ಟೆಯಲ್ಲಿ ಎಷ್ಟು ಊಟ ಬೀಳಬೇಕು ಎಂಬುದನ್ನು ನಿರ್ಧರಿಸುವುದು ದೇವರು; ದೇವ್ರು ನೀಡುವುದನ್ನು ನಾವು ಖುಷಿಪಟ್ಟು ಸ್ವೀಕರಿಸಬೇಕು’

–ಹೀಗೆಂದು ಖಚಿತ ಧ್ವನಿಯಲ್ಲಿ ಹೇಳಿದರು ನಟಿ ರಚಿತಾ ರಾಮ್‌. ಸ್ಟಾರ್‌ ನಟರ ಜೊತೆಗಷ್ಟೇ ನಟಿಸುತ್ತಾರೆ ಎಂಬ ಆರೋಪ ಇದೆಯಲ್ಲಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.

‘ರಚಿತಾ ಸ್ಟಾರ್‌ಗಳ ಜೊತೆಗಷ್ಟೇ ನಟಿಸುತ್ತಾಳೆ ಎನ್ನುವ ಆರೋಪ ಇತ್ತು. ಅಂತಹ ಮಾತುಗಳನ್ನು ನಾನೂ ಕೇಳಿಸಿಕೊಂಡಿದ್ದೇನೆ. ಇಂತಹ ಆರೋಪ ಈಗಿಲ್ಲ.ಆರೋಪಿಸುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆರೋಪದ ಬಗ್ಗೆ ನಾನೇನೂ ಮಾಡಲು ಆಗುವುದಿಲ್ಲ. ಸ್ಟಾರ್‌ ನಟರ ಜೊತೆಗೆ ನಟಿಸಲು ಅವಕಾಶ ಸಿಕ್ಕಿದರೆ ತಿರಸ್ಕರಿಸಲು ಸಾಧ್ಯವೇ? ಅವಕಾಶ ಬರುವುದು ಒಂದು ಬಾರಿ ಮಾತ್ರ. ಅದನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ. ಉತ್ತಮವಾಗಿ ಅವಕಾಶಗಳನ್ನು ಬಳಸಿಕೊಂಡಿರುವ ಖುಷಿಯಲ್ಲಿದ್ದೇನೆ’ ಎಂದು ನಕ್ಕರು.

ರಚಿತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ‘ಬುಲ್‌ಬುಲ್‌’ ಚಿತ್ರದ ಮೂಲಕ. ಆ ಚಿತ್ರ ಅವರಿಗೆ ಬೆಳ್ಳಿತೆರೆಯಲ್ಲಿ ಯಶಸ್ಸಿನ ದಿಡ್ಡಿಬಾಗಿಲನ್ನೇ ತೆರೆಯಿತು. ‘100’, ‘ಏಕ್‌ ಲವ್‌ ಯಾ’, ‘ಡಾಲಿ’ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಆದರೆ, ಯಾವುದೇ ಪಾತ್ರಕ್ಕೆ ಅವರು ಪೂರ್ವ ತಯಾರಿ ಮಾಡಿಕೊಳ್ಳುವುದಿಲ್ಲವಂತೆ. ‘ಬುಲ್‌ಬುಲ್‌ನಿಂದ ಇಲ್ಲಿಯವರೆಗೂ ನಾನು ಪಾತ್ರಗಳಿಗೆ ಯಾವುದೇ ವಿಶೇಷ ತಯಾರಿ ಮಾಡಿಯೇ ಇಲ್ಲ. ಶೂನ್ಯ ಮನಸ್ಥಿತಿಯಲ್ಲಿಯೇ ಸೆಟ್‌ಗೆ ಹೋಗುತ್ತೇನೆ. ನಿರ್ದೇಶಕರು ಹೇಳಿದ್ದನ್ನು ತಲೆಯಲ್ಲಿ ಹಾಕಿಕೊಂಡು ನಟಿಸುತ್ತೇನೆ. ಅದನ್ನಷ್ಟೆ ನನ್ನ ಕಡೆಯಿಂದ ಸಿನಿಮಾಕ್ಕೆ ಕೊಡಲು ಸಾಧ್ಯ’ ಎಂದು ವಿವರಿಸುತ್ತಾರೆ.

‘ಪಾತ್ರಕ್ಕೆ ತಕ್ಕಂತೆ ನಾವು ತಯಾರಿ ಮಾಡಿಕೊಂಡು ಸೆಟ್‌ಗೆ ಹೋಗುತ್ತೇವೆ ಎಂದಿಟ್ಟುಕೊಳ್ಳಿ. ಅಲ್ಲಿ ಪಾತ್ರವನ್ನು ಮತ್ತಷ್ಟು ಪೋಷಣೆ ಮಾಡಬೇಕು ಎಂದಾಗ ತೊಂದರೆಯಾಗುತ್ತದೆ. ನಾವು ಮಾನಸಿಕವಾಗಿ ಆ ಪಾತ್ರಕ್ಕೆ ಸಜ್ಜಾಗಿರುತ್ತೇವೆ. ಡೈಲಾಗ್‌ ಹೇಳುವಾಗ ಬದಲಾವಣೆ ಕಂಡರೆ ಕಷ್ಟವಾಗುತ್ತದೆ. ನನ್ನದು ತಯಾರಿಯೇ ಇಲ್ಲ. ನಾನು ನಿರ್ದೇಶಕರ ನಟಿ. ಅವರು ಹೇಳಿದ್ದನ್ನು ಮಾಡುವುದಷ್ಟೇ ನನ್ನ ಕೆಲಸ’ ಎನ್ನುವುದು ಅವರ ಸ್ಪಷ್ಟ ನುಡಿ.

ಅವರು ನಟನೆ ಆರಂಭಿಸಿದ್ದು ‘ಅರಸಿ’ ಧಾರಾವಾಹಿಯ ಮೂಲಕ. ಕಿರುತೆರೆ ಮೇಲೆ ಅವರಿಗೆ ಇಂದಿಗೂ ಅಪರಿಮಿತ ಅಭಿಮಾನ. ಕಲಾವಿದರ ನೈಜತನ ಅರಿಯಲು ಕಿರುತೆರೆಯೇ ಸೂಕ್ತ ವೇದಿಕೆ ಎನ್ನುವುದು ಅವರ ದೃಢ ನಂಬಿಕೆ. ‘ನಾನು ಟಿ.ವಿ. ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ರಚಿತಾಗೆ ಅಹಂಕಾರವಿದೆ ಎಂದು ಬಹಳಷ್ಟು ಜನರು ಹೇಳುತ್ತಿದ್ದರು. ಮಜಾಭಾರತ ಶೋಗೆ ಬಂದು ಕುಳಿತುಕೊಂಡಾಗ ನಾನು ಏನೆಂಬುದು ಜನರಿಗೆ ಅರ್ಥವಾಗಿದೆ. ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ’ ಎನ್ನುತ್ತಾರೆ.

‘ಪ್ರತಿಯೊಬ್ಬ ಕಲಾವಿದನ ನೈಜತನ ನೋಡಲು ಜನರಿಗೆ ಅವಕಾಶ ಸಿಗುವುದಿಲ್ಲ. ಟಿ.ವಿ. ಮೂಲಕ ಅದು ಗೊತ್ತಾಗುತ್ತದೆ. ರಿಯಾಲಿಟಿ ಕಾರ್ಯಕ್ರಮದಲ್ಲಿ ನಾನು ಪುಟ್ಟಮಗುವಿನಂತೆ ಕುಳಿತುಕೊಳ್ಳುತ್ತೇನೆ. ನಾನು ಹೀರೊಯಿನ್‌. ಹೀಗೆಯೇ ಕೂರಬೇಕು; ಹೀಗೆಯೇ ಇರಬೇಕು ಎಂಬುದಿಲ್ಲ. ನನಗೆ ಜನರ ಮುಂದೆ ನಾಟಕ ಮಾಡಲು ಬರುವುದಿಲ್ಲ. ಅದು ನನಗೆ ಗೊತ್ತಿಲ್ಲ. ನನ್ನ ಅಪ್ಪ, ಅಮ್ಮ ಅದನ್ನು ಕಲಿಸಿಕೊಟ್ಟಿಲ್ಲ. ನೀನು ಹೇಗಿರುವೆಯೋ ಹಾಗೆಯೇ ಇರುವಂತೆ ಹೇಳಿದ್ದಾರೆ. ಅವರು ಹೇಳಿದಂತೆ ನಾನಿದ್ದೇನೆ’ ಎಂದು ಖಡಕ್‌ ಆಗಿ ಹೇಳುತ್ತಾರೆ.

ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ ‘ಅರುಂಧತಿ’ಯಂತಹ ಪಾತ್ರ ಮಾಡುವ ಆಸೆ ಅವರಿಗೆ ಇತ್ತಂತೆ. ಆದರೆ, ‘ಆಯುಷ್ಮಾನ್‌ಭವ’ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥ ತರುಣಿಯ ಪಾತ್ರ ಮಾಡಿದಾಗ ಯಾವುದೇ ಪಾತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂಬ ನಿಲುವಿಗೆ ಬದ್ಧರಾಗಿದ್ದಾರಂತೆ.

‘ಆಯುಷ್ಮಾನ್‌ಭವದಲ್ಲಿನ ನನ್ನ ಪಾತ್ರ ಸಾಕಷ್ಟು ಸವಾಲಿನಿಂದ ಕೂಡಿತ್ತು. ನಮಗೆ ಸಿಕ್ಕಿದ ಪಾತ್ರಕ್ಕೆ ಕಣ್ಣುಮುಚ್ಚಿಕೊಂಡು ನಮಸ್ಕರಿಸಿ ನಟಿಸಬೇಕು. ಇಲ್ಲಿಯವರೆಗೂ ಇಂತಹದ್ದೇ ಸಿನಿಮಾ ಬೇಕು; ಪಾತ್ರ ಬೇಕು ಎಂದು ಹಂಬಲಿಸಿಲ್ಲ. ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಅಭಿನಯಿಸುವುದಷ್ಟೇ ನನ್ನ ಕೆಲಸ’ ಎಂಬ ಧನ್ಯತೆ ಅವರ ಮಾತಿನಲ್ಲಿತ್ತು.

‘ಬುಲ್‌ಬುಲ್‌ನಿಂದ ಆಯುಷ್ಮಾನ್‌ಭವದವರೆಗಿನ ಯಶಸ್ಸಿನ ಪಯಣ ನೋಡಿದರೆ ದೇವರು, ಜನರ ಆಶೀರ್ವಾದ ನನ್ನ ಮೇಲೆ ಹೆಚ್ಚಿದೆ ಅನಿಸುತ್ತಿದೆ. ವೃತ್ತಿಬದುಕಿನಲ್ಲಿ ಇದಕ್ಕಿಂತ ಇನ್ನೇನನ್ನೂ ನಾನು ನಿರೀಕ್ಷೆ ಇಟ್ಟುಕೊಂಡಿಲ್ಲ. ನಾನು ನಟಿಸಿರುವ ಸಿನಿಮಾಗಳಲ್ಲಿನ ಪಾತ್ರಗಳು ಖುಷಿ ಕೊಟ್ಟಿವೆ. ನಾನು ದೇವರ ಬಳಿ ಹೋದಾಗಲೂ ಇಂತಹದ್ದೇ ಪಾತ್ರ ಕೊಡಿಸು ಎಂದು ಬೇಡುವುದಿಲ್ಲ. ನಾನು ಮಾಡುವ ಕೆಲಸ, ಸಿನಿಮಾಗಳಿಗೆ ಯಶಸ್ಸು ಸಿಗಲಿ ಎಂದಷ್ಟೇ ಬೇಡುತ್ತೇನೆ’ ಎನ್ನುತ್ತಾರೆ.

ವೃತ್ತಿಬದುಕಿನ ಆರಂಭದಲ್ಲಿ ಸಿನಿಮಾ ಒಪ್ಪಿಕೊಳ್ಳುವಾಗ ಅವರು ಹಲವು ಮಾನದಂಡ ಪಾಲಿಸುತ್ತಿದ್ದುದು ಉಂಟು. ಈಗ ಇಂಡಸ್ಟ್ರಿಯಲ್ಲಿ ಎಲ್ಲ ದೊಡ್ಡ ನಟರೊಟ್ಟಿಗೆ ಕೆಲಸ ಮಾಡಿದ ಬಳಿಕ ಈ ಮಾನದಂಡವನ್ನು ಬದಲಾಯಿಸಿಕೊಂಡಿದ್ದಾರಂತೆ.

‘ಆರಂಭದಲ್ಲಿ ಪಾತ್ರದ ಜೊತೆಗೆ ಬ್ಯಾನರ್‌, ಹೀರೊ, ನಿರ್ದೇಶಕ ಎಲ್ಲವನ್ನೂ ನೋಡುತ್ತಿದ್ದೆ. ಈಗ ನಾನು ಪ್ರಾಧಾನ್ಯ ನೀಡುವುದು ಕ್ಯಾರೆಕ್ಟರ್‌ಗೆ. ಸಿನಿಮಾದ ಕಂಟೆಂಟ್‌ ಚೆನ್ನಾಗಿರಬೇಕು. ಕಥೆ ಮತ್ತು ಪಾತ್ರ ಚೆನ್ನಾಗಿದ್ದರೆ ಕಲಾವಿದರು ಗೆದ್ದಂತೆ. ಪಾತ್ರ ಚೆನ್ನಾಗಿದ್ದರೆ ನಿರ್ದೇಶಕರು ಹೊಸಬರು ಅಥವಾ ಖ್ಯಾತನಾಮರು ಎನ್ನುವುದನ್ನು ಅಳೆದುತೂಗುವುದಿಲ್ಲ. ಪಾತ್ರ ಚೆನ್ನಾಗಿದ್ದ ಹಿನ್ನೆಲೆಯಲ್ಲಿಯೇ ‘ಆಯುಷ್ಮಾನ್‌ಭವ’ ಸಿನಿಮಾವನ್ನು ಆಯ್ಕೆ ಮಾಡಿಕೊಂಡೆ’ ಎಂದು ಹೇಳುತ್ತಾರೆ.

ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂದಿರುವುದಕ್ಕೆ ರಚಿತಾ ಖುಷಿಯಾಗಿದ್ದಾರೆ. ‘ಮೆಗಾಸ್ಟಾರ್‌’ ಚಿರಂಜೀವಿ ಅಳಿಯ ಕಲ್ಯಾಣ್‌ ದೇವ್‌ ಜೊತೆಗೆ ‘ಸೂಪರ್‌ ಮಚ್ಚಿ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಡಿ. 9ರಿಂದ ಈ ಚಿತ್ರದ ಶೂಟಿಂಗ್‌ ಶುರುವಾಗುತ್ತಿದೆ. ‘ಈ ಚಿತ್ರದಲ್ಲಿಯೂ ಬುಲ್‌ಬುಲ್‌ ಚಿತ್ರದ ತರಹದ್ದೇ ಪಾತ್ರ ಸಿಕ್ಕಿದೆ. ಫ್ಯಾಮಿಲಿ ಕಥೆ ಇದು. ತೆಲುಗಿನಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿದ್ದವು. ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದೆ. ಟಾಲಿವುಡ್‌ಗೆ ನನ್ನ ಪ್ರವೇಶ ಒಳ್ಳೆಯ ಕಥೆಯ ಮೂಲಕವೇ ಆಗುತ್ತಿದೆ’ ಎಂದು ಖುಷಿ ಹಂಚಿಕೊಳ್ಳುತ್ತಿದ್ದಾರೆ.

ನಟಿ ಸುಹಾಸಿನಿ ಅವರು ತಮಿಳು ಚಿತ್ರಗಳಲ್ಲಿಯೂ ನಟಿಸುವಂತೆ ಕೇಳಿರುವುದಕ್ಕೆ ಅವರು ಖುಷಿಯಾಗಿದ್ದಾರೆ. ‘ನಾನು ಮಣಿರತ್ನಂ ಸಿನಿಮಾಗಳ ದೊಡ್ಡ ಅಭಿಮಾನಿ. ‘ರೋಜಾ’ ಸೇರಿದಂತೆ ಅವರು ನಿರ್ದೇಶಿಸಿರುವ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಸುಹಾಸಿನಿ ಅವರು ಖ್ಯಾತ ನಟಿ. ತಮಿಳಿನಲ್ಲಿ ಅವರು ನಟಿಸುವಂತೆ ಕೇಳಿದಾಗ ಸಂತಸಪಟ್ಟೆ. ತಮಿಳಿನಿಂದಲೂ ಬಹಳಷ್ಟು ಸಿನಿಮಾದ ಅವಕಾಶಗಳು ಬರುತ್ತಿವೆ. ಆದರೆ ಕಥೆ, ಪಾತ್ರ ಇಷ್ಟವಾದರೆ ಖಂಡಿತ ನಟಿಸುತ್ತೇನೆ’ ಎನ್ನುತ್ತಾರೆ.

ಮದುವೆ ಮಾತು

‘ಕೈತುಂಬಾ ಸಿನಿಮಾಗಳಿವೆ. ನಾನು ಮದುವೆಯಾಗಲು ಹೇಗೆ ಸಾಧ್ಯ?’

–ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ರಚಿತಾ ಹೇಳಿದ್ದು ಹೀಗೆ.‘ನನ್ನ ಸಹೋದರಿ ನಿತ್ಯಾ ರಾಮ್‌ ಅವರ ಮದುವೆಯಾಗುತ್ತಿದೆ. ನಾನು ಮದುವೆಯಾಗುವಾಗ ಖಂಡಿತಾ ಹೇಳುತ್ತೇನೆ. ಒಳ್ಳೆಯ ಹುಡುಗ ಸಿಕ್ಕಿದರೆ ಖಂಡಿತಾ ಮದುವೆಯಾಗುತ್ತೇನೆ’ ಎಂದರು.

ಹುಡುಗನ ಆಯ್ಕೆಯನ್ನು ಅವರು ದೇವರಿಗೆ ಬಿಟ್ಟಿದ್ದಾರಂತೆ. ‘ದೇವರು ಕಳುಹಿಸುವ ಹುಡುಗನನ್ನು ಕಣ್ಣು ಮಚ್ಚಿಕೊಂಡು ಮದುವೆಯಾಗುತ್ತೇನೆ’ ಎಂದು ನಗು ಚೆಲ್ಲಿದರು.

ಅವರ ಮನೆಯಲ್ಲಿ ಅಪ್ಪನೇ ಉತ್ತಮ ಸಿನಿಮಾ ವಿಮರ್ಶಕರಂತೆ. ಅವರು ನಟಿಸಿದ ಎಲ್ಲಾ ಸಿನಿಮಾಗಳನ್ನೂ ನೋಡುತ್ತಾರಂತೆ. ಆದರೆ, ಅಪ್ಪಿತಪ್ಪಿ ಹೊಗಳುವುದಿಲ್ಲವಂತೆ. ‘ನಾನು ಸಖತ್ತಾಗಿ ನಟಿಸಿದ್ದೇನೆ ಎಂದು ಅಪ್ಪನಿಗೆ ಹೇಳುತ್ತೇನೆ. ಆದರೆ, ಅವರು ನನ್ನ ನಟನೆಯನ್ನು ಸುಲಭಕ್ಕೆ ಒಪ್ಪುವುದಿಲ್ಲ. ಮತ್ತಷ್ಟು ಸುಧಾರಣೆಯಾಗಬೇಕಿತ್ತು ಎನ್ನುತ್ತಾರೆ’ ಎಂದು ಅಪ್ಪನ ಸಲಹೆಯನ್ನು ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT