ಭಾನುವಾರ, ಮೇ 29, 2022
31 °C

ಶೀಘ್ರದಲ್ಲೇ ‘777 ಚಾರ್ಲಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ: ನಟ ರಕ್ಷಿತ್ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದ ಸೆನ್ಸಾರ್‌ ಪೂರ್ಣಗೊಂಡಿದ್ದು, ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ರಕ್ಷಿತ್‌ ಶೆಟ್ಟಿ ಅವರು ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಪರಂವಃ ಸ್ಟುಡಿಯೋಸ್ ನಿರ್ಮಾಣದ ಈ ಪ್ಯಾನ್‌ ಇಂಡಿಯಾ ಚಿತ್ರವು ಕಳೆದ ಡಿ.31ಕ್ಕೇ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿತ್ತು. ಇದಕ್ಕೆ ನಿಖರ ಕಾರಣವನ್ನೂ ನೀಡಿರಲಿಲ್ಲ. ಡಿಸೆಂಬರ್‌ ಹಾಗೂ ಜನವರಿ ಮೊದಲ ವಾರದಲ್ಲಿ ಟಾಲಿವುಡ್‌ ಹಾಗೂ ಬಾಲಿವುಡ್‌ನ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾಗಳ ಬಿಡುಗಡೆಯೇ ಚಿತ್ರಕ್ಕೆ ಅಡ್ಡಿಯಾಗಿತ್ತು ಎನ್ನಲಾಗಿತ್ತು.  

‘ನಾವು ‘ಯು’ ಪ್ರಮಾಣ ಪತ್ರ ನಿರೀಕ್ಷಿಸಿದ್ದೆವು. ಆದರೆ ‘ಧರ್ಮ’ ಎಂಬ ಪಾತ್ರದ ಜೀವನಶೈಲಿಯನ್ನು ವಿವರಿಸಲು ಸಿಗರೇಟ್‌, ಬಿಯರ್‌ ಉಪಯೋಗಿಸುವುದು ಅನಿವಾರ್ಯವಾಗಿತ್ತು. ಇದೇ ಕಾರಣದಿಂದಾಗಿ ಸೆನ್ಸಾರ್‌ ಮಂಡಳಿಯು ‘ಯು/ಎ’ ಪ್ರಮಾಣ ಪತ್ರ ನೀಡಿದೆ’ ಎಂದು ಚಿತ್ರದ ನಿರ್ದೇಶಕ ಕಿರಣ್‌ ರಾಜ್‌ ಕೆ. ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಠ್‌ ತಾರಾಗಣದಲ್ಲಿದ್ದಾರೆ. ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು