ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ‘ಚಾರ್ಲಿ’ಯ ‘ಲಕ್ಕಿ’ಗರ್ಲ್‌ ಸಂಗೀತಾ

Last Updated 2 ಜೂನ್ 2022, 19:30 IST
ಅಕ್ಷರ ಗಾತ್ರ

ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆಇಟ್ಟು ‘ಚಾರ್ಲಿ’ ಜೊತೆ ದೇಶ ಸುತ್ತಿದ ‘ಲಕ್ಕಿ’ಗರ್ಲ್‌ ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕಿ. ಆದರೆ ಸಂಗೀತಾ ಹೊಸ ಪ್ರೊಜೆಕ್ಟ್ಸ್‌ ಏಕೆ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಕಾರಣ ಇದು....

***

* ‘777 ಚಾರ್ಲಿ’ ಜೊತೆಗಿನ ಪಯಣ ಆರಂಭವಾಗಿದ್ದು ಹೇಗೆ?
‘ಹರಹರ ಮಹಾದೇವ’ ಧಾರಾವಾಹಿ ಪೂರ್ಣಗೊಳಿಸಿ ಒಂದು ವರ್ಷದ ಬ್ರೇಕ್‌ ತೆಗೆದುಕೊಂಡು ಹೈದರಾಬಾದ್‌ನಲ್ಲಿ ಇದ್ದ ಸಂದರ್ಭದಲ್ಲಿ ನಾನು ‘777 ಚಾರ್ಲಿ’ಯ ಆಡಿಷನ್‌ ಪೋಸ್ಟರ್‌ ಗಮನಿಸಿದ್ದೆ. ನೇರವಾಗಿ ಬೆಂಗಳೂರಿಗೆ ಬಂದಿಳಿದು ಪರಂವಃ ಸ್ಟುಡಿಯೊಗೆ ಭೇಟಿ ನೀಡಿ ಆಡಿಷನ್‌ನಲ್ಲಿ ಭಾಗವಹಿಸಿದ್ದೆ. ಆಡಿಷನ್‌ ಆದ ಬಳಿಕ, ಕಥೆ ಹೇಳುವ ಸಂದರ್ಭದಲ್ಲಿ ನಿರ್ದೇಶಕ ಕಿರಣ್‌ರಾಜ್‌ ಅವರು ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಸ್ವತಃ ನಟನೆ ಮಾಡಿ ವಿವರಿಸಿದರು. ಒಬ್ಬ ನಿರ್ದೇಶಕ ಒಂದೊಂದು ಪಾತ್ರಕ್ಕೂ ಇಷ್ಟು ಪ್ರಾಮುಖ್ಯತೆ ನೀಡುತ್ತಾನೆ ಎಂದರೆ ಸಿನಿಮಾವನ್ನು ಇನ್ನೆಷ್ಟು ಅದ್ಭುತವಾಗಿ ತೆರೆ ಮೇಲೆ ತರಬಹುದು ಎಂದು ಅಂದುಕೊಂಡಿದ್ದೆ. ಇದು ‘ಧರ್ಮ’(ರಕ್ಷಿತ್‌ ಶೆಟ್ಟಿ) ಹಾಗೂ ‘ಚಾರ್ಲಿ’ಯ ಪಯಣವಲ್ಲ. ಇದು ಭಾವನಾತ್ಮಕ ಪಯಣ. ಈ ಪಯಣದಲ್ಲಿ ನನ್ನ, ರಾಜ್‌ ಬಿ.ಶೆಟ್ಟಿ, ಬಾಬಿ ಸಿಂಹ, ಡ್ಯಾನಿಷ್‌ ಸೇಟ್‌ ಹೀಗೆ ಹಲವರ ಪಾತ್ರಗಳು ಕೈಜೋಡಿಸುತ್ತವೆ.

* ಚಿತ್ರದಲ್ಲಿನ ನಿಮ್ಮ ಪಾತ್ರ ‘ದೇವಿಕಾ’ ಬಗ್ಗೆ..
ನನ್ನ ನಿಜಜೀವನಕ್ಕೆ ‘ದೇವಿಕಾ’ ಪಾತ್ರ ಬಹಳ ಹತ್ತಿರವಾಗಿದೆ. ಈ ಪಾತ್ರಕ್ಕೆ ಸುಲಭವಾಗಿ ಕನೆಕ್ಟ್‌ ಆದೆ. ಆದರೆ ಅಭಿನಯದ ವಿಚಾರದಲ್ಲಿ ಬಹಳ ಕಷ್ಟ ಅನುಭವಿಸಿದೆ. ಕಿರಣ್‌ರಾಜ್‌ ಅವರು ನಿರ್ದೇಶನದ ವಿಚಾರದಲ್ಲಿ ಬಹಳ ಕಠಿಣ. ದೃಶ್ಯವೊಂದು ಈ ರೀತಿ ಬರಬೇಕು ಎಂದರೆ ಅದೇ ರೀತಿ ಬರಬೇಕು. ನಾವೇನಾದರೂ ನಮ್ಮ ಅಭಿನಯದಲ್ಲಿ ಒಂದಿಷ್ಟು ಸುಧಾರಣೆ ತರಲು ಪ್ರಯತ್ನಿಸಿದರೆ, ಅವರಿಗೆ ಹಿಡಿಸದು. ಅವರ ಮನಸ್ಸಿನಲ್ಲಿ ಆ ಪಾತ್ರ ಹೇಗೆ ಅಭಿನಯಿಸಬೇಕು ಎಂದಿರುತ್ತದೆಯೋ ಅದೇ ರೀತಿ ನಾವು ಅಭಿನಯಿಸಬೇಕು. ನಮಗಿದ್ದ ಇನ್ನೊಂದು ಚಾಲೆಂಜ್‌ ‘ಚಾರ್ಲಿ’. ಎಲ್ಲಿ ಯಾವ ದೃಶ್ಯ ಸರಿಯಾಗಿ ಸೆರೆಯಾಗುತ್ತದೆಯೋ ತಿಳಿದಿಲ್ಲ. ಹೀಗಾಗಿ ನಾವು ಯಾವ ರಿಸ್ಕ್‌ ಕೂಡಾ ತೆಗೆದುಕೊಂಡಿಲ್ಲ.

ಕಲಾವಿದನೊಬ್ಬನಿಗೆ ನಮ್ಮತನವನ್ನು ಬಿಟ್ಟು, ನಿರ್ದೇಶಕ ಹೇಳಿದ ಹಾಗೆಯೇ ನಟನೆ ಮಾಡುವುದು ಬಹಳ ಕಷ್ಟ. ಆದರೆ ತೆರೆ ಮೇಲೆ ಸಿನಿಮಾವನ್ನು ನೋಡಿದ ಬಳಿಕ, ನನಗೆ ನನ್ನ ಬಗ್ಗೆಯೇ ಹೆಮ್ಮೆಯಾಯಿತು. ಕಲಾವಿದನಿಗೆ ಒಂದು ಪಾತ್ರದ ಬಗ್ಗೆ ತೃಪ್ತಿಯಾಗಲು ಸಾಧ್ಯವೇ ಇಲ್ಲ. ‘ಇನ್ನೂ ಚೆನ್ನಾಗಿ ಮಾಡಬಹುದಿತ್ತಲ್ಲವೇ’ ಎನ್ನುವ ಕೊರಗು ಇದ್ದೇ ಇರುತ್ತದೆ. ಆದರೆ ‘ದೇವಿಕಾ’ ಪಾತ್ರ ತೃಪ್ತಿ ನೀಡಿದೆ. ಈ ರೀತಿಯ ಅಭಿನಯವನ್ನು ನನ್ನೊಳಗಿಂದ ಬೇರೊಬ್ಬ ನಿರ್ದೇಶಕನಿಂದ ತೆಗೆಸಲು ಸಾಧ್ಯವಿಲ್ಲ ಎಂದುಕೊಳ್ಳುತ್ತೇನೆ. ನನ್ನ ಅಭಿನಯದ ಬಗ್ಗೆ ಬಹಳ ಭರವಸೆ ಇದೆ. ‘ದೇವಿಕಾ’ ಎನ್ನುವ ಪಾತ್ರ ಸಣ್ಣ ಪಾತ್ರವಾಗಿದ್ದರೂ, ಕಥೆಯಲ್ಲಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತಾಳೆ. ಗ್ಲ್ಯಾಮರ್‌ಗೋಸ್ಕರ ನಿರ್ದೇಶಕರು ಈ ಪಾತ್ರವನ್ನು ಸಿನಿಮಾದೊಳಗೆ ತುರುಕಿಲ್ಲ. ಈ ಪಾತ್ರಕ್ಕೊಂದು ಅರ್ಥವಿದೆ. ‘ಧರ್ಮ’ನ ಜೀವನದ ಮೇಲೂ ಈಕೆ ಪ್ರಭಾವ ಬೀರುತ್ತಾಳೆ.

* ತೆರೆಯಲ್ಲಿ ‘ದೇವಿಕಾ’ ಬಹಳ ನೈಜವಾಗಿ ಕಾಣುತ್ತಾಳೆ..ನಿಜ ಜೀವನದಲ್ಲಿ?
ನಟನೆಯ ಆಳ ಬಹಳಷ್ಟಿದೆ ಎನ್ನುವುದನ್ನು ನಾನು ಅರ್ಥೈಸಿಕೊಂಡಿದ್ದೇನೆ. ಕ್ಯಾಮೆರಾ ಮುಂದೆ ಬಂದು ಡೈಲಾಗ್ ಹೇಳುವುದಷ್ಟೇ ನಟನೆ ಅಲ್ಲ. ಪಾತ್ರದೊಳಗೆ ಇಳಿಯಲು ನಾನು ಸಮಯ ತೆಗೆದುಕೊಳ್ಳುತ್ತೇನೆ. ನನ್ನ ದೇಹ ಸೌಂದರ್ಯವನ್ನು ನೋಡಿ ಯಾರೂ ನನ್ನ ನಟನೆಯನ್ನು ಅಳೆಯಬಾರದು. ನನ್ನ ಅಭಿನಯ, ಪ್ರತಿಭೆಯನ್ನು ನೋಡಿ ಇಷ್ಟಪಡಬೇಕು, ಗುರುತಿಸಬೇಕು.ಪಾತ್ರಕ್ಕೊಂದು ಅರ್ಥವಿದ್ದರಷ್ಟೇ ಅಂಥ ಪಾತ್ರವನ್ನು ಮಾಡುತ್ತೇನೆ. ಕಲಾವಿದೆಯಾಗಿ ಗ್ಲ್ಯಾಮರ್‌ ಪಾತ್ರಗಳನ್ನೂ ಮಾಡಲೇಬೇಕಾಗುತ್ತದೆ. ಅಂಥ ಪಾತ್ರ ‘ಮಾರಿಗೋಲ್ಡ್‌’ ಸಿನಿಮಾದಲ್ಲಿದೆ.

* ‘777 ಚಾರ್ಲಿ’ಗಾಗಿ ಎಷ್ಟು ಆಫರ್‌ಗಳನ್ನು ತಿರಸ್ಕರಿಸಿದ್ರಿ?
ಈ ಚಿತ್ರ ಒಪ್ಪಿಕೊಂಡಾಗ ಎರಡು ವರ್ಷದ ಕಾಂಟ್ರ್ಯಾಕ್ಟ್‌ನಲ್ಲಿದ್ದೆ. ಬೇರೆ ಯಾವ ಸಿನಿಮಾವನ್ನೂ ನಾನು ಒಪ್ಪಿಕೊಳ್ಳುವಂತಿರಲಿಲ್ಲ. ಕಿರಣ್‌ರಾಜ್‌ ಅವರಿಗೆ ಕಲಾವಿದರ ಬದ್ಧತೆ ಅಗತ್ಯವಾಗಿತ್ತು. ‘ಚಾರ್ಲಿ’ ಜೊತೆಗೆ ನಾವು ತರಬೇತಿ ಪಡೆಯಬೇಕಿತ್ತು. ಇಂಥ ಸಂದರ್ಭದಲ್ಲಿ ಪ್ರೊಜೆಕ್ಟ್‌ನಿಂದ ಹೊರನಡೆದರೆ ಅದು ಇಡೀ ತಂಡದ ಮೇಲೆಯೇ ಪರಿಣಾಮ ಬೀರುತ್ತಿತ್ತು. ನಾಲ್ಕು ವರ್ಷದ ಹಿಂದೆ ಈ ಷರತ್ತು ಒಪ್ಪಿಕೊಳ್ಳುವ ಮೊದಲು ಹಲವು ಬಾರಿ ಯೋಚಿಸಿದ್ದೆ. ಏಕೆಂದರೆ, ನಾನು ‘ಹರಹರ ಮಹಾದೇವ’ ಪೂರ್ಣಗೊಳಿಸಿದ್ದೆ. ಅದು ನಾನು ಚಿತ್ರರಂಗದಲ್ಲಿ ಮತ್ತಷ್ಟು ಸಾಧಿಸುವ ಅವಧಿಯಾಗಿತ್ತು.ಹಲವು ಸಿನಿಮಾ ಆಫರ್‌ಗಳು ಬರುತ್ತಿದ್ದವು. ನನ್ನ ಮೊದಲ ಚಿತ್ರ ಅಷ್ಟು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಒಂದೊಳ್ಳೆ ಸಿನಿಮಾದಲ್ಲಿ ನಟನೆ ಮಾಡುವ ಹಂಬಲವಿತ್ತು. ನನ್ನ ನಟನೆಯನ್ನು ನೋಡಿ ಮತ್ತಷ್ಟು ಆಫರ್‌ಗಳು ಬರಲಿ ಎನ್ನುವ ಆಶಯವಿತ್ತು. ಹೀಗಾಗಿ ‘777 ಚಾರ್ಲಿ’ಗೆ ಈ ಸಮಯ ನೀಡುವುದು ಯೋಗ್ಯವೆಂದೆನಿಸಿತು. ಹಲವು ಆಫರ್‌ಗಳನ್ನು ತಿರಸ್ಕರಿಸುವಾಗ ನನಗೆ ಯಾವುದೇ ವಿಷಾದವಾಗಿಲ್ಲ. ಏಕೆಂದರೆ ನನಗೆ ಈ ಸಿನಿಮಾದ ಕಥೆಯ ಮೇಲೆ ನಂಬಿಕೆಯಿತ್ತು.

* ರಕ್ಷಿತ್‌ ಅವರ ಜೊತೆಗಿನ ನಟನೆಯ ಅನುಭವ...
ರಕ್ಷಿತ್‌ ಶೆಟ್ಟಿ ಅವರು ಬಹಳ ಸರಳ ವ್ಯಕ್ತಿ. ಹೀಗಾಗಿ ಅವರ ವ್ಯಕ್ತಿತ್ವ ಇಷ್ಟವಾಗುತ್ತದೆ. ನಿರ್ದೇಶಕರ ಕಲಾವಿದ ಅವರು. ‘ಚಾರ್ಲಿ’ ಜೊತೆ ನಟನೆ ಮಾಡಲು ಬಹಳ ತಾಳ್ಮೆ ಅಗತ್ಯ. ಕೆಲವೊಮ್ಮೆ ನಲವತ್ತು ಟೇಕ್‌ಗಳನ್ನೂ ತೆಗೆದುಕೊಂಡಿದ್ದೂ ಇದೆ. ಈ ಸಂದರ್ಭದಲ್ಲಿ ಅವರು ನಟಿಸುತ್ತಿರಲಿಲ್ಲ, ಒಂದು ರೀತಿ ಪರಕಾಯ ಪ್ರವೇಶ ಮಾಡಿದಂತೆ ನೈಜವಾಗಿದ್ದರು.

* ಸಂಗೀತ ಶೃಂಗೇರಿ ಏಕೆ ಹೊಸ ಪ್ರೊಜೆಕ್ಟ್‌ ಒಪ್ಪಿಕೊಳ್ಳುತ್ತಿಲ್ಲ?
‘777 ಚಾರ್ಲಿ’ ಸಿನಿಮಾದ ಕಾಂಟ್ರ್ಯಾಕ್ಟ್‌ನಲ್ಲಿ ಇರುವಾಗಲೇ ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡಿತು. ಆ ವೇಳೆಗಾಗಲೇ ಚಿತ್ರದ ಒಂದು ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೆವು. ಈ ಸಂದರ್ಭದಲ್ಲಿ ಕೇವಲ ಒಂದು ಸಿನಿಮಾವನ್ನಷ್ಟೇ ನಂಬಿಕೊಂಡು ಬದುಕುವ ಸ್ಥಿತಿಯೂ ಇರಲಿಲ್ಲ. ಇದನ್ನು ಕಿರಣ್‌ರಾಜ್‌ ಅವರೂ ಅರ್ಥಮಾಡಿಕೊಂಡು ಬೇರೆ ಆಫರ್‌ಗಳನ್ನು ಒಪ್ಪಿಕೊಳ್ಳಲು ತಿಳಿಸಿದರು. ಇದಾದ ಬಳಿಕ ದಿಗಂತ್‌ ಅವರ ಜೊತೆಗಿನ ‘ಮಾರಿಗೋಲ್ಡ್‌’, ಡಾರ್ಲಿಂಗ್‌ ಕೃಷ್ಣ ಅವರ ಜೊತೆಗೆ ‘ಲಕ್ಕಿಮ್ಯಾನ್‌’ ಒಪ್ಪಿಕೊಂಡೆ. ‘777 ಚಾರ್ಲಿ’ ಸಿನಿಮಾದಲ್ಲಿನ ನನ್ನ ನಟನೆ, ಕೆಲಸ ನೋಡಿ ಆಫರ್‌ಗಳು ಬರಲಿ ಎಂದು ಕಾಯುತ್ತಿದ್ದೇನೆ. ಹೀಗಾಗಿ ‘ಲಕ್ಕಿಮ್ಯಾನ್‌’ ಬಳಿಕ ಒಳ್ಳೊಳ್ಳೆಯ ಬ್ಯಾನರ್‌ನ ಸಿನಿಮಾಗಳಿಂದ ಆಫರ್‌ಗಳು ಬಂದರೂ ಯಾವ ಸಿನಿಮಾಗಳನ್ನೂ ನಾನು ಒಪ್ಪಿಕೊಂಡಿಲ್ಲ.

* ನೀವು ‘ಲಕ್ಕಿ’ಗರ್ಲ್‌ ಅಲ್ಲವೇ?
‘ಲಕ್ಕಿಮ್ಯಾನ್‌’ ಸಿನಿಮಾದಲ್ಲಿ ನಟನೆ ಮಾಡಿರುವಂಥ ಕಲಾವಿದರು, ತಂತ್ರಜ್ಞರೆಲ್ಲರೂ ಲಕ್ಕಿಯೇ. ಪುನೀತ್‌ ರಾಜ್‌ಕುಮಾರ್ ಅವರ ಜೊತೆ ಇದ್ದಿದ್ದೇ ಪುಣ್ಯ. ಅವರು ನಮ್ಮ ಜೊತೆಗಿಲ್ಲದೇ ಇದ್ದರೂ ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ಚಿತ್ರದಲ್ಲಿ ದೇವರ ಪಾತ್ರದಲ್ಲಿ ಪುನೀತ್‌ ಅವರು ನಟಿಸಿದ್ದು, ಅದಕ್ಕಿಂತ ದೊಡ್ಡ ಆಶೀರ್ವಾದ ಬೇಕೇ? ಅವರು ನಮ್ಮ ಜೊತೆ ಸದಾ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT