ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಡಲ್‌ವುಡ್‌ಗೆ ಬಂದ ಸ್ಯಾಂಡಿ

Last Updated 6 ಜನವರಿ 2021, 19:30 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ಬೆಂಗಳೂರಿನ ಭೂಗತ ಲೋಕವನ್ನು ಆಳಿದ ಡಾನ್‌ ಜಯರಾಜ್‌ ಬದುಕಿನ ಕಥನದ ಒಂದಿಷ್ಟು ಭಾಗವನ್ನು ಕೆಲವು ನಿರ್ದೇಶಕರು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಜಯರಾಜ್‌ ಬದುಕಿನ ಸುತ್ತವೇ ಹೆಣೆದ ಹಲವು ಆಯಾಮಗಳ ಕಥನ ಕುತೂಹಲವನ್ನು ಪ್ಯಾನ್‌ ಇಂಡಿಯಾ ಚಿತ್ರವಾಗಿ ಮತ್ತೊಬ್ಬ ನಿರ್ದೇಶಕ ಶೂನ್ಯ ಅವರು ‘ಹೆಡ್‌ ಬುಷ್‌’ ವಾಲ್ಯೂಮ್‌ –1 ಶೀರ್ಷಿಕೆಯಡಿ ತರುತ್ತಿದ್ದಾರೆ. ಜಯರಾಜ್‌ ಅವರ ಒಂದು ಕಾಲದ ಒಡನಾಡಿ ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾ ಗಿರಿಯ ದಿನಗಳು’ ಆಧರಿಸಿದೆ ‘ಹೆಡ್‌ಬುಷ್‌’ ಚಿತ್ರಕಥೆ. ಇದರಲ್ಲಿ ಎಂ.ಪಿ. ಜಯರಾಜ್‌ ಪಾತ್ರವನ್ನು ಸ್ಯಾಂಡಲ್‌ವುಡ್‌ನ ‘ಡಾಲಿ’ ಕೆ.ಧನಂಜಯ ನಿಭಾಯಿಸುತ್ತಿದ್ದಾರೆ. ಜಯರಾಜ್‌ ಬಲಗೈ ಬಂಟನಾಗಿದ್ದ ರೌಡಿ ಸ್ಯಾಮ್ಸನ್‌ ಪಾತ್ರಕ್ಕೆ ಈಗ ಕಾಲಿವುಡ್‌ನ ಜನಪ್ರಿಯ ತಾರೆ ಸ್ಯಾಂಡಿ ಮಾಸ್ಟರ್‌ ಕಾಲಿಟ್ಟಿದ್ದಾರೆ.

ಈ ಚಿತ್ರ ಕನ್ನಡ, ಹಿಂದಿ, ಇಂಗ್ಲಿಷ್‌, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ನಟ– ನಿರ್ಮಾಪಕ ಅಶು ಬೇದ್ರ ‘ಅಶು ಬೇದ್ರ ವೆಂಚರ್ಸ್‌’ ಬ್ಯಾನರ್‌ನಡಿ ಬಂಡವಾಳ ಹೂಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆ ಹೊತ್ತಿದ್ದಾರೆ ಅಗ್ನಿ ಶ್ರೀಧರ್‌. ಸುನೋಜ್‌ ವೇಲಾಯುಧನ್‌ ಛಾಯಾಗ್ರಹಣ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಯಾರಿದು ಸ್ಯಾಂಡಿ?
1970ರ ಅವಧಿಯಲ್ಲಿ ಜಯರಾಜ್‌ಗೆ ಅತ್ಯಂತ ಪರಮಾಪ್ತ ಹಾಗೂ ಬಲಗೈ ಬಂಟನಾಗಿದ್ದವನು ರೌಡಿ ಸ್ಯಾಮ್ಸನ್‌. ಸ್ಯಾಮ್ಸನ್‌ಗೆ ಮುಖ ಚಹರೆಯಲ್ಲಿ ಹೋಲಿಕೆಯಾಗುವ ನಟನಿಗಾಗಿ ಚಿತ್ರತಂಡ ಹುಡುಕಾಡುವಾಗ ಕಣ್ಣಿಗೆ ಬಿದ್ದವರೇ ಕಾಲಿವುಡ್‌ನ ಬಹುಮುಖ ಪ್ರತಿಭೆ, ಜನಪ್ರಿಯ ತಾರೆ ಸ್ಯಾಂಡಿ ಮಾಸ್ಟರ್‌.

ಸ್ಯಾಂಡಿ ತಮಿಳಿನ ಹಾರರ್‌ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ. ತಮಿಳಿನಲ್ಲಿ ನಟ ಕಮಲ್‌ ಹಾಸನ್‌ ನಡೆಸಿಕೊಡುವ ಬಿಗ್‌ಬಾಸ್‌ ಷೋನ 2019ರ ಸೀಸನ್‌ನಲ್ಲಿ ಸ್ಯಾಂಡಿ ರನ್ನರ್‌ ಅಪ್ ಕಿರೀಟ ಕೂಡ ಮುಡಿಗೇರಿಸಿಕೊಂಡವರು. ಎಲ್ಲಕ್ಕಿಂತ ಮುಖ್ಯವಾಗಿ ನೃತ್ಯ ಸಂಯೋಜಕರಾಗಿ 2014ರಲ್ಲಿ ಕಾಲಿವುಡ್‌ ಚಿತ್ರರಂಗ ಪ್ರವೇಶಿಸಿದ ಪ್ರತಿಭೆ ಸ್ಯಾಂಡಿ. 2018ರಲ್ಲಿ ರಜನಿಕಾಂತ್‌ ನಟನೆಯ ಕಾಲ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ ಕೀರ್ತಿಯೂ ಇವರದು. ‘ವಿರಾವಿಲ್ ಇಸೈ’, ‘ಇವಾನುಕು ಥನ್ನಿಲಾ ಗಂಡಮ್’, ‘ವಾಲು’, ‘ಸಾಗಾಸಂ’, ‘ಜಿಥಾನ್ 2’ ಚಿತ್ರಗಳಿಗೆ ಸ್ಯಾಂಡಿ ನೃತ್ಯ ಸಂಯೋಜಿಸಿದ್ದಾರೆ.

‘ಹೆಡ್‌ಬುಷ್‌’ ಚಿತ್ರ ಈಗಾಗಲೇ ಸಿನಿರಸಿಕರ ಕುತೂಹಲ ಇಮ್ಮಡಿಸಿಗೊಳಿಸಿದೆ. ಸ್ಯಾಂಡಿ ಆಗಮನದಿಂದ ಚಿತ್ರಕ್ಕೆ ಇನ್ನಷ್ಟು ಕಳೆಬಂದಿದೆ. ಅವರು ಖುಷಿಯಿಂದ ಈ ಪಾತ್ರ ಒಪ್ಪಿ ಸ್ಯಾಂಡಲ್‌ವುಡ್‌ಗೆ ಅಡಿ ಇಟ್ಟಿದ್ದಾರೆ. ಶೂಟಿಂಗ್‌ ವೇಳೆ ಡೇಟ್‌ ಸಮಸ್ಯೆಯಾಗಬಾರದೆಂದು ಸ್ಯಾಂಡಿ ಹಲವು ಸೂಪರ್‌ಸ್ಟಾರ್‌ ನಟರ ಚಿತ್ರಗಳನ್ನು ಕೈಬಿಟ್ಟಿದ್ದಾರೆ. ಜಯರಾಜ್‌ ಜತೆಗೆ ಸ್ಯಾಮ್ಸನ್‌ ಪಾತ್ರವೂ ಹೆಣೆದುಕೊಂಡಿರುವುದರಿಂದ ಚಿತ್ರದುದ್ದಕ್ಕೂ ಸ್ಯಾಂಡಿಯವರ ಅವಶ್ಯಕತೆ ಇರಲಿದೆ. ಸ್ಯಾಂಡಿ ಅವರು ಕಳೆದ ವಾರ ಅಗ್ನಿ ಶ್ರೀಧರ್ ಅವರನ್ನು ಭೇಟಿ ಮಾಡಿದಾಗ, ‘ಸ್ಯಾಮ್ಸನ್‌ ಪಾತ್ರಕ್ಕೆ ಸ್ಯಾಂಡಿ ಖಂಡಿತಾ ಜೀವ ತುಂಬಬಲ್ಲರು. ಲುಕ್‌ ಮತ್ತು ಮ್ಯಾನರಿಸಂ ಎರಡರಲ್ಲೂ ಸ್ಯಾಮ್ಸನ್‌ಗೆ ಸ್ಯಾಂಡಿ ಹೋಲುತ್ತಾರೆ’ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುವುದು ನಟ– ನಿರ್ಮಾಪಕ ಅಶು ಬೆದ್ರ ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT