ನಿರ್ದೇಶಕರ ನಟಿ ಸಂಗೀತಾ

7

ನಿರ್ದೇಶಕರ ನಟಿ ಸಂಗೀತಾ

Published:
Updated:
Deccan Herald

‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಕಾಣಿಸಿಕೊಂಡ ‘ಸತಿ’ ಈಗ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಸತಿ’ ಪಾತ್ರಧಾರಿಯ ಹೆಸರು ಸಂಗೀತಾ. ಅವರು ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದ ನಾಯಕಿಯ ಪಾತ್ರಕ್ಕೆ ಆಯ್ಕೆ ಆಗಿದ್ದು, ವಿಜಯ್ ಸೂರ್ಯ ನಿರ್ದೇಶನದ ‘ಎ+’ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇತ್ತೀಚಿನ ಸುದ್ದಿಗಳು.

ಆ ಸಿನಿಮಾ, ಈ ಸಿನಿಮಾ ಎಂದು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ಸಂಗೀತಾ ‘ಚಂದನವನ’ದ ಜೊತೆ ಮಾತಿಗೆ ಸಿಕ್ಕಿದ್ದರು. ‘ಸಿನಿಮಾ ಮತ್ತು ನಟನೆ ಬಗ್ಗೆ ಹತ್ತು ನಿಮಿಷ ಮಾತನಾಡಬಹುದೇ’ ಎಂದು ಕೇಳಿದಾಗ, ‘ಹ್ಞೂಂ, ನನಗೆ ಮೊದಲು ನಟನೆ ಅಥವಾ ಗ್ಲಾಮರ್‌ ಬಗ್ಗೆ ಆಲೋಚನೆ ಕೂಡ ಇರಲಿಲ್ಲ’ ಎನ್ನುತ್ತ ಮಾತಿಗೆ ಕುಳಿತು.

‘ನಾನು 12ನೆಯ ತರಗತಿ ಮುಗಿಸಿದ ನಂತರ ಕಾಲೇಜು ಸೇರಿದ. ಆಗ ಗ್ಲಾಮರ್‌ ಬಗ್ಗೆ ತುಸು ಆಸಕ್ತಿ ಮೂಡಿತು. ಕಾಲೇಜಿನಲ್ಲಿ ಇದ್ದಾಗ ಒಂದು ಸ್ಪರ್ಧೆಯಲ್ಲಿ (ಮಾಡೆಲಿಂಗ್‌ಗೆ ಸಂಬಂಧಿಸಿದ್ದು) ನಾನು ಎರಡನೆಯ ಸ್ಥಾನ ಪಡೆದಿದ್ದೆ. ಆ ಸಂದರ್ಭದಲ್ಲೇ ಕರ್ಮ ಎನ್ನುವ ಕಿರುಚಿತ್ರವೊಂದರಲ್ಲಿ ಅಭಿನಯಿಸಿದ್ದೆ. ಇವೆರಡು ಪ್ರಯತ್ನಗಳ ನಂತರ ನನಗೆ ಹರ ಹರ ಮಹಾದೇವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು’ ಎಂದರು ಸಂಗೀತಾ.

ಈ ಪೌರಾಣಿಕ ಧಾರಾವಾಹಿಗೆ ಇವರು ಆಯ್ಕೆಯಾಗಿದ್ದು ಆಡಿಷನ್ ಮೂಲಕ. ಆ ಹೊತ್ತಿನಲ್ಲಿ ಸಂಗೀತಾ ಅವರಿಗೆ ಅಭಿನಯದ ಅ, ಆ, ಇ, ಈ... ಕೂಡ ಗೊತ್ತಿರಲಿಲ್ಲವಂತೆ. ಆದರೆ, ಆ ಧಾರಾವಾಹಿಯ ನಿರ್ದೇಕರು ಸಂಗೀತಾ ಬಳಿ, ‘ಕಲಾವಿದರು ನೀರಿನಂತೆ ಇರಬೇಕು, ಯಾವುದೇ ಜಾಡಿಯಲ್ಲಿ ಹಾಕಿದರೂ ಅದರ ಆಕಾರ, ಗಾತ್ರಕ್ಕೆ ಹೊಂದಿಕೊಳ್ಳಬೇಕು’ ಎಂದು ಹೇಳಿದ್ದರಂತೆ. ಇದು ಸಂಗೀತಾ ಅವರ ಪಾಲಿಗೆ ನಟನೆಯ ಮೊದಲ ಪಾಠದಂತೆ ಇತ್ತು. ಅಂದು ನಿರ್ದೇಶಕರು ಹೇಳಿದ್ದ ಮಾತನ್ನು ಸಂಗೀತಾ ಇಂದಿಗೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ನಟನೆಯ ಪ್ರಸ್ತಾಪ ಬಂದಾಗ ಆ ಮಾತನ್ನೇ ಉಲ್ಲೇಖಿಸುತ್ತಾರೆ.

‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ನಟಿಸಿದ ನಂತರ ಇವರು ತೆಲುಗು ಧಾರಾವಾಹಿಯೊಂದರಲ್ಲಿ ನಟಿಸಿದರು. ತೆಲುಗು ಧಾರಾವಾಹಿ ಕೆಲಸ ಆರಂಭವಾಗುವ ಮೊದಲೇ, ‘ಎ+’ ಚಿತ್ರೀಕರಣ ಆರಂಭ ಆಗಿತ್ತು. ‘ಎ+’ನಲ್ಲಿ ಇವರಿಗೆ ಅವಕಾಶ ಸಿಕ್ಕಿದ್ದು ಫೇಸ್‌ಬುಕ್‌ ಮೂಲಕ.

‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾನು ಇತರರಿಗೆ ಶುಭ ಕೋರುವ ಚಿಕ್ಕ ವಿಡಿಯೊ ಮಾಡಿ ಫೇಸ್‌ಬುಕ್‌ಗೆ ಹಾಕಿದ್ದೆ. ಅದನ್ನು ನೋಡಿದ ನಿರ್ದೇಶಕ ವಿಜಯ್ ಸೂರ್ಯ ನನ್ನ ಪೇಜ್‌ಗೆ ಮೆಸೇಜ್‌ ಮಾಡಿದ್ದರು. ನಂತರ ವಿಜಯ್ ಜೊತೆ ಮಾತನಾಡಿದೆ. ಆ ಸಂದರ್ಭದಲ್ಲಿ ನನ್ನ ಬಾಡಿ ಲ್ಯಾಂಗ್ವೇಜ್‌ ಸತಿ ಪಾತ್ರಕ್ಕೆ ಬೇಕಿದ್ದಂತೆ ಇತ್ತು. ಆದರೆ ವಿಜಯ್ ನನಗೆ ಸೂಕ್ತ ತರಬೇತಿ ನೀಡಿದರು. ಅದಾದ ನಂತರ ನಾನು ಬಹುತೇಕ ದೃಶ್ಯಗಳನ್ನು ಒಂದೇ ಟೇಕ್‌ಗೆ ಅಭಿನಯಿಸಿದೆ’ ಎಂದರು ಸಂಗೀತಾ.

‘ಎ+’ ನಂತರ ಇವರಿಗೆ ಸಿಕ್ಕಿದ ಇನ್ನೊಂದು ಅವಕಾಶ ‘777 ಚಾರ್ಲಿ’ ಸಿನಿಮಾ. ಆಡಿಷನ್‌ ಮೂಲಕ ಈ ಸಿನಿಮಾ ಮನೆ ಪ್ರವೇಶಿಸಿದರು ಸಂಗೀತಾ.

‘ನನ್ನ ದೇಹದ ಮೇಲೆ ಒಂದು ಟ್ಯಾಟೂ ಕೂಡ ಇಲ್ಲ. ಏಕೆಂದರೆ ಅದನ್ನು ಹಚ್ಚಿಸಿಕೊಂಡರೆ ನಾನು ಯಾವುದೋ ಒಂದು ಪಾತ್ರವನ್ನು ನಿಭಾಯಿಸಲು ಆಗದಿರಬಹುದು. ನನ್ನ ಪ್ರಕಾರ ನಾನು ನಿರ್ದೇಶಕರ ಕಲಾವಿದೆ. ಅವರು ಹೇಗೆ ಹೇಳುತ್ತಾರೋ ಆ ರೀತಿಯಲ್ಲಿ ಪಾತ್ರ ನಿಭಾಯಿಸುವುದು ನನಗೆ ಇಷ್ಟ. ನಾನು ನಿರ್ದೇಶಕರನ್ನು ಪ್ರಶ್ನೆ ಮಾಡುವುದಿಲ್ಲ. ನಾನು ಒಂದು ನಿರ್ದಿಷ್ಟ ಮಾದರಿಗೆ ಅಂಟಿಕೊಂಡರೆ ಎಲ್ಲವನ್ನೂ ಮಾಡಲು ಆಗದು. ಆದರೆ, ಹೆಣ್ಣು ಪ್ರಧಾನ ಆಗಿರುವ ಪಾತ್ರ ಮಾಡುವ ಬಗ್ಗೆ ಆಸೆ ಇದೆ’ ಎಂದು ಒಂದೇ ಉಸುರಿಗೆ ನಟನೆಯ ತಮ್ಮ ಇಷ್ಟಗಳನ್ನು ಹೇಳಿಕೊಳ್ಳುತ್ತಾರೆ.

ಅಂದಹಾಗೆ, ಸಂಗೀತಾ ಅವರು ಇನ್ನೂ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದು ಕನ್ನಡದ್ದೇ ಸಿನಿಮಾ. ಅದನ್ನು ಹಿರಿಯರೊಬ್ಬರು ನಿರ್ದೇಶುತ್ತಿದ್ದಾರಂತೆ. ಆದರೆ, ಅವರು ಯಾರು, ಸಿನಿಮಾ ಹೆಸರು ಏನು ಎಂಬುದನ್ನು ಯಾವ ಕಾರಣಕ್ಕೂ ತಿಳಿಸಲು ಆಗದು ಎಂದರು!

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !