ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಕಡಲ ತಟದಿಂದತೆಲುಗು ಸೀಮೆಯವರೆಗೆ...

Published:
Updated:
Prajavani

ಮನದೊಳಗಿನ ಆತ್ಮವಿಶ್ವಾಸ ಕೆಂಪು ರಂಗು ಮೆತ್ತಿದ ಆಕೆಯ ತುಟಿಗಳ ಮೇಲೆ ನಗುವಾಗಿ ಲಾಸ್ಯವಾಡುತ್ತದೆ. ಆಕೆಗೂ ಅಷ್ಟೇ, ಕೆಂಪು ತುಟಿರಂಗು ಹಾಗೂ ಕಾನ್ಫಿಡೆಂಟ್‌ ನಗು ಅಂದರೆ ಅಚ್ಚುಮೆಚ್ಚು. ಇವೆರಡನ್ನೂ ಒಂದು ಕ್ಷಣವೂ ಬಿಟ್ಟಿರಲಾರದಷ್ಟು ಮೋಹ. ಕೇವಲ ಆಡಿಷನ್‌ಗಳಲ್ಲಿ ಭಾಗವಹಿಸಿಯೇ ನಟನೆಯ ಸೂಕ್ಷ್ಮಗಳನ್ನು ಅರಿತುಕೊಂಡ ಕರಾವಳಿ ಬೆಡಗಿ ಇಂದು ಟಾಲಿವುಡ್‌ನಲ್ಲಿ ಅವಕಾಶಗಳನ್ನು ದೋಚುತ್ತಿದ್ದಾರೆ. ಇಂತಿಪ್ಪ ಚೆಲುವೆಯ ಹೆಸರು ಸಂಜನಾ ಶೆಟ್ಟಿ.

‘ಕೆಫೆ ಗ್ಯಾರೇಜ್‌’ ಎಂಬ ಕನ್ನಡ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ತೆರೆದುಕೊಂಡ ಸಂಜನಾ ಶೆಟ್ಟಿ ಈಗ ‘ನಾ ಕಣ್ಣ ರೆಪ್ಪೆವು ನುವ್ವೆ’ ಎಂಬ ತೆಲುಗು ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಮತ್ತೆರಡು ತೆಲುಗು ಸಿನಿಮಾಗಳಿಗೂ ಬಣ್ಣಹಚ್ಚಿದ್ದು, ಅವು ಇನ್ನೂ ಚಿತ್ರೀಕರಣದ ಹಂತದಲ್ಲಿವೆ.

‘ತೆಲುಗು ಸಿನಿಮಾದಲ್ಲಿ ನನ್ನದು ತುಂಬ ಡೀಸೆಂಟ್‌ ಆದಂತಹ ಪಾತ್ರ. ನನಗೆ ನಾಯಕನ ಮೇಲೆ ಪ್ರೀತಿ. ಅವನಿಗೆ ಮತ್ತೊಬ್ಬಳ ಮೇಲೆ ಪ್ರೇಮ. ಇದೊಂದು ರೊಮ್ಯಾಂಟಿಕ್‌ ಆಗಿರುವ ತ್ರಿಕೋನ ಪ್ರೇಮಕಥಾ ಹಂದರದ ಸಿನಿಮಾ. ಶ್ರೀ ತಿರುಮಲ ತಿರುಪತಿ ವೆಂಕಟೇಶ್ವರ ಪ್ರೊಡಕ್ಷನ್‌ನಿಂದ ರೂಪುಗೊಂಡಿರುವ ಈ ಸಿನಿಮಾಕ್ಕೆ ಅಲ್ಲನಿ ಶ್ರೀಧರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪವನ್‌ ಚಿತ್ರದ ನಾಯಕನಟ. ನನ್ನಂತೆ ಅವರಿಗೂ ಕೂಡ ಇದು ಡೆಬ್ಯೂ ಸಿನಿಮಾ. ಶ್ರೀನಿವಾಸ ರಾವ್‌ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ’ ಎಂದು ತಮ್ಮ ತೆಲುಗು ಚಿತ್ರದ ಕುರಿತಂತೆ ಮಾಹಿತಿ ನೀಡುತ್ತಾರೆ ಸಂಜನಾ.

ಫ್ಯಾಷನ್‌ ಕ್ಷೇತ್ರದಿಂದ ಸಿನಿಮಾ ಕ್ಷೇತ್ರಕ್ಕೆ ಜಿಗಿದ ಸಂಜನಾ ಶೆಟ್ಟಿ ಇಂದು ಮಾಡೆಲಿಂಗ್‌ ಹಾಗೂ ಸಿನಿಮಾ ಈ ಎರಡೂ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ.

‘ನನಗೆ ಬಣ್ಣ ಜಗತ್ತಿನ ಕದ ತೆರೆಯಲು ನೆರವಾಗಿದ್ದು ಮಾಡೆಲಿಂಗ್‌ ಎಂಬ ಕೀಲಿ ಕೈ. 2016ರಲ್ಲಿ ನಡೆದ ಫೆಮಿನಾ ಸ್ಟೈಲ್‌ ದಿವಾ ಸೌತ್‌ ಸ್ಪರ್ಧೆಯಲ್ಲಿನ ಭಾಗವಹಿಸುವಿಕೆ ಅವಕಾಶಗಳನ್ನು ಹೊತ್ತು ತಂದಿತು. ಈ ಸ್ಪರ್ಧೆಯ ಟಾಪ್‌ 16 ಸ್ಪರ್ಧಿಗಳಲ್ಲಿ ನಾನೂ ಕೂಡ ಒಬ್ಬಳಾಗಿದ್ದೆ. ಆಮೇಲೆ ಮಾಡೆಲಿಂಗ್‌, ರ‍್ಯಾಂಪ್‌ವಾಕ್‌, ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿದೆ. ಈ ವೇಳೆಯಲ್ಲೇ ನನಗೆ ‘ಕೆಫೆ ಗ್ಯಾರೇಜ್‌’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ‘ಚಮಕ್‌’ ಸಿನಿಮಾದಲ್ಲೂ ಪೋಷಕ ಪಾತ್ರ ನಿರ್ವಹಿಸಿದ್ದೇನೆ’ ಎಂದು ತಮ್ಮ ಚಿತ್ರ ಜೀವನದ ಮೊದಲ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾರೆ ಅವರು.

ಸಂಜನಾ ಶೆಟ್ಟಿ ಹುಟ್ಟಿ ಬೆಳೆದಿದ್ದೆಲ್ಲಾ ಮಂಗಳೂರಿನಲ್ಲಿ. ತುಳು ಭಾಷೆಯ ಮೇಲೆ ಇನ್ನಿಲ್ಲದ ಪ್ರೀತಿ. ಉತ್ತಮ ಪ್ರಾಜೆಕ್ಟ್‌ಗಳು ಸಿಕ್ಕರೆ ಕೋಸ್ಟಲ್‌ವುಡ್‌ನಲ್ಲಿ ಖಾತೆ ತೆರೆಯುವೆ ಎನ್ನುವ ಸಂಜನಾ, ತುಳು ಚಿತ್ರರಂಗವನ್ನು ವ್ಯಾಖ್ಯಾನಿಸುವುದು ಹೀಗೆ:

‘ಮಾತೃ ಭಾಷೆಯ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ನನಗೆ ತುಂಬ ಇದೆ. ಆದರೆ, ನನ್ನ ಆಸೆಗೆ ತಕ್ಕುದಾದ ಪಾತ್ರಗಳು ಸಿಗುತ್ತಿಲ್ಲ. ಅದೇ ನೋವಿನ ಸಂಗತಿ. ತುಳು ಚಿತ್ರರಂಗ ಬೇರೆಲ್ಲವುಗಳಿಂತ ಸಂಪೂರ್ಣ ಭಿನ್ನ. ಇಲ್ಲಿ ರೂಪುಗೊಳ್ಳುವ ಸಿನಿಮಾಗಳಲ್ಲಿ ಕಾಮಿಡಿಗೆ ಅಗ್ರಸ್ಥಾನ. ಹಾಸ್ಯ ಕಲಾವಿದರಿಗೆ ಮೊದಲ ಮಣೆ. ನಾಯಕ, ನಾಯಕಿಯರಿಗೆ ನಂತರದ ಪ್ರಾಶಸ್ತ್ಯ. ತುಳು ಪ್ರೇಕ್ಷಕರಿಗೂ ಕಾಮಿಡಿ ಜಾನರ್‌ನ ಸಿನಿಮಾಗಳೇ ಇಷ್ಟ. ಒಂದರ್ಥದಲ್ಲಿ ಇದು ಒಳ್ಳೆಯದೇ. ಒಂದು ಸಿನಿಮಾದ ಅಂತಿಮ ಉದ್ದೇಶ ಪ್ರೇಕ್ಷಕರಿಗೆ ಮನರಂಜನೆ ನೀಡುವುದು. ಹಾಗಾಗಿ, ತುಳು ಚಿತ್ರಗಳು ಅದೇ ಜಾಡಿನಲ್ಲಿ ರೂಪುಗೊಳ್ಳುತ್ತಿವೆ. ಕಾಮಿಡಿ ಕಲಾವಿದರಿಗೆ ಅಗ್ರಸ್ಥಾನ ನೀಡುವುದು ಚಿತ್ರ ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಒಳ್ಳೆಯದು’.

ಕಲಾವಿದರಿಗೆ ಭಾಷೆ ಎಂಬುದು ತೊಡಕಲ್ಲ ಎನ್ನುವ ಸಂಜನಾ, ಕನ್ನಡ, ತಮಿಳು, ತೆಲುಗು, ತುಳು ಹೀಗೆ ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸುವ ಹಂಬಲ ಹೊಂದಿದ್ದಾರೆ. ಸ್ಯಾಂಡಲ್‌ವುಡ್‌ಗಿಂತಲೂ ಟಾಲಿವುಡ್‌ನಲ್ಲಿ ಅವಕಾಶಗಳೂ ಹೆಚ್ಚು; ಸಂಭಾವನೆಯೂ ಹೆಚ್ಚು ಎಂಬುದು ಅವರ ಅಭಿಮತ.

‘ತೆಲುಗು ಚಿತ್ರಗಳಲ್ಲಿ ನಟಿಸುವಾಗಿನ ಅನುಭವವೇ ಬೇರೆ ರೀತಿಯಾಗಿರುತ್ತದೆ. ಕನ್ನಡಕ್ಕೂ ತೆಲುಗು ಚಿತ್ರರಂಗಕ್ಕೂ ಸಾಕಷ್ಟು ಭಿನ್ನತೆಗಳಿವೆ. ಟಾಲಿವುಡ್‌ನಲ್ಲಿ ವೇಗ ಹೆಚ್ಚು. ಅಲ್ಲಿ ಒಂದು ಸಿನಿಮಾ ಶುರುವಾದರೆ, ನಾಲ್ಕೈದು ತಿಂಗಳಲ್ಲಿ ಪೂರ್ಣಗೊಂಡು ಚಿತ್ರಮಂದಿರಕ್ಕೆ ಬರುತ್ತದೆ. ಕನ್ನಡ ಚಿತ್ರರಂಗದಲ್ಲಿ ಹಾಗಿಲ್ಲ. ಒಂದು ಚಿತ್ರ ಪೂರ್ಣಗೊಳ್ಳುವುದಕ್ಕೆ ತುಂಬ ಸಮಯ ತೆಗೆದುಕೊಳ್ಳುತ್ತದೆ. ಸಂಭಾವನೆ ವಿಚಾರದಲ್ಲೂ ಅಷ್ಟೇ, ತೆಲುಗು ಚಿತ್ರರಂಗ ಮುಂದಿದೆ. ಅಲ್ಲಿ ಹೊಸಬರಿಗೂ ಒಳ್ಳೆ ಸಂಭಾವನೆ ಸಿಗುತ್ತದೆ. ಅಲ್ಲಿಯವರೆಗೆ ಇಲ್ಲಿ; ಇಲ್ಲಿಯವರಿಗೆ ಅಲ್ಲಿ ಒಳ್ಳೆ ಸಂಭಾವನೆ ಸಿಗುತ್ತದೆ. ಈ ಒಗಟು ಬಿಡುಸುವುದಕ್ಕೆ ಇನ್ನೂ ನನ್ನಿಂದ ಆಗಿಲ್ಲ’ ಎನ್ನುತ್ತಾರೆ ಸಂಜನಾ.

‘ಸದ್ಯಕ್ಕೆ ತೆಲುಗು, ಕನ್ನಡದಲ್ಲಿ ಯಾವುದೇ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ. ‘ನಾ ಕಣ್ಣ ರೆಪ್ಪೆವು ನುವ್ವೆ’ ತೆಲುಗು ಸಿನಿಮಾ ಜುಲೈನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಮೊದಲ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಚಿತ್ರಕ್ಕೆ ತಕ್ಕಮಟ್ಟಿಗಿನ ಮೆಚ್ಚುಗೆ ಸಿಕ್ಕರೂ ನನ್ನ ಚಿತ್ರಭವಿಷ್ಯಕ್ಕೆ ಒಳ್ಳೆ ಮೈಲೇಜ್‌ ಸಿಗಲಿದೆ. ಮಂಗಳೂರಿನಿಂದ ಹೊರಟ ನಾನು ಈಗ ಹೈದರಾಬಾದ್‌ ನೆಲದಲ್ಲಿ ಬಂದು ನಿಂತಿದ್ದೇನೆ. ಇದು ಸುಮ್ಮನೆ ನಡೆದ ಪ್ರಕ್ರಿಯೆಯಲ್ಲ. ಅದಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಅಭಿನಯ, ಸೌಂದರ್ಯ, ವ್ಯಕ್ತಿತ್ವದ ವಿಚಾರದಲ್ಲಿ ನನ್ನನ್ನು ನಾನು ಕಟೆದುಕೊಂಡಿದ್ದೇನೆ. ಕಷ್ಟಪಟ್ಟರೆ ಫಲ ಸಿಗುತ್ತದೆ ಎಂಬುದರ ಮೇಲೆ ನಂಬಿಕೆ ಇಟ್ಟವಳು ನಾನು’ ಎನ್ನುವಾಗ ಸಂಜನಾ ಕಂಗಳಲ್ಲಿ ಆತ್ಮವಿಶ್ವಾಸ ಮಡುಗಟ್ಟಿತ್ತು.

Post Comments (+)