ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜನಾ ಅಂದ್ರೆ ಸದರಾನಾ?

Last Updated 26 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಅಲ್ಲಿ ಬಾಲಿವುಡ್‌, ಇಲ್ಲಿ ಸ್ಯಾಂಡಲ್‌ವುಡ್‌... ಮೀಟೂ ಕಿಡಿಗೆ ಹೊತ್ತಿ ಉರಿಯುತ್ತಿವೆ... ಕೆಲವು ನಿಜ, ಕೆಲವು ಬರೀ ಆರೋಪ ಮತ್ತು ಕೆಲವು ವೈಯಕ್ತಿಕ ದ್ವೇಷದ ಕಿಡಿಗಳಾಗಿ ಮೀಟೂ ಬಂದೂಕಿನಿಂದ ಸಿಡಿಯುತ್ತಿವೆ. ಸದ್ಯ ಕನ್ನಡದಲ್ಲಿ ಮೀಟೂ ಜೊತೆಗೆ ಥಳಕು ಹಾಕಿಕೊಂಡಿರುವವರಲ್ಲಿ ಸಂಜನಾ ಸಹ ಇದ್ದಾರೆ. ಈ ಬಗ್ಗೆ ‘ಮೆಟ್ರೊ’ ಜತೆ ಮಾತನಾಡಿರುವ ಅವರು, ನಾಭಿಯಲ್ಲಿ ಹುಟ್ಟಿ ನಾಡಿಯಲ್ಲೆಲ್ಲ ಹರಿಯುತ್ತಿರುವ ತಮ್ಮ ಹನ್ನೆರಡು ವರ್ಷಗಳ ಕಿಚ್ಚನ್ನು ಹೊರಹಾಕಿದ್ದಾರೆ.

ಪ್ರೀತಿಯ ಕನ್ನಡಿಗರೇ, ನಮಸ್ಕಾರ.

ನಾನು ಸಂಜನಾ ಗಲ್ರಾನಿ. ಸಂಜನಾ ಏನು ಅಂತ ನಿಮಗೆ ಗೊತ್ತು. ಕಳೆದ ಹನ್ನೆರಡು ವರ್ಷಗಳಿಂದ ನನ್ನನ್ನು ನೀವೆಲ್ಲಾ ಕಂಡಿದ್ದೀರಿ. ಇದೀಗ ನನ್ನ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಅವರ ನಡುವೆ ನಡೆಯುತ್ತಿರುವ ವಾಕ್ಸಮರವನ್ನೂ ನೀವು ಗಮನಿಸುತ್ತಿದ್ದೀರಿ. ಯಾರು ಸರಿ– ಯಾರು ತಪ್ಪು ಎಂದು ನಿರ್ಧರಿಸುವ ಪ್ರಬುದ್ಧತೆ ನಿಮಗಿದೆ. ಆದಾಗ್ಯೂ ಕೆಲ ಪ್ರಶ್ನೆಗಳನ್ನು ನಾನಿಲ್ಲಿ ಪ್ರಸ್ತಾಪಿಸಬೇಕಿದೆ. ಅದೂ ರವಿ ಶ್ರೀವತ್ಸ ಅವರಿಗಲ್ಲ, ನಿಮ್ಮೆದುರು...

ಹೆಣ್ಣಿನ ಆಸ್ತಿಗೂ ಅವಳ ನಡತೆಗೂ (character) ಸಂಬಂಧ ಇದೆಯಾ?

ಹೌದು, ನನ್ನ ಬಳಿ ಜಾಗ್ವಾರ್‌ ಕಾರಿದೆ. ಬಿಎಂಡಬ್ಲ್ಯು, ಹೊಂಡಾ ಸಿವಿಕ್‌, ವರ್ನಾ, ಔಡಿ ಕಾರುಗಳೂ ಇವೆ. 100X100 ಅಳತೆಯ ಮನೆ, ಕೆಲ ಸೈಟುಗಳೂ ಇವೆ. ಇವೆಲ್ಲ ನನ್ನ ಸಾಧನೆ. ಸುಮ್ಮನೇ ಬಂದಿದ್ದಲ್ಲ. ಕಷ್ಟ ಪಟ್ಟು ದುಡಿದಿದ್ದು. ನಟಿಯರಿಗೇನು ಕುಳಿತಲ್ಲೇ ಕಾಸು ಬಂದು ಕಾಲಡಿ ಬೀಳುವುದಿಲ್ಲ. ನಾವೂ ಶ್ರಮ ಪಡುತ್ತೇವೆ. ಹನ್ನೆರಡು ವರ್ಷಗಳಿಂದ ನಾನು ಒಂದೇ ರೀತಿಯ ಮೈಮಾಟ ಕಾಯ್ದುಕೊಂಡು ಬಂದಿದ್ದೇನೆ. ಹೊಸ ಹೊಸ ಅವಕಾಶ ನನ್ನನ್ನು ಹುಡುಕಿಕೊಂಡು ಬರುತ್ತಿವೆ ಎನ್ನುವುದೂ ಸುಮ್ಮನೇ ಅಲ್ಲ. ಇಂದಿಗೂ ನಾನು ರಾತ್ರಿ ಅರ್ಧ ಹೊಟ್ಟೆ ತಿಂದು ಮಲಗುತ್ತೇನೆ. ತಿನ್ನುವ ಆಸೆ ಇದ್ದರೂ, ಅದನ್ನು ಪಡೆಯುವ ಚೈತನ್ಯ ಇದ್ದರೂ ನನ್ನ ನೆಚ್ಚಿನ ಖಾದ್ಯವನ್ನು ದೂರವಿಡುತ್ತೇನೆ. ಗಂಟೆ– ಗಂಟೆಗಳ ಕಾಲ ದೇಹ ದಂಡಿಸುತ್ತೇನೆ. ಎಷ್ಟೊ ಬಾರಿ ತಿಂಗಳಗಟ್ಟಲೇ ನನ್ನ ಅಪ್ಪ– ಅಮ್ಮ,ತಂಗಿಯ ಮುಖ ನೋಡದೇ ಕಳೆದು ಬಿಟ್ಟಿರುತ್ತೇನೆ... ಹೀಗೆ ಬೆವರು ಸುರಿಸಿ ಪಡಕೊಳ್ಳುವುದನ್ನೇ ನಾವು ಸಾಧನೆ ಅನ್ನುತ್ತೇವೆ. ಇದನ್ನು ನಾನು ಗರ್ವದಿಂದ ಹೇಳಿಕೊಳ್ಳುವೆ. ರವಿ ಅವರು ಈಗಲೂ ₹8000 ಬಾಡಿಗೆ ಮನೆಯಲ್ಲಿರುತ್ತಾರೆ ಎಂದರೆ ಅದು ಅವರ ದೊಡ್ಡಸ್ತಿಕೆ ಅಂತ ನನಗಂತೂ ಅನಿಸಲ್ಲ.

ಆಗ ಹೇಳಿಕೊಳ್ಳಲಿಲ್ಲ, ಈಗಲೂ ಹೇಳಿಕೊಳ್ಳಬಾರದಾ?

ಘಟನೆ ನಡೆದಿದ್ದು 12 ವರ್ಷಗಳ ಹಿಂದೆ. ‘ಆಗಲೇ ಹೇಳಿಕೊಳ್ಳಬೇಕಿತ್ತು. ಈಗೇಕೆ ಬಾಯ್ಬಿಡುತ್ತಿದ್ದಾರೆ?’ ಎನ್ನುವ ಗುಸುಗುಸು ಇದೆ. ಆಗ ಸಂದರ್ಭ ಹಾಗಿತ್ತು. ಮೊದಲ ಅವಕಾಶ, ಸಣ್ಣ ವಯಸ್ಸು, ಜಗತ್ತು ಏನೆಂದೇ ಗೊತ್ತಿರಲಿಲ್ಲ. ಅಷ್ಟಕ್ಕೂ ನಾನು ಇಂಥ ಸೀನ್‌ಗಳೆಲ್ಲ ಬೇಡ ಸರ್‌ ಅಂತ ವಿನಮ್ರವಾಗಿ ಕೇಳಿಕೊಂಡಿದ್ದೆ. ‘ಅಯ್ಯೊ ಅದೆಲ್ಲಾ ಆಮೇಲೆ ಕಟ್‌ ಆಗುತ್ತಮ್ಮ. ಬಾಲಿವುಡ್‌ ರೇಂಜ್‌ಗೆಲ್ಲ ತೋರಿಸಲ್ಲ’ ಅಂದ್ರು. ಆಮೇಲೆ ಆಗಿದ್ದೇ ಬೇರೆ. ಅನಂತರವೂ ನಾನು ಅನೇಕ ಸಲ, ಅನೇಕ ಕಡೆ ಈ ಬಗ್ಗೆ ಮಾತಾಡಿದ್ದೇನೆ. ಈಗ ‘ಮೀಟೂ’ ಅಭಿಯಾನದಿಂದ ಅದೆಲ್ಲ ಮತ್ತೊಮ್ಮೆ ನೆನಪಾಯ್ತು. ನನ್ನ ಅನುಭವ ನಾನು ಹೇಳಿಕೊಂಡೆ. ತಪ್ಪೇ?

ಪಾತ್ರವೇ ಬೇರೆ. ವ್ಯಕ್ತಿತ್ವವೇ ಬೇರೆ ಅಲ್ಲವೇ?

ನಾನು ನನಗೆ ಸಿಕ್ಕ ಗ್ಲಾಮರಸ್‌, ಬೋಲ್ಡ್‌ ಪಾತ್ರಗಳನ್ನು ಪ್ರೀತಿಯಿಂದ ಮಾಡುತ್ತ ಬಂದಿದ್ದೇನೆ. ನಾನೊಬ್ಬ ಕಲಾವಿದೆ. ಯಾವ ಪಾತ್ರಗಳನ್ನೂ ಮಾಡಬಲ್ಲ ಸಾಮರ್ಥ್ಯ ಇರುವಾಕೆ. ನನಗೆ ಬಂದ ಪಾತ್ರಗಳನ್ನು ನಾನು ಮನಸ್ಸಿನಿಂದ ಮಾಡಿದ್ದೇನೆ. ಆದರೆ ಅದೇ ನಾನಲ್ಲ. ನನಗೆ ನನ್ನದೇ ಆದ ವ್ಯಕ್ತಿತ್ವವಿದೆ. ಯಾವ ಕಾರಣಕ್ಕೂ ನಾನು ಸ್ವಾಭಿಮಾನವನ್ನು ಬಿಟ್ಟುಕೊಡಲಾರೆ.

ಕುಟುಂಬದ ಬಗ್ಗೆ ಮಾತಾಡೋದು ಸರಿಯಾ?

ಯಾರೇ ಆಗಲಿ, ಯಾವ ವಿಷಯವೇ ಇರಲಿ, ಕುಟುಂಬವನ್ನು ಎಳೆದು ತರಬಾರದು. ನನ್ನ ತಂದೆ, ತಂಗಿಯ ಬಗ್ಗೆ ಮಾತನಾಡಿದ್ದನ್ನು ಸಹಿಸಲಾರೆ. ಅದಕ್ಕಾಗಿ ಅವರು ನನ್ನ ಕ್ಷಮೆ ಕೇಳಲೇಬೇಕು.

ಸಂಜನಾ ಅಂದ್ರೆ ಸದರಾನಾ?

ಅನೇಕ ಮಿತ್ರರು ಬಂಧುಗಳು, ಕ್ಷೇತ್ರದ ದಿಗ್ಗಜರು ‘ನಿನ್ನ ನಿಲುವು ಸರಿಯಾಗಿದೆ, ಧೈರ್ಯವಾಗಿರು’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ‘ಇದೆಲ್ಲ ಇಂಡಸ್ಟ್ರಿಯಲ್ಲಿ ಇರೋದೇ. ಕನ್ನಡದಲ್ಲಿ ಕೆಲಸ ಮಾಡಬೇಕು ಅಂತಿದ್ದರೆ ಇದನ್ನೆಲ್ಲ ದೊಡ್ಡದು ಮಾಡಬೇಡ. ಸಾರಿ ಕೇಳಿ ಬಿಡು. ಬೇರೆ ಭಾಷೆಯ ಅವಕಾಶಗಳೇ ಸಾಕಷ್ಟಿವೆ ಎನ್ನುವುದಾದರೆ ಸರಿ...’ ಎಂದು ಬುದ್ಧಿ ಹೇಳುತ್ತಿದ್ದಾರೆ. ಯಾಕೆ? ಸಂಜನಾ ಅಂದ್ರೆ ಅಷ್ಟೊಂದು ಸದರಾನಾ? ಏನು ಅಂದರೂ, ಯಾವ ಆಪಾದನೆ ಹೊರೆಸಿದರೂ ಸುಮ್ಮನಿರುತ್ತಾಳಾ? ನಾನು ನಾಳೆನೇ ಶಾರೂಖ್‌ ಖಾನ್‌, ಅಮಿತಾಭ್‌ ಬಚ್ಚನ್‌ ಜೊತೆ ಅಭಿನಯಿಸಿ ಬಂದ್ರೂ ನನಗೆ ಕನ್ನಡದ ಅವಕಾಶಗಳು ಬೇಕು. ಕನ್ನಡ ನನ್ನ ನೆಲ– ನನ್ನ ನೆಲೆ. ಹಾಗಂತ ತಪ್ಪು ಮಾಡದೇ ಸಾರಿ ಕೇಳಲ್ಲ. ಅವರೇ ನನ್ನ ಕ್ಷಮೆ ಯಾಚಿಸಬೇಕು.

ಕೊನೆಯದಾಗಿ ಮತ್ತೊಂದು ಸ್ಪಷ್ಟನೆ ನೀಡುತ್ತೇನೆ...

ನನಗೆ ರವಿ ಮೇಲೆ ಯಾವುದೇ ದ್ವೇಷವಿರಲಿಲ್ಲ. ನನ್ನ ಅನುಭವನ್ನು ನಾನು ಹಂಚಿಕೊಂಡಿದ್ದೇನಷ್ಟೆ. ಈಗಾಗಲೇ ಸೋತು ಹೋಗಿರುವ ಅವರನ್ನು ನಾನು ಮತ್ತೊಮ್ಮೆ ಸೋಲಿಸಬೇಕಿಲ್ಲ. ಅದಕ್ಕಾಗಿ ನನ್ನ ಸಮಯ ವ್ಯರ್ಥ ಮಾಡಲು ನಾನು ತಯಾರಿಲ್ಲ.

***

ಅನಾಗರಿಕ ಭಾಷೆ ಬಳಸುತ್ತಿದ್ದರು

ಎಲ್ಲರೂ ತಮ್ಮೊಂದಿಗೆ ನಡೆದ ದೌರ್ಜನ್ಯದ ಬಗ್ಗೆ ಮಾತಾಡುತ್ತಿರುವ ಈ ಹೊತ್ತಿನಲ್ಲಿ ನಾನೂ ನನಗಾದ ಅನುಭವವನ್ನು ಹೇಳಿಕೊಂಡೆ, ಅಷ್ಟೇ.ನಾನು ಅನೇಕ ಕಲಾವಿದರೊಂದಿಗೆ ಕೆಲಸ ಮಾಡಿದ್ದೇನೆ. ಯಾರೂ ನನ್ನನ್ನು ಹಾಗೆ ನಡೆಸಿಕೊಂಡಿಲ್ಲ.‘ಗಂಡ–ಹೆಂಡತಿ’ ಸಿನಿಮಾದಲ್ಲಿ ನನ್ನನ್ನು ಅಷ್ಟೊಂದು ಅಗೌರವದಿಂದ ನಡೆಸಿಕೊಳ್ಳಲಾಗಿತ್ತು. ಅನಾಗರಿಕ ಭಾಷೆಯನ್ನು ಅವರು ಬಳಸುತ್ತಿದ್ದರು. ಇದನ್ನು ಹೇಳಿಕೊಂಡೆ, ಅದನ್ನೇ ಅವರು ಆರೋಪ ಅಂತ ತಗೊಂಡ್ರು, ಮರುದಾಳಿ ಮಾಡಿದರು. ನನ್ನ ಆಸ್ತಿಯ ಬಗ್ಗೆ, ನನ್ನಪ್ಪನ ಬಗ್ಗೆ ಮಾತಾಡಿದರು. ಕಳ್ಳತನದ ಆರೋಪ ಹೊರೆಸಿದರು... ಇದೆಲ್ಲ ಅವರ ಮಟ್ಟ ಏನು ಎಂದು ತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT