ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನತ್ತ ಗಾಯಕ ಸಂಜಿತ್‌ ಹೆಗ್ಡೆ

Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

‘ಸಂಗೀತವೇ ನನ್ನ ಹಸಿವು. ಅದೇ ದಾರಿ ತೋರಿಸಿದೆ. ಅದರಂತೆ ಸಾಗುತ್ತಿದ್ದೇನೆ’ ಹೀಗೆನ್ನುತ್ತಲೇ ಸಂಗೀತದ ಜಾಡಿನಲ್ಲಿ ಮುಂದುವರಿದು ಶ್ರೋತೃಗಳ ಕಿವಿಗಿಂಪು ನೀಡಿದ್ದಾರೆ ಸಂಜಿತ್‌ ಹೆಗ್ಡೆ. ಇದುವರೆಗೆ ಸುಮಾರು 150ಕ್ಕೂ ಹೆಚ್ಚು ಹಾಡುಗಳು ಅವರ ಕಂಠದಲ್ಲಿ ತೇಲಿಬಂದಿವೆ.

ಈಗ ಸಂಜಿತ್‌ ಅವರು ಅಲ್ಬಂವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ 14 ಹಾಡುಗಳ ಆಲ್ಬಂ ಬರಲಿದೆ. ಆ ಯೋಜನೆಗಾಗಿ ಅವರು ಕೆಲಕಾಲ ಮುಂಬೈಯಲ್ಲೇ ನೆಲೆಯೂರಲಿದ್ದಾರೆ. ಹಾಡು, ಚಿತ್ರೀಕರಣ ಎಲ್ಲವೂ ಈ ಯೋಜನೆಯಲ್ಲಿದೆ.

ಸಂಜಿತ್‌ ಅವರ ಮೂಲ ಊರು ಹೊನ್ನಾವರ. ಸದ್ಯ ಬೆಂಗಳೂರಿನಲ್ಲಿದ್ದಾರೆ. ಅಪ್ಪ ಗಣೇಶ ಹೆಗಡೆ ಅವರು ಅಂಗವಿಕಲರ ಬದುಕಿಗೆ ಸ್ವಾವಲಂಬನೆ ಕಲ್ಪಿಸುವ ಕ್ಷೇತ್ರದಲ್ಲಿದ್ದಾರೆ. ಅವರು ಪ್ರತಿಷ್ಠಿತ ‘ಹೆಲೆನ್‌ ಕೆಲರ್‌’ ಪ್ರಶಸ್ತಿ ಪುರಸ್ಕೃತರೂ ಹೌದು. ತಾಯಿ ಶೈಲಾ ಹೆಗ್ಡೆ ಅವರು ಆಟಿಸಂನಿಂದ ಬಳಲುವ ಮಕ್ಕಳಿಗಾಗಿ ದುಡಿಯುತ್ತಿದ್ದಾರೆ.

ಸಂಜಿತ್‌ ಅವರ ಬಾಲ್ಯ ಭಜನೆ, ಪಂಡಿತ್ ಭೀಮಸೇನ ಜೋಷಿ ಅವರ ಶಾಸ್ತ್ರೀಯ ಸಂಗೀತ ಕೇಳುವುದರಲ್ಲಿಯೇ ಕಳೆಯಿತು. ಮನೆಯಲ್ಲಿ ಸಂಗೀತದ ವಾತಾವರಣವೂ ಇತ್ತು. ಅದೇ ವೇಳೆ ಶಾಲೆಯಲ್ಲಿದ್ದ ಸಂಜಿತ್‌ ಸಂಗೀತದ ಬ್ಯಾಂಡ್‌ ತಂಡದಲ್ಲೂ ಸಕ್ರಿಯರಾಗಿದ್ದರು. ಮುಂದೆ ಅದೇ ಸಂಗೀತದ ಗುಂಗು ಹಿಡಿಸಿತು. ಜ್ಯೋತಿ ಕುಲಕರ್ಣಿ, ಪಂಡಿತ್‌ ನಾಗಭೂಷಣ ಹೆಗಡೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಧಾರೆ ಎರೆದರು. ಮುಂದೆ ಸಂಗೀತ ಕ್ಷೇತ್ರವೇ ಪಾಠ ಶಾಲೆ, ಪ್ರಯೋಗ ಶಾಲೆ ಎಲ್ಲವೂ ಆದವು. ಸಂಗೀತಕ್ಕೆ ಮುಡಿಪಾಗಿರಲು ಎಂಜಿನಿಯರಿಂಗ್‌, ಬಿಬಿಎ ಎಲ್ಲ ಕೋರ್ಸ್‌ಗಳನ್ನು ತೊರೆದರು. ಈಗ ಪಾಶ್ಚಾತ್ಯ ಸಂಗೀತವನ್ನೂ ಕಲಿಯುತ್ತಿದ್ದಾರೆ. ಜೊತೆಗೆ ಗಿಟಾರ್‌, ಪಿಯಾನೋ ನುಡಿಸುವುದನ್ನೂ ಅಭ್ಯಾಸ ಮಾಡುತ್ತಿದ್ದಾರೆ.

ಸಂಜಿತ್ ಹಾಡಿದ ಶಾಕುಂತ್ಲೆ ಸಿಕ್ಕಳು..., ಮರಳಿ ಮನಸಾಗಿದೆ... ಗುನುಗುವ ಹಾಡಿನಂತೆ.. ನಿನ್ನೆ ತನಕಾ... ಇಂಥ ಸೂಪರ್‌ ಹಿಟ್‌ ಹಾಡುಗಳು ಸಿನಿಮಾಗಳನ್ನೂ ಗೆಲ್ಲಿಸಿವೆ. ಸಣಕಲು ದೇಹದ ಸಪೂರ ಕಂಠದಿಂದ ಹೊರಬರುವ ಆರ್ದ್ರ ಧ್ವನಿ, ಬೇಸ್‌ ಧ್ವನಿಯ ಮಾಧುರ್ಯ ಎಲ್ಲ ಭಾವಗಳಿಗೂ ಹೊಂದುತ್ತದೆ. ಹಾಡಿನ ಪದಗಳಿಗೆ ಜೀವತುಂಬಿ ಕೇಳುಗರೂ ಗುನುಗುವಂತೆ ಮಾಡಿವೆ. ಹಾಗಾಗಿ ಅವರ ಹಾಡುಗಳು ಸಂಗೀತದ ಆ್ಯಪ್‌ಗಳಲ್ಲಿ ಎಫ್‌ಎಂ ಚಾನೆಲ್‌ಗಳಲ್ಲಿ ಸೂಪರ್‌ ಹಿಟ್‌ ಸಾಲಿನಲ್ಲೇ ಇವೆ.

ಈ ಮಧ್ಯೆ ಸಂಜಿತ್‌ ನೆಟ್‌ಫ್ಲಿಕ್ಸ್‌ ನಿರ್ಮಾಣದ ‘ಪಿಟ್ಟ ಕಥಾಲು’ ತೆಲುಗು ಚಿತ್ರದಲ್ಲೂ ನಟಿಸಿದ್ದಾರೆ. ‘ನಾಗ್‌ ಅಶ್ವಿನ್‌ ಅವರಂಥ ನಿರ್ದೇಶಕರಿರುವಾಗ ನಾನು ಮಾಡಿದ್ದು ನಟನೆ ಎಂದೇ ಅನಿಸಲಿಲ್ಲ. ಅಂಥ ಸಹಜ, ಪ್ರೀತಿಯ ವಾತಾವರಣದಲ್ಲಿ ಅಭಿನಯಿಸಿದೆ’ ಎಂದು ಕೃತಜ್ಞತೆಯಿಂದ ಹೇಳುತ್ತಾರೆ ಸಂಜಿತ್‌.‘ಕನ್ನಡ, ಇಂಗ್ಲಿಷ್‌ ಹಿಂದಿ ಬಲ್ಲೆ. ತಮಿಳು, ತೆಲುಗು ಸ್ವಲ್ಪ ಅರ್ಥವಾಗುತ್ತದೆ. ಹಾಗಾಗಿ ನಾನು ಭಾಷೆಗೆ ಬೇಲಿ ಹಾಕಿಕೊಂಡಿಲ್ಲ’ ಎಂದು ನಗುತ್ತಾರೆ ಅವರು.

‘ಪ್ರೀತಿಯಿಂದ ಸಂಗೀತ ಸಂಯೋಜಿಸುವ ಎಲ್ಲ ನಿರ್ದೇಶಕರೂ ನನಗಿಷ್ಟ. ಜಗತ್ತಿನ ಸಂಗೀತ ದಿಗ್ಗಜರನ್ನು ಗಮನಿಸುತ್ತಲೇ ಇರುತ್ತೇನೆ. ಅಂಥ ಸಂಗೀತವನ್ನು ನಾನೂ ಕೊಡಬೇಕು. ಎಲ್ಲ ಭಾಷೆಗಳೂ ನನಗಿಷ್ಟ. ನಾನಿನ್ನೂ ಕಲಿಯುತ್ತಿದ್ದೇನೆ. ಜನ ತುಂಬಾ ಖುಷಿಪಡುವ ಒಳ್ಳೆಯ ಕೃತಿಯೊಂದನ್ನು ನೀಡುತ್ತೇನೆ’ ಎಂದು ವಿನಮ್ರವಾಗಿ ಹೇಳುತ್ತಾರೆ ಅವರು.

‘ಫಿಟ್‌ನೆಸ್‌, ಹೇರ್‌ ಸ್ಟೈಲ್‌ ಬಗ್ಗೆ ಅವರು ತುಂಬಾ ತಲೆ ಕೆಡಿಸಿಕೊಳ್ಳುವುದಿಲ್ಲ. ‘ಹೇರ್‌ ಕಟ್ಟಿಂಗ್‌ ಮಾಡಿಸುವಲ್ಲಿ ನಾನು ಸ್ವಲ್ಪ ಆಲಸಿ. ಕೆಲವು ಆಲ್ಬಂಗಳ ನಿರ್ಮಾಣದಲ್ಲಿ ಉದ್ದ ಕೂದಲಿರಬೇಕು ಎಂದು ನಿರ್ದೇಶಕರು ಬಯಸುವುದುಂಟು. ಈ ಕಾರಣದಿಂದಾಗಿ ಕೂದಲು ತೆಗೆಸಲು ಹೋಗಿಲ್ಲ. ನನ್ನ ಶೈಲಿಯನ್ನು ಚಿತ್ರರಂಗದ ಎಲ್ಲ ಹಿರಿ ಕಿರಿಯರು ಇಷ್ಟಪಟ್ಟಿದ್ದಾರೆ. ಪ್ರೀತಿಯಿಂದಲೇ ಕಂಡಿದ್ದಾರೆ. ಹಾಗಾಗಿ ಅವರೆಲ್ಲರಿಗೆ ಆಭಾರಿ’ ಎನ್ನುತ್ತಾರೆ ಸಂಜಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT