ನಟ ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರಜ್ವಲ್ ದೇವರಾಜ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.
‘ಇದು ನನ್ನ ನಿರ್ದೇಶನದ ಆರನೇ ಚಿತ್ರ. ಈ ಚಿತ್ರಕ್ಕೆ ‘ಅಗಮ್ಯ ಪಯಣಿಗ’ ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿರುತ್ತವೆ. ನಾಯಕಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ ಯತಿರಾಜ್.
ಮನ್ವೀತ್ ಚಿತ್ರದ ನಾಯಕ. ನಾಯಕಿಯಾಗಿ ರೇಖಾದಾಸ್ ಪುತ್ರಿ ಸಾತ್ವಿಕಾ ರಾವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂತೋಷ್ ಬಂಡವಾಳ ಹೂಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಚಿತ್ರಗ್ರಹಣವಿದೆ. ಸುಂದರಶ್ರೀ, ತೇಜಸ್ವಿನಿ, ಬಲ ರಾಜವಾಡಿ, ಮಹಾಂತೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.