ಸೋಮವಾರ, ಮಾರ್ಚ್ 1, 2021
30 °C

ದೇಹತೂಕ ಇಳಿಸಿಕೊಂಡು ವರ್ಚಸ್ಸು ಹೆಚ್ಚಿಸಿಕೊಂಡ ನಟಿ ಸಾರಾ ಅಲಿಖಾನ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

‘ಫ್ಯಾಬ್’ ಎಂಬ ಇಂಗ್ಲಿಷ್‌ ಪದಕ್ಕೆ ಭರ್ಜರಿ, ಶ್ರೇಷ್ಠ, ಅತ್ಯುತ್ಕೃಷ್ಟ ಎಂಬೆಲ್ಲ ಅರ್ಥಗಳಿವೆ. ಆದರೆ, ಫಿಟ್‌ನೆಸ್‌ ಲೋಕ ಇಂಥ ಪದಗಳಿಗೆ ಹೊಸತೇ ವ್ಯಾಖ್ಯಾನ ಕೊಟ್ಟಿರುವುದಕ್ಕೆ ಸಾಕ್ಷಿ ‘ಫ್ಯಾಟ್‌–ಟು–ಫ್ಯಾಬ್’ ಎಂಬ ನುಡಿಗಟ್ಟು. ‘ಕೊಬ್ಬಿನಿಂದ ಭರ್ಜರಿ ದೇಹದತ್ತ...’ ಎಂದು ಈ ನುಡಿಗಟ್ಟನ್ನು ಕನ್ನಡಕ್ಕೆ ಬದಲಿಸಿದರೂ ಅದರ ಪನ್‌ ಹಿಡಿಯಲು ಆಗದೇನೋ?

ಸಾರಾ ಅಲಿ ಖಾನ್ ಹೀಗೆಯೇ ‘ಫ್ಯಾಟ್‌–ಟು–ಫ್ಯಾಬ್’ ಆಗಿ ರೂಪಾಂತರಗೊಂಡ ನಟಿ. ‘ಕೇದಾರ್‌ನಾಥ್’ ಹಿಂದಿ ಸಿನಿಮಾ ನೆರೆ ಕಥೆಯ, ಧರ್ಮಸೂಕ್ಷ್ಮದ ವಿವಾದದಲ್ಲಿ ಮುಳುಗಿದರೂ ಸಾರಾ ಹೆಸರು ಮಾತ್ರ ತೇಲುತ್ತಿದೆ. ವಿಮರ್ಶಕರು, ಪ್ರೇಕ್ಷಕರು ಈ ಹುಡುಗಿಗೆ ಧಾರಾಳವಾಗಿ ಅಂಕಗಳನ್ನು ಕೊಡುತ್ತಿದ್ದಾರೆ.

‘ಥೇಟ್ ಅಮ್ಮನದ್ದೇ ಮುಖ’ ಎಂದು ಕೆಲವರು ಹೇಳಿದರೆ, ‘ಮೂಗು, ಕಣ್ಣಂತೂ ಅಮ್ಮನ ತದ್ರೂಪು’ ಎಂದು ಇನ್ನು ಕೆಲವರು ಹೊಗಳಿದ್ದಾರೆ. ಈಗ ಸಪೂರಗೊಂಡಿರುವ ಸಾರಾ ದೇಹವನ್ನು ನೋಡಿದ ಪ್ರೇಕ್ಷಕರಿಗೆ ವರ್ಷಗಳ ಹಿಂದೆಯಷ್ಟೆ ಅವರ ಶರೀರ ಇದ್ದ ರೀತಿ ಗೊತ್ತಿರಲಿಕ್ಕಿಲ್ಲ.

ಅಮ್ಮನ ತೊಡೆ ಮೇಲೆ ಮಲಗಿಕೊಂಡು ‘ನಾನು ನಟಿಯಾಗುವೆ’ ಎಂದಾಗ ಅವರ ದೇಹತೂಕ 96 ಕೆ.ಜಿ. ಇತ್ತು. ‘ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಡಿಸಾರ್ಡರ್’ ಎಂಬ ಆರೋಗ್ಯದ ಸಮಸ್ಯೆ ಅವರನ್ನು ಬಾಲ್ಯದಿಂದಲೂ ಕಾಡಿತ್ತು. ಹೆಣ್ಣಿನ ದೇಹದಲ್ಲಿ ಪುರುಷ ಹಾರ್ಮೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಉಂಟಾಗುವ ಸಮಸ್ಯೆ ಇದು. ಇಂಥ ಹಾರ್ಮೋನ್ ಏರುಪೇರಿನಿಂದಲೇ ಸಾರಾ ದೇಹತೂಕ ಗಣನೀಯವಾಗಿ ಹೆಚ್ಚಾಗಿತ್ತು. ಅದನ್ನು ಅರಿತಿದ್ದ ಅಮ್ಮ ಅಮೃತಾ, ‘ನೀನು ದೇಹತೂಕ ಇಳಿಸಿಕೊಳ್ಳಬೇಕು. ಆಗಷ್ಟೇ ನಟಿಯಾಗಲು ಸಾಧ್ಯ’ ಎಂದುಬಿಟ್ಟರು. ಅದಾಗಲೇ ವ್ಯಾಯಾಮ ಮಾಡಲು ಪ್ರಯತ್ನಿಸಿ, ಹೈರಾಣಾಗಿದ್ದ ಸಾರಾ ಬಿಕ್ಕಿ ಬಿಕ್ಕಿ ಅತ್ತರು.

ಹಾಗೆ ಅವರು ಅತ್ತು ಒಂದೂವರೆ ವರ್ಷ ಆಯಿತು. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಒಂದು ಪದವಿ ಗಳಿಸಿದ್ದ ಸಾರಾ, ಲಂಡನ್‌ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಇನ್ನೊಂದು ಪದವಿ ಮುಗಿಸಿದ ಮೇಲೆ ವಿಮಾನ ಇಳಿದರು. ಅಮ್ಮ ಅಮೃತಾ ಅವರನ್ನು ಕರೆತರಲು ಹೋಗಿದ್ದರು. ಸೂಟ್‌ಕೇಸ್‌ ನೋಡಿಯಷ್ಟೆ ಅವರಿಗೆ ಮಗಳನ್ನು ಗುರುತಿಸಲು ಸಾಧ್ಯವಾದದ್ದು. ಒಂದೂವರೆ ವರ್ಷದಲ್ಲಿ ಮೂವತ್ತು ಕೆ.ಜಿ. ತೂಕ ಇಳಿಸಿಕೊಂಡು ಬಂದಿದ್ದ ಮಗಳನ್ನು ಮೊದಲ ನೋಟಕ್ಕೆ ಗುರುತಿಸಲು ಅವರಿಗೆ ಆಗಿರಲಿಲ್ಲ. ಆಮೇಲೆ ಆಶ್ಚರ್ಯದಿಂದ ಅಪ್ಪಿಕೊಂಡರು. ನಟಿಯಾಗಬೇಕು ಎಂಬ ಕನಸನ್ನು ಮಗಳು ನನಸಾಗಿಸಲಿದ್ದಾಳೆ ಎನ್ನುವುದು ಅಮ್ಮನಿಗೂ ಸ್ಪಷ್ಟವಾಗಿತ್ತು.

ಇಡ್ಲಿಗಳು, ಮೊಟ್ಟೆಯ ಬಿಳಿಭಾಗ, ಬ್ರೆಡ್‌ ಟೋಸ್ಟ್‌ ಇವು ಸಾರಾ ತಿಂಡಿ. ಮಧ್ಯಾಹ್ನದ ಊಟಕ್ಕೆ ಚಪಾತಿಗಳು, ದಾಲ್, ಹಣ್ಣುಗಳು, ಬೇಯಿಸಿದ ತರಕಾರಿ. ಸಂಜೆ ಒಂದು ಬಟ್ಟಲು ಉಪ್ಮಾ ಇದ್ದರೆ ಸಾಕು. ರಾತ್ರಿ ಒಂದೆರಡು ಚಪಾತಿ, ಹಸಿ ತರಕಾರಿಗಳಷ್ಟೆ.

ವರ್ಕ್‌ಔಟ್‌ಗೆ ಹೋಗುವ ಮೊದಲು ಒಂದಿಷ್ಟು ಹಣ್ಣುಗಳ ಜೊತೆ ಮ್ಯೂಸ್ಲಿ ತಿಂದು ಶಕ್ತಿ ಪಡೆದುಕೊಳ್ಳುತ್ತಾರೆ. ಟೋಫು, ಸಲಾಡ್‌, ಪ್ರೊಟೀನ್‌ ಶೇಕ್‌ ಸೇವನೆ ವರ್ಕ್‌ಔಟ್‌ ಆದ ನಂತರ.

ತರಬೇತುದಾರರಾದ ನಮ್ರತಾ ಪುರೋಹಿತ್ ಹೇಳಿಕೊಟ್ಟ ವ್ಯಾಯಾಮಗಳನ್ನು ಸಾರಾ ಅವರು ಮಲೈಕಾ ಅರೋರಾ, ನಿಮ್ರತ್‌ ಕೌರ್‌ ಜತೆಗೂ ಮಾಡಿರುವ ಫೋಟೊಗಳಿವೆ. ಟ್ರೆಡ್‌ಮಿಲ್‌ ಮೇಲೆ ಓಡುವಾಗ ಹಿಂದಿ ಹಾಡುಗಳನ್ನು ಕೇಳುತ್ತಲೇ ಸಾರಾ ಭಾಷಾಸೂಕ್ಷ್ಮವನ್ನೂ ಕಲಿಯಲಾರಂಭಿಸಿದರು. ನೇಹಾ ಕಕ್ಕರ್‌ ಕಂಠದ ಹಾಡುಗಳು ಅವರನ್ನು ಹುರಿದುಂಬಿಸಿದವಂತೆ. ಸ್ವಿಟ್ಜರ್ಲೆಂಡ್‌ನ ಜಿನೆವಾದಲ್ಲಿ ಹುಟ್ಟಿದ ಮಗು ಹೀಗೆ ಬಾಲಿವುಡ್‌ ನಟಿಯಾಗಿ ಪರಿವರ್ತನೆಗೊಂಡಿತು.

ಐಶ್ವರ್ಯಾ ರೈ ಅವರನ್ನು ನೋಡಿ ತಾನೂ ನಟಿಯಾಗಬೇಕು ಎಂದು ಬಯಸಿದ ಸಾರಾ, ದೇಹ ಪ್ರಕೃತಿಯನ್ನೇ ಬದಲಿಸಿ ಹೊಸ ರೂಪು ತಳೆದಿರುವುದು ಅನೇಕರಿಗೆ ಸ್ಫೂರ್ತಿಯ ಕಥನವಾಗಿ ಕಾಣುತ್ತಿದೆ. ಒಂಬತ್ತು ವರ್ಷವಾಗಿದ್ದಾಗ ಅಪ್ಪ–ಅಮ್ಮ ವಿವಾಹ ವಿಚ್ಛೇದನ ಪಡೆದರು. ಅಮ್ಮನ ಮಡಿಲಲ್ಲೇ ಬೆಳೆದರೂ ಅಪ್ಪನ ಏಳಿಗೆಯನ್ನು ಕಂಡು ಅವರೊಟ್ಟಿಗೆ ಈಗ ಸ್ನೇಹಿತೆಯಂತೆ ಮಾತನಾಡುವ ಸಾರಾ ಹೊಸ ಕಾಲದ ಹೆಣ್ಣುಮಗಳು. ರಣವೀರ್‌ ಸಿಂಗ್‌ ನಾಯಕನಾಗಿರುವ ‘ಸಿಂಬಾ’ ಸಿನಿಮಾದಲ್ಲೂ ಅವರೇ ನಾಯಕಿ.

– ಎನ್ವಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು