ಭಾನುವಾರ, ಸೆಪ್ಟೆಂಬರ್ 15, 2019
30 °C

ಸಾರಾ, ಜಾಹ್ನವಿ ಮಧ್ಯೆ ಪೈಪೋಟಿ

Published:
Updated:

ಬಾಲಿವುಡ್‌ನ ಮೋಹಕ ತಾರೆ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್‌ ಚೊಚ್ಚಲ ‘ಧಡಕ್‌’ ಸಿನಿಮಾದಲ್ಲಿಯೇ ಉತ್ತಮ ನಟನೆಗಾಗಿ ಪ್ರಶಂಸೆ ಗಿಟ್ಟಿಸಿಕೊಂಡವರು. ಹಾಗೇ ನಟ ಸೈಫ್‌ ಅಲಿಖಾನ್‌ ಮಗಳು ಸಾರಾ ಅಲಿಖಾನ್‌, ಅಭಿಷೇಕ್‌ ಕಪೂರ್‌ ಅವರ ‘ಕೇದಾರನಾಥ’ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ಆ ಚಿತ್ರದ ಬಳಿಕ ರೋಹಿತ್‌ ಶೆಟ್ಟಿ ನಿರ್ದೇಶನದ ‘ಸಿಂಬ’ ಚಿತ್ರದಲ್ಲಿ ರಣವೀರ್‌ ಸಿಂಗ್‌ ಜೊತೆ ನಟಿಸಿದ್ದರು. ಈ ಎರಡೂ ಚಿತ್ರಗಳು ಹಿಟ್‌ ಆಗಿವೆ. 

ಸಾರಾ ಹಾಗೂ ಜಾಹ್ನವಿ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಬಾಲಿವುಡ್‌ ಪ್ರವೇಶಿಸಿದವರು. ಹೀಗಾಗಿ ಇವರಿಬ್ಬರನ್ನೂ ಪರಸ್ಪರ ಸ್ಪರ್ಧಿಗಳೆಂಬಂತೆ ನೋಡಲಾಗುತ್ತಿದೆ. ಇಬ್ಬರ ಸಿನಿಮಾಗಳು ಬಿಡುಗಡೆಯಾದಾಗ ಹೋಲಿಕೆ ಸಾಮಾನ್ಯವಾಗಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಾರಾ ಅಲಿಖಾನ್‌ಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಸಾರಾ, ‘ಹೋಲಿಕೆ ಹಾಗೂ ಸ್ಪರ್ಧೆ ವೃತ್ತಿ ಭಾಗ. ಹಾಗಾಗಿ ಅದರ ಬಗ್ಗೆ ನಾನು ಏನೂ ಜಾಸ್ತಿ ಚಿಂತೆ ಮಾಡಿಲ್ಲ. ಎಲ್ಲರ ಜೀವನದಲ್ಲೂ ಇದು ಇದ್ದದ್ದೇ. ಜಾಹ್ನವಿ ನನ್ನ ಉತ್ತಮ ಸ್ನೇಹಿತೆ. ನಾವಿಬ್ಬರೂ ನಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದೇವೆ. ಇದನ್ನು ವೈಯಕ್ತಿಕ ಜೀವನಕ್ಕೆ ಎಳೆದು ತರಲ್ಲ’ ಎಂದು ಹೇಳಿದ್ದಾರೆ. 

ಇವರೊಟ್ಟಿಗೆ ಚುಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಕೂಡ ಬಾಲಿವುಡ್‌ನಲ್ಲಿ ಹೆಜ್ಜೆ ಇಟ್ಟಿದ್ದಾರೆ. ‘ನಾವು ಮೂವರು ಸಿನಿಮಾ ಜಗತ್ತಿನಲ್ಲಿ ಸಾಧನೆ ಮಾಡುವ ದೊಡ್ಡ ಕನಸು ಹೊಂದಿದ್ದೇವೆ. ಅದರ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ’ ಎಂದು ಸಾರಾ ಹೇಳಿಕೊಂಡಿದ್ದಾರೆ. 

ಇತ್ತೀಚೆಗೆ ಸಾರಾ ಹೆಸರು ನಟ ಕಾರ್ತಿಕ್‌ ಆರ್ಯನ್‌ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ. ಸದ್ಯ ಇಮ್ತಿಯಾಜ್‌ ಅಲಿ ನಿರ್ದೇಶನದ ‘ಆಜ್‌ ಕಲ್‌’ ಹಾಗೂ ಡೇವಿಡ್‌ ಧವನ್‌ ಅವರ ‘ಕೂಲಿ ನಂ.1’ ಸಿನಿಮಾದಲ್ಲಿ ವರುಣ್‌ ಧವನ್‌ ಜೊತೆ ನಟಿಸುತ್ತಿದ್ದಾರೆ.

Post Comments (+)