ಶನಿವಾರ, ಜುಲೈ 31, 2021
24 °C
ಸ್ಟಾರ್‌ ಕೊರಿಯೊಗ್ರಾಫರ್‌ನನ್ನು ಮರೆತಿದ್ದ ಬಾಲಿವುಡ್‌

ಕೆಲಸ ಇಲ್ಲದೆ ನಿರುದ್ಯೋಗಿಯಾಗಿದ್ದ ಸರೋಜ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲದಲ್ಲಿ ‘ಬಾಲಿವುಡ್‌ ಡಾನ್ಸಿಂಗ್‌ ಕ್ವೀನ್’ ಎಂದು ಹೆಸರಾಗಿದ್ದ ಖ್ಯಾತ ನೃತ್ಯ ಸಂಯೋಜಕಿ ಸರೋಜ್‌ ಖಾನ್‌ ಕೆಲವು ವರ್ಷಗಳಿಂದ ಕೆಲಸ ಇಲ್ಲದೇ ನಿರುದ್ಯೋಗಿಯಾಗಿ ಮನೆಯಲ್ಲೇ ಖಾಲಿ ಕುಳಿತಿದ್ದರು.

1980 ಮತ್ತು 90ರ ದಶಕದಲ್ಲಿ ಸರೋಜ್‌ ಖಾನ್‌ ಸ್ಟಾರ್‌ ಕೊರಿಯಾಗ್ರಾಫರ್. ಆ ಕಾಲದಲ್ಲಿ ಬಾಲಿವುಡ್‌ನ ಯಾವ ಸ್ಟಾರ್ ನಟ, ನಟಿಯರಿಗೂ ಇವರು ಕಡಿಮೆ ಇರಲಿಲ್ಲ. ಸರೋಜ್‌‌ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರೆ ಆ ಸಿನಿಮಾ ಹಿಟ್‌ ಆಯಿತು ಎಂದರ್ಥ. ದಢೂತಿ ದೇಹ ಹೊಂದಿದ್ದರೂ ಸರೋಜ್‌ ಖಾನ್‌ ಒಮ್ಮೆ ಗೆಜ್ಜೆ ಕಟ್ಟಿ, ವೇಲ್‌ ಸೊಂಟಕ್ಕಿ ಸಿಕ್ಕಿಸಿಕೊಂಡು ಡಾನ್ಸ್‌ ಮಾಡಲು ನಿಂತರೆ ಎಂಥವರೂ ಬೆರಗಾಗುತ್ತಿದ್ದರು. ನಿರ್ಮಾಪಕರು ಇವರ ಕಾಲ್‌ಶೀಟ್‌ಗಾಗಿ ದುಂಬಾಲು ಬೀಳುತ್ತಿದ್ದರು. 

ನಿರುದ್ಯೋಗದ ಪರ್ವ

ಒಂದು ಕಾಲದಲ್ಲಿ ಮೂರ್ನಾಲ್ಕು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ‌ಸರೋಜ್, ಎರಡು ದಶಕಗಳ ಕಾಲ ಖ್ಯಾತ ನಟಿಯರಾದ ಶ್ರೀದೇವಿ, ಮಾಧುರಿ ದೀಕ್ಷಿತ್‌ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಹೀಗೆ ಬಿಡುವಿಲ್ಲದೇ ದುಡಿಯುತ್ತಿದ್ದ  ಸರೋಜ್‌ ಅವರು ಕೊನೆಯ ದಿನಗಳಲ್ಲಿ, ಏಕಾಏಕಿ ನಿರುದ್ಯೋಗಿಯಾಗಿಬಿಟ್ಟರು. ಒಂದು ರೀತಿಯಲ್ಲಿ ತೆರೆಮರೆಗೆ ಸರಿದರು ಎನ್ನಬಹುದು. ಅದಕ್ಕೆ ನಿಖರ ಕಾರಣ ತಿಳಿಯಲಿಲ್ಲ. ಆದರೆ, ಪ್ರಭುದೇವ, ಗಣೇಶ್‌ ಆಚಾರ್ಯ, ಫರ‍್ಹಾ ಖಾನ್‌ ಅವರಂಥ ಹೊಸ ತಲೆಮಾರಿನ ನೃತ್ಯ ನಿರ್ದೇಶಕರ ಅಲೆಯಲ್ಲಿ ಇವರ ನೃತ್ಯ ಮಂಕಾಯಿತೋ ಅಥವಾ ಇಂಡಸ್ಟ್ರಿಯವರೂ ಇವರನ್ನು ಮರೆತು ಬಿಟ್ಟರೋ ಏನೋ. ಒಟ್ಟಾರೆ, ಅವರಿಗೆ ಅವಕಾಶಕಗಳು ಕಡಿಮೆಯಾಗಿದ್ದಂತೂ ಹೌದು.

ಇತ್ತೀಚೆಗೆ ಅವರು ಕೊರಿಯೊಗ್ರಾಫರ್‌ ಆಗಿ ಕೆಲಸ ಮಾಡಿದ ಚಿತ್ರಗಳ ಸಂಖ್ಯೆ ಕೂಡ ತೀರಾ ಕಡಿಮೆ. ಕೆಲವರು ಕೆಲಸ ಕೊಟ್ಟು ಕೊನೆಯ ಕ್ಷಣದಲ್ಲಿ ಬೇರೆಯವರಿಂದ ನೃತ್ಯ ಸಂಯೋಜನೆ ಮಾಡಿಸಿ ಅವಮಾನಿಸಿದ್ದರು. ಇಂಥ ಅವಮಾನಗಳಿಂದ ಅವರು ಜರ್ಜರಿತರಾಗಿದ್ದರು. ಏರುತ್ತಿದ್ದ ವಯಸ್ಸಿನ ಜತೆಗೆ ಆರೋಗ್ಯವೂ ಕೈಕೊಟ್ಟಿತ್ತು. ಮೊದಲಿನಂತೆ ಕುಣಿಯಲು ಆಗುತ್ತಿರಲಿಲ್ಲ.

ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ಮನೆಗೆ ಸಲ್ಮಾನ್ ಭೇಟಿ

ಬಾಲಿವುಡ್‌ ಮಂದಿ ತಮ್ಮನ್ನು ಮರೆತಿದ್ದಾರೆ ಎಂಬ ಸಂಗತಿ ಅರಿವಾಗುತ್ತಲೇ ಸರೋಜಾ, ತಮ್ಮ ಮನೆಯಲ್ಲಿಯೇ ಯುವ ನಟ, ನಟಿಯರಿಗೆ ಶಾಸ್ತ್ರೀಯ ನೃತ್ಯ ಹೇಳಿ ಕೊಡಲು ಆರಂಭಿಸಿದ್ದರು. ಈ ವಿಷಯ ಗೊತ್ತಾಗಿ ನಟ ಸಲ್ಮಾನ್‌ ಖಾನ್‌ ಅವರ ಮನೆಗೆ ಬೇಟಿ ನೀಡಿ ತಮ್ಮ ಮುಂದಿನ ಚಿತ್ರಗಳಲ್ಲಿ ಕೆಲಸ ಕೊಡುವ ಭರವಸೆ ನೀಡಿ ಬಂದಿದ್ದರು. 

‘ಇಂಡಸ್ಟ್ರಿಯವರು ತನಗೆ ಕೆಲಸ ಕೊಡುವುದನ್ನೇ ನಿಲ್ಲಿಸಿದ್ದಾರೆ. ಕಾರಣ ನನಗೂ ಗೊತ್ತಿಲ್ಲ. ನಾನು ಈಗಲೂ ಕೆಲಸ ಮಾಡಲು ಸಿದ್ಧ’ ಎಂದು ಸರೋಜಾ ಖಾನ್ ಮುಗ್ಧರಾಗಿ ಸಲ್ಮಾನ್‌ ಖಾನ್‌ ಎದುರು ದುಃಖ ತೋಡಿಕೊಂಡಿದ್ದರು.‌ ಅನೇಕ ನಟ, ನಟಿಯರಿಗೆ ಅವಕಾಶ ಕೊಡಿಸಿದ್ದ ಸ್ಟಾರ್‌ ಕೊರಿಯೊಗ್ರಾಫರ್‌ ಸ್ವತಃ ಅವಕಾಶಗಳಿಗಾಗಿ ಕಿರಿಯ ಕಲಾವಿದರ ಮುಂದೆ ಅಂಗಲಾಚುವ ಸ್ಥಿತಿ ತಲುಪಿದ್ದು ವಿಪರ್ಯಾಸ ಎನಿಸಿತ್ತು.

ಸರೋಜ್‌ರಿಂದ ಸ್ಟಾರ್ ಆದವರು

ಸಲ್ಮಾನ್‌ ಮೊದಲ ಚಿತ್ರ ‘ಬೀವಿ ಹೋತೊ ಐಸಾ’ ಮತ್ತು ‘ಅಂದಾಜ್‌ ಅಪ್ನಾ, ಅಪ್ನಾ’ ಚಿತ್ರಗಳಿಗೆ ಇವರೇ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ತೇಜಾಬ್‌ ಚಿತ್ರದ ‘ಏಕ್, ದೋ, ತೀನ್’ ಮತ್ತು ಖಳನಾಯಕ್‌ ಚಿತ್ರದ ‘ಚೋಲಿ ಕೆ ಪೀಚೆ ಕ್ಯಾ ಹೈ..’ ಬೇಟಾ ಚಿತ್ರದ ‘ಧಕ್‌ ಧಕ್‌ ಕರ‍್ನೆ ಲಗಾ...’ ಹಾಡುಗಳಿಗೆ ಇವರು ಹೇಳಿಕೊಟ್ಟ ಡಾನ್ಸ್‌ಗೆ ಹೆಜ್ಜೆ ಹಾಕಿದ ಮಾಧುರಿ ದೀಕ್ಷಿತ್‌ ರಾತ್ರೋರಾತ್ರಿ ಸ್ಟಾರ್‌ ಆದರು.

ಮಾಧುರಿ ದೀಕ್ಷಿತ್‌ಗೂ ಮೊದಲು ಸರೋಜಾ ಖಾನ್‌ ನಟಿ ಶ್ರೀದೇವಿ ಜತೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಜುದಾಯಿ, ಖುದಾಗವಾ, ಮಿಸ್ಟರ್‌ ಇಂಡಿಯಾ, ಚಾಂದನಿ, ಲಮ್ಹೆ, ನಗಿನಾ ದಂತಹ ಹಿಟ್‌ ಚಿತ್ರಗಳಲ್ಲಿ ಈ ಜೋಡಿ ಮೋಡಿ ಮಾಡಿತ್ತು. ಮಾಧುರಿ ಜತೆ ಕೆಲಸ ಮಾಡಲು ಶುರುವಿಟ್ಟುಕೊಂಡ ನಂತರ ಸರೋಜ್‌ ಜತೆ ಶ್ರೀದೇವಿ ಮುನಿಸಿಕೊಂಡು ಮಾತು ಬಿಟ್ಟಿದ್ದರು.

ಇದನ್ನೂ ಓದಿ: ನಟ ಸುಶಾಂತ್ ಬಗ್ಗೆ ಸರೋಜ್ ಖಾನ್ ಬರೆದಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್

ನೃತ್ಯಗಳೇ ಹೆಸರು ಹೇಳುತ್ತಿದ್ದವು

ಕಥಕ್‌ ನೃತ್ಯ ಪಟುವಾಗಿದ್ದ ಸರೋಜಾ ನೃತ್ಯದಲ್ಲಿ ಅಳವಡಿಸುತ್ತಿದ್ದ ಜಟ್ಕಾಗಳು ಬಹಳ ಪ್ರಸಿದ್ಧಿ. ನೃತ್ಯಗಳಲ್ಲಿಯ ನವಿರಾದ ತುಂಟತನ, ಜಟ್ಕಾ ಮತ್ತು ಹಾವಭಾವಗಳೇ ‘ಇದು ಸರೋಜ್‌ ಖಾನ್‌ ಕೊರಿಯೊಗ್ರಾಫಿ ನೃತ್ಯ' ಎಂದು ಸಾಬೀತುಪಡಿಸುತ್ತಿದ್ದವು. ಮಾಧುರಿ ಕೂಡ ಸರೋಜಾ ಹೇಳಿಕೊಟ್ಟ ಇಂಥ ಪಟ್ಟುಗಳಿಂದಲೇ ಒಳ್ಳೆಯ ನೃತ್ಯಗಾರ್ತಿಯಾಗಿ ಬಾಲಿವುಡ್‌ನಲ್ಲಿ ನೆಲೆ ನಿಂತಿದ್ದು!

ಅಮಿತಾಭ್‌ ಬಚ್ಚನ್‌, ಅಮೀರ್‌ ಖಾನ್‌ ನಟನೆಯ ‘ಥಗ್ಸ್ ಆಫ್‌ ಹಿಂದೂಸ್ತಾನ್’ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಲು ಇವರಿಗೆ ದೊರೆತಿದ್ದ ಅವಕಾಶ ಕೊನೆಯ ಗಳಿಗೆಯಲ್ಲಿ ಪ್ರಭುದೇವ ಪಾಲಾಯಿತು. ಇದರಿಂದ ಈ ಹಿರಿಯ ಜೀವ ತುಂಬಾ ನೊಂದು ಕೊಂಡಿತ್ತು. ಬಾಲಿವುಡ್‌ ಸಹವಾಸವೇ ಬೇಡ ಎಂದು ದೂರ ಸರಿದಿದ್ದರು.

ಬಾಲಿವುಡ್‌ನಲ್ಲಿ ಡಾನ್ಸ್‌ಗೆ ಬಂದೋದಗಿದ ಗತಿ ನೋಡಿ ಮತ್ತೆ ಇಂಡಸ್ಟ್ರಿಗೆ ಮರಳುವ ಮನಸ್ಸಾಗುತ್ತದೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಕಲಂಕ್‌, ಅಗ್ನಿಪಥ್,‌ ಏಜೆಂಟ್‌ ವಿನೋದ್‌, ರೌಡಿ ರಾಥೋಡ್‌ ಮುಂತಾದ ಬೆರಳೆಣಿಕೆಯಷ್ಟು ಚಿತ್ರ ಬಿಟ್ಟರೆ ಸರೋಜ್‌ ಅಕ್ಷರಶಃ ನಿರುದ್ಯೋಗಿಯಾಗಿದ್ದರು. ಈ ಚಿತ್ರಗಳಲ್ಲಿ ಅವರು ಸಂಯೋಜಿಸಿದ ನೃತ್ಯಗಳಲ್ಲಿ ಮೊದಲಿನ ಸೆಳೆತ ಇರಲಿಲ್ಲ. 

ಶ್ರೀದೇವಿ, ಮಾಧುರಿ, ಜೂಹಿ ಚಾವ್ಲಾ, ಊರ್ಮಿಳಾ ಮಾತೋಂಡ್ಕರ್‌ ಅವರಂತಹ ನಟಿಯರನ್ನು ಕುಣಿಸಿದ್ದ ಸರೋಜ್ ಅವರ‌ ನೃತ್ಯದ ಪಟ್ಟುಗಳು ಕೂಡ ಮೊದಲಿನ ಚಾರ್ಮ್‌ ಕಳೆದುಕೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು