ಸೋಮವಾರ, ಮಾರ್ಚ್ 8, 2021
32 °C

ರೌಡಿಗೆ ವ್ಯಾಕರಣದ ಹುಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದ ಹೆಸರು ‘ಸವರ್ಣದೀರ್ಘ ಸಂಧಿ’. ಚಿತ್ರದ ಕಥೆಯ ನಾಯಕ ಒಬ್ಬ ರೌಡಿ. ರೌಡಿಯ ಕಥೆಗೂ ವ್ಯಾಕರಣಕ್ಕೆ ಸಂಬಂಧಿಸಿದ ಒಂದು ಸಂಧಿಗೂ ಏನು ಸಂಬಂಧ ಎಂಬ ಗೊಂದಲ ಮೂಡುವುದು ಸಹಜ.

ಈ ಕಥೆಯ ರೌಡಿ ಅಷ್ಟೇನೂ ವಿದ್ಯೆ ಕಲಿತವನಲ್ಲ. ಅಂದಮೇಲೆ, ಗೊಂದಲ ಇನ್ನಷ್ಟು ಹೆಚ್ಚಾಗುವುದು ಸಹಜ. ಇಂತಹ ಗೊಂದಲಗಳಿಗೆ ಉತ್ತರವಾಗಿ: ‘ಈ ರೌಡಿ ವ್ಯಾಕರಣದಲ್ಲಿ ಪಂಟರ್‌ ಆಗಿರುತ್ತಾನೆ. ರೌಡಿ ವೃತ್ತಿಯ ಭಾಗವಾಗಿ ಎತ್ತಾಕಿಕೊಂಡು ಬಂದವರಲ್ಲಿ ಈತ ವ್ಯಾಕರಣದ ಕುರಿತು ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ಸರಿಯಾಗಿ ಉತ್ತರ ಕೊಡದವರಿಗೆ ಒಂದಿಷ್ಟು ಒದೆಯುತ್ತಾನೆ’ ಎಂಬ ವಿವರಣೆ ನೀಡಿದ್ದಾರೆ ನಿರ್ದೇಶಕ ವೀರೇಂದ್ರ ಶೆಟ್ಟಿ.

‘ವ್ಯಾಕರಣದ ಹುಚ್ಚು ಹಿಡಿಸಿಕೊಂಡಿರುವ ರೌಡಿಯ ಹಾಸ್ಯಮಯ ಕಥೆ’ ಎನ್ನುವ ಅಡಿಶೀರ್ಷಿಕೆಯನ್ನು ಚಿತ್ರತಂಡ ನೀಡಿದೆ. ಶೆಟ್ಟಿ ಅವರು ಈ ಮೊದಲು ತುಳು ಚಿತ್ರವೊಂದನ್ನು ನಿರ್ದೇಶಿಸಿದ್ದರು. ಇದು ಅವರಿಗೆ ನಿರ್ದೇಶಕನಾಗಿ ಎರಡನೆಯ ಸಿನಿಮಾ. ಈ ಚಿತ್ರದಲ್ಲಿ ಅವರು ನಾಯಕ ನಟ ಕೂಡ ಹೌದು.

ಚಿತ್ರಕ್ಕೆ ಸಂಗೀತ ನೀಡಿರುವವರು ಮನೋಮೂರ್ತಿ. ‘ಎಂಟು ತಿಂಗಳಲ್ಲಿ ಈ ಸಿನಿಮಾ ಕೆಲಸಗಳು ಮುಗಿದಿವೆ. ಕೆಲಸಗಳೆಲ್ಲ ಅಂದುಕೊಂಡ ರೀತಿಯಲ್ಲಿ, ಅಂದುಕೊಂಡ ಸಮಯಕ್ಕೆ ಆಗಿವೆ. ಸಂಭಾಷಣೆ ಈ ಚಿತ್ರದ ಶಕ್ತಿ. ಈ ರೀತಿಯ ಸಂಭಾಷಣೆ ಇರುವ ಸಿನಿಮಾದಲ್ಲಿ ನಾನು ಕೆಲಸ ಮಾಡಿ ಬಹಳ ದಿನ ಆಗಿತ್ತು’ ಎಂದರು ಮನೋಮೂರ್ತಿ. ಚಿತ್ರದಲ್ಲಿ ಏಳು ಹಾಡುಗಳು ಇವೆಯಂತೆ.

ಕನ್ನಡದಲ್ಲಿ ರೌಡಿಗಳ ಕುರಿತು ಹಲವಷ್ಟು ಸಿನಿಮಾಗಳು ಬಂದಿವೆ. ಆದರೆ, ಈ ಸಿನಿಮಾ ರೌಡಿಯ ಕುರಿತೇ ಹೌದಾಗಿದ್ದರೂ, ಇದರಲ್ಲಿ ರಕ್ತಪಾತ ಇಲ್ಲ. ಇದರಲ್ಲಿ ಹಾಸ್ಯ ಇದೆ. ಆರಂಭದಿಂದ ಕಡೆಯವರೆಗೆ ವೀಕ್ಷಕರನ್ನು ನಗಿಸುವ ಕೆಲಸವನ್ನು ಇದು ಮಾಡುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪದ್ಮಜಾ ರಾವ್ ಅವರು ಚಿತ್ರದಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ. ‘ವೀರೇಂದ್ರ ಸಿನಿಮಾ ವಿಚಾರದಲ್ಲಿ ಬಹಳ ಪ್ಯಾಷನೇಟ್ ಆಗಿರುತ್ತಾರೆ. ಎರಡು ವರ್ಷಗಳಿಂದ ಈ ಚಿತ್ರದ ಸ್ಕ್ರಿಪ್ಟ್‌ಗಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರ ಗೆಲ್ಲಲೇಬೇಕು ಎಂದು ಕೆಲಸ ಮಾಡಿದ್ದೇವೆ’ ಎಂದರು ಪದ್ಮಜಾ.

ಚಿತ್ರದ ನಾಯಕಿ ಕೃಷ್ಣಾ. ‘ನನಗೆ ಇದು ಮೊದಲ ಕನ್ನಡ ಸಿನಿಮಾ. ಈ ಸಿನಿಮಾ ಬಿಡಬೇಡ ಎಂದು ಅಪ್ಪ ಹೇಳಿದ್ದರು. ಅಪ್ಪ ಯಾಕೆ ಹಾಗೆ ಹೇಳಿದ್ದರು ಎಂಬುದು ಸಿನಿಮಾ ನೋಡಿದ‌ ನಂತರ ಗೊತ್ತಾಯಿತು’ ಎಂದರು ಕೃಷ್ಣಾ. ಅವರ ಪಾತ್ರದ ಹೆಸರು ಅಮೃತವರ್ಷಿಣಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು