‘ನಿಜದ ನಾಯಕಿ’ಯ ಮರೆಯಬಹುದೇ?

7

‘ನಿಜದ ನಾಯಕಿ’ಯ ಮರೆಯಬಹುದೇ?

Published:
Updated:

ಸರಜೂ ಕಾಟ್ಕರ್‌ ಕಾದಂಬರಿ ಆಧರಿಸಿದ ‘ಸಾವಿತ್ರಿಬಾಯಿ ಫುಲೆ’ ಸಿನಿಮಾ ಈ ವಾರ (ಆ.10) ಬಿಡುಗಡೆಯಾಗುತ್ತಿದೆ. ದೇಶದ ಮೊದಲ ಶಿಕ್ಷಕಿ ಎಂಬ ಅಗ್ಗಳಿಕೆ ಹೊಂದಿರುವ ಸಾವಿತ್ರಿಬಾಯಿ ಫುಲೆ ಅವರ ಬದುಕನ್ನು ಇಂದಿನ ಪೀಳಿಗೆಗೆ ನೆನಪಿಸಿಕೊಡುವ ಪ್ರಯತ್ನ ನಿರ್ದೇಶಕ ವಿಶಾಲ್‌ ರಾಜ್‌ ಅವರದು. ಈ ಹಿಂದೆ ಅವರು ನಿರ್ದೇಶಿಸಿದ್ದ ‘ಇಂಗಳೆ ಮಾರ್ಗ’ ಎಂಬ ಸಿನಿಮಾ ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈಗ ಸಾವಿತ್ರಿಬಾಯಿ ಸ್ಮರಣೆಯಲ್ಲಿ ಅವರಿದ್ದಾರೆ. ‘ಈ ಸಿನಿಮಾ ಮೂಲಕ ನಮ್ಮೆಲ್ಲರ ಟೀಚರ್‌ಗೆ ಥ್ಯಾಂಕ್ಸ್‌ ಹೇಳುವ ಪ್ರಯತ್ನ ಮಾಡ್ತಿದ್ದೇನೆ’ ಎನ್ನುವ ವಿಶಾಲ್‌ ಜತೆಗಿನ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ಸಾವಿತ್ರಿಬಾಯಿ ಫುಲೆ ಅವರ ಬದುಕನ್ನು ಸಿನಿಮಾ ಆಗಿಸಲು ಸಿಕ್ಕ ಪ್ರೇರಣೆ ಏನು? 
ನಾನು ಈ ಹಿಂದೆ ನಿರ್ದೇಶಿಸಿದ ಎರಡು ಚಿತ್ರಗಳೂ ಸರಜೂ ಕಾಟ್ಕರ್‌ ಅವರ ಕಾದಂಬರಿ ಆಧರಿಸಿದ್ದೇ. ಈಗಲೂ ಅವರ ಕಾದಂಬರಿಯನ್ನೇ ಆಧರಿಸಿ ಸಿನಿಮಾ ಮಾಡ್ತಿದ್ದೇನೆ. ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಬದುಕೇ ಒಂದು ರೋಚಕ ಕಥೆ. ಸಾವಿತ್ರಿಬಾಯಿ ನಮ್ಮ ದೇಶದ ಮೊದಲ ಶಿಕ್ಷಕಿ. ಮಹಿಳಾಹಕ್ಕುಗಳ ಹೋರಾಟಗಾರ್ತಿ. ಇಂದಿರಾಗಾಂಧಿ ಅವರೂ ಸಾವಿತ್ರಿಬಾಯಿಯನ್ನು ಸ್ಮರಿಸಿಕೊಂಡಿದ್ದರಂತೆ. ಆದರೆ ಇಂದು ನಾವು ಅವರನ್ನು ಪೂರ್ತಿಯಾಗಿ ಮರೆತೇ ಬಿಟ್ಟಿದ್ದೇವೆ. ಎಷ್ಟೋ ವಿದ್ಯಾವಂತರು ‘ಸಾವಿತ್ರಿಬಾಯಿ ಎಂದರೆ ಯಾರು?’ ಎಂದು ಕೇಳುವಾಗ ನಿಜಕ್ಕೂ ನೋವಾಗುತ್ತದೆ. ಹಾಗಾಗಿಯೇ ಅವರನ್ನು ಇಂದಿನ ಪೀಳಿಗೆಗೆ ಪರಿಚಯಸಬೇಕು ಎಂಬ ಉದ್ದೇಶದಿಂದ ಈ ಸಿನಿಮಾ ಮಾಡಲು ನಿರ್ಧರಿಸಿದೆ. 

* ಈ ಸಿನಿಮಾ ಮಾಡುವಾಗ ನೀವು ಎದುರಿಸಿದ ಸವಾಲುಗಳೇನು?
ಸಾವಿತ್ರಿಬಾಯಿ ಬದುಕಿದ್ದು 1840ರ ಕಾಲಘಟ್ಟದಲ್ಲಿ. ಆ ಕಾಲಘಟ್ಟವನ್ನು ಮರುನಿರ್ಮಿಸುವುದೇ ನನ್ನೆದುರಿನ ದೊಡ್ಡ ಸವಾಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಚಿತ್ರಕಥೆಗೇ ವ್ಯಯಿಸಿದ್ದೇನೆ. ನಂತರ ಬಸವರಾಜ್‌ ಬೂತಾಳಿ ಅವರು ಹಣ ಹೂಡಲು ಮುಂದೆ ಬಂದರು. ಆರು ತಿಂಗಳು ಹುಡುಕಿ ಒಳ್ಳೆಯ ಲೊಕೆಶನ್‌ ಆಯ್ದುಕೊಂಡೆವು. ಬೆಳಗಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ.

ಜ್ಯೋತಿಬಾ ಫುಲೆಯಾಗಿ ಸುಚೀಂದ್ರಪ್ರಸಾದ್‌ ಮತ್ತು ಸಾವಿತ್ರಿಬಾಯಿ ಆಗಿ ತಾರಾ ನಟಿಸಿದ್ದಾರೆ. ಈ ಪಾತ್ರ ಒಪ್ಪಿಕೊಂಡಾಗ ತಾರಾ ಅವರು ತುಂಬ ಹೆದರಿಕೊಂಡಿದ್ದರು. ‘ಇದು ಸಾಮಾನ್ಯ ಪಾತ್ರ ಅಲ್ಲ, ಇಡೀ ದೇಶಕ್ಕೆ ಗೊತ್ತಿರುವ ಹೆಣ್ಣುಮಗಳ ಪಾತ್ರ. ಒಂಚೂರು ಹೆಚ್ಚೂಕಮ್ಮಿ ಆದರೂ ಕಳಂಕವಾಗಿಬಿಡುತ್ತದೆ’ ಎಂದು ಪದೆ ಪದೆ ಹೇಳುತ್ತಿದ್ದರು. ಆ ಕಾರಣಕ್ಕೆ ಅತ್ಯಂತ ಶ್ರದ್ಧೆಯಿಂದ ನಟಿಸಿದರು. ತುಂಬ ಅದ್ಭುತವಾಗಿ ಮೂಡಿಬಂದಿದೆ. 

* ಈ ಚಿತ್ರ ನಮ್ಮ ಕಾಲಮಾನಕ್ಕೆ ಯಾಕೆ ಮುಖ್ಯ ಅನಿಸುತ್ತದೆ?
ನಾವು ಕಾಲ್ಪನಿಕ ಹೀರೊಗಳನ್ನು ಸೃಷ್ಟಿಸಿ ವೈಭವೀಕರಿಸುವುದರಲ್ಲಿಯೇ ಮೈಮರೆತಿದ್ದೇವೆ. ಈ ಭರದಲ್ಲಿ ‘ನಿಜದ ನಾಯಕ(ಕಿ)’ರು ವಿಸ್ಮೃತಿಗೆ ಸರಿಯುತ್ತಿದ್ದಾರೆ.  ಪುರುಷರಿಗೇ ಶಿಕ್ಷಣ ದುರ್ಲಭವಾಗಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಮಹಿಳಾ ಶಿಕ್ಷಣಕ್ಕೆ ಹೋರಾಡಿದರು. ಅವರಿಗೆ ಮಕ್ಕಳಿರಲಿಲ್ಲ. ತಮ್ಮ ಸುತ್ತಲಿನ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಹೋರಾಡಿದರು. ಇದರಿಂದ ಸೆಗಣಿಯಿಂದ ಹೊಡೆಸಿಕೊಳ್ಳಬೇಕಾಯ್ತು. ಕಟು ನಿಂದನೆ ತಾಳಿಕೊಳ್ಳಬೇಕಾಯ್ತು. ಯಾವುದಕ್ಕೂ ಹೆದರದೆ, ಹಿಂಜರಿಯದೇ ಕೆಲಸ ಮಾಡಿದ ಆ ಮಹಾತಾಯಿ ನಮಗಿಂದು ಮುಖ್ಯ ಅಲ್ಲವೇ? ಇಂದು ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದರೆ ಅದಕ್ಕೆ ಮೂಲಕಾರಣ ಅವರು. ಅಂದಿನ ಕಾಲಕ್ಕೆ ಮನೆ ಮನೆಗೆ ಹೋಗಿ ರೊಟ್ಟಿ ಬೇಡಿ ಬಿಸಿಯೂಟದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ರೊಟ್ಟಿಯ ಆಸೆಯಿಂದಾದರೂ ಮಕ್ಕಳು ಶಾಲೆಗೆ ಬರಲಿ ಎಂಬ ಕಾರಣಕ್ಕೆ. ಈ ಹಿನ್ನೆಲೆ ನಮಗೆ ಮುಖ್ಯ ಅಲ್ಲವೇ? ಕರ್ನಾಟಕದಲ್ಲಿಯೇ ಎಷ್ಟೊಂದು ತ್ಯಾಗ– ಬಲಿದಾನದ ಕಥೆಗಳಿವೆ. ಅವ್ಯಾವವೂ ನಮಗೆ ಇಂದು ಮುಖ್ಯ ಅನಿಸುತ್ತಲೇ ಇಲ್ಲ ಯಾಕೆ? ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಸಲುವಾಗಿಯೇ ಈ ಸಿನಿಮಾ ಮಾಡುವುದು ಮುಖ್ಯ ಎಂದು ನನಗನಿಸಿತು.

* ಇಂಥ ಪರ್ಯಾಯ ಮಾದರಿಯ ಸಿನಿಮಾಗಳಿಗೆ ಜನರಿಂದ ಸಿಗುವ ಸ್ಪಂದನ ಹೇಗಿರುತ್ತದೆ?
ಇತ್ತೀಚೆಗೆ ‘ಸಾವಿತ್ರಿಬಾಯಿ ಫುಲೆ’ ಚಿತ್ರದ ಖಾಸಗಿ ಪ್ರದರ್ಶನ ಏರ್ಪಡಿಸಿದ್ದೆವು. ಅದಕ್ಕೆ ಬಂದ ಎಷ್ಟೋ ಸಾಹಿತಿಗಳು, ಗಣ್ಯರು ಅಕ್ಷರಶಃ ಅತ್ತರು. ‘ಇಂಥ ಚಿತ್ರ ನಮಗೆ ಬೇಕು’ ಎಂದು ಹೇಳಿದರು. ಅಂದರೆ ಇಂಥ ಚಿತ್ರ ಜನರಿಗೆ ಬೇಕು. ಆದರೆ ಅವರಿಗೆ ತಲುಪಿಸುವ ದಾರಿ ಕಠಿಣ ಇದೆ. ಚಿತ್ರಮಂದಿರದೊಳಗೆ ಜನರನ್ನು ಕರೆದುಕೊಂಡು ಬರುವುದೇ ಕಷ್ಟ. ಒಳಗೆ ಬಂದು ಈ ಚಿತ್ರವನ್ನು ನೋಡಿದವರಿಗೆ ಖಂಡಿತ ಇಷ್ಟವಾಗುತ್ತದೆ.

ವ್ಯಾಪಾರಿ ಚಿತ್ರಗಳಾದರೆ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದರೆ ಬದುಕಿತು, ಸೋತರೆ ಸತ್ತಂತೆಯೇ. ಆದರೆ ಇಂಥ ಚಿತ್ರಗಳು ಹಾಗಲ್ಲ. ನನ್ನ ಹಿಂದಿನ ಚಿತ್ರ ‘ಇಂಗಳೆ ಮಾರ್ಗ’ ಸಣ್ಣ ಬಜೆಟ್‌ನಲ್ಲಿ ಮಾಡಿದ ಸಿನಿಮಾ. ಆದರೆ ಇಂದಿಗೂ ಹಣಗಳಿಸುತ್ತಿದೆ. ಗಳಿಕೆ ಕೋಟಿಯ ರೂಪಾಯಿ ಸಮೀಪ ತಲುಪಿದೆ. ಪರ್ಯಾಯ ಚಿತ್ರಗಳನ್ನು ಜನರಿಗೆ ತಲುಪಿಸುವುದು ಹೇಗೆ ಎಂಬ ಕುರಿತು ನಾವು ಇನ್ನಷ್ಟು ದಾರಿಗಳನ್ನು ಹುಡುಕಿಕೊಳ್ಳಬೇಕು. 

ಅವೆಲ್ಲ ಬದಿಗಿಟ್ಟು ನೋಡಿದರೆ, ಇಂಥ ಚಿತ್ರಗಳಿಂದ ನಮಗೆ ಸಿಕ್ಕುವ ತೃಪ್ತಿ ತುಂಬ ದೊಡ್ಡದು. ಆ ತೃಪ್ತಿಗಾಗಿಯೇ ನಾನು ಇಂಥ ಸಿನಿಮಾಗಳನ್ನೇ ಮಾಡುವುದು.

***


-ವಿಶಾಲ್‌ ರಾಜ್‌

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !