ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಯಾವುದೇ ಟ್ವೀಟ್‌ಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿಲ್ಲ: ನಟಿ ಕಂಗನಾ ರನೌತ್

Last Updated 16 ಫೆಬ್ರುವರಿ 2021, 3:57 IST
ಅಕ್ಷರ ಗಾತ್ರ

ಮುಂಬೈ: ತನ್ನ ಯಾವುದೇ ಟ್ವೀಟ್‌ಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿಲ್ಲ ಅಥವಾ ಯಾವುದೇ ಕ್ರಿಮಿನಲ್ ಕೃತ್ಯಗಳಿಗೆ ಕಾರಣವಾಗಿಲ್ಲ ಎಂದಿರುವ ನಟಿ ಕಂಗನಾ ರನೌತ್, ದೇಶದ್ರೋಹ ಪ್ರಕರಣದ ಅಡಿಯಲ್ಲಿ ತಮ್ಮ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ತಮ್ಮ ವಕೀಲರ ಮೂಲಕ ಮನವಿ ಮಾಡಿದ್ದಾರೆ.

ಈ ಸಂಬಂಧ ಹೈಕೋರ್ಟ್ ಫೆಬ್ರುವರಿ 26ಕ್ಕೆ ವಿಚಾರಣೆ ನಡೆಸಲಿದ್ದು, ಅಲ್ಲಿಯವರೆಗೆ ಕಂಗನಾ ರನೌತ್ ಹಾಗೂ ಆಕೆಯ ಸಹೋದರಿ ರಂಗೋಲಿ ಬಂಧನದ ವಿರುದ್ಧ ಜಾರಿ ಮಾಡಲಾಗಿರುವ ಮಧ್ಯಂತರ ರಕ್ಷಣೆಯು ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ.

ಕಂಗನಾ ಅವರ ಪರ ವಕೀಲರಾದ ರಿಜ್ವಾನ್ ಸಿದ್ದಿಕಿ ಅವರು, ನ್ಯಾ. ಎಸ್ಎಸ್ ಶಿಂಧೆ ಹಾಗೂ ಮನೀಷ್ ಪಿಟಲೆ ಅವರಿದ್ದ ನ್ಯಾಯಪೀಠಕ್ಕೆ ತಮ್ಮ ಕಕ್ಷಿದಾರರು ಟ್ವೀಟ್ ಮೂಲಕ ಯಾವುದೇ ತಪ್ಪನ್ನೂ ಮಾಡಿಲ್ಲ. ದೇಶದ್ರೋಹ ಸೇರಿ ಇತರೆ ಆರೋಪದ ಮೇಲೆ ಕಂಗನಾ ವಿರುದ್ಧ ಎಫ್‌ಐಆರ್‌ ದಾಖಲಿಸುವುದಕ್ಕೆ ಅನುಮತಿ ನೀಡಿ ಬಾಂದ್ರಾ ಉಪನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಪ್ಪು ಮಾಡಿದೆ ಎಂದು ಎಂದು ವಾದ ಮಂಡಿಸಿದ್ದಾರೆ.

ಹೀಗಾಗಿ ಕೆಳ ನ್ಯಾಯಾಲಯದ ಆದೇಶ ಮತ್ತು ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಸಿದ್ದಿಕಿ ಅವರು ಹೈಕೋರ್ಟ್‌ಅನ್ನು ಒತ್ತಾಯಿಸಿದ್ದಾರೆ.

(ಬಾಂದ್ರಾ) ನ್ಯಾಯಾಲಯದ ಆದೇಶದಲ್ಲಿ ಯಾವುದೇ ಹುರುಳಿಲ್ಲ. ನನ್ನ ವಿರುದ್ಧ ಹೇರಿರುವ ಆರೋಪಗಳು ಮತ್ತು ಪ್ರಕರಣಗಳಲ್ಲಿ ಸಹ ಯಾವುದೇ ಅಪರಾಧವಿಲ್ಲ. ನನ್ನ ಯಾವುದೇ ಟ್ವೀಟ್‌ಗಳು ಕೂಡ ಸಾರ್ವಜನಿಕರನ್ನು ಹಿಂಸಾಚಾರಕ್ಕೆ ಇಳಿಯುವಂತೆ ಪ್ರಚೋದಿಸಿಲ್ಲ. ಈ ವಿಚಾರವಾಗಿ ನನಗೆ ಶಿಕ್ಷೆ ನೀಡುವುದು ಸರಿಯಲ್ಲ. ಟ್ವೀಟ್ ನಂತರ ಏನಾಯಿತು? ನನ್ನ ಟ್ವೀಟ್‌ಗಳ ನಂತರ ಯಾವುದೇ ಕ್ರಿಮಿನಲ್ ಕೃತ್ಯ ನಡೆದಿದೆಯೇ? ಎಂದು ಕಂಗನಾ ಪರ ಸಿದ್ದಿಕಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಮತ್ತು ನಂತರ ಮುಂಬೈ ಪೊಲೀಸರು ನೀಡಿದ ಸಮನ್ಸ್ ಅನ್ನು ನಟಿ ಮತ್ತು ಆಕೆಯ ಸಹೋದರಿ ರಂಗೋಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಕಾಸ್ಟಿಂಗ್ ಡೈರೆಕ್ಟರ್ ಹಾಗೂ ಫಿಟ್ನೆಸ್ ಟ್ರೈನರ್ ಮುನ್ನಾವರ್ ಅಲಿ ಸಯ್ಯದ್ ಎಂಬುವವರು ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿಯ ಟ್ವೀಟ್‌ಗಳನ್ನು ಉಲ್ಲೇಖಿಸಿ, ಇವರಿಬ್ಬರೂ ತಮ್ಮ ಟ್ವೀಟ್‌ ಮೂಲಕ ದ್ವೇಷವನ್ನು ಹರಡುತ್ತಿದ್ದಾರೆ ಮತ್ತು ಇದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮ್ಯಾಜಿಸ್ಟ್ರೇಟ್ ಕೋರ್ಟ್ ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಿತ್ತು. ಈ ಅನ್ವಯ ಕಳೆದ ಅಕ್ಟೋಬರ್‌ನಲ್ಲಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT