ಮನಸು ತಟ್ಟಬೇಕು; ಅಂಥ ಸಿನಿಮಾ ಕಟ್ಟಬೇಕು

7
‘ಕಥೆಯೊಂದು ಶುರುವಾಗಿದೆ’ ನಿರ್ದೇಶಕ ಸೆನ್ನಾ ಹೆಗಡೆ ಸಂದರ್ಶನ

ಮನಸು ತಟ್ಟಬೇಕು; ಅಂಥ ಸಿನಿಮಾ ಕಟ್ಟಬೇಕು

Published:
Updated:
Deccan Herald

‘ಈ ಸಿನಿಮಾದ ಸರಳತೆ ಬೆರಗು ಹುಟ್ಟಿಸುತ್ತದೆ. ಬರೀ ಏಳು ಲಕ್ಷ ರೂಪಾಯಿಗಳಿಗೆ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ನಂಬಲೇ ಸಾಧ್ಯವಿಲ್ಲ’ – ಹೀಗೆ ಉದ್ಘಾರ ತೆಗೆದಿದ್ದು ಜನಪ್ರಿಯ ನಿರ್ದೇಶಕ ಅನುರಾಗ್‌ ಕಶ್ಯಪ್‌. ಅವರ ಅಚ್ಚರಿಗೆ ಕಾರಣವಾದ ಸಿನಿಮಾದ ಹೆಸರು ‘0–41’. ಅದು 2016ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ. ನಂತರದ ದಿನಗಳಲ್ಲಿ ಆ ಸಿನಿಮಾ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತು. ನಿರ್ದೇಶಕರಿಗೂ ಸಾಕಷ್ಟು ಹೆಸರು ತಂದುಕೊಟ್ಟಿತು.

ಮಲಯಾಳಂ ಸಿನಿಮಾಗೂ, ಅನುರಾಗ್‌ ಕಶ್ಯಪ್‌ ಹೇಳಿಕೆಗೂ, ಕನ್ನಡ ಚಿತ್ರರಂಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಖಂಡಿತ ಸಂಬಂಧ ಇದೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಈ ಮಟ್ಟಿಗೆ ಸದ್ದು ಮಾಡಿದ ನಿರ್ದೇಶಕ ಸೆನ್ನಾ ಹೆಗಡೆ ಅವರು ತಮ್ಮ ಎರಡನೇ ಸಿನಿಮಾ ಮಾಡಿರುವುದು ಕನ್ನಡದಲ್ಲಿ. ಸೆನ್ನಾ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಸಿನಿಮಾ ಆಗಸ್ಟ್‌ 3ರಂದು ಬಿಡುಗಡೆಯಾಗಲಿದೆ. ಟ್ರೇಲರ್‌, ಹಾಡುಗಳ ಮೂಲಕ ಬಿಡುಗಡೆಗೂ ಮುನ್ನವೇ ಚಿತ್ರ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇಲ್ಲಿಂದ ತನ್ನ ಬದುಕಿನ ಹೊಸ ಅಧ್ಯಾಯವೊಂದು ಶುರುವಾಗಲಿದೆ ಎಂಬ ನಂಬಿಕೆಯಲ್ಲಿ ನಿರ್ದೇಶಕರಿದ್ದಾರೆ.

‘ನಾನು ಕನ್ನಡಿಗ’ ಎಂದೇ ತಮ್ಮನ್ನು ಪರಿಚಯಿಸಿಕೊಳ್ಳುವ ಸೆನ್ನಾ ಅವರು ಕಾಸರಗೋಡಿನ ಕಾಞಂಗಾಡ್‌ನವರು. ಮಂಗಳೂರು, ಆಸ್ಟ್ರೇಲಿಯಾಗಳಲ್ಲಿ ವ್ಯಾಸಾಂಗ ಮಾಡಿದ ಅವರು ಎಂಟು ವರ್ಷಗಳ ಕಾಲ ಅಮೆರಿಕದಲ್ಲಿ ಜಾಹೀರಾತು ಕ್ಷೇತ್ರದಲ್ಲಿ ಕ್ರಿಯೆಟೀವ್ ಡೈರೆಕ್ಟರ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆ ಅನುಭವದ ಬಲದೊಂದಿಗೆ ಊರಿಗೆ ಮರಳಿದ ಅವರ ಮನಸಲ್ಲಿ ಸಿನಿಮಾ ಮಾಡುವ ಆಸೆ ಗಟ್ಟಿ ಬೇರೂರಿತ್ತು. ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಯನ್ನು ಬಲ್ಲ ಅವರಿಗೆ ಕನ್ನಡದಲ್ಲಿಯೇ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ ಸೂಕ್ತ ಅವಕಾಶ ಮತ್ತು ವೇದಿಕೆ ಮೊದಲು ದೊರಕಿದ್ದು ಮಲಯಾಳಂನಲ್ಲಿ.

‘‘0–41’ ಸಿನಿಮಾದಲ್ಲಿ ನನ್ನ ಊರಿನವರು, ನೆರೆ–ಹೊರೆಯವರೇ ನಟರಾಗಿದ್ದರು. ಅವರ‍್ಯಾರೂ ವೃತ್ತಿಪರ ಕಲಾವಿದರಲ್ಲ. ಆದ್ದರಿಂದಲೇ ಆ ಸಿನಿಮಾದಲ್ಲೊಂದು ಮುಗ್ಧತೆ ಇತ್ತು. ತುಂಬ ಮೆಚ್ಚುಗೆಯನ್ನೂ ಗಳಿಸಿತು. ನನಗೆ ರಕ್ಷಿತ್ ಶೆಟ್ಟಿ ಹಳೆಯ ಪರಿಚಯ. ‘ಉಳಿದವರು ಕಂಡಂತೆ’ ಚಿತ್ರಕ್ಕೆ ನಾನು ಸ್ಕ್ರಿಫ್ಟ್‌ ಕನ್ಸಲ್ಟಂಟ್‌ ಆಗಿ ಕೆಲಸ ಮಾಡಿದ್ದೆ. ನಂತರವೂ ಸಾಕಷ್ಟು ವಿಷಯ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ನನ್ನ ಮೊದಲ ಸಿನಿಮಾಕ್ಕೆ ಕೆಲಸ ಮಾಡುತ್ತಿರುವಾಗಲೇ ರಕ್ಷಿತ್, ಕನ್ನಡದ ಸಿನಿಮಾಗೆ ಕೆಲಸ ಮಾಡಿ ಎಂದು ಒತ್ತಾಯಿಸುತ್ತಿದ್ದರು. ಮೊದಲ ಸಿನಿಮಾ ಮುಗಿದ ಮೇಲೆ ‘ಕಥೆಯೊಂದು ಶುರುವಾಗಿದೆ’ ಸಿನಿಮಾದ ಕಥೆಯ ಎಳೆಯ ಮೇಲೆ ಕೆಲಸ ಮಾಡತೊಡಗಿದೆ’’ ಎಂದು ಮಲಯಾಳಂನಿಂದ ಕನ್ನಡಕ್ಕೆ ಹೊರಳಿಕೊಂಡ ಸಂದರ್ಭವನ್ನು ಅವರು ವಿವರಿಸುತ್ತಾರೆ. ಬರವಣಿಗೆಯ ಹಂತದಲ್ಲಿಯೇ ಅವರ ಮನಸ್ಸಿನಲ್ಲಿ ಕಥೆಯ ನಾಯಕನ ಪಾತ್ರದಲ್ಲಿ ದಿಗಂತ್‌ ಇದ್ದರು. 

‘‘ಚಿತ್ರಕಥೆಯನ್ನು ಬರೆದು ರಕ್ಷಿತ್ ಶೆಟ್ಟಿಗೆ ಹೇಳಿದಾಗ ಅವರಿಗೆ ತುಂಬ ಇಷ್ಟವಾಯ್ತು. ಅವರೇ ದಿಗಂತ್ ನಂಬರ್‌ ಕೊಟ್ಟು ಮಾತಾಡಲು ಹೇಳಿದರು. ಕಥೆ ಹೇಳಲು ಶುರುಮಾಡಿದ ಐದತ್ತು ನಿಮಿಷಕ್ಕೇ ದಿಗಂತ್ ‘ಎಲ್ಲಿ ಸಹಿ ಮಾಡಲಿ?’ ಎಂದು ಕೇಳಿದರು. ಅವರಿಗೆ ಅಷ್ಟು ಇಷ್ಟ ಆಗಿತ್ತು. ನಂತರ ಆಡಿಷನ್ ಮಾಡಿ ಪೂಜಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡೆವು’’ ಎಂದು ಅವರು ಪಾತ್ರಗಳ ಆಯ್ಕೆಯ ಕುರಿತು ವಿವರಿಸುವರು. ನಾಯಕಿಯಾಗಿ ಆಯ್ಕೆಯಾದಾಗ ಸೆನ್ನಾ ಹಾಕಿದ ಷರತ್ತು ಒಂದೇ. ‘ನೀವು ಚಿತ್ರೀಕರಣದ ಸಮಯಕ್ಕೆ ಕನ್ನಡ ಕಲಿತಿರಬೇಕು’ ಎಂದು. ‘ಅದನ್ನು ಒಪ್ಪಿಕೊಂಡ ಪೂಜಾ ಬಹುಬೇಗನೇ ಚೆನ್ನಾಗಿ ಕನ್ನಡ ಮಾತಾಡಲು ಕಲಿತರು. ಆದ್ದರಿಂದಲೇ ಸಿಂಕ್‌ ಸೌಂಡ್‌ನಲ್ಲಿ ಸಿನಿಮಾ ಮಾಡಲು ಸಾಧ್ಯವಾಯ್ತು’ ಎಂದು ಅವರು ಖುಷಿಯಿಂದಲೇ ಹೇಳುತ್ತಾರೆ. ‘ಕಥೆಯೊಂದು ಶುರುವಾಗಿದೆ’ ಚಿತ್ರದ ಶೇ 90ರಷ್ಟು ಭಾಗ ಸಿಂಕ್‌ ಸೌಂಡ್‌ನಲ್ಲಿಯೇ ಚಿತ್ರೀಕರಿಸಲಾಗಿದೆ. 

‘ಇದು ತುಂಬ ಸಹಜವಾದ ಸಿನಿಮಾ. ನಗರ ಬದುಕಿನ ಕಥೆಯನ್ನು ಹೊಂದಿದೆ. ತುಂಬ ಸರಳವಾದ ಕಥೆಯನ್ನು ಇಟ್ಟುಕೊಂಡು, ಪಾತ್ರಗಳನ್ನೇ ಪ್ರಧಾನವಾಗಿ ಮಾಡಿದ ಸಿನಿಮಾ ಇದು. ಐಟಂ ಸಾಂಗ್‌, ಡಿಶ್ಯೂಂ ಡಿಶ್ಯೂಂ ಏನೂ ಇಲ್ಲ. ಗದ್ದಲ ಇಲ್ಲ, ಕಿರುಚಾಡುವುದಿಲ್ಲ. ಸಂಭಾಷಣೆ, ಸಂವೇದನೆಗಳನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ್ದೇವೆ. ಇದು ಇಂದಿನ ಕನ್ನಡ ಚಿತ್ರರಂಗದಲ್ಲಿ ಎಲ್ಲಿ ನಿಂತುಕೊಳ್ಳುತ್ತದೆ ಎಂದು ಕೇಳಿದರೆ ನನಗೂ ಗೊತ್ತಿಲ್ಲ. ಬಹುಶಃ ಚಿತ್ರ ಬಿಡುಗಡೆಯಾದ ಮೇಲೆ ಜನರೇ ಅದನ್ನು ನಿರ್ಧರಿಸುತ್ತಾರೆ. ಈ ಚಿತ್ರಕ್ಕೊಂದು ಸ್ಥಾನ ಇದ್ದೇ ಇದೆ ಎಂಬ ನಂಬಿಕೆಯಂತೂ ಇದೆ’ ಎಂದು ವಿನಯದ ಜತೆಗೆ ವಿಶ್ವಾಸವನ್ನೂ ಬೆರೆಸಿಯೇ ಹೇಳುವ ಸೆನ್ನಾ ಅವರ ಪ್ರಕಾರ ‘ಇದೊಂದು ಒಳ್ಳೆಯ ಪ್ರಣಯಕಥನ.’ ಮನುಷ್ಯನ ಬದುಕಿನ ನಾಲ್ಕು ಹಂತಗಳಲ್ಲಿ ಆಗುವ ಬದಲಾವಣೆಗಳನ್ನು ಹಿಡಿದಿಡುವ ಪ್ರಯತ್ನ ಅವರದು. 

‘ನನಗೆ ಒಂದು ಸಿನಿಮಾ, ಭಾವನಾತ್ಮಕವಾಗಿ ಮುಟ್ಟುವುದು ತುಂಬ ಮುಖ್ಯ ಎನಿಸುತ್ತದೆ. ಕಥೆ ಎರಡೇ ಸಾಲಿನಲ್ಲಿರಲಿ, ಎರಡು ನೂರು ಪುಟಗಳಲ್ಲಿರಲಿ. ಭಾವನಾತ್ಮಕವಾಗಿ ಮುಟ್ಟಿದರೆ ಮಾತ್ರ ಇಷ್ಟವಾಗುತ್ತದೆ. ಸಿನಿಮಾ ಮಾಡಲು ನೂರು ದಾರಿಗಳಿವೆ. ಪ್ರಕಾರಗಳಿವೆ. ಇದು ಸರಿ, ಇದು ತಪ್ಪು ಎಂದು ಹೇಳುವುದು ಕಷ್ಟ. ಆದರೆ ಯಾವುದೇ ದಾರಿಯಲ್ಲಾದರೂ ನಿರ್ದೇಶಕ ಪ್ರೇಕ್ಷಕನ್ನು ಎಷ್ಟು ಭಾವನಾತ್ಮಕವಾಗಿ ತಲುಪುತ್ತಾನೆ ಎನ್ನುವುದರ ಮೇಲೆ ಸಿನಿಮಾದ ಯಶಸ್ಸು– ವೈಫಲ್ಯ ನಿರ್ಧರಿತವಾಗುತ್ತದೆ. ನನ್ನ ಸಿನಿಮಾದಲ್ಲಿಯೂ ಎರಡು ಗಂಟೆ ಹದಿನೈದು ನಿಮಿಷಗಳ ಕಾಲ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಎಂಗೇಜ್‌ ಮಾಡಲು ಪ್ರಯತ್ನಿಸಿದ್ದೇನೆ’ ಎಂದು ಅವರು ತಮ್ಮ ಸಿನಿಮಾದ ಚಹರೆಗಳನ್ನು ಅಸ್ಪಷ್ಟವಾಗಿ ತೆರೆದಿಡುತ್ತಾರೆ.  

ಕಾಸರಗೋಡಿನಲ್ಲಿ ಬೆಳೆದವರಾಗಿದ್ದರಿಂದ ಮಲಯಾಳಂ ಭಾಷೆಯ ಪರಿಸರ, ಸ್ನೇಹಿತರ ಪರಿಚಯವೂ ಸೆನ್ನಾ ಅವರಿಗೆ ಚೆನ್ನಾಗಿಯೇ ಇದೆ. ಮಲಯಾಳಂ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದವರು ಅವರು. ‘ನನಗೆ ವಾಸ್ತವ ಬದುಕಿಗೆ ಹೆಚ್ಚು ಹತ್ತಿರವಾದ ಚಿತ್ರಗಳೆಂದರೆ ಇಷ್ಟ. ಮಲಯಾಳಂನ ಬಹುತೇಕ ಸಿನಿಮಾಗಳು ತುಂಬ ವಾಸ್ತವ ಬದುಕಿಗೆ ಹತ್ತಿರವಾಗಿರುತ್ತದೆ. ಇಂಥ ಸಿನಿಮಾಗಳಿಂದ ನಾನು ತುಂಬ ಪ್ರಭಾವಿತನಾಗಿದ್ದೇನೆ. ಆದರೆ ನನಗೆ ಮೊದಲ ಸಿನಿಮಾನೇ ಕನ್ನಡದಲ್ಲಿ ಮಾಡಬೇಕು ಎಂಬ ಆಸೆ ಇತ್ತು. ಆದರೆ ಅದು ಮಲಯಾಳಂನಲ್ಲಿ ಆಯಿತು. ರಕ್ಷಿತ್‌ ಬೆಂಬಲದಿಂದ ಈಗ ಎರಡನೇ ಸಿನಿಮಾ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದೇನೆ’ ಎಂದು ತಮ್ಮ ಬೇರು ಮತ್ತು ಕನಸುಗಳ ಕುರಿತು ಹೇಳುತ್ತಾರೆ ಸೆನ್ನಾ.

ಕನ್ನಡ ಮತ್ತು ಮಲಯಾಳಂ ಎರಡೂ ಚಿತ್ರರಂಗವನ್ನು ಬಲ್ಲ ಸೆನ್ನಾ ಅವರಿಗೆ ‘ಎರಡನ್ನೂ ಅಕ್ಕ ಪಕ್ಕ ಇಟ್ಟು ನೋಡಿದರೆ ಏನನಿಸುತ್ತದೆ?’ ಎಂದು ಕೇಳಿದರೆ ತುಸು ಗಂಭೀರವಾಗಿಯೇ ಉತ್ತರಿಸುತ್ತಾರೆ. 

‘80–90ರ ದಶಕಗಳು ಕನ್ನಡ ಚಿತ್ರರಂಗದ ಸುವರ್ಣಯುಗ. ಆಗ ಮಲಯಾಳಂ ಸಿನಿಮಾಗಳಿಗಿಂತಲೂ ಹೆಚ್ಚು ಕನ್ನಡ ಸಿನಿಮಾಗಳಿಗೆ ಹೆಸರಿತ್ತು. ಕಳೆದ ಹತ್ತು ವರ್ಷಗಳಲ್ಲಿ ಮಲಯಾಳಂನಲ್ಲಿ ಅಂಥ ಸುವರ್ಣಯುವ ಆರಂಭವಾಗಿದೆ. ತುಂಬ ಒಳ್ಳೆಯ ಪ್ರಯತ್ನಗಳು ನಡೆಯುತ್ತಿವೆ. ಪ್ರತಿಯೊಂದು ಚಿತ್ರರಂಗಕ್ಕೂ ಅದರ ಉತ್ಕೃಷ್ಟ ಕಾಲ ಇರುತ್ತದೆ. ಈಗ ಕೆಲವು ವರ್ಷಗಳಿಂದ ಕನ್ನಡದಲ್ಲಿಯೂ ಅಂಥ ಉತ್ಕೃಷ್ಟತೆಯ ಎಚ್ಚರ ಕಾಣಿಸಿಕೊಳ್ಳುತ್ತಿದೆ. ರಾಮಾ ರಾಮಾ ರೇ, ಒಂದು ಮೊಟ್ಟೆಯ ಕಥೆ, ಗುಳ್ಟು ಚಿತ್ರಗಳು ಒಳ್ಳೆಯ ಸಿನಿಮಾಗಳು. ಜನರೂ ಅವನ್ನು ನೋಡಿದ್ದಾರೆ. ಅಂಥ ಎಚ್ಚರ ಪ್ರೇಕ್ಷಕರಲ್ಲಿಯೂ ಮೂಡುತ್ತಿದೆ’ ಎಂದು ಕನ್ನಡದ ನಾಳೆಗಳ ಕುರಿತು ಭರವಸೆಯ ಮಾತನಾಡುತ್ತಾರೆ.

 ಕನ್ನಡದ ಮೇಲೆ ತುಸು ಹೆಚ್ಚೇ ಮಮಕಾರ ಇದ್ದರೂ ತಾವು ಯಾವುದೇ ಒಂದು ಭಾಷೆಗೆ ತಮ್ಮನ್ನು ಮಿತಿಗೊಳಿಸಿಕೊಳ್ಳುವುದಿಲ್ಲ ಎಂದೂ ಸೆನ್ನಾ ಹೇಳುತ್ತಾರೆ. ಕನ್ನಡ, ತುಳು, ಮಲಯಾಳಂ ಈ ಮೂರು ಭಾಷೆಗಳು ನನಗೆ ಗೊತ್ತು. ಆದ್ದರಿಂದ ನಾನು ಈ ಮೂರು ಭಾಷೆಗಳಲ್ಲಿ ಸಿನಿಮಾ ಮಾಡಬಲ್ಲೆ. ನಾನು ಮೊದಲು ಇಂಗ್ಲಿಷಿನಲ್ಲಿ ಕಥೆಯನ್ನು ಬರೆದುಕೊಳ್ಳುತ್ತೇನೆ. ನಂತರ ಅದು ಯಾವ ಭಾಷೆಯ ಜಾಯಮಾನಕ್ಕೆ ಹೆಚ್ಚು ಹೊಂದುತ್ತದೆ ಎಂದು ಯೋಚಿಸಿ, ನಿರ್ಧರಿಸುತ್ತೇನೆ’ ಎನ್ನುವ ಸೆನ್ನಾ ಸದ್ಯಕ್ಕಂತೂ ‘ಕಥೆಯೊಂದು ಶುರುವಾಗಿದೆ’ ಚಿತ್ರದ ಹೊರತು ಇನ್ನೇನೂ ಯೋಚಿಸುವ ಸ್ಥಿತಿಯಲ್ಲೂ ಇಲ್ಲ. ‘ಆದರೆ ಇನ್ನೊಂದಿಷ್ಟು ಕನ್ನಡ ಸಿನಿಮಾಗಳನ್ನು ಮಾಡುವ ಆಸೆಯಂತೂ ನನಗಿದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !