ಬುಧವಾರ, ಏಪ್ರಿಲ್ 21, 2021
24 °C

‘ಸೆಪ್ಟೆಂಬರ್ 10’ ಚಿತ್ರದ ಟೀಸರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾವನಾತ್ಮಕ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಸಾಯಿಪ್ರಕಾಶ್ ಅವರು ಮೊದಲಬಾರಿಗೆ ಸಾಮಾಜಿಕ ಸಂದೇಶ ಇರುವ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ.‘ಸೆಪ್ಟೆಂಬರ್‌ 10’ ಹೆಸರಿನ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಸೆ.10 ವಿಶ್ವ ಆತ್ಮಹತ್ಯೆ ತಡೆ ದಿನವೆಂದು ಘೋಷಿಸಲಾಗಿದೆ. ಅದೇ ದಿನಾಂಕವನ್ನು ಚಿತ್ರದ ಶೀರ್ಷಿಕೆಯನ್ನಾಗಿ ಬಳಕೆ ಮಾಡಲಾಗಿದೆ. ತೆಲಂಗಾಣದ ಕ್ಯಾಪ್ಟನ್ ಜಿ.ಜಿ.ರಾವ್ ಅವರು ಇತ್ತೀಚೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ ಒಂದು ಪುಸ್ತಕವನ್ನು ಬರೆದಿದ್ದರು. ಅದೇ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಸಾಯಿಪ್ರಕಾಶ್ ಅವರು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುವಂಥ ಅನೇಕ ವಿಚಾರಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. 

ಚಿತ್ರದ ಟೀಸರ್ ಬಿಡುಗಡೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ನಿರ್ದೇಶಕ ಸಾಯಿಪ್ರಕಾಶ್, ತಮ್ಮ ಶ್ರೀದೇವಿ ಫಿಲಂಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಪಕರೂ ಆಗಿದ್ದಾರೆ. ಏಳು ಪ್ರಕರಣಗಳನ್ನಿಟ್ಟುಕೊಂಡು, ವಿಭಿನ್ನ ಸ್ಥಿತಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಹೇಗೆ ತಪ್ಪಿಸಬಹುದು ಎಂದು ಹೇಳಿದ್ದಾರೆ.‘ಈವರೆಗೆ ಸಾಕಷ್ಟು ಸೆಂಟಿಮೆಂಟ್, ಕಮರ್ಷಿಯಲ್, ಕಾಮಿಡಿ ಚಿತ್ರಗಳನ್ನು ಮಾಡಿದ್ದು, ಈ ಬಾರಿ ಜಾಗೃತಿ ಮೂಡಿಸುವ ಚಿತ್ರ ನಿರ್ಮಿಸಿದ್ದೇನೆ. ಸಾಲದ ಹೊರೆಯಿಂದ ರೈತರು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, ಹಿರಿಯರ ವಿರೋಧ ಎದುರಿಸಲಾರದ ಪ್ರೇಮಿಗಳು, ಕುಟುಂಬದ ಹೊರೆ ತಾಳಲಾಗದವರು, ಸಾಲ ಬಾಧೆಯಿಂದ ಬೇಸತ್ತವರು, ಇಂಥವರೆಲ್ಲ ದುಡುಕಿನಿಂದ ಆತ್ಮಹತ್ಯೆ ನಿರ್ಧಾರ ಕೈಗೊಳ್ಳುವುದು ತಪ್ಪು ಎಂದು ಹೇಳಲು ಪ್ರಯತ್ನಿಸಿದ್ದೇನೆ. ನಮ್ಮ ಚಿತ್ರ ನೋಡಿ ನೂರರಲ್ಲಿ ಒಬ್ಬರಾದರೂ ತಮ್ಮ ನಿರ್ಧಾರ ಬದಲಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ’ ಎಂದು ಸಾಯಿಪ್ರಕಾಶ್ ಅವರು ಹೇಳಿದರು.

ಹಿರಿಯ ನಟ ಶಶಿಕುಮಾರ್ ಅವರು ಚಿತ್ರದಲ್ಲಿ ಒಬ್ಬ ಮನಃಶಾಸ್ತ್ರಜ್ಞನ ಪಾತ್ರ ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಹಿರಿಯನಟ ರಮೇಶ್‌ಭಟ್ ವಕೀಲನ ಪಾತ್ರ ನಿರ್ವಹಿಸಿದರೆ, ಬಿ.ಜಿ.ರವೀಂದ್ರನಾಥ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಹಿಕಹಿ ಚಂದ್ರು ಮುಸ್ಲಿಂ ಮುಖಂಡರಾಗಿ, ಚರ್ಚ್ ಫಾದರ್ ಆಗಿ ಶಿವಕುಮಾರ್ ಹಾಗೂ ಯುವ ಪ್ರೇಮಿಗಳಾಗಿ ಜಯಸಿಂಹ ಹಾಗೂ ಆರಾಧ್ಯ ನಟಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು