ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆ: ಸತ್ಯಾಳ ಹಾದಿಯಲ್ಲಿ ಗೌತಮಿ

Last Updated 14 ಜನವರಿ 2021, 19:45 IST
ಅಕ್ಷರ ಗಾತ್ರ

ಆಕೆ ಬಾಲ್ಯದಿಂದಲೂ ನಟನೆಯ ಕನಸು ಕಂಡವರಲ್ಲ. ಆದರೆ ನೃತ್ಯದ ಮೇಲೆ ಅವರಿಗೆ ಒಲವು. ತಾವು ಶಾಲಾ ದಿನಗಳಲ್ಲಿ ಜಿಮ್ನಾಸ್ಟಿಕ್ ತರಗತಿಗೆ ಹೋಗುತ್ತಿದ್ದಾಗ ಅಲ್ಲಿಗೆ ಸಿನಿರಂಗದವರೂ ಬರುತ್ತಿದ್ದರು. ಅವರನ್ನು ನೋಡುತ್ತಾ ನೋಡುತ್ತಾ ಇವರಿಗೂ ನಟನೆಯ ಮೇಲೆ ಒಲವು ಮೂಡಿತ್ತು. ಆ ಒಲವು ನಟನೆಯ ಹಾದಿಯಲ್ಲಿ ಮುಂದೆ ಸಾಗುವಂತೆ ಮಾಡಿತ್ತು. ಇದು ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿಯ ಸತ್ಯಳ ನಿಜ ಜೀವನದ ಕಥೆ.

ಸತ್ಯ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿರುವ ಗೌತಮಿ ಜಾದವ್ ಬೆಂಗಳೂರಿನವರು. ಇವರು ಮೊದಲು ನಟಿಸಿದ್ದು ‘ನಾಗಪಂಚಮಿ’ ಧಾರಾವಾಹಿಯಲ್ಲಿ. ಸತ್ಯ ಇವರ ಎರಡನೇ ಧಾರಾವಾಹಿ. ರಗಡ್‌ ಲುಕ್‌, ನೇರ ಮಾತು, ಅನ್ಯಾಯದ ವಿರುದ್ಧ ಹೋರಾಡುವ ದಿಟ್ಟ ಹುಡುಗಿ ಸತ್ಯ. ಇವರು ತಮ್ಮ ಸತ್ಯ ಪಾತ್ರ ಹಾಗೂ ಧಾರಾವಾಹಿ ಬಗ್ಗೆ ‘ಪ್ರಜಾಪ್ಲಸ್’ ಜೊತೆ ಮಾತನಾಡಿದ್ದಾರೆ.

ನಟನೆಯ ಆರಂಭದ ದಿನಗಳು
ನಾನು ನಾಗಪಂಚಮಿ ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿರಿಸಿದ್ದು. ನನ್ನ ಸ್ನೇಹಿತೆಯೊಬ್ಬಳು ಆಡಿಷನ್ ಬಗ್ಗೆ ಹೇಳಿದ್ದಳು. ಆಡಿಷನ್ ನೀಡಿ ಧಾರಾವಾಹಿಗೆ ಆಯ್ಕೆ ಆಗಿದ್ದೆ. ಅದರಲ್ಲಿ ನನ್ನದು ಮುಖ್ಯಪಾತ್ರವೇ ಆಗಿತ್ತು. ನಾನು ನಟನೆಯ ಎಬಿಸಿಡಿ ಕಲಿತಿದ್ದು ಆ ಧಾರಾವಾಹಿಯಿಂದಲೇ ಅಂತ ಹೇಳಬಹುದು. ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಭಯವಿತ್ತು, ಗೊಂದಲಗಳಾಗುತ್ತಿದ್ದವು, ಆದರೆ ನಟನೆಯಲ್ಲಿ ಪಳಗಿದಂತೆ ನಟನೆಯನ್ನು ಎಂಜಾಯ್ ಮಾಡುತ್ತಿದ್ದೆ ಎಂದು ಆರಂಭದ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಗೌತಮಿ.

ಸತ್ಯ ಧಾರಾವಾಹಿ ಬಗ್ಗೆ
‘ಸತ್ಯ ಇಡೀ ಧಾರಾವಾಹಿ ‘ಸತ್ಯ’ ಪಾತ್ರದ ಮೇಲೆಯೇ ಸಾಗುತ್ತದೆ. ಸತ್ಯ ಪಾತ್ರ ಎಷ್ಟು ಸ್ಟ್ರಾಂಗ್‌ ಆಗಿದೆಯೋ ಕಥೆ ಕೂಡ ಅಷ್ಟೇ ಸ್ಟ್ರಾಂಗ್ ಆಗಿದೆ. ಇಲ್ಲಿ ನಿಜವಾದ ಹೀರೊ, ಹೀರೊಯಿನ್ ಕಥೆಯೇ ಎಂಬುದು ನನ್ನ ಅನಿಸಿಕೆ. ಪ್ರತಿ ಎಪಿಸೋಡ್‌ನಲ್ಲೂ ಬೇರೆ ಬೇರೆ ರೀತಿಯ ತಿರುವುಗಳಿವೆ. ನನ್ನದು ಇದರಲ್ಲಿ ಟಾಮ್ ಬಾಯ್ ಪಾತ್ರ.

ಸತ್ಯ ಸತ್ಯದ ಪರವಾಗಿ ಹೋರಾಡುವ, ಅನ್ಯಾಯ ವಿರುದ್ಧ ಸಿಡಿದು ನಿಲ್ಲುವ ಹುಡುಗಿ. ಹುಡುಗಿಯಾಗಿದ್ದರೂ ಹುಡುಗನಂತೆಯೇ ಇರುವುದು ಅವಳ ಸ್ಪೆಷಾಲಿಟಿ. ಧಾರಾವಾಹಿ ಕಥೆ ಕೇಳಿದಾಗ ಇಂತಹದೊಂದ್ದು ಪಾತ್ರ ಮಾಡಲೇಬೇಕು ಎಂಬ ಆಸೆ ನನ್ನಲ್ಲಿ ಚಿಗುರೊಡೆದಿತ್ತು. ನಟನಾ ಕ್ಷೇತ್ರದಲ್ಲಿರುವವರಿಗೆ ಸದಾ ಭಿನ್ನ ‍ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಇರುತ್ತದೆ. ಸತ್ಯ ತುಂಬಾ ಭಿನ್ನವಾಗಿರುವ ಪಾತ್ರ. ಮೊದಲು ಎಷ್ಟೇ ಕಷ್ಟವಾದ್ರು ಈ ಪಾತ್ರ ಮಾಡಲೇಬೇಕು ಎಂಬ ಆಸೆ ಇತ್ತು. ಮೊದ ಮೊದಲು ಭಯವಿತ್ತು, ಯಾಕೆಂದರೆ ಇದು ನನ್ನ ವೈಯಕ್ತಿಕ ಜೀವನಕ್ಕೆ ವಿರುದ್ಧವಾದ ಪಾತ್ರ. ಆದರೆ ನಟಿಸುತ್ತಾ ನಟಿಸುತ್ತಾ ಪಾತ್ರವೇ ನಾನಾಗಿದ್ದೇನೆ’ ಎಂದು ಸತ್ಯ ಪಾತ್ರದ ವಿವರಣೆ ನೀಡುತ್ತಾರೆ ಈ ಬೆಡಗಿ.

ಸಂದೇಶ ನೀಡುವ ಪಾತ್ರ
ಸಾಮಾನ್ಯವಾಗಿ ಧಾರಾವಾಹಿ ಎಂದರೆ ಮನರಂಜನೆ ಎನ್ನಬಹುದು. ಆದರೆ ಈಗಿನ ಧಾರಾವಾಹಿಯಲ್ಲಿ ಮನರಂಜನೆಯೊಂದಿಗೆ ಒಂದಿಷ್ಟು ಮಾಹಿತಿ ಇರುತ್ತದೆ, ಜೊತೆಗೆ ಸಮಾಜಕ್ಕೆ ಒಂದು ಸಂದೇಶವಿರುತ್ತದೆ. ನಮ್ಮ ಧಾರಾವಾಹಿಯಲ್ಲೂ ಇಂತಹದ್ದೇ ಸಂದೇಶವಿದೆ. ಒಬ್ಬ ಹುಡುಗಿ ಹುಡುಗನಾಗಿ ಎಲ್ಲವನ್ನೂ ಹೇಗೆ ನಿಭಾಯಿಸಬಹುದು ಎಂಬುದನ್ನು ಈ ಧಾರಾವಾಹಿ ತೋರಿಸುತ್ತಿದೆ. ಕಣ್ಣೆದುರು ನಡೆಯುವ ಅನ್ಯಾಯವನ್ನು ಎದುರಿಸಿ, ಜನರನ್ನು ಸತ್ಯದ ಪರವಾಗಿ ನಡೆಯುವಂತೆ ಮಾಡುವ ಹುಡುಗಿ ಸತ್ಯ.

ಪಾತ್ರದ ಸವಾಲುಗಳು
ಧಾರಾವಾಹಿಯಲ್ಲಿ ನನಗೆ ನಿಜಕ್ಕೂ ಸವಾಲು ಎನ್ನಿಸಿದ್ದು ಬೈಕ್ ಓಡಿಸುವುದು. ವೈಯಕ್ತಿಕ ಜೀವನದಲ್ಲಿ ಮನೆಗೆ ಹತ್ತಿರವಿರುವ ರಸ್ತೆಗಳಲ್ಲಷ್ಟೇ ಮೊಪೆಡ್ ಓಡಿಸುತ್ತಿದ್ದ ನಾನು ಗೇರ್ ಗಾಡಿ ಕಲಿಯಬೇಕು, ಅದನ್ನು ಓಡಿಸಬೇಕು, ಅದರೊಂದಿಗೆ ಬೈಕ್ ಓಡಿಸು‌ತ್ತಾ ಭಾವಾಭಿನಯಗಳನ್ನು ಮಾಡಬೇಕು ಎನ್ನುವುದು ನನಗೆ ಸವಾಲಾಗಿತ್ತು. ಈಗಲೂ ಬೈಕ್ ಎಂದರೆ ಒಂದು ರೀತಿ ಭಯವಾಗುತ್ತದೆ. ಅದು ಬಿಟ್ಟರೆ ಜಿಮ್ನಾಸ್ಟಿಕ್ ಗೊತ್ತಿರುವುದರಿಂದ ಫೈಟ್ ಎಲ್ಲ ಸ್ವಲ್ಪ ಸುಲಭವಾಗಿತ್ತು. ಒಟ್ಟಾರೆ ಆ ಪಾತ್ರವೇ ಒಂದು ರೀತಿ ಚಾಲೆಂಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT