ಕಾಲೇಜು ಹುಡುಗನ ಪಾತ್ರಕ್ಕೆ ಹೆದರಿದ್ದ ಶಾಹಿದ್ ಕಪೂರ್!

ಭಾನುವಾರ, ಜೂಲೈ 21, 2019
22 °C
‘ಅರ್ಜುನ್ ರೆಡ್ಡಿ’ ರಿಮೇಕ್‌ನಲ್ಲಿ ಶಾಹಿದ್

ಕಾಲೇಜು ಹುಡುಗನ ಪಾತ್ರಕ್ಕೆ ಹೆದರಿದ್ದ ಶಾಹಿದ್ ಕಪೂರ್!

Published:
Updated:
Prajavani

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಸಿನಿಮಾದಲ್ಲಿ ಭಾವುಕ ತುಂಬಿದ್ದ ಕಣ್ಣುಗಳಲ್ಲೇ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟ ಶಾಹಿದ್ ಕಪೂರ್, ತಮ್ಮ ಇತ್ತೀಚಿನ ಸಿನಿಮಾ ‘ಕಬೀರ್ ಸಿಂಗ್’ನ ಕಾಲೇಜು ಹುಡುಗನ ಪಾತ್ರ ಮಾಡಲು ಆರಂಭದಲ್ಲಿ ಹೆದರಿದ್ದರಂತೆ!

‘ಕಾಲೇಜು ಹುಡುಗ ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿ ಪಾತ್ರ ಮಾಡಲು ನನಗೆ ತುಸು ಭಯವಾಗಿತ್ತು. ನನ್ನ ಹೆಂಡತಿ, ತಮ್ಮ ಹಾಗೂ ಬೆಳೆದು ದೊಡ್ಡವರಾದ ಮೇಲೆ ನನ್ನ ಮಕ್ಕಳು ಈ ಸಿನಿಮಾವನ್ನು ನೋಡಿ ‘ಇದನ್ನೆಲ್ಲಾ ಮಾಡುವ ಅವಶ್ಯಕತೆ ಇತ್ತೇ ಅಪ್ಪಾ?’ ‘ನಿಮಗೆ 38 ವರ್ಷ ಅನ್ನೋದನ್ನು ಮರೆತುಬಿಟ್ರಾ?’ ಅಂತ ಪ್ರಶ್ನಿಸಿದರೆ ಆಗ ನಾನೇನು ಹೇಳಬೇಕು? ಎಂದು ಶಾಹಿದ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ತೆಲುಗಿನಲ್ಲಿ ವಿಜಯ್‌ ದೇವರಕೊಂಡ ನಾಯಕನಾಗಿ ಅಭಿನಯಿಸಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾದ ರಿಮೇಕ್ ಆಗಿರುವ ‘ಕಬೀರ್ ಸಿಂಗ್’ ಸಿನಿಮಾದಲ್ಲಿ ಶಾಹಿದ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುವ ಅಮರ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಶಾಹಿದ್ ಶೈಲಿಗೆ, ಪತ್ನಿ ಮೀರಾ ರಜಪೂತ್ ಖುಷಿ ವ್ಯಕ್ತಪಡಿಸಿದ್ದು, ಚಿತ್ರಕ್ಕಾಗಿ ದೇಹದ ರೂಪಾಂತದ ಮಾಡಿಕೊಂಡ ಶಾಹಿದ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘16 ವರ್ಷದ ಸವಾಲು’ ಅನ್ನುವ ಶೀರ್ಷಿಕೆಯಡಿ ಕಾಲೇಜು ಹುಡುಗ ಶಾಹಿದ್ ಮತ್ತು ವಯಸ್ಕ ಶಾಹಿದ್ ಹೀಗೆ ಎರಡು ಭಿನ್ನ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. 

‘ಪಾತ್ರ ಬೇಡುವ ಸಿದ್ಧತೆ, ದೇಹದ ರೂಪಾಂತರದ ಬಗ್ಗೆ ನಟನೊಬ್ಬನ ನಿರೀಕ್ಷೆಗಳಿರುವುದು ತಪ್ಪಲ್ಲ. ಹಾಗೆಂದು ಅದರ ಬಗ್ಗೆ ನನಗೆ ತೀರಾ ನಿರೀಕ್ಷೆಯನ್ನೂ ಹೊಂದುವುದಿಲ್ಲ. ಆದರೆ, ಪಾತ್ರಕ್ಕೆ ನೈಜತೆ ಇರಬೇಕೆಂದು ಬಯಸುತ್ತೇನೆ. ನಾವು ವಯಸ್ಕರಾಗುತ್ತಿದ್ದಂತೆ ನಮ್ಮದೇ ಒಂದು ಪ್ರಪಂಚ ರೂಪುಗೊಂಡಿರುತ್ತದೆ. ಆದರೆ, ನಟನಾಗಿ ನಾವು ಮನುಷ್ಯನ ವಿವಿಧ ರೀತಿಯ ಛಾಯೆಗಳನ್ನೂ ಅರ್ಥೈಸಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ನಟಿಸಲೂ ಬೇಕಾಗುತ್ತದೆ’ ಎಂದು ಶಾಹಿದ್ ತಮ್ಮ ಕಬೀರ್ ಪಾತ್ರದ ಬಗ್ಗೆ ಸೂಚ್ಯವಾಗಿ ನುಡಿದಿದ್ದಾರೆ. 

‘ಪ್ರತಿಯೊಬ್ಬರ ಜೀವನದಲ್ಲೂ ಕಬೀರ್ ಸಿಂಗ್‌ನಂಥ ಸಂದರ್ಭ ಬರಬಹುದು. ನಿರಾಶೆ ಹೊಂದಿದಾಗ ನಮ್ಮನ್ನು ನಾವೇ ಕಳೆದುಕೊಳ್ಳುವ ಸ್ಥಿತಿಯೂ ತಲುಪಬಹುದು. ಕಬೀರ್ ಪಾತ್ರ ವಿಚಿತ್ರವಾದದ್ದು. ಆದರೆ, ನಾನೆಂದೂ ಕಬೀರ್‌ನಂಥ ವ್ಯಕ್ತಿಯಾಗಬಾರದು ಎನ್ನುವ ಅನುಭವ ನನಗೆ ಈ ಪಾತ್ರದಿಂದಾಗಿ ದಕ್ಕಿದೆ’ ಎಂದು ಅವರು ವಿನಮ್ರವಾಗಿ ಒಪ್ಪಿಕೊಳ್ಳುತ್ತಾರೆ. 

ಪಾತ್ರವೊಂದರ ಪರಕಾರ ಪ್ರವೇಶಕ್ಕಾಗಿ ನಟನೊಬ್ಬ ಹೇಗೆಲ್ಲಾ ತಯಾರಾಗಬಹುದು ಅನ್ನುವುದಕ್ಕೆ ಶಾಹಿದ್ ಕಪೂರ್ ಒಂದು ಮಾದರಿಯಷ್ಟೇ. ‘ಕಬೀರ್ ಖಾನ್’ ಸಿನಿಮಾ ಜೂನ್ 21ಕ್ಕೆ ಬಿಡುಗಡೆ ಕಾಣಲಿದೆ. ಶಾಹಿದ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. 

Post Comments (+)