ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಚಲನಚಿತ್ರ ಶಕಲಕ ಬೂಮ್ ಬೂಮ್ 20 ರಂದು ಬಿಡುಗಡೆ

Last Updated 12 ಜನವರಿ 2023, 5:19 IST
ಅಕ್ಷರ ಗಾತ್ರ

ಮಂಗಳೂರು: ಯು.ಎನ್ ಸಿನಿಮಾಸ್ ಬ್ಯಾನರ್‌ನಡಿ ನಿತ್ಯಾನಂದ ನಾಯಕ್ ನರಸಿಂಗೆ ಮತ್ತು ಉಮೇಶ್ ಪ್ರಭು ಮಾಣಿಬೆಟ್ಟು ನಿರ್ಮಿಸಿರುವ, ಶ್ರೀಶ ಎಳ್ಳಾರೆ ನಿರ್ದೇಶನದ ‘ಶಕಲಕ ಬೂಮ್ ಬೂಮ್’ ತುಳು ಚಲನಚಿತ್ರ ಇದೇ 20 ರಂದು ತುಳುನಾಡಿನಾದ್ಯಂತ ತೆರೆ ಕಾಣಲಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾದ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ, ‘ಕಥಾನಾಯಕನಾಗಿ ಗಾಡ್ವಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ ನಟಿಸಿದ್ದಾರೆ. ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್ ಜೊತೆಯಾಗುವ ಸನ್ನಿವೇಶಗಳು ಹಾಸ್ಯದ ಹೊನಲಾಗಿಸಲಿವೆ. ತಾರಾಗಣದಲ್ಲಿ ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಾಜ್, ಶಿವಾನಂದ, ಯಜ್ಞೇಶ್ ಶೆಟ್ಟಿ ಅಭಿನಯಿಸಿದ್ದಾರೆ. ಡಾಲ್ವಿನ್ ಕೊಳಲಗಿರಿ ಸಂಗೀತ ಚಿತ್ರಕ್ಕಿದೆ. ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ‘ ಎಂದು ತಿಳಿಸಿದರು.

‘ಸಿನಿಮಾದಲ್ಲಿ ವೈವಿಧ್ಯವಿರಬೇಕು ಎಂಬ ಕಾರಣಕ್ಕೆ ಹಾಸ್ಯ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಅಂಶಗಳನ್ಉ ಅಳವಡಿಸಿಕೊಂಡಿದ್ದೇವೆ. ಸ್ವಚ್ಛವಾದ ಭಾಷೆ, ಉತ್ತಮ ಸಂಭಾಷಣೆ ಮನಮುಟ್ಟುವ ನಟನೆಯ ಚಿತ್ರವಿದು’ ಎಂದರು.

‘ಸುಮಾರು 150 ವರ್ಷಗಳಷ್ಟು ಹಳೆಯದಾದ ಮನೆಯಲ್ಲಿ ಚಿತ್ರೀಕರಣ ನಡೆದಿದೆ. ಜನರನ್ನು ಮೋಸ ಮಾಡುತ್ತ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು ಪಾಳು ಬಿದ್ದ ಮನೆಯೊಂದರಲ್ಲಿ ಬಂಧಿಯಾಗುತ್ತಾರೆ. ಆ ಮನೆಯ ರಹಸ್ಯವೇನು, ಹಿಂದೆ ಆ ಮನೆಯಲ್ಲಿ ಏನೇಣು ಘಟನೆಗಳು ನಡೆದಿದ್ದವು, ನ್ಯಾಯ ಗೆಲ್ಲುತ್ತದೆಯೋ, ಸತ್ಯ ಜಯಿಸುತ್ತದೆಯೇ ಎಂಬುದನ್ನು ತಿಳಿಯಲು ವಿಶಿಷ್ಟ ಕಥಾಹಂದರದ ಈ ಚಿತ್ರವನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸಿ’ ಎಂದರು.

‘ಮಣಿಪಾಲ, ಉಡುಪಿಯಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ. ಮಂಗಳೂರು, ಚಿಕ್ಕಮಗಳೂರು, ಮಡಿಕೇರಿಗಳಲ್ಲೂ ಚಿತ್ರೀಕರಣ ನಡೆಸಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಗಾಡ್ವಿನ್ ಸ್ಪಾರ್ಕಲ್, ಡಾಲ್ವಿನ್ ಕೊಳಲಗಿರಿ, ಸುನಿಲ್ ಕಡ್ತಲ, ಲಂಚುಲಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT