ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುತ್ತನೇ ಇತಿಹಾಸಕ್ಕೆ ಜಾರಿದ ‘ಶಾಂತಲಾ’

Last Updated 25 ಜೂನ್ 2020, 19:30 IST
ಅಕ್ಷರ ಗಾತ್ರ

ಅರಮನೆ ನಗರಿ ಮೈಸೂರಿನ ಸಾಂಸ್ಕೃತಿಕ ಹೆಗ್ಗುರುತು ಎನಿಸಿಕೊಂಡಿದ್ದ ಪ್ರತಿಷ್ಠಿತ ‘ಶಾಂತಲಾ’ ಚಿತ್ರಮಂದಿರದಲ್ಲಿ ಇನ್ನು ಮುಂದೆ ಸಿನಿಮಾ ಪ್ರದರ್ಶನಗೊಳ್ಳುವುದಿಲ್ಲ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿದ್ದ ಈ ಸಿನಿಮಾ ಮಂದಿರ ಬುಧವಾರ ರಾತ್ರಿ ತನ್ನ ಕೊನೆಯ ಚಿತ್ರ ಪ್ರದರ್ಶನ ಮುಗಿಸಿದೆ.

ಮೈಸೂರಿನಲ್ಲಿರುವ ಬೆರಳೆಣಿಕೆಯಷ್ಟು ಚಿತ್ರಮಂದಿರಗಳ ಪೈಕಿ 46 ವರ್ಷಗಳಿಂದ ‘ಶಾಂತಲಾ’ ತನ್ನದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಬಂದಿತ್ತು. ‘ಬಂಗಾರದ ಪಂಜರ‘ದಿಂದ ಆರಂಭವಾಗಿ, ಕೊನೆಯ ಸಿನಿಮಾ ‘ಶಿವಾಜಿ ಸೂರತ್ಕಲ್‌‘ನ ಪ್ರದರ್ಶನದವರೆಗೂ ‘ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡುವ ಚಿತ್ರಮಂದಿರ‘ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿತ್ತು. ಮಾತ್ರವಲ್ಲ, ಸ್ವಚ್ಛತೆ, ಶಿಸ್ತು, ತಂತ್ರಜ್ಞಾನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಸೆಡ್ಡು ಹೊಡೆಯಬಲ್ಲ ಏಕೈಕ ಚಿತ್ರಮಂದಿರ ಎಂಬ ಖ್ಯಾತಿಯೂ ಇದಕ್ಕಿತ್ತು.

‘ಬ್ಲಾಕ್‌ ಟಿಕೆಟ್’ ಮಾಫಿಯಾವನ್ನು ಚಿತ್ರಮಂದಿರದ ಗೇಟಿನಲ್ಲೇ ತಡೆದಿದ್ದ ಈ ಸಿನಿಮಾ ಮಂದಿರ ‘ಒಬ್ಬರಿಗೆ ಒಂದೇ ಟಿಕೆಟ್‘ ಎಂಬ ಸಿದ್ಧಾಂತದಲ್ಲಿ ಕೊನೆವರೆಗೂ ರಾಜಿ ಮಾಡಿಕೊಳ್ಳಲೇ ಇಲ್ಲ. ಕುಟುಂಬ ಸಹಿತ ಸಿನಿಮಾ ನೋಡಲು ಬಂದವರೆಲ್ಲರೂ ಸರದಿಯಲ್ಲಿ ನಿಂತುತಮ್ಮ ಟಿಕೆಟ್‌ನ್ನು ತಾವೇ ಖರೀದಿಸಿ ಚಿತ್ರ ಮಂದಿರ ಪ್ರವೇಶಿಸಬೇಕಿತ್ತು. ‘ಮಾಫಿಯಾ‘ದ ಬೆದರಿಕೆಗಳಿಗೂ ಸೊಪ್ಪು ಹಾಕದೇ, ಕೈಯಲ್ಲೊಂದು ಲಾಠಿ ಹಿಡಿದು, ಸರತಿ ಸಾಲನ್ನು ನಿಯಂತ್ರಿಸುತ್ತಿದ್ದರು ಇಲ್ಲಿನ ವ್ಯವಸ್ಥಾಪಕರಾಗಿದ್ದ ದೇವರಾಜು. ಇವೆಲ್ಲವೂ ಈಗ ನೆನಪುಗಳಾಗಿ ಉಳಿದಿವೆ.

ಜನಪ್ರಿಯ ಥಿಯೇಟರ್‌

ಈ ಚಿತ್ರಮಂದಿರದಿಂದ ತುಸು ದೂರದಲ್ಲಿ ಒಂದು ವೃತ್ತವಿತ್ತು. ಅದಕ್ಕೆ ತಾತಯ್ಯ ವೃತ್ತ ಎಂಬ ಹೆಸರಿದ್ದರೂ ಜನರ ಬಾಯಲ್ಲಿ, ಅದು ‘ಶಾಂತಲಾ ವೃತ್ತ’ ಎಂದೇ ಆಗಿದೆ. ಬಸ್‌ನಲ್ಲಿಯೂ ‘ಶಾಂತಲಾ ವೃತ್ತ‘ಕ್ಕೆ ಟಿಕೆಟ್ ಕೊಡಿ ಎಂದು ಕೇಳುವಷ್ಟರಮಟ್ಟಿಗೆ ಈ ಚಿತ್ರಮಂದಿರ ಜನಮಾನಸದಲ್ಲಿ ಬೇರೂರಿದೆ.

ಹಾಗಾದರೆ, ಇಂಥ ಜನಪ್ರಿಯ ಸಿನಿಮಾ ಮಂದಿರ ಸ್ಥಗಿತಗೊಳ್ಳಲು ಏನು ಕಾರಣ? ಕೊರೊನಾ ಸೋಂಕು, ಲಾಕ್‌ಡೌನ್‌ನಿಂದ ತೊಂದರೆಯಾಯಿತೇ? ಆರ್ಥಿಕ ನಷ್ಟ, ಪ್ರೇಕ್ಷಕರ ಕೊರತೆ..?

‘ಊಹೂಂ.. ಇದ್ಯಾವುದೂ ಕಾರಣವಲ್ಲ‘ ಎನ್ನುತ್ತಾರೆ ಚಿತ್ರಮಂದಿರದ ಪಾಲುದಾರ ಪದ್ಮನಾಭ ಪದಕಿ. ಅಷ್ಟೇ ಅಲ್ಲ, ‘ಚಿತ್ರಮಂದಿರ ಗಳಿಗೆ ಪ್ರೇಕ್ಷಕರು ಬರುವುದಿಲ್ಲ’ ಎಂಬ ಆರೋಪವನ್ನು ಅವರು ಅಲ್ಲಗಳೆಯುತ್ತಾರೆ. ‘ಉತ್ತಮ ಚಿತ್ರಗಳನ್ನು ನೀಡಿದರೆ, ಚಿತ್ರಮಂದಿರದಲ್ಲಿ ಶಿಸ್ತು, ಸ್ವಚ್ಛತೆ ಇದ್ದರೆ, ಪ್ರೇಕ್ಷಕರಿಗೆ (ವಿಶೇಷವಾಗಿ ಕುಟುಂಬ ಸಹಿತ ಬರುವವರಿಗೆ) ಭದ್ರತೆಯ ಭಾವನೆ ಬರುವಂತೆ ಇದ್ದರೆ ಇಂದಿಗೂ ಚಿತ್ರಮಂದಿರಗಳು ತುಂಬುತ್ತವೆ. ನಮ್ಮ ಚಿತ್ರಮಂದಿರಕ್ಕೆ ಪ್ರೇಕ್ಷಕರ ಕೊರತೆ ಇರಲಿಲ್ಲ’ ಎಂದು ಅವರು ಹೇಳುತ್ತಾರೆ.

ಹಾಗಾದರೆ ಕಾರಣ ಏನು ?

1972ರಲ್ಲಿ ಅನಾಥಾಲಯ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಈ ಸಿನಿಮಾ ಮಂದಿರವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನಿಂದ ಪ್ರತಿಬಾರಿ ಗುತ್ತಿಗೆ ನವೀಕರಣವಾಗುತ್ತಿತ್ತು. ಈಗ ಟ್ರಸ್ಟ್‌ನವರು ಜಾಗವನ್ನು ಬಿಟ್ಟುಕೊಡಲು ಕೇಳಿದ್ದಾರೆ. ಹೀಗಾಗಿ ಚಿತ್ರಮಂದಿರವನ್ನು ಮುಚ್ಚುತ್ತಿದ್ದೇವೆ‘ ಎಂದು ಸ್ಪಷ್ಟಪಡಿಸಿದರು ಪದ್ಮನಾಭ.‘ಮುಂದೇನು’ ಎಂಬ ಪ್ರಶ್ನೆಗೆ ಅವರು ‘ಗೊತ್ತಿಲ್ಲ’ ಎಂದಷ್ಟೇ ಪ್ರತಿಕ್ರಿಯಿಸಿ ಮೌನಕ್ಕೆ ಜಾರಿದರು.

‘ಅಂತ’ ಸಿನಿಮಾ ಬಿಡುಗಡೆಯಾದ ದಿನ ಸಿನಿಮಾ ಮಂದಿರದ ಮುಂದೆ ಜನರು ಸಾಕಷ್ಟು ದೂರ ಸಾಲಿನಲ್ಲಿ ನಿಂತಿದ್ದು, ಲಾಠಿ ಏಟುಗಳನ್ನು ತಿಂದರೂ ಮತ್ತೆ ಮತ್ತೆ ಸಿನಿಮಾ ನೋಡಿದ ಚಿತ್ರ ರಸಿಕರ ಹುಮ್ಮಸ್ಸನ್ನು ವ್ಯವಸ್ಥಾಪಕ ದೇವರಾಜು ನೆನೆದು ಭಾವಪರವಶರಾಗುತ್ತಾರೆ.

ನನ್ನ ಚಿತ್ರ ಪ್ರದರ್ಶನವಾಗಬೇಕೆಂದು ಬಯಸುತ್ತಿದ್ದೆ....

‘ಶಾಂತಲಾ ಸಿನಿಮಾ ಮಂದಿರ ಅತ್ಯಂತ ಶಿಸ್ತುಬದ್ಧ ಥಿಯೇಟರ್‌. ಆ ಚಿತ್ರಮಂದಿರದಲ್ಲಿ ನನ್ನ ಚಿತ್ರಪ್ರದರ್ಶನ ಕಾಣಬೇಕೆಂದು ಬಯಸುತ್ತಿದ್ದೆ‘ ಎಂದು ನೆನಪಿಸಿಕೊಂಡರು ಖ್ಯಾತ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು.

‘ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದ ಚಿತ್ರಮಂದಿರವಾಗಿತ್ತು ಶಾಂತಲ. ಅಲ್ಲಿ ಟಿಕೆಟ್ ಕಳ್ಳತನಗಳು ಇರಲಿಲ್ಲ. ಇಂಥ ಸಿನಿಮಾ ಮಂದಿರ ಮುಚ್ಚಿರುವುದು ಕೇವಲ ಮೈಸೂರಿಗೆ ಮಾತ್ರವಲ್ಲ ರಾಜ್ಯದ ಸಿನಿಮಾರಂಗಕ್ಕೆ ದೊಡ್ಡ ನಷ್ಟ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಚಿತ್ರಮಂದಿರಗಳನ್ನು ಮುಚ್ಚಿ, ಕಾಂಪ್ಲೆಕ್ಸೋ ಮತ್ತೊಂದೋ ಮಾಡುವುದರಿಂದ ಲಾಭವಾಗುವುದಿಲ್ಲ. ಕಾಂಪ್ಲೆಕ್ಸ್‌ಗಳಾಗಿ ಬದಲಾದ ಚಿತ್ರಮಂದಿರಗಳು ಲಾಭಗಳಿಸಿದ ಉದಾಹರಣೆಗಳೇ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT