ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕಾಲದಿಂದ ಸುಖದ ಹಳಿಯಲ್ಲಿ ಪಯಣಿಸುತ್ತಿರುವ ಶ್ರದ್ದಾ ಕಪೂರ್

Last Updated 14 ಆಗಸ್ಟ್ 2019, 13:38 IST
ಅಕ್ಷರ ಗಾತ್ರ

ಹೊಸ ಸಿನಿಮಾ ಸಿಕ್ಕ ಖುಷಿ. ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ಆರ್ಡರ್‌ ಮಾಡಿದ್ದ ಕೇಕ್‌ ಬಂತು. ಅದನ್ನು ಕತ್ತರಿಸಿ, ಇಷ್ಟಪಾತ್ರರ ಬಾಯಿಗಿಟ್ಟು, ಇಷ್ಟಗಲ ಕಣ್ಣರಳಿಸಿ ಬೀಗಿದ್ದೇ ಬೀಗಿದ್ದು.

ಒಂದು ವಾರವಾಗಿತ್ತಷ್ಟೆ. ನಿರ್ದೇಶಕರಿಂದ ಫೋನ್‌ ಕರೆ. ‘ಆ ಪಾತ್ರಕ್ಕೆ ನೀವು ಸರಿಹೋಗುತ್ತಿಲ್ಲ. ಬೇರೆಯವರನ್ನು ಹಾಕಿಕೊಂಡಿದ್ದೇವೆ’ ಎಂಬ ಕಡ್ಡಿ ತುಂಡುಮಾಡಿದಂಥ ಮಾತು. ಒಂದು ಕ್ಷಣ ಕೇಕ್‌ ಕಟ್‌ ಮಾಡಿದ ಸಂದರ್ಭ ಕಣ್ಮುಂದೆ ಬಂದು, ಅದರ ತುಂಬ ಹನಿಗಳು ಮಡುಗಟ್ಟಿದವು. ಕಣ್ಣಾಲಿಯಿಂದ ಅವು ಹೊಮ್ಮುವಷ್ಟರಲ್ಲಿ ಶೌಚಾಲಯದ ಕನ್ನಡಿ ಮುಂದೆ ನಿಂತು ಬಿಕ್ಕದೇ ವಿಧಿ ಇರಲಿಲ್ಲ.

ಶ್ರದ್ಧಾ ಕಪೂರ್‌ ನಟಿಯಾಗಿ ಇಂಥದೊಂದು ದಿನವನ್ನು ಎದುರಿಸಿರಬಹುದು ಎಂದು ಎಷ್ಟೋ ಜನ ಊಹಿಸಿರಲಿಕ್ಕಿಲ್ಲ. ಖಳನಟನಾಗಿ ಹೆಸರು ಮಾಡಿದ ಶಕ್ತಿ ಕಪೂರ್ ಮಗಳು ಅವರು. ಲತಾ ಮಂಗೇಷ್ಕರ್‌, ಆಶಾ ಭೋಸ್ಲೆ ಸಂಬಂಧಿಕರು ಬೇರೆ. ಇಂಥ ಹಿನ್ನೆಲೆ ಇರುವಾಗ ಯಾರಾದರೂ ಕರೆದು, ಅಭಿನಯದ ಅವಕಾಶವನ್ನು ತಟ್ಟೆಯಲ್ಲಿಟ್ಟು ಕೊಡುತ್ತಾರಲ್ಲವೇ ಎಂದು ಭಾವಿಸಿದರೆ ತಪ್ಪು.

ಒಂಬತ್ತು ವರ್ಷಗಳ ಹಿಂದೆ ‘ತೀನ್‌ ಪತ್ತಿ’ ಎಂಬ ಹಿಂದಿ ಸಿನಿಮಾದಲ್ಲಿ ಮೊದಲು ನಟಿಸಿದ ಶ್ರದ್ಧಾ ಕಡೆಗೆ ತಿಂಗಳುಗಟ್ಟಲೆ ಯಾವ ನಿರ್ಮಾಪಕರೂ ಸುಳಿದಿರಲಿಲ್ಲ. ಆ ಸಿನಿಮಾ ಸೋತರೂ ಅಮಿತಾಭ್‌ ಬಚ್ಚನ್‌ ಜತೆ ಅಭಿನಯಿಸಿದ್ದ ಸಂತಸವಿತ್ತು. ‘ಲವ್ ಕಾ ದಿ ಎಂಡ್’ ಎಂಬ ಎರಡನೇ ಸಿನಿಮಾ ಕೂಡ ಬೋರಲಾದದ್ದೇ ಅವರ ಕಷ್ಟದ ದಿನಗಳ ಸಂಖ್ಯೆ ಹೆಚ್ಚಿತು.

ಮುಂಬೈನ ಜಮ್‌ನಾಬಾಯ್‌ ನರ್ಸೀ ಸ್ಕೂಲ್‌ನಲ್ಲಿ ಓದುವಾಗ ‘ಟಾಮ್‌ ಬಾಯಿಷ್‌’ ತರಹಇದ್ದ ಶ್ರದ್ಧಾ ಹುಡುಗರಿಗೆ ಗೂಸಾ ಕೊಡಲೂ ಹಿಂದುಮುಂದು ನೋಡುತ್ತಿರಲಿಲ್ಲ. ಅಮೆರಿಕನ್‌ ಸ್ಕೂಲ್‌ ಆಫ್‌ ಬಾಂಬೆಗೆ ಹದಿನೈದರ ಪ್ರಾಯದಲ್ಲಿ ಸ್ಥಳಾಂತರಗೊಂಡ ಮೇಲೆ ಸಿನಿಮಾ ಬಗೆಗಿನ ಪ್ರೀತಿ ಮೊಳೆಯಿತು. ಟೈಗರ್ ಶ್ರಾಫ್‌ ಕೂಡ ಅದೇ ಶಾಲೆಯ ವಿದ್ಯಾರ್ಥಿ.

ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ನೋಡುಗರ ಕಣ್ಣು ಕೀಲಿಸಿಕೊಳ್ಳುತ್ತಿದ್ದ ಶ್ರದ್ಧಾ, ಫುಟ್‌ಬಾಲ್‌ನಲ್ಲೂ ಪಳಗಿದ್ದರು. ಆತ್ಮವಿಶ್ವಾಸದ ಬುಗ್ಗೆಯಂತೆ ಬೆಳೆದ ಅವರು ಮೊದಲ ಎರಡು ಸಿನಿಮಾಗಳ ವೈಫಲ್ಯದ ನಂತರ ಖಿನ್ನರಾದದ್ದು ಪರಿಸ್ಥಿತಿ ಎಂಥವರಿಗೂ ಸವಾಲೊಡ್ಡಬಲ್ಲದು ಎನ್ನುವುದಕ್ಕೆ ಸಾಕ್ಷಿ.

‘ನಾನು ಅದೆಷ್ಟು ಆಡಿಷನ್‌ ಕೊಟ್ಟೆ ಎಂದು ನೆನಪೇ ಇಲ್ಲ. ಅದನ್ನು ನೆನಪಿಸಿಕೊಂಡರೆಈಗಲೂ ದುಃಖವಾಗುತ್ತದೆ. ಆಗ ಮೋಹಿತ್‌ ಸೂರಿ ಅವಕಾಶ ಕೊಡದೇ ಹೋಗಿದ್ದರೆ ನನ್ನ ಸಿನಿಮಾ ಬದುಕಿನ ಕನಸು ಕಮರಿ ಹೋಗುತ್ತಿತ್ತೋ ಏನೋ? ಚಿತ್ರರಂಗದ ಹಿನ್ನೆಲೆ ಇರುವವರಿಗೆ ಅವಕಾಶ ಸಿಗುವುದು ಕಷ್ಟವಲ್ಲ ಎಂದೇ ಎಷ್ಟೋ ಜನ ಭಾವಿಸಿರುತ್ತಾರೆ. ಆದರೆ, ನನ್ನ ವಿಷಯದಲ್ಲಿ ಅದು ನಿಜವಾಗಲಿಲ್ಲ’ ಎನ್ನುವುದು ಅವರ ಅನುಭವದ ಮಾತು.

‘ಆಶಿಕಿ 2’ ಸಿನಿಮಾ ಬಂದಮೇಲೆ ನಟನೆಯ ಬದುಕು ಹಳಿಗೆ ಮರಳಿತು. ವಿಶಾಲ್ ಭಾರದ್ವಾಜ್, ರೆಮೊ ಡಿಸೋಜ, ಅಪೂರ್ವ ಲಾಖಿಯಾ, ಅಮರ್‌ ಕೌಶಿಕ್ ಅವರಂಥ ಪ್ರಯೋಗಮುಖಿ ನಿರ್ದೇಶಕರಿಂದ ಅವಕಾಶಗಳು ಸಿಕ್ಕಿದ್ದು ಈ ನಟಿಯ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿತು. ತೆಲುಗು, ತಮಿಳು, ಹಿಂದಿ ಮೂರೂ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗಿರುವ ‘ಸಾಹೋ’ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಇವರು ನಟಿಸಿದ್ದಾರೆ. ಅದಲ್ಲದೆ ಇನ್ನೂ ಎರಡು ಸಿನಿಮಾಗಳು (ಛೀಛೋರೆ, ಸ್ಟ್ರೀಟ್‌ ಡಾನ್ಸರ್‌) ಕೈಯಲ್ಲಿವೆ. ‘ಆಡಿಷನ್’ ಎಂಬ ಪದ ಕಿವಿಮೇಲೆ ಬಿದ್ದರೆ ಈಗಲೂ ಅವರು ಬೆಚ್ಚುತ್ತಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT