ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರತ್ ಲೋಹಿತಾಶ್ವ ಎದುರಿಸಿದ ಪೇಚಿನ ಪ್ರಸಂಗ!

‘ವಿಲನ್’ ಅಪ್ಪನಿಗೆ ಹೀರೊ ಹೊಡೆದಾಗ...
Last Updated 22 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ವಿಲನ್ ಪಾತ್ರ ನಿಭಾಯಿಸುವ ಅಪ್ಪ ತೆರೆಯ ಮೇಲೆ ನಾಯಕನ ಜೊತೆ ಕಾದಾಟ ನಡೆಸುವ ಪಾತ್ರಗಳನ್ನು ವೀಕ್ಷಿಸಿದಾಗ ಅವರ ಮಗ ಅಥವಾ ಮಗಳು ಯಾವ ರೀತಿ ಪ್ರತಿಕ್ರಿಯಿಸಬಹುದು?! ಇಂಥದ್ದೊಂದು ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಆಗಾಗ ಕಾಡಬಹುದು.

ಈ ಪ್ರಶ್ನೆಗೆ ಉತ್ತರವೆಂಬ ರೀತಿಯಲ್ಲಿ ಹಿರಿಯ ನಟ ಶರತ್ ಲೋಹಿತಾಶ್ವ ಅವರು ಒಂದು ಪ್ರಸಂಗ ವಿವರಿಸಿದ್ದಾರೆ. ಇದು ಅವರು ಮತ್ತು ಅವರ ಮಗ ಅಂಕುರ್‌ಗೆ ಸಂಬಂಧಿಸಿದ್ದು.

ಚಿರಂಜೀವಿ ಸರ್ಜಾ ಅಭಿನಯದ ‘ಗಂಡೆದೆ’ ಚಿತ್ರದಲ್ಲಿ ಶರತ್ ಅಭಿನಯಿಸಿದ್ದಾರೆ. ಈ ಚಿತ್ರ ತೆರೆಗೆ ಬಂದ ಸಂದರ್ಭದಲ್ಲಿ ಅವರು ತಮ್ಮ ಮಗನನ್ನು ಕರೆದುಕೊಂಡು ಚಿತ್ರ ವೀಕ್ಷಿಸಲು ಸಿನಿಮಾ ಮಂದಿರಕ್ಕೆ ತೆರಳಿದ್ದರು. ಚಿತ್ರದ ಕೊನೆಯಲ್ಲಿ ನಾಯಕನು (ಚಿರು), ವಿಲನ್‌ಗೆ (ಶರತ್) ಸಿಕ್ಕಾಪಟ್ಟೆ ಹೊಡೆಯುವ ದೃಶ್ಯಗಳು ಇವೆ.

ಕೆಲವು ದೃಶ್ಯಗಳಿಗೆ ಗ್ರಾಫಿಕ್ಸ್‌ ತಂತ್ರಜ್ಞಾನದ ಲೇಪ ಕೊಟ್ಟು, ದೃಶ್ಯಗಳನ್ನು ಇನ್ನಷ್ಟು ರೋಚಕಗೊಳಿಸಲಾಗಿತ್ತು. ತನ್ನ ತಂದೆಗೆ ನಾಯಕ ನಟ ಸಿನಿಮಾದಲ್ಲಿ ಹಿಗ್ಗಾಮುಗ್ಗಾ ಹೊಡೆಯುವುದನ್ನು ಕಂಡ ಅಂಕುರ್‌, ಕೋಪದಿಂದ ತನ್ನ ತಂದೆಯ ಕಪಾಳಕ್ಕೆ ಒಂದು ಬಾರಿಸಿದ್ದನಂತೆ – ಅದೂ ಚಿತ್ರಮಂದಿರದಲ್ಲೇ! ‘ಆಗ ಅಂಕುರ್‌ ನಾಲ್ಕು ಅಥವಾ ಐದು ವರ್ಷದ ಪೋರ’ ಎಂದು ನೆನಪಿಸಿಕೊಳ್ಳುತ್ತಾರೆ ಶರತ್. ತೆರೆಯ ಮೇಲೆ ನಾಯಕನಿಂದ ಮಾತ್ರವಲ್ಲದೆ, ತೆರೆಯ ಎದುರು ಮಗನಿಂದಲೂ ಬಾರಿಸಿಕೊಳ್ಳುವ ಪ್ರಸಂಗ ಶರತ್‌ ಅವರಿಗೆ ಎದುರಾಗಿತ್ತು.

ಮಗನ ಕೋಪ ಮನೆಗೆ ಬಂದ ನಂತರವೂ ಮುಂದುವರಿದಿತ್ತು. ಅಂದು ರಾತ್ರಿ ಶರತ್ ಅವರು ತಮ್ಮ ಕೋಣೆಯಲ್ಲಿ ಏನೋ ಓದುತ್ತ ಕುಳಿತಿದ್ದರು. ಅಲ್ಲಿಗೆ ಬಂದ ಅಂಕುರ್‌ ಮುಖದಲ್ಲಿ ಕೋಪ ಮತ್ತು ದುಃಖ ಮಡುಗಟ್ಟಿದ್ದವು. ಕ್ರಿಕೆಟ್‌ ಬ್ಯಾಟಿನ ಮುರಿದುಹೋದ ಒಂದು ತುಂಡನ್ನು ಅಪ್ಪನಿಗೆ ತೋರಿಸಿ, ‘ಇನ್ನೊಮ್ಮೆ ಚಿತ್ರೀಕರಣಕ್ಕೆ ಹೋಗುವಾಗ ಈ ಬ್ಯಾಟ್‌ ತಗೊಂಡು ಹೋಗು. ಚೆನ್ನಾಗಿ ಚಚ್ಚಿ ಹಾಕು’ ಎಂದು ಕೋಪ–ದುಃಖದಿಂದ ಹೇಳಿದ್ದ ಅಂಕುರ್.

‘ರಾಮಾರ್ಜುನ’ ಚಿತ್ರದ ಸುದ್ದಿಗೋಷ್ಠಿಗೆ ಬಂದಿದ್ದ ಶರತ್, ಈ ವಿಷಯಗಳನ್ನು ಸುದ್ದಿಗಾರರ ಜೊತೆ ಹೇಳಿಕೊಂಡು ಹೊಟ್ಟೆತುಂಬಾ ನಕ್ಕರು. ‘ಇನ್ನೊಂದು ಸಿನಿಮಾ ನೋಡಲು ಮಗನನನ್ನು ಕರೆದುಕೊಂಡು ಹೋಗಿದ್ದೆ. ನಾಯಕನ ಜೊತೆಗಿನ ಫೈಟ್‌ ದೃಶ್ಯಗಳನ್ನು ನೋಡಿದ ಮಗ, ಅಪ್ಪಾ ಸ್ವಲ್ಪ ಪ್ಲ್ಯಾನ್‌ ಮಾಡಿ ಅವನಿಗೆ ಎರಡು ಬಾರಿಸಬಾರದಿತ್ತಾ ಎಂದು ಕೇಳಿದ್ದ’ ಎಂದು ಶರತ್ ನೆನಪಿಸಿಕೊಂಡರು.

‘ಮಗ ಬೆಳೆಯುತ್ತಾ ನಟನೆಗೂ ವಾಸ್ತವಕ್ಕೂ ಇರುವ ವ್ಯತ್ಯಾಸ ಅರ್ಥ ಮಾಡಿಕೊಂಡ. ಒಂದು ಸಿನಿಮಾದಲ್ಲಿ ನನ್ನದೊಂದು ರೊಮ್ಯಾಂಟಿಕ್‌ ದೃಶ್ಯ ಇತ್ತು. ಅದನ್ನು ಅವನೂ ನೋಡಿದ. ಆ ದೃಶ್ಯದ ಬಗ್ಗೆ ನಾನು ಕೇಳಿದಾಗ, ಅದು ಆ್ಯಕ್ಟಿಂಗ್ ಅಲ್ವಾ ಅಪ್ಪಾ ಎಂದು ಅವನೇ ಮರುಪ್ರಶ್ನೆ ಹಾಕಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT