ಗುರುವಾರ , ಅಕ್ಟೋಬರ್ 17, 2019
24 °C

ಹಿಟ್‌ ಚಿತ್ರ ನೀಡುವೆ: ಶಾರುಖ್ ಖಾನ್

Published:
Updated:
Prajavani

ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಮನಸ್ಸಿಗೂ ಹಿಟ್ ನೀಡುವ ಚಿತ್ರ ಮಾಡಬೇಕು ಎಂಬ ಆಸೆ ಬಂದಿದೆ. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಕಿಂಗ್ ಖಾನ್ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದ್ದ ಕಾಲವೊಂದಿತ್ತು. ನಟಿಸುತ್ತಿದ್ದ ಚಿತ್ರಗಳಲ್ಲಿ ಬಹುಪಾಲು ಬಾಕ್ಸ್ ಆಫಿಸ್ ಕೊಳ್ಳೆಹೊಡೆಯುವ ಜತೆಗೆ ಪ್ರೇಕ್ಷಕರಿಗೂ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದವು. ಆದರೆ, ಕೆಲವು ವರ್ಷಗಳಿಂದ ಖಾನ್ ಚಿತ್ರಗಳು ಗೆಲ್ಲುತ್ತಿಲ್ಲ. ಪ್ರೇಕ್ಷಕರಿಗೂ ನಿರಾಸೆಯಾಗುತ್ತಿದೆ. ಹೀಗಾಗಿ ಹಿಂದಿನಂತೆ ಬಾಲಿವುಡ್‌ನಲ್ಲಿ ರಾರಾಜಿಸಲು ಒಂದು ಹಿಟ್ ಚಿತ್ರ ನೀಡಬೇಕು ಎಂದು ಖಾನ್ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸಹ ಖಾನ್ ಯಾವಾಗ ಸದ್ದು ಮಾಡುತ್ತಾರೆ ಎನ್ನುವ ಕಾತುರದಲ್ಲಿದ್ದಾರೆ.

ಟ್ಟಿಟರ್‌ನಲ್ಲಿ ಫಾಲೊವರ್ಸ್ ಮತ್ತು ಅಭಿಮಾನಿಗಳ ಜತೆ ಸಂದರ್ಶನದ ರೀತಿಯಲ್ಲಿ ಮುಕ್ತವಾಗಿ ಮಾತನಾಡಿರುವ ಶಾರುಖ್, ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. 53 ವರ್ಷ ವಯಸ್ಸಿನ ಕಿಂಗ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಜೀರೊ’ ಸಹ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಮುಂದಿನ ಚಿತ್ರ ಹಿಟ್ ಆಗುವಂತಹ ಮಟ್ಟದಲ್ಲಿ ಇರಬೇಕು ಎಂದು ಅವರು ಹೇಳಿದ್ದಾರೆ.

ಯಾವ ಚಿತ್ರ ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಗೆ, ‘ಕೆಲವು ಸ್ಕ್ರಿಪ್ಟ್ ಬಂದಿದೆ, ಗಟ್ಟಿತನ ಇರುವ ಕತೆಗಾಗಿ ಎದುರು ನೋಡುತ್ತಿದ್ದೇನೆ. ಸೂಕ್ತವಾದ ಸ್ಕ್ರಿಪ್ಟ್ ಸಿಕ್ಕ ಬಳಿಕ ಕೆಲಸ ಆರಂಭವಾಗಲಿದೆ’ ಎಂದಿದ್ದಾರೆ. ಯಾವ ರೀತಿಯ ಚಿತ್ರ ಮಾಡಬೇಕು ಎಂದುಕೊಂಡಿದ್ದೀರಿ ಎಂದು ಕಾಲೆಳೆದಿದ್ದಕ್ಕೆ, ‘ಹಿಟ್ ಆಗುವಂತಹ ಚಿತ್ರ ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಸಹಜವಾಗಿಯೇ ಉತ್ತರಿಸಿದ್ದಾರೆ.

ಧೂಮ್ ಚಿತ್ರದ ಮುಂದಿನ ಸರಣಿಯಲ್ಲಿ ಶಾರುಖ್ ಖಾನ್ ನಟಿಸುವ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಕೇಳಿದ್ದಕ್ಕೆ, ‘ಹೌದು ನಾನೂ ಕೇಳಿದ್ದೇನೆ, ಆ ಬಗ್ಗೆ ಹೆಚ್ಚಿನದ್ದೇನಾದರೂ ಗೊತ್ತಾದರೆ ನಂಗೂ ತಿಳಿಸಿ’ ಎಂದು ನಗುತ್ತಲೇ ಪ್ರತ್ಯುತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಝೀರೋ’ ಚಿತ್ರದಲ್ಲಿ ಸಿಖ್‌ ಭಾವನೆಗಳಿಗೆ ನೋವು ಆರೋಪ: ಶಾರುಖ್‌ ವಿರುದ್ಧ ದೂರು

‘ರಾಒನ್’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಅವರನ್ನು ಕಿಚಾಯಿಸಿದ್ದಾರೆ. ದಸರಾ ಹಬ್ದದಲ್ಲಿ ‘ರಾಒನ್’ ಚಿತ್ರದ ಸಿ.ಡಿ.ಯನ್ನೇಕೆ ನೀವು ಸುಡಬಾರದು ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಬಹಳ ಸೌಮ್ಯವಾಗಿಯೇ ಉತ್ತರಿಸಿದ ಖಾನ್, ‘ಗಾಯದ ಮೇಲೆ ಎಷ್ಟು ಉಪ್ಪು ಸುರಿಯುತ್ತೀರಿ’ ಎಂದು ಪ್ರಶ್ನಿಸಿದ್ದಾರೆ!

Post Comments (+)