ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಟ್ರೊ ಕನ್ಯೆ

Last Updated 13 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಸ್ವಾರ್ಥರತ್ನ ಚಿತ್ರದಲ್ಲಿ ರೆಟ್ರೊ ಹಾಡೊಂದಿದೆ ಎಂದಾಗ ಚಕಿತಗೊಂಡಿದ್ದೆ. ಶೂಟಿಂಗ್‌ಗೂ ಒಂದು ವಾರ ಮೊದಲೇ ನಿರ್ದೇಶಕ ಅಶ್ವಿನಿ ಕೋಡಂಗೆ ಅವರು ಮೊಬೈಲ್‌ಗೆ ಹಳೆಯ ಸಾಂಗ್‌ಗಳ ಲಿಂಕ್‌ ಕಳುಹಿಸುತ್ತಿದ್ದರು. ದಿನಕ್ಕೆ ಎರಡು ಗಂಟೆ ಕಾಲ ಆ ಹಾಡುಗಳಲ್ಲಿಯೇ ಮುಳುಗಿರುತ್ತಿದ್ದೆ. ಅಣ್ಣಾವ್ರ ಸಾಂಗ್‌ಗಳನ್ನು ಹೆಚ್ಚಾಗಿ ನೋಡಿದೆ. ಮಂಜುಳಾ, ಕಲ್ಪನಾ, ಆರತಿ, ಭಾರತಿ ಮೇಡಂ ನಟಿಸುವ ಹಾಡುಗಳನ್ನೂ ವೀಕ್ಷಿಸಿದೆ. ಸಾಂಗಿನ ಶೂಟಿಂಗ್‌ಗೆ ತೆರಳಿದ ದಿನವನ್ನು ಮರೆಯಲಾರೆ. ನಾನು ಯಾರನ್ನೂ ಇಮಿಟೇಟ್‌ ಮಾಡಿಲ್ಲ. ನನ್ನ ನಟನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಅಷ್ಟೇ. ಈ ಹಾಡು ವೈರಲ್ ಆಗಿದೆ...’

ಒಂದೇ ಉಸುರಿಗೆ ಇಷ್ಟನ್ನು ಹೇಳಿ ರೆಟ್ರೊ ಕಾಲದಿಂದ ಮರಳಿದರು ನಟಿ ಇಶಿತಾ ವರ್ಷ. ‘ಕಸ್ತೂರಿ ನಿವಾಸ’ ಸಿನಿಮಾದಲ್ಲಿ ವರನಟ ಡಾ. ರಾಜ್‌ಕುಮಾರ್‌ ಮತ್ತು ಆರತಿ ಒಂದಾಗಿ ಹಾಡುವ ‘ನೀ ಬಂದು ನಿಂತಾಗ...’ ಹಾಡನ್ನು ಚಿತ್ರೀಕರಿಸುವುದು ರೆಟ್ರೊ ಕ್ಯಾಮೆರಾದಲ್ಲಿ. ನಾಲ್ಕೂವರೆ ದಶಕ ಉರುಳಿದರೂ ಈ ಹಾಡು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಸ್ವಾರ್ಥರತ್ನ ಚಿತ್ರದ ರೆಟ್ರೊ ಹಾಡನ್ನು ಚಿತ್ರೀಕರಿಸಿರುವುದು ಮೈಸೂರಿನ ಬೃಂದಾವನ ಉದ್ಯಾನದಲ್ಲಿಯೇ. ಹಾಗಾಗಿ, ಇಶಿತಾಗೆ ಈ ಹಾಡಿನ ಮೇಲೆ ಎಲ್ಲಿಲ್ಲದ ಮೋಹ.

ಇಶಿತಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಅಪ್ಪ ಉದ್ಯಮಿ. ಅಮ್ಮ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತನ್ನ ಮಗಳೂ ಕಲಾವಿದೆಯಾಗಬೇಕು ಎನ್ನುವುದು ಅಮ್ಮನ ಕನಸು. ಬಾಲ್ಯದಿಂದಲೇ ಸಿನಿಮಾ ನಟಿಯಾಗುವಂತೆ ಅವರು ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರಂತೆ.

‘ಐಎಎಸ್‌ ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕೆನ್ನುವುದು ನನ್ನ ಕನಸಾಗಿತ್ತು. ಆದರೆ, ನಾನು ಚಿತ್ರತಾರೆಯಾಗಬೇಕು ಎಂಬುದು ಅಮ್ಮನ ಕನಸು. ಆರಂಭದಲ್ಲಿ ಈ ಕನಸನ್ನು ನಯವಾಗಿ ತಿರಸ್ಕರಿಸಿದ್ದೆ. ಆದರೆ, ಎಲ್ಲ ಅಮ್ಮಂದಿರು ಮಕ್ಕಳ ಶ್ರೇಯೋಭಿವೃದ್ಧಿ ಬಯಸುತ್ತಾರೆ. ಈ ಸತ್ಯ ಅರಿವಾದಾಗ ನಟನಾ ಕ್ಷೇತ್ರದತ್ತ ಮನಸ್ಸು ಹೊರಳಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಇಶಿತಾ ನಟನೆಗೆ ಪ್ರವೇಶಿಸಿದ್ದು ಕಿರುತೆರೆಯ ಮೂಲಕ. ‘ಕೃಷ್ಣ ರುಕ್ಮಿಣಿ’ ಧಾರಾವಾಹಿಯ ಆಡಿಶನ್‌ಗೆ ಹೋಗಿದ್ದರಂತೆ. ಅಲ್ಲಿ ಮೂರು ದಿನದ ಪಾತ್ರವೊಂದು ಇತ್ತಂತೆ. ನಿರ್ದೇಶಕರಿಗೂ ಈ ಪಾತ್ರವನ್ನು ಅವರಿಗೆ ಕೊಡಲು ಇಷ್ಟವಿರಲಿಲ್ಲ. ಕೊನೆಗೆ, ಡೈಲಾಗ್‌ ಹೇಳಲು ಕೋರಿದರಂತೆ. ಇಶಿತಾ ಚೊಕ್ಕಟವಾಗಿ ಸಂಭಾಷಣೆ ಒಪ್ಪಿಸಿದ್ದು ನಿರ್ದೇಶಕರಿಗೆ ಇಷ್ಟವಾಯಿತು. ಕೊನೆಗೆ, ಆ ಪಾತ್ರವನ್ನು ಒಂದು ವರ್ಷದವರೆಗೂ ವಿಸ್ತರಿಸಿದರಂತೆ. ‘ಅಂದಹಾಗೆ ಅದು ಖಳನಟಿಯ ಪಾತ್ರ’ ಎಂದು ನಗುತ್ತಾರೆ ಅವರು.

ನಂತರ ಅವರು ‘ಹೊಸ ಬಾಳಿಗೆ ನೀ ಜೊತೆಯಾದೆ’, ‘ಅಸಂಭವ’ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅವರಿಗೆ ಹೆಸರು ತಂದುಕೊಂಡಿದ್ದು ‘ಅಗ್ನಿಸಾಕ್ಷಿ’ ಧಾರಾವಾಹಿಯ ಪಾತ್ರ. ಚುರುಕು ಸಂಭಾಷಣೆ, ಖಡಕ್‌ ಡೈಲಾಗ್‌ಗಳಿಂದ ಅವರು ಪ್ರೇಕ್ಷಕರ ಮನಸ್ಸಿನಲ್ಲಿ ‘ಮಾಯ’ಳಾಗಿ ನೆಲೆಯೂರಿದ್ದಾರೆ.

ಕಿರುತೆರೆ ಮತ್ತು ಹಿರಿತೆರೆಯ ನಟನೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದನ್ನು ಅವರು ಒಪ್ಪುತ್ತಾರೆ. ‘ಹಿರಿತೆರೆಯಲ್ಲಿ ರಿಯಾಕ್ಷನ್‌ ತುಂಬಾ ಮುಖ್ಯ. ಮುಖಭಾವದ ಮೇಲೆ ಹತೋಟಿ ಇರಬೇಕು. ಆದರೆ, ಧಾರಾವಾಹಿಗಳಲ್ಲಿ ಹಾವಭಾವದ ಮೂಲಕವೇ ಮ್ಯಾನೇಜ್‌ ಮಾಡಬಹುದು. ಬೆಳ್ಳಿತೆರೆಯಲ್ಲಿ ಇದು ಕಷ್ಟಸಾಧ್ಯ’ ಎನ್ನುವುದು ಅವರ ಅನುಭವದ ನುಡಿ.

‘ಸ್ವಾರ್ಥರತ್ನ’ದಲ್ಲಿ ಅವರದು ಟಾಮ್‌ಬಾಯ್‌ ಹುಡುಗಿಯ ಪಾತ್ರ. ಸೌಂದರ್ಯದ ಬಗ್ಗೆ ಕಾಳಜಿ ಇಲ್ಲದ ಹುಡುಗಿ. ಆದರೆ ಸಮಾಜ, ಕುಟುಂಬದ ಬಗ್ಗೆ ತುಂಬಾ ಕಾಳಜಿ ಹೊಂದಿರುವವಳು. ‘ಮೊದಲ ಚಿತ್ರದಲ್ಲಿ ನಾಯಕಿಯರು ಗ್ಲಾಮರ್‌ ಆದ ಪಾತ್ರಗಳಲ್ಲಿ ಕಾಣಸಿಕೊಳ್ಳಲು ಇಚ್ಛಿಸುವುದು ಸಹಜ. ಸೌಂದರ್ಯಕ್ಕೆ ಒತ್ತು ಸಿಗುವ ಪಾತ್ರಗಳಿಗೆ ಆದ್ಯತೆ ನೀಡುತ್ತಾರೆ. ಇದರಲ್ಲಿ ನನ್ನದು ತದ್ವಿರುದ್ಧದ ಸ್ಥಿತಿ. ಟಿಪಿಕಲ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಈಗಾಗಲೇ, ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದೆಯಂತೆ. ಆದರೆ, ಪಾತ್ರಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚ್ಯೂಸಿ. ‘ಒಳ್ಳೆಯ ಚಿತ್ರತಂಡವಿದ್ದರೆ ಉತ್ತಮ ಸಿನಿಮಾ ನಿರ್ಮಾಣ ಸಾಧ್ಯ. ಸಂಖ್ಯೆಗಳಿಗೆ ನಾನು ಮಹತ್ವ ಕೊಡುವುದಿಲ್ಲ. ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇನೆ. ಮೊದಲ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ಪ್ರೇಕ್ಷಕರು ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಮೇಲೆ ನನ್ನ ಮುಂದಿನ ಚಿತ್ರಗಳ ಆಯ್ಕೆ ನಿಂತಿದೆ’ ಎನ್ನುವುದು ಅವರ ಜಾಣ್ಮೆಯ ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT