ಗುರುವಾರ , ಸೆಪ್ಟೆಂಬರ್ 23, 2021
21 °C

ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ ಶಿವಾಜಿ ಸುರತ್ಕಲ್‌–2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2020ರಲ್ಲಿ ಬಿಡುಗಡೆಯಾಗಿದ್ದ ರಮೇಶ್‌ ಅರವಿಂದ್‌ ಅವರ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌’ ಪ್ರೇಕ್ಷಕರ ಮನಗೆದ್ದಿತ್ತು. ಪತ್ತೆದಾರಿಯಾಗಿ ಕಾಣಿಸಿಕೊಂಡಿದ್ದ ರಮೇಶ್‌ ಅರವಿಂದ್‌ ಅವರ ಪಾತ್ರವನ್ನು ಜನ ಮೆಚ್ಚಿದ್ದರು. ಇದೇ ತಂಡ ಇದೀಗ ಚಿತ್ರದ ಎರಡನೇ ಭಾಗವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. 

ಸಂಪೂರ್ಣವಾಗಿ ಕಥೆ-ಚಿತ್ರಕಥೆ ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್‌ನಿಂದ ಚಿತ್ರೀಕರಣ ಪ್ರಾರಂಭಿಸುವ ಯೋಚನೆಯಲ್ಲಿದೆ. ಶುಕ್ರವಾರ(ಸೆ.10) ರಮೇಶ್‌ ಅರವಿಂದ್‌ ಅವರ ಜನ್ಮದಿನದಂದೇ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿದ ರೊಮ್ಯಾಂಟಿಕ್‌, ಆ್ಯಕ್ಷನ್‌, ಥ್ರಿಲ್ಲರ್‌ ಕಥನ ಹೊಂದಿದ್ದ ಸಿನಿಮಾದ ಮೊದಲ ಭಾಗ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದ ವೇಳೆಯೇ ಕೊರೊನಾ ಲಾಕ್‌ಡೌನ್‌ ಬಿಸಿಯು ಇದಕ್ಕೂ ತಟ್ಟಿತ್ತು. ಹೀಗಾಗಿ ಕೊನೆಯಲ್ಲಿ ಚಿತ್ರತಂಡವು ಒಟಿಟಿ ಮೊರೆಹೋಗಿತ್ತು. 

‘ಶಿವಾಜಿಯಾಗಿ ರಮೇಶ್ ಅರವಿಂದ್‌ ಅವರು ಬಣ್ಣ ಹಚ್ಚಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2ರಲ್ಲೂ ಮುಂದುವರಿಯಲಿದ್ದಾರೆ. ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ. ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು. ಆದರೆ ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೆದಾರಿ ಕಥೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. ಚಿತ್ರಮಂದಿರ ಭೇಟಿಯ ಸಂದರ್ಭ ಎದುರಾಗಿದ್ದ ಅನೇಕ ಪ್ರಶ್ನೆಗಳಿಗೆ, ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ ಈ ಚಿತ್ರದಲ್ಲಿ ಉತ್ತರವಿದೆ’ ಎನ್ನುತ್ತಾರೆ ಆಕಾಶ್ ಶ್ರೀವತ್ಸ. 

ರೇಖಾ ಕೆ. ಎನ್. ಹಾಗೂ ಅನುಪ್‌ ಚಿತ್ರದ ನಿರ್ಮಾಪಕ ರಾಗಿದ್ದು, ತಮಿಳು, ಮಲಯಾಳಂ, ತೆಲುಗಿಗೆ ಭಾಗ–1ರ ರಿಮೇಕ್ ಹಕ್ಕು ಮಾರಾಟವಾಗಿರುವುದರಿಂದ ಮತ್ತಷ್ಟು ಹುರುಪಿನಿಂದ ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ ಚಿತ್ರತಂಡ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು