ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರ್ಯ ಬೆಳಗಿದ ಸಂಗೀತ

Last Updated 3 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ನಗರದಲ್ಲಿ ಶರಣ್ ಮ್ಯೂಸಿಕ್ ಅಕಾಡೆಮಿ ಈಚೆಗೆ ಆಯೋಜಿಸಿದ್ದ ‘ರಾಗ್‌ ಪ್ರಹರ್‌ ದರ್ಶನ್‌’ ಕಾರ್ಯಕ್ರಮ. ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳನ್ನು ಆಧರಿಸಿದ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳು ಶ್ರೋತೃಗಳ ಮನಕ್ಕೆ ಮುದ ನೀಡಿದ ತಂಪು–ಇಂಪಿನ ಸಂಜೆ. ಹಿರಿಯ ಕಲಾವಿದರ ನಡುವೆ ಸ್ವರಮಾಧುರ್ಯದ ಮೂಲಕ ಉದ್ಯಾನ ನಗರಿಯ ಜನರ ಮನಗೆದ್ದವರು ಧಾರವಾಡದ ಶಿವಾನಿ ಮಿರಜಕರ್‌. ಅವರು ಪ್ರಸ್ತುತಪಡಿಸಿದ ನಟ್‌ಭೈರವ್‌, ಮಧುಮದ್‌ ಸಾರಂಗ್‌ ಮತ್ತು ಜಯ್‌ಜಯವಂತಿ ರಾಗಗಳನ್ನು ಇಲ್ಲಿನ ಶ್ರೋತೃಗಳು ಸದ್ಯದಲ್ಲಿ ಮರೆಯಲಾರರು.

ಸಣ್ಣ ವಯಸ್ಸಿನಲ್ಲಿ, ಅಂತರಾತ್ಮದಲ್ಲಿ ಮೊಳಗಿದ ಸ್ವರ–ರಾಗದ ಕರೆಗೆ ಓಗೊಟ್ಟು ನಂತರ ‘ಸಂಗೀತ ಸಾಧನೆಯೇ ನನ್ನ ಗುರಿ’ ಎಂದು ನಿರ್ಧರಿಸಿ ಅದರಲ್ಲೇ ಮಿಳಿತಗೊಂಡವರು ಶಿವಾನಿ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 93 ಅಂಕ ಗಳಿಸಿಯೂ ಕಲೆಯ ವಿಷಯ ಆಯ್ಕೆ ಮಾಡಿಕೊಂಡ ಅವರು ಸಂಗೀತದಲ್ಲಿ ಎಂ.ಎ ಮುಗಿಸಿಸಂಶೋಧನೆಗೆ ಸಿದ್ಧರಾಗುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಕಛೇರಿ ನೀಡಿರುವ ಅವರು ಬೆಂಗಳೂರಿ‌ನಲ್ಲಿ ನಾಲ್ಕನೇ ಬಾರಿ ಹಾಡಿದ್ದಾರೆ. ‘ರಾಗ್‌ ಪ್ರಹರ್‌ ದರ್ಶನ್‌’ ಸಂದರ್ಭದಲ್ಲಿ ಅವರು ‘ಮೆಟ್ರೊ’ ಜೊತೆ ಮಾತನಾಡಿದರು.

ನಿಮ್ಮ ಬಾಲ್ಯ, ಶಿಕ್ಷಣದ ಬಗ್ಗೆ ವಿವರಿಸುವಿರಾ?

ನಾನು ಜನಿಸಿದ್ದು ಧಾರವಾಡದ ನಾರಾಯಣಪುರದಲ್ಲಿ. ಬೆಳೆದದ್ದು ಸಪ್ತಾಪುರದಲ್ಲಿ. ಧಾರವಾಡದ ಸೇಂಟ್ ಜೋಸೆಫ್ಸ್ ಶಾಲೆಯಲ್ಲಿ ಒಂದರಿಂದ ಹತ್ತರ ವರೆಗೆ ಕಲಿತೆ. ಪಿಯುಸಿಯಿಂದ ಬಿಎ ವರೆಗೆ ಕೆಸಿಡಿಯಲ್ಲಿ ಕಲಿತೆ. ಪುಣೆಯ ಎಸ್‌ಎನ್‌ಡಿಟಿಯಲ್ಲಿ ಸಂಗೀತದಲ್ಲಿ ಈಗಷ್ಟೇ ಎಂ.ಎ ಮುಗಿಸಿದ್ದೇನೆ.

ಸಂಗೀತ ಕ್ಷೇತ್ರಕ್ಕೆ ಪ್ರವೇಶ ಹೇಗಾಯಿತು? ಯಾವ ವಯಸ್ಸಿನಲ್ಲಿ ಸಂಗೀತ ಕಲಿಯಲು ಆರಂಭಿಸಿದಿರಿ?

ಅಮ್ಮ–ಅಪ್ಪ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಅವರೊಂದಿಗೆ ನಾನೂ ಹೋಗುತ್ತಿದ್ದೆ. ಆದರೆ ನನಗೆ ಸಂಗೀತದಲ್ಲಿ ನಿಜವಾದ ಆಸಕ್ತಿ ಮೂಡಲು ಋಣಾನುಬಂಧವೇ ಕಾರಣ ಎಂದೆನಿಸುತ್ತದೆ.

ಸಂಗೀತ ಗುರುಗಳು ಯಾರು? ಮೊದಲ ಸಂಗೀತ ಕಛೇರಿ ಯಾವುದು?

ಪಂಡಿತ್‌ ಚಂದ್ರಶೇಖರ ಪುರಾಣಿಕ್ ಮಠ ಅವರು ಸಂಗೀತದ ‘ಎಬಿಸಿಡಿ’ ಕಲಿಸಿದವರು. ನಂತರ ಪಂಡಿತ್‌ ಕೈವಲ್ಯ ಕುಮಾರ್ ಗುರವ ಅವರ ಬಳಿ ಏಳು ವರ್ಷ ಕಲಿತೆ. ಈಗ ಪಂಡಿತ್ ಉಲ್ಲಾಸ್ ಕಶಾಳ್ಕರ್‌ ಅವರ ಬಳಿ ಕಲಿಯುತ್ತಿದ್ದೇನೆ. 2009ರ ನವೆಂಬರ್‌ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಧಾರವಾಡದಲ್ಲಿ ಮೊದಲ ಕಛೇರಿ ಕೊಟ್ಟೆ. ಹೊರನಾಡಿನಲ್ಲಿ ಮೊದಲ ಕಾರ್ಯಕ್ರಮ ನೀಡಿದ್ದು ಪುಣೆಯಲ್ಲಿ, 2012ರಲ್ಲಿ.

ಪುಣೆಯಲ್ಲೇ ಸಂಗೀತ ಎಂ.ಎ ಮಾಡಬೇಕೆಂದು ಯಾಕೆ ನಿರ್ಧರಿಸಿದಿರಿ?

ಮಹಾರಾಷ್ಟ್ರ, ಅದರಲ್ಲೂ ವಿಶೇಷವಾಗಿ ಪುಣೆಗೂ ಸಂಗೀತಕ್ಕೂ ಉತ್ತಮ ಸಂಬಂಧ ಇದೆ. ಅಲ್ಲಿಯ ವಾತಾವರಣದಲ್ಲಿ ಬೆಳೆದರೆ ಸಂಗೀತ ಪ್ರಪಂಚಕ್ಕೆ ಹೆಚ್ಚು ಒಡ್ಡಿಕೊಳ್ಳಬಹುದು ಎಂದೆನಿಸಿತು. ಆದ್ದರಿಂದ ಅಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದೆ. ಸಂಶೋಧನೆಯನ್ನೂ ಅಲ್ಲೇ ಮಾಡಬೇಕೆಂದಿದ್ದೇನೆ.

ಶಿಕ್ಷಣ ಮತ್ತು ಸಂಗೀತವನ್ನು ಹೇಗೆ ಸರಿದೂಗಿಸಿಕೊಂಡು ಹೋದಿರಿ?

ನಾಲ್ಕನೇ ತರಗತಿಯಿಂದಲೇ ಸಂಗೀತ ಕಲಿಯುತ್ತಿದ್ದೇನೆ. ವಾಸ್ತವದಲ್ಲಿ ಕಲಿಕೆಗೆ ಸಂಗೀತದಿಂದ ಪ್ರಯೋಜನವೇ ಆಗಿದೆ. ಬಿಡುವಿನ ವೇಳೆ ರಿಯಾಜ್‌ ನಡೆಯುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತಿತ್ತು. ಸ್ವರ–ರಾಗಗಳ ನಡುವೆ ಪಠ್ಯ ಕಲಿಕೆಯ ಉತ್ಸಾಹ ಹೆಚ್ಚುತ್ತಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 93 ಅಂಕಗಳು ಬರಲು ಅದು ನೆರವಾಯಿತು.

ಸಂಗೀತದಿಂದ ನಿಮ್ಮ ಬದುಕಿನ ಮೇಲೆ ಆಗಿರುವ ಪರಿಣಾಮ ಏನು?

ಸಂಗೀತದಿಂದಾಗಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ಮುಂಜಾನೆ ನಾಲ್ಕು ಗಂಟೆಗೆ ಏಳುವುದು, ಟ್ಯೂಷನ್‌, ಸಂಗೀತ ಅಭ್ಯಾಸ ಇತ್ಯಾದಿಗಳನ್ನು ಮುಗಿಸುವುದು, ಶಾಲೆಗೆ ಹೋಗುವುದು, ಸಂಜೆ ಮತ್ತೆ ಸಂಗೀತ ಅಭ್ಯಾಸ ಮಾಡಿದ ನಂತರ ಪಠ್ಯದ ಕಡೆಗೆ ಗಮನ ಕೊಡುವುದು...ದಿನಚರಿ ಹೀಗೆ ಸಾಗುತ್ತಿದೆ. ಸಂಗೀತ ಮತ್ತು ಪತ್ರಿಕೋದ್ಯಮವನ್ನು ಐಚ್ಛಿಕ ವಿಷಯವನ್ನಾಗಿ ಮಾಡಿಕೊಂಡೆ.

ಸಂಗೀತವೆಂದರೆ ಸ್ವರ–ರಾಗ–ರಸದ ದೊಡ್ಡ ಸಾಗರ. ಅದರಲ್ಲಿ ಯಶಸ್ವಿಯಾಗಿ ಈಜಲು ಸಾಧ್ಯವಾದದ್ದು ಹೇಗೆ?

ನನ್ನಲ್ಲಿ ಭರವಸೆ ಮೂಡಲು ಪ್ರಮುಖ ಕಾರಣ, ಆರಂಭಿಕ ಗುರು ಚಂದ್ರಶೇಖರ್‌ ಪುರಾಣಿಕ್ ಮಠ ಅವರು. ವಿವರಿಸಲು ಆಗದ, ಅನುಭವಕ್ಕೆ ಮಾತ್ರ ಬರುವ ಶಕ್ತಿಯೊಂದು ಸಂಗೀತದಲ್ಲಿದೆ. ಗುರುಗಳು ನನಗೆ ಆ ಅನುಭವ ಆಗುವಂತೆ ಮಾಡಿದ್ದಾರೆ. ಆದ್ದರಿಂದ ಎಲ್ಲವನ್ನೂ ಕಲಿಯಲು ಸಾಧ್ಯವಾಯಿತು. ಪ್ರತಿ ದಿನ ಒಂದೊಂದು ರಾಗವನ್ನು ಹೊಸದಾಗಿ ಅಭ್ಯಾಸ ಮಾಡುತ್ತಿರುತ್ತೇನೆ. ಹೀಗಾಗಿ ಕಲಿತಿರುವ ಎಲ್ಲ ರಾಗಗಳೂ ಹೊಸ ಅನುಭವ ನೀಡುತ್ತಿರುತ್ತವೆ.

ಠುಮ್ರಿ ಇಷ್ಟಪಡುವ ಪಂಜಾಬ್ ಜನರು, ಸಂಗೀತದ ಶಾಸ್ತ್ರೀಯ ಗುಣಕ್ಕೆ ಹೆಚ್ಚು ಒತ್ತು ಕೊಡುವ ದೆಹಲಿ–ಮುಂಬೈನ ರಸಿಕರು, ರಾಗದ ಸೌಂದರ್ಯವನ್ನು ಮನಸಾರೆ ಆಸ್ವಾದಿಸುವ ಕರ್ನಾಟಕದವರು...ಹೀಗೆ ಎಲ್ಲರೂ ಕಲಾವಿದರನ್ನು ಗೌರವಿಸುವ ರೀತಿಗೆ ಮನಸೋತಿದ್ದೇನೆ.

ಯುವ ಗಾಯಕಿಯಾಗಿ ನಿಮ್ಮ ವಯಸ್ಸಿನ ಮತ್ತು ಎಳೆಯ ಮಕ್ಕಳಿಗೆ ಏನು ಸಂದೇಶ ನೀಡುತ್ತೀರಿ?

ಯುವ ಜನರಿಗೆ ದಿಢೀರ್‌ ಹೆಸರು ಮಾಡು ‘ಹುಚ್ಚು’ ಇದೆ. ಸಂಗೀತದ ವಾಣಿಜ್ಯೀಕರಣವೂ ನಡೆಯುತ್ತಿದೆ. ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನಿಮ್ಮ ಆಸಕ್ತಿಯನ್ನು ಉಳಿಸಿ–ಬೆಳೆಸಿಕೊಂಡು ಮುಂದೆ ಸಾಗಿದರೆ ಪ್ರಸಿದ್ಧಿ ಹುಡುಕಿಕೊಂಡು ಬರುತ್ತದೆ. ಪಾಲಕರು ಕೂಡ ಇದನ್ನು ಅರ್ಥಮಾಡಿಕೊಳ್ಳಬೇಕು.

ಧ್ವನಿ ಮಾಧುರ್ಯ ಸಾಧಿಸಿದ್ದು ಹೇಗೆ?

ಧ್ವನಿಗೆ ಸಾಣೆ ಹಿಡಿಯಲು ವಿಶೇಷವಾಗಿ ಏನನ್ನೂ ಮಾಡುವುದಿಲ್ಲ. ನಿರಂತರವಾಗಿ ಮಾಡುತ್ತಿರುವ ರಿಯಾಜ್‌, ಸಾಧನೆಗೆ ಕಾರಣ ಎಂಬುದು ನನ್ನ ಭಾವನೆ. ಅಪ್ಪ ಯೋಗ ಕಲಿಸುತ್ತಾರೆ. ಸ್ನ್ಯಾಕ್ಸ್‌, ಜಂಕ್ ಫುಡ್‌ ಸೇವಿಸುವುದಿಲ್ಲ. ಆದ್ದರಿಂದ ‘ಆರೋಗ್ಯವಂತ ಧ್ವನಿ’ ಉಳಿದುಕೊಂಡಿದೆ.

ಕಿರಾಣ, ಗ್ವಾಲಿಯರ್‌, ಜೈಪುರ್‌, ಆಗ್ರಾ ಘರಾಣಗಳಲ್ಲಿ ಜೊತೆಯಾಗಿ ಸಾಧನೆ ಮಾಡುತ್ತಿದ್ದೀರಿ. ಇದು ಹೇಗೆ ಸಾಧ್ಯ?

ಆರಂಭದಲ್ಲಿ ಸ್ವಲ್ಪ ಕಠಿಣ ಅನಿಸಿತು. ನಂತರ ಸುಲಭವಾಯಿತು. ಸದ್ಯ ಸಂಗೀತದಲ್ಲಿ ನಿಶ್ಚಿತ ಘರಾಣದಲ್ಲೇ ಮುಂದುವರಿಯುವ ಪದ್ಧತಿ ಇಲ್ಲದ್ದರಿಂದ ಬಹುತೇಕ ಎಲ್ಲರೂ ಎರಡು ಅಥವಾ ಹೆಚ್ಚಿನ ಘರಾಣಗಳಲ್ಲಿ ಅಭ್ಯಾಸ ಮಾಡುತ್ತಾರೆ. ಆದ್ದರಿಂದ ತಾಂತ್ರಿಕವಾಗಿ ತೊಂದರೆ ಏನೂ ಇಲ್ಲ.

ಕರ್ನಾಟಕ ಸಂಗೀತ ಕಲಿಯುವ ‘ಸಾಹಸ’ ಮಾಡಿದ್ದೀರಾ?

ಒಂದು ತಿಂಗಳು ಕಲಿತೆ. ಕಿರಾಣ ಘರಾಣೆಗೆ ಕರ್ನಾಟಕ ಸಂಗೀತ ಸ್ವಲ್ಪ ಹತ್ತಿರವಿದೆ. ಆ ಘರಾಣ ಕಲಿಯುವ ಸಂದರ್ಭದಲ್ಲಿ ಈ ಸಂಬಂಧವನ್ನು ಆಳವಾಗಿ ಅಧ್ಯಯನ ಮಾಡುವುದಕ್ಕಾಗಿ ಕರ್ನಾಟಕ ಶೈಲಿಯ ಸಂಗೀತ ಅಭ್ಯಾಸ ಮಾಡಿದೆ. ಮೇಲ್ನೋಟಕ್ಕೆ ಭಿನ್ನ ಎಂದು ಕಂಡರೂ ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತದ ಆಂತರ್ಯ ಒಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT