ಶಿವಣ್ಣನ ‘ಕವಚ’ ಚಿತ್ರೀಕರಣ ಮುಕ್ತಾಯ

7

ಶಿವಣ್ಣನ ‘ಕವಚ’ ಚಿತ್ರೀಕರಣ ಮುಕ್ತಾಯ

Published:
Updated:
Deccan Herald

ಅದು ಒಂದೂವರೆ ದಶಕದ ಹಿಂದಿನ ಮಾತು. ‘ನಾನು ರಿಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ’ ಎಂದು ನಟ ಶಿವರಾಜ್‌ಕುಮಾರ್‌ ಶಪಥ ಮಾಡಿದ್ದರು. ಆದರೆ, ಮಲಯಾಳ ಚಿತ್ರ ‘ಒಪ್ಪಂ’ ನೋಡಿದ ತಕ್ಷಣ ಈ ಚಿತ್ರದ ರಿಮೇಕ್‌ನಲ್ಲಿ ನಟಿಸಬೇಕೆಂಬುದು ನಿರ್ಧರಿಸಿದರು. ‘ಕವಚ’ ಹೆಸರಿನ ಈ ಚಿತ್ರದಲ್ಲಿ ಶಿವಣ್ಣ ಅಂಧನಾಗಿ ಕಾಣಿಸಿಕೊಂಡಿದ್ದಾರೆ.

ಎಂಟು ತಿಂಗಳ ಹಿಂದೆ ತೆಂಗಿನಕಾಯಿ ಒಡೆದು ‘ಕವಚ’ ಸೆಟ್ಟೇರಿತ್ತು. ಇತ್ತೀಚೆಗೆ ಕಂಠೀರವ ಸ್ಟುಡಿಯೊದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಯಶಸ್ವಿಯಾಗಿ ಚಿತ್ರೀಕರಣವನ್ನೂ ಮುಗಿಸಲಾಯಿತು.

ನಿರ್ದೇಶಕ ಜಿ.ವಿ.ಆರ್. ವಾಸು ಮಾತನಾಡಿ, ‘ಶಿವಣ್ಣನ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಮೂಲ ಕತೆಗೆ ಧಕ್ಕೆಯಾಗದಂತೆ ಕೊಂಚ ಬದಲಾವಣೆ ಮಾಡಲಾಗಿದೆ. ಸಾಗರ, ಬೆಂಗಳೂರು, ಮೈಸೂರು, ಮಡಿಕೇರಿ, ಊಟಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕತೆಯ ನಾಯಕ ಅಂಧ. ಜಗತ್ತು ಕಾಣದಿದ್ದರೂ ಚಲನವಲನ, ದೈಹಿಕವಾಗಿ ಆತ ಬಲಶಾಲಿ. ಒಂದು ಘಟನೆಯಿಂದ ಆತ ಮಾನಸಿಕವಾಗಿ ಕುಗ್ಗುತ್ತಾನೆ. ಕೊನೆಗೆ, ಬುದ್ಧಿವಂತಿಕೆಯಿಂದ ಹೇಗೆ ಅದನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದೇ ಸಿನಿಮಾದ ತಿರುಳು. ‘ಒಪ್ಪಂ’ನಲ್ಲಿ ಮೋಹನ್‍ಲಾಲ್‌ ನಟಿಸಿದ್ದ ಪಾತ್ರಕ್ಕೆ ಕನ್ನಡದಲ್ಲಿ ಶಿವಣ್ಣ ಜೀವ ತುಂಬಿದ್ದಾರೆ.  

ಶಿವರಾಜ್‌ಕುಮಾರ್‌ ಮಾತನಾಡಿ, ‘ಎಂಟು ತಿಂಗಳು ಕಳೆದಿದ್ದೇ ಗೊತ್ತಾಗಲಿಲ್ಲ. ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ. ದೀರ್ಘಕಾಲದ ಬಳಿಕ ರಿಮೇಕ್ ಚಿತ್ರ ಒಪ್ಪಿಕೊಳ್ಳಲು ಕತೆಯೇ ಕಾರಣ. ಮೋಹನ್‍ಲಾಲ್ ಮಾಡಿದ ಪಾತ್ರಕ್ಕೆ ಶೇಕಡಾ 30ರಷ್ಟು ನ್ಯಾಯ ಒದಗಿಸಿದ್ದೇನೆ’ ಎಂದರು.

‘ಚಿತ್ರದ ನಾಯಕ ಮನಸ್ಸಿನೊಳಗೆ ಕಾಣುವ ಕಣ್ಣು, ಶಬ್ದ ಮತ್ತು ವಾಸನೆಯಿಂದ ಎದುರಾಳಿಗಳೊಂದಿಗೆ ಹೋರಾಡುತ್ತಾನೆ. ಅಂಧನ ಮಾತ್ರ ಮಾಡುವುದು ನಿಜಕ್ಕೂ ಸವಾಲು. ಕೈಯಲ್ಲಿರುವ ಕಡ್ಡಿಯೇ ನನಗೆ ಕವಚವಾಗಿತ್ತು’ ಎಂದು ಚಿತ್ರೀಕರಣದ ಅನುಭವವನ್ನು ತೆರೆದಿಟ್ಟರು. 

ರಾಹುಲ್‌ ಶ್ರೀವಾತ್ಸವ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅರ್ಜುನ್‍ ಜನ್ಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್‌ಕುಮಾರ್‌ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.

ಕಲಾವಿದರಾದ ವಸಿಷ್ಟ ಸಿಂಹ, ಕೃತ್ತಿಕಾ, ರವೀಂದ್ರನಾಥ್, ರಾಜೇಶ್‍ ನಟರಂಗ, ಇತಿ ಆಚಾರ್ಯ, ಲಯೇಂದ್ರ, ತಬಲ ನಾಣಿ, ನವೀನ್, ಬಾಲನಟಿ ಮೀನಾಕ್ಷಿ, ರಾಹುಲ್, ನಂದಿನಿ ವಲ್ಲೀಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !