ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದೇನೋ ಆಲೋಚಿಸಬೇಕಿದೆ: ಶಿವಣ್ಣನ ಜೊತೆ ಮಾತುಕತೆ

Last Updated 14 ನವೆಂಬರ್ 2019, 19:30 IST
ಅಕ್ಷರ ಗಾತ್ರ

‘ಟಗರು ಶಿವ’ನ ಪಾತ್ರ ಧರಿಸಿ ವೀಕ್ಷಕರನ್ನು ರಂಜಿಸಬಲ್ಲ, ‘ಕವಚ’ ಚಿತ್ರದ ರಾಮಪ್ಪನ ಪಾತ್ರ ಧರಿಸಿ ವೀಕ್ಷಕರ ಮನಸ್ಸು ಆರ್ದ್ರಗೊಳಿಸಬಲ್ಲ ನಟ ಶಿವಣ್ಣ. ಅವರ ಅಭಿನಯದ ‘ಆಯುಷ್ಮಾನ್‌ ಭವ’ ಶುಕ್ರವಾರ ತೆರೆಗೆ ಬರುತ್ತಿದೆ. ಈ ನೆವದಲ್ಲಿ ಅವರ ಜೊತೆಗೆ ಒಂದು ಮಾತುಕತೆ.

2018ರ ಕೊನೆಯಲ್ಲಿ ತೆರೆಕಂಡ, ಶಿವರಾಜ್‌ ಕುಮಾರ್ ಅಭಿನಯದ ಆ್ಯಕ್ಷನ್ ಸಿನಿಮಾ ‘ದಿ ವಿಲನ್’. ಇದಾದ ನಂತರ ತೆರೆಕಂಡ ಅವರ ಸಿನಿಮಾ ‘ಕವಚ’. ನಂತರ ತೆರೆಗೆ ಬಂದಿದ್ದು ‘ರುಸ್ತುಂ’. ಈಗ ಶಿವಣ್ಣ ‘ಆಯುಷ್ಮಾನ್‌ಭವ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ. ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಇದು ಕೌಟುಂಬಿಕ ಮೌಲ್ಯಗಳ ಮೇಲೆ ರೂಪುಗೊಂಡ ಸಿನಿಮಾ.

ಹಾಗಾದರೆ, ಶಿವರಾಜ್‌ ಕುಮಾರ್ ಅವರು ಮಾಸ್, ಆ್ಯಕ್ಷನ್ – ಕೌಟುಂಬಿಕ ಸಿನಿಮಾಗಳನ್ನು ಒಂದರ ನಂತರ ಇನ್ನೊಂದು ಎಂಬಂತೆ ವೀಕ್ಷಕರ ಮುಂದಿರಿಸುತ್ತಿದ್ದಾರೆಯೇ?! ‘ಆಯುಷ್ಮಾನ್‌ಭವ’ ಚಿತ್ರದ ಪ್ರಚಾರದ ಗಡಿಬಿಡಿಯಲ್ಲಿ ಇದ್ದ ಶಿವಣ್ಣ ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ಅವರ ಮುಂದೆ ಇದೇ ಪ್ರಶ್ನೆ ಇರಿಸಲಾಯಿತು.

ಅರೆಕ್ಷಣ ಆಲೋಚನೆಗೆ ಇಳಿದ ಅವರು, ‘ನನಗೇ ಗೊತ್ತಿಲ್ಲದೆ ಹೀಗಾಗುತ್ತಿದೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿಲ್ಲ. ನನ್ನ ನಟನೆಯಲ್ಲಿ ಒಂದು ಸಿನಿಮಾ ಮಾಸ್–ಆ್ಯಕ್ಷನ್ ಇರಬೇಕು, ಇನ್ನೊಂದು ಸಿನಿಮಾ ಕೌಟುಂಬಿಕ ಮೌಲ್ಯಗಳನ್ನು ಆಧರಿಸಿದ್ದಾಗಿರಬೇಕು ಎಂಬುದಾಗಿ ಆಯ್ಕೆ ಮಾಡಿಕೊಂಡು ನಟಿಸುತ್ತಿಲ್ಲ. ‍ಪಿ. ವಾಸು ಅವರಂತಹ ನಿರ್ದೇಶಕರ ಸಿನಿಮಾ ಕೌಟುಂಬಿಕ ಮಾದರಿಯಲ್ಲಿ ಇರುತ್ತದೆ’ ಎಂದರು.

‘ದಿ ವಿಲನ್’ ಚಿತ್ರಕ್ಕೂ ಮೊದಲು ಬಿಡುಗಡೆ ಆಗಿದ್ದ ಸೂಪರ್‌ ಹಿಟ್ ಚಿತ್ರ ‘ಟಗರು’ ನೆನಪಿಸಿಕೊಂಡ ಶಿವಣ್ಣ, ‘ನಿರ್ದೇಶಕ ಸೂರಿ (ಟಗರು ನಿರ್ದೇಶಕ) ಅವರ ಸಿನಿಮಾಗಳು ನಾನ್‌ ಲೀನಿಯರ್ ನಿರೂಪಣೆಯಲ್ಲಿ, ಬೇರೊಂದು ರೀತಿಯಲ್ಲಿ ಇರುತ್ತವೆ. ಅವರ ಚಿತ್ರಕಥೆಯ ಶೈಲಿಯೇ ಬೇರೆ. ಈ ರೀತಿ ಒಂದಾದ ನಂತರ ಒಂದರಂತೆ, ಒಂದೊಂದು ಬಗೆಯ ಸಿನಿಮಾಗಳು ತಾವಾಗಿಯೇ ಆಗಿಬರುತ್ತಿವೆ. ನಾನಾಗಿಯೇ ಆ ರೀತಿಯ ಆಯ್ಕೆ ಮಾಡಿಕೊಳ್ಳುತ್ತಿಲ್ಲ’ ಎಂದು ನಕ್ಕರು.

ಶಿವರಾಜ್‌ ಕುಮಾರ್ ಅವರು 2017ರಲ್ಲಿ ಐದು ಚಿತ್ರಗಳನ್ನು ನೀಡಿದ್ದರು. 2018ರಲ್ಲಿ ಆ ಸಂಖ್ಯೆ ಎರಡಕ್ಕೆ ಇಳಿಯಿತು. 2019ರಲ್ಲಿ ಅವರು ಕೊಟ್ಟಿರುವುದು ‘ಆಯುಷ್ಮಾನ್‌ಭವ’ವನ್ನೂ ಪರಿಗಣಿಸಿದರೆ ಮೂರು ಸಿನಿಮಾಗಳನ್ನು. ‘ನೀವು ಸಿನಿಮಾ ಕೊಡುತ್ತಿರುವುದು ಕಡಿಮೆ ಆಗಿಬಿಟ್ಟಿದೆಯಲ್ಲಾ’ ಎಂಬ ಪ್ರಶ್ನೆಯನ್ನು ಅವರ ಎದುರು ಇರಿಸಿದಾಗ, ‘ನಾನು ಇನ್ನಷ್ಟು ಕಡಿಮೆ ಸಿನಿಮಾ ಮಾಡಬೇಕು ಎಂದು ಅನಿಸುತ್ತಿದೆ’ ಎಂದುಬಿಟ್ಟರು!

‘ಹಾಗೆ ಕಡಿಮೆ ಮಾಡುವುದು ಒಳ್ಳೆಯದು ಎಂದು ನನಗೆ ಅನಿಸುತ್ತಿದೆ. ಏಕೆಂದರೆ, ಆಗ ನನಗೆ ಬೇರೆ ಬಗೆಯ ಸ್ಕ್ರಿಪ್ಟ್‌ ಅಥವಾ ವಿಷಯಗಳ ಬಗ್ಗೆ ಆಲೋಚಿಸಲು ಸಾಧ್ಯವಾಗುತ್ತದೆ. ಕ್ಲೀಷೆಯಂತೆ ಆಗಿರುವ ಸಿನಿಮಾ ಮಾಡಲು ಇಷ್ಟವಾಗುತ್ತಿಲ್ಲ. ಒಂದೇ ತರಹದ ಸಿನಿಮಾ ಮಾಡುತ್ತಿದ್ದಾರಲ್ಲ ಇವರು ಎಂದು ಜನರಿಗೂ ಅನಿಸಬಾರದು’ ಎಂದು ತಮ್ಮ ಮಾತಿಗೆ ಸಮರ್ಥನೆ ನೀಡಿದರು.

‘ಆದರೆ, ತಾರಾಪಟ್ಟ ಹೊಂದಿರುವ ನಟರು ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ಮಾಡುತ್ತಾ ಹೋದರೆ ವೀಕ್ಷಕರಿಗೆ ಒಳ್ಳೆಯ ಸಿನಿಮಾಗಳು ಸಿಗುವುದಿಲ್ಲ ಎಂಬ ವಾದ ಇದೆಯಲ್ಲವೇ’ ಎಂದು ಪ್ರಶ್ನಿಸಿದಾಗ, ‘ಒಳ್ಳೆಯ ವಿಷಯಗಳು ಸಿಕ್ಕಿದರೆ ಚೆನ್ನಾಗಿರುತ್ತದೆ. ಒಂದು ರಿಮೇಕ್‌ ಸಿನಿಮಾದಲ್ಲಿ ನಟಿಸಿದೆ (ಕವಚ). ಹಾಗಂತ, ಡಜನ್ನುಗಟ್ಟಲೆ ಸಂಖ್ಯೆಯಲ್ಲಿ ರಿಮೇಕ್‌ ಸಿನಿಮಾಗಳಲ್ಲಿ ನಟಿಸಲು ಆಗದು. ಒಳ್ಳೆಯ ಕೌಟುಂಬಿಕ ಚಿತ್ರ ಮಾಡಬೇಕು ಎಂದಾದರೆ, ಒಳ್ಳೊಳ್ಳೆಯ ಕಾದಂಬರಿಗಳನ್ನು ಸಿನಿಮಾ ರೂಪಕ್ಕೆ ತರಬೇಕು. ಆದರೆ, ಈಗ ಕಾದಂಬರಿಗಳನ್ನು ಸಿನಿಮಾ ಮಾಡುವುದು ಕಡಿಮೆ ಆಗಿದೆ. ಕಾದಂಬರಿ ಸಿನಿಮಾ ಆದರೆ ಸೂಪರ್‌ ಆಗಿರುತ್ತದೆ. ಅಂತಹ ಸಿನಿಮಾ ಆಗಬೇಕು ಎಂದಾದರೆ ನಿರ್ದೇಶಕರು ಮುಂದೆ ಬರಬೇಕು. ಒಂದಿಷ್ಟು ಒಳ್ಳೆಯ ಸಬ್ಜೆಕ್ಟ್‌ಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ –ಎಲ್ಲವೂ ತಲೆಯಲ್ಲಿ ಕೂರುತ್ತಿಲ್ಲ’ ಎಂದು ಸುದೀರ್ಘ ವಿವರಣೆ ನೀಡಿದರು.

ನೆಗೆಟಿವ್ ಪಾತ್ರ

ಶಿವರಾಜ್‌ಕುಮಾರ್ ಕಾಣಿಸಿಕೊಂಡಿರುವುದೆಲ್ಲ ಒಳ್ಳೆಯತನ ಪ್ರತಿಪಾದಿಸುವ ಪಾತ್ರಗಳಲ್ಲಿ. ಅವರನ್ನು ನೆಗೆಟಿವ್‌ ಪಾತ್ರದಲ್ಲಿ, ಖಳನ ಪಾತ್ರದಲ್ಲಿ ನೋಡಲು ಆಗಿಲ್ಲ. ಹಾಗಾದರೆ, ಒಮ್ಮೆಯಾದರೂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಅವರಿಗೆ ಯಾವತ್ತಾದರೂ ಅನಿಸಿತ್ತಾ?!
‘ನೆಗೆಟಿವ್ ಪಾತ್ರಕ್ಕೂ ಒಂದು ವಿಷನ್‌ ಇರುತ್ತದೆ. ಅಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಭಾವನೆ ನನ್ನಲ್ಲೂ ಬಂದಿದ್ದಿರಬಹುದು, ನಟನಿಗೆ ಅಂಥದ್ದೊಂದು ಬಯಕೆ ಇರಬೇಕು. ಅಂಥದ್ದೊಂದು ಆಲೋಚನೆ ನನ್ನ ಮನಸ್ಸಿನಲ್ಲಿಯೂ ಇದೆ. ಆ ನಿಟ್ಟಿನಲ್ಲಿ ಒಂದು ಮಾತುಕತೆ ನಡೆದಿದೆ. ಇಂಥದ್ದೊಂದು ಪಾತ್ರವನ್ನು ನಾನು ನಿಭಾಯಿಸಬಲ್ಲೆ. ನನ್ನ ಅಭಿಮಾನಿಗಳನ್ನೂ ಕನ್ವಿನ್ಸ್‌ ಮಾಡಬಲ್ಲೆ’ ಎನ್ನುತ್ತಾರೆ ಶಿವಣ್ಣ.

ಹೆಚ್ಚಿನ ಆ್ಯಕ್ಷನ್‌ ಇಲ್ಲದ, ಅಂಡರ್‌ಕವರ್‌ ಏಜೆಂಟ್‌ ತರಹದ ಪಾತ್ರದಲ್ಲಿಯೂ ಶಿವಣ್ಣ ಅವರನ್ನು ಅಭಿಮಾನಿಗಳು ನೋಡುವ ದಿನ ದೂರವಿಲ್ಲ. ಅಂಥದ್ದೊಂದು ಪಾತ್ರ ಇರುವ ಸಿನಿಮಾ ಅವರ ಕಿವಿಮೇಲೆ ಬಿದ್ದಿದೆ. ‘ಇದರ ಕೆಲಸ ಮುಂದಿನ ವರ್ಷ ಶುರು ಆಗಬಹುದು. ನನ್ನ ಪಾತ್ರವನ್ನು ಕಟ್ಟುವ ಬಗೆ ಹೇಗೆ ಆಗಬೇಕು ಎಂಬುದನ್ನು ಪರಿಶೀಲಿಸಬೇಕು’ ಎಂದು ಅವರು ಹೇಳುತ್ತಾರೆ.

ಆಯುಷ್ಮಾನ್‌ಭವ ಪಾತ್ರ

‘ಒಂದು ದೂರದೃಷ್ಟಿ, ಒಂದು ಗುರುತರ ಜವಾಬ್ದಾರಿ ಇರುವ ಪಾತ್ರ ಅದು. ಆ ಪಾತ್ರದ ಪಯಣ ಹೇಗಿರುತ್ತದೆ, ಪಾತ್ರದ ವ್ಯಕ್ತಿತ್ವ ಏನು ಎಂಬುದು ಕಥೆ ತೆರೆದುಕೊಳ್ಳುತ್ತಿದ್ದಂತೆ ಬಿಚ್ಚಿಕೊಳ್ಳುತ್ತದೆ. ಒಂದು ಬಗೆಯಲ್ಲಿ ತನಿಖಾಧಿಕಾರಿಯ ಹೊಣೆ ಇರುವ ಪಾತ್ರ ಅದು ಎಂದೂ ಹೇಳಬಹುದು’ ಎಂದರು ಹ್ಯಾಟ್ರಿಕ್‌ ಹೀರೊ.

ತಾವು ಒಂದು ವೆಬ್ ಸಿರೀಸ್‌ನಲ್ಲಿ ನಟಿಸುತ್ತಿರುವುದಾಗಿಯೂ ಅದರ ಹೆಸರು ‘ಓಂಕಾರ’ ಎಂದಿರಬಹುದು ಎಂದೂ ಶಿವಣ್ಣ ತಿಳಿಸಿದರು. ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದಲ್ಲಿ ನಾಯಕನ ಪಾತ್ರ ನಿಭಾಯಿಸಿದ್ದರು ಶಿವಣ್ಣ.

ಈ ವೆಬ್ ಸಿರೀಸ್‌ ಹೆಸರು ಆ ಚಿತ್ರದ ನೆನಪನ್ನು ತಾರದೆ ಇರದು. ಆದರೆ, ಈ ವೆಬ್ ಸಿರೀಸ್ ಹೂರಣ ಏನು ಎಂಬುದನ್ನು ತಿಳಿಯಲು ಇನ್ನೊಂದಿಷ್ಟು ದಿನ ಕಾಯಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT