ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ್‌ಕುಮಾರ್‌ ಸಂದರ್ಶನ: ನಿರೀಕ್ಷೆಯಿಲ್ಲದ ಸಿನಿಪಯಣ ಚೆನ್ನ

Last Updated 20 ಆಗಸ್ಟ್ 2021, 3:51 IST
ಅಕ್ಷರ ಗಾತ್ರ

1986ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್‌ 125ನೇ ಚಿತ್ರದ ಹೊಸ್ತಿಲಿನಲ್ಲಿದ್ದಾರೆ. 35 ವರ್ಷಗಳ ಈ ಸಿನಿಪಯಣವನ್ನು ‘ಆನಂದ್‌’ ಎಂಬ ಪ್ರೇಮಕಥೆಯ ಮೂಲಕ ಆರಂಭಿಸಿದ ಶಿವಣ್ಣನ 124ನೇ ಸಿನಿಮಾ ‘ನೀ ಸಿಗೋವರೆಗೂ’ ಕೂಡಾ ಪ್ರೇಮಕಥೆಯೇ ಆಗಿದೆ. 125ನೇ ಸಿನಿಮಾ ‘ವೇದ’ಕ್ಕೆ ಸಿದ್ಧತೆ ಆರಂಭಗೊಂಡಿದ್ದು ಈ ಕುರಿತು ಸಿನಿಮಾ ಪುರವಣಿ ಜೊತೆ ಮಾತಿಗಿಳಿದ ಅವರು ಹೀಗೆಂದರು...

**

35 ವರ್ಷದ ಸಿನಿಪಯಣದಲ್ಲಿ 124ನೇ ಸಿನಿಮಾ. ಇಷ್ಟೆಲ್ಲ ಸಾಧಿಸುತ್ತೇನೆ ಎಂದುಕೊಂಡಿದ್ರಾ?

‘ಆನಂದ್‌’ ಚಿತ್ರ ಕಾಲೇಜು, ಭಾವನಾತ್ಮಕ ಪ್ರೇಮಕಥೆಯ ಕೌಟುಂಬಿಕ ಚಿತ್ರವಾಗಿತ್ತು. ಆ ಚಿತ್ರದಲ್ಲಿ ‘ನಾನು ತಮ್ಮ ಮಗ’ ಎಂದು ಅಪ್ಪನಿಂದ ಕರೆಸಿಕೊಳ್ಳುವ ಪ್ರಯತ್ನದಲ್ಲಿ ನಾಯಕನಿರುತ್ತಾನೆ. ‘ಆನಂದ್‌’ನಲ್ಲಿ ಯಾವ ಎಮೋಷನಲ್‌ ಡ್ರಾಮಾ ಇತ್ತೋ ಅದಕ್ಕಿಂತ ವಿಭಿನ್ನವಾದ ಪ್ರೇಮಕಥೆ ‘ನೀ ಸಿಗೋವರೆಗೂ’ ಚಿತ್ರದಲ್ಲಿ ಇರಲಿದೆ. 35 ವರ್ಷಗಳಲ್ಲಿ ಸಿನಿ ಪಯಣದಲ್ಲಿ ಇಷ್ಟೆಲ್ಲ ಸಾಧಿಸುತ್ತೇನೆ ಎಂದು ಅಂದುಕೊಳ್ಳಲು ಸಾಧ್ಯವೇ ಇಲ್ಲ. ಜೀವನದಲ್ಲಿ ನಿರೀಕ್ಷೆಗಿಂತ ಆಗುವುದನ್ನು ಒಪ್ಪಿಕೊಳ್ಳುತ್ತಾ ಹೋಗಬೇಕು. ಹೀಗಿದ್ದಾಗ ಜೀವನ ಚೆನ್ನಾಗಿರುತ್ತದೆ. ಇದನ್ನು ಸಾಧನೆ ಎನ್ನಲು ಸಾಧ್ಯವೇ ಇಲ್ಲ. ಇಷ್ಟು ಸಾಧಿಸುತ್ತೇನೆ ಎಂದು ನನಗೇ ಗೊತ್ತಿರಲಿಲ್ಲ. 35 ವರ್ಷದಲ್ಲಿ ನನ್ನ ತಂದೆ, ತಾಯಿ, ಕುಟುಂಬ, ಚಿ.ಉದಯ್‌ಶಂಕರ್‌, ವರದಣ್ಣ, ಚಿತ್ರರಂಗದ ನಿರ್ದೇಶಕರ ಬೆಂಬಲ, ಅಭಿಮಾನಿಗಳ ಪ್ರೀತಿ ಇವೆಲ್ಲವೂ ಈ ಸಾಧನೆಯ ಭಾಗವಾಗಿದೆ. ಈ ಬೆಂಬಲ ಇಲ್ಲದೆ ನಾನು ಏನನ್ನೂ ಸಾಧಿಸಲು ಆಗುತ್ತಿರಲಿಲ್ಲ.

‘ನೀ ಸಿಗೋವರೆಗೂ’ ಚಿತ್ರದ ಬಗ್ಗೆ?

ನಿರ್ದೇಶಕ ರಾಮು ಧುಲಿಪುಡಿ ಅವರು ಈ ಚಿತ್ರದ ಕಥೆ ಹೇಳುವಾಗ ‘ಪ್ರೇಮಕಥೆ’ ಹೊಂದಿರುವ ಚಿತ್ರವೆಂದು ನನಗೂ ಖುಷಿ ಆಯಿತು. ಏಕೆಂದರೆ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ‘ಮಫ್ತಿ’, ‘ಟಗರು’, ‘ದಿ ವಿಲನ್‌’ ರೀತಿಯ ಕೇವಲ ಆ್ಯಕ್ಷನ್‌, ರೌಡಿಸಂ ಕಥೆಯ ಚಿತ್ರಗಳನ್ನು ಮಾಡಿದ್ದೆ. ಈ ವಯಸ್ಸಿನಲ್ಲೂ ಪ್ರೇಮಕಥೆಯ ಚಿತ್ರಗಳಲ್ಲಿ ಹೇಗೆ ಕಾಣಿಸಬೇಕು ಎನ್ನುವ ಗೊಂದಲ ನನ್ನಲ್ಲಿತ್ತು. ಇದಕ್ಕೆ ರಾಮು ಅವರು ತಮ್ಮ ಸ್ಕ್ರೀನ್‌ಪ್ಲೇನಲ್ಲಿ ಬದಲಾವಣೆ ತಂದರು. ಈ ಕೋವಿಡ್‌ ಸಂದರ್ಭದಲ್ಲೂ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಾಗ ಇತರರಿಗೆ ಇದು ಪ್ರೋತ್ಸಾಹವಾಗುತ್ತದೆ. ಚಿತ್ರದ ವಿಷಯ ಬಹಳ ಸರಳವಾಗಿದ್ದರೂ, ಇದು ಎಲ್ಲರಿಗೂ ಕನೆಕ್ಟ್‌ ಆಗುತ್ತದೆ. ಯಾವುದೇ ವಸ್ತು ಅಥವಾ ಮನುಷ್ಯನೇ ಆಗಿರಬಹುದು ಸಿಗೋವರೆಗೂ ಏನು? ಸಿಕ್ಕಿದ ಮೇಲೆ ಏನು? ಸಿಗದೇ ಹೋದರೆ ಏನು? ಎಂಬುವುದು ಈ ಚಿತ್ರದ ಸಿಂಪಲ್‌ ಲೈನ್‌. ಈ ಚಿತ್ರವು ‘ರಥಸಪ್ತಮಿ’ ರೀತಿ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ನಾನಿದ್ದೇನೆ. ಕಥೆಯ ಒಳಗಡೆ ಭಾವನೆಗಳ ಯುದ್ಧವಿದೆ. ಇದರಲ್ಲಿ ಎರಡು ಶೇಡ್‌ಗಳಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ.ಸೇನಾ ಅಧಿಕಾರಿಯ ಪಾತ್ರದಲ್ಲೂ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರಕ್ಕೆ ನಾನೇ ಶೀರ್ಷಿಕೆಯ ಸಲಹೆ ನೀಡಿದ್ದೆ. ಇದು ಎಲ್ಲ ಪಾತ್ರಕ್ಕೂ ಅನ್ವಯಿಸಲಿದೆ. ‘ಭಜರಂಗಿ–2’ ಚಿತ್ರದಲ್ಲಿ ಬರುವ ಹಾಡಿನಲ್ಲಿ ಈ ಸಾಲಿದೆ.

ಯಾವಾಗಿನಿಂದ, ಎಲ್ಲೆಲ್ಲಿ ಚಿತ್ರೀಕರಣ?

ಆ.19ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ, ವಾರಣಾಸಿಯಲ್ಲಿ ಚಿತ್ರೀಕರಣ ನಡೆಯಲಿದೆ. ಆಗಸ್ಟ್‌, ಅಕ್ಟೋಬರ್‌ ಹಾಗೂ ಡಿಸೆಂಬರ್‌ನಲ್ಲಿ ಮೂರು ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಜನವರಿಯಲ್ಲಿ ಚಿತ್ರೀಕರಣ ಪೂರ್ಣಗೊಂಡು, 2022ರ ಏಪ್ರಿಲ್‌ ವೇಳೆಗೆ ಚಿತ್ರವು ತೆರೆಗೆ ಬರುವ ಸಾಧ್ಯತೆ ಇದೆ. ತೆಲುಗು ಹಾಗೂ ಕನ್ನಡದಲ್ಲಿ ಈ ಚಿತ್ರ ತೆರೆ ಕಾಣಲಿದೆ. ‘ಟಗರು’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಚರಣ್ ರಾಜ್ ಈ ಚಿತ್ರಕ್ಕೂ ಸಂಗೀತ ನಿರ್ದೇಶಕರು. ‘ಟಗರು’ ಚಿತ್ರದಲ್ಲಿ ಆ್ಯಕ್ಷನ್‌ ಹಾಗೂ ಲವ್‌ ಎಂಬ ಎರಡೂ ಫ್ಲೇವರ್‌ನ ಹಾಡುಗಳಿದ್ದವು. ‘ನೀ ಸಿಗೋವರೆಗೂ’ ಸಂಪೂರ್ಣ ಪ್ರೇಮಕಥೆ ಆಗಿರುವುದರಿಂದ ಇದಕ್ಕೆ ಮತ್ತಷ್ಟು ಅದ್ಭುತವಾಗಿ ಸಂಗೀತ ನೀಡಲಿದ್ದಾರೆ ಎನ್ನುವ ಭರವಸೆ ನನಗೆ ಇದೆ.

59 ವರ್ಷವಾಯ್ತು. ‘ಮಫ್ತಿ’ಯಲ್ಲಿನ ಪಾತ್ರದಂತ ಪಾತ್ರಗಳಲ್ಲೇ ಮುಂದುವರಿಯಬೇಕು ಎನ್ನುವ ಯೋಚನೆ ಇದೆಯೇ?

ನನಗೆ ಹಾಗೆ ಅನಿಸುವುದಿಲ್ಲ. ಸಿನಿಮಾ ಎನ್ನುವುದೇ ಒಂದು ಹಸಿವು. ಈ ಹಸಿವನ್ನು ಎಂದಿಗೂ ಬಿಟ್ಟುಕೊಡಬಾರದು. ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆ ನನ್ನದು. ಇದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಅವರದೇ ಆದ ಸ್ಟೈಲ್‌ ಇದೆ. ನನಗೆ ಎಲ್ಲ ರೀತಿಯ ಪಾತ್ರಗಳನ್ನೂ ಜೀವಿಸಬೇಕು, ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಬೇಕು ಎನ್ನುವ ಆಸೆ ನನ್ನದು. ಲಾಂಗ್‌ ಹಿಡಿದರೆ ಕೆಲವೊಮ್ಮೆ ಮಕ್ಕಳಿಗೂ ಇಷ್ಟ ಆಗುತ್ತದೆ, ವಯಸ್ಸಾದವರಿಗೂ ಇಷ್ಟ ಆಗುತ್ತದೆ. ಚಿತ್ರದ ವಿಷಯ ಹಿಡಿಸಿದಾಗ ಅದು ಲಾಂಗ್‌ ಆಗಿರಲಿ ಅಥವಾ ಗುಲಾಬಿಯೇ ಆಗಿರಲಿ ಜನರಿಗೆ ಇಷ್ಟವಾಗುತ್ತದೆ.

‘ಬೈರಾಗಿ’ಯಲ್ಲಿ ಶಿವಣ್ಣ–ಡಾಲಿ ಕಾಂಬಿನೇಷನ್‌ ಹೇಗಿದೆ?

ಡಾಲಿ ಧನಂಜಯ್‌ ಉತ್ತಮ ಸ್ನೇಹಿತ. ಅವರ ಜೊತೆಗಿನ ಸಿನಿಮಾ ಪಯಣ ಚೆನ್ನಾಗಿದೆ. ಕಾಂಬಿನೇಷನ್‌ ಎನ್ನುವುದಕ್ಕಿಂತ ಧನಂಜಯ್‌ ಒಳ್ಳೆಯ ಕಲಾವಿದ. ಅವರಲ್ಲಿ ಒಂದು ಕಿಡಿ ಇದೆ. ‘ಟಗರು’ವಿನಲ್ಲಿ ನೋಡಿದ ಧನಂಜಯ್‌ ಅವರನ್ನು ‘ಬೈರಾಗಿ’ಯಲ್ಲಿ ನೋಡಲು ಸಾಧ್ಯವಿಲ್ಲ. ಇಲ್ಲಿ ನಮ್ಮ ಕಾಂಬಿನೇಷನ್‌ ವಿಭಿನ್ನ. ಇಲ್ಲಿ ನಮ್ಮ ಪಾತ್ರಗಳೇ ಪ್ರಶ್ನೆಗಳಾಗಲಿವೆ. ಇವರೇನಾ ‘ಟಗರು’ ಚಿತ್ರದ ಡಾಲಿ–ಶಿವ? ಎನ್ನುವುದು ಪ್ರೇಕ್ಷಕರನ್ನು ಕಾಡಲಿದೆ. ಸದ್ಯಕ್ಕೆ ಈ ಚಿತ್ರದ ಪೋಸ್ಟರ್‌ನಲ್ಲಿ ನಾನು ಹುಲಿವೇಷ ಹಾಕಿ ಲುಕ್‌ ನೀಡಿದ್ದೇನೆ. ಆ ಲುಕ್‌ ಕೇವಲ ಪಬ್ಲಿಸಿಟಿ ಗಿಮಿಕ್‌. ಆದರೆ, ಚಿತ್ರದಲ್ಲಿ ನಮ್ಮನ್ನು ನೋಡಿದಾಗ ಪ್ರೇಕ್ಷಕರಿಗೆ ಖಂಡಿತವಾಗಿಯೂ ಆಶ್ಚರ್ಯವಾಗಲಿದೆ. ಬೈರಾಗಿಯಲ್ಲಿ ನನ್ನ ಪಾತ್ರಕ್ಕೆ ‘ಕರುಣೆ’ಯಿದೆ, ‘ಒರಟುತನ’ವಿದೆ, ‘ತಾಳ್ಮೆ’ಯಿದೆ.123ನೇ ಚಿತ್ರವಾದ ‘ಬೈರಾಗಿ’ಯ ಚಿತ್ರೀಕರಣ ಇನ್ನೊಂದು 10 ದಿನ ಬಾಕಿ ಇದೆ.

125ನೇ ಚಿತ್ರದ ಬಗ್ಗೆ?

125ನೇ ಚಿತ್ರ ಎ.ಹರ್ಷ ನಿರ್ದೇಶನದ ‘ವೇದ’ ನವೆಂಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಬಗ್ಗೆ ಇಷ್ಟು ಬೇಗ ಹೇಳುವುದು ಸೂಕ್ತವಾಗುವುದಿಲ್ಲ.ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT