ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ‘ದ್ರೋಣ’... ಚಿತ್ರಕಥಾ ನಿತ್ರಾಣ

Last Updated 6 ಮಾರ್ಚ್ 2020, 10:46 IST
ಅಕ್ಷರ ಗಾತ್ರ

ಚಿತ್ರ: ದ್ರೋಣ (ಕನ್ನಡ)
ನಿರ್ಮಾಣ: ಮಹದೇವ್ ಬಿ. ಸಂಗಮೇಶ್, ಶೇಶು ಚಕ್ರವರ್ತಿ
ನಿರ್ದೇಶನ: ಪ್ರಮೋದ ಚಕ್ರವರ್ತಿ
ತಾರಾಗಣ: ಶಿವರಾಜ್‌ಕುಮಾರ್, ಇನಿಯಾ, ರಂಗಾಯಣ ರಘು, ರವಿ ಕಿಶನ್, ಬಾಬು ಹಿರಣ್ಣಯ್ಯ, ಶಂಕರ ರಾವ್

ಎನ್‌. ಅನ್ಬಳಗನ್ ನಿರ್ದೇಶಿಸಿದ ‘ಸಾಟೈ’ ತಮಿಳು ಸಿನಿಮಾ ತೆರೆಕಂಡು ಎಂಟು ವಸಂತಗಳು ಸರಿದಿವೆ. ಸಮುದ್ರಖಣಿ ಅಭಿನಯಿಸಿದ್ದ ಆ ಸಿನಿಮಾದ ಕಥಾದ್ರವ್ಯವನ್ನೇ ತಂದು ಕನ್ನಡದ ಸರಿಯಿಲ್ಲದ ಎರಕಕ್ಕೆ ಸುರಿದಿದ್ದಾರೆ ನಿರ್ದೇಶಕ ಪ್ರಮೋದ್ ಚಕ್ರವರ್ತಿ.

ನಾಯಕ ಸರ್ಕಾರಿ ಶಾಲೆಯ ಮೇಷ್ಟರು. ಬೋಳೇ ವಿದ್ಯಾರ್ಥಿಗಳು ಹಾಗೂ ಬಡ್ಡಿ ವ್ಯವಹಾರಸ್ಥ ಉಪ ಮುಖ್ಯೋಪಾಧ್ಯಾಯ ಹಾಗೂ ಆತನ ವಂದಿಮಾಗಧರಿಂದ ತುಂಬಿದ ಶಾಲೆಯನ್ನು ಇಡೀ ಜಿಲ್ಲೆಯ ಜನ ನೋಡುವಂತೆ ಬೆಳೆಸುವ ಗುರುವನ್ನು ‘ದ್ರೋಣ’ ಎಂದು ಸಾಂಕೇತಿಕವಾಗಿ ಕರೆಯಲಾಗಿದೆ. ಗುರು ಎಂಬ ಹೆಸರಿನ ನಾಯಕನಾಗಿ ಶಿವರಾಜ್‌ಕುಮಾರ್ ಹಳಿತಪ್ಪಿದ ಈ ಕಥೆಯೆಂಬ ರೈಲಿನೊಳಗೆ ಕುಳಿತಿದ್ದಾರೆ.

ಸಿನಿಮಾದಲ್ಲಿ ಸಮಯ ನಿರ್ವಹಣೆ (ಟೈಮ್ ಮ್ಯಾನೇಜ್‌ಮೆಂಟ್)ನ ಅರಿವು ಹಾಗೂ ತರ್ಕದ ಕೊರತೆ ಢಾಳಾಗಿ ಕಾಣುತ್ತದೆ. ನೆಲಮಂಗಲದ ‘ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು’ ಎಂದು ಬೋರ್ಡ್‌ ತಗಲಿಸಿಕೊಂಡ ಕಟ್ಟಡ. ಒಳಗೆ ಬ್ಲ್ಯಾಕ್ ಬೋರ್ಡಿನ ಮೇಲೆ ‘12ನೇ ತರಗತಿ’ ಎಂಬ ಬರಹ. 12ನೇ ತರಗತಿ ಕಲಿಸಲು ಇದು ಕೇಂದ್ರೀಯ ವಿದ್ಯಾಲಯ ಅಲ್ಲವಲ್ಲ. ಅದೂ ಸಾಲದು ಎಂಬಂತೆ, ಶಾಲೆಯ ಆವರಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ರಾಮನವಮಿ ಆಚರಣೆ ಮಾಡಿಸಿದ್ದಾರೆ ನಿರ್ದೇಶಕರು. ಏಪ್ರಿಲ್‌ನಲ್ಲಿ ಬರುವ ರಾಮನವಮಿಯನ್ನು ಪರೀಕ್ಷಾ ಗುಂಗಲ್ಲಿ ಅಥವಾ ರಜೆಯ ಮಜದಲ್ಲಿ ಇರುವ ನಮ್ಮ ರಾಜ್ಯದ ಯಾವ ವಿದ್ಯಾರ್ಥಿ ತಾನೆ ಆಚರಿಸಿಯಾನು? ರಾಮನವಮಿಗೆ ಕೆಲವು ದಿನಗಳ ಮೊದಲಷ್ಟೇ ನಾಯಕ ವರ್ಗಾವಣೆಯಾಗಿ ಈ ಶಾಲೆಗೆ ಬರುವುದೂ ತಲೆಬುಡವಿಲ್ಲದ ಪರಿಕಲ್ಪನೆ.

ಚಿತ್ರದುದ್ದಕ್ಕೂ ನಾಯಕನ ಒಳ್ಳೆಯತನದ ಮೆರವಣಿಗೆ. ಹಾದಿಬದಿಯಲ್ಲಿ ನಿಲ್ಲುವ ಪಾತ್ರಗಳೆಲ್ಲ ಕಾರ್ಟೂನುಗಳಂತೆ. ಒಂದು ಜೋಡಿ ವಿದ್ಯಾರ್ಥಿ–ವಿದ್ಯಾರ್ಥಿನಿ ಮಾತ್ರ ತುಸು ರಿಲೀಫ್. ಮೇಲಾಗಿ ರಾಮ್‌ ಕ್ರಿಶ್‌ ಹಿನ್ನೆಲೆ ಸಂಗೀತದ ಅಹಿತಾನುಭವ.

ಅಷ್ಟು ದೊಡ್ಡ ಶಾಲೆಯಲ್ಲಿ ಒಂದೇ ತರಗತಿಯ ವಿದ್ಯಾರ್ಥಿಗಳು ಕಾಣುವುದು, ಶಿಕ್ಷಕರೆಲ್ಲ ಕ್ಲಾಸ್‌ ರೂಮಿನಲ್ಲೇ ಕುಳಿತು ಕಾಡುಹರಟೆಯಂಥ ಸಭೆ ನಡೆಸುವುದು, ಭಾವಗಳನ್ನೇ ತುಳುಕಿಸದಂತೆ ಪಾತ್ರಗಳು ಸಂಭಾಷಣೆ ಒಪ್ಪಿಸುವುದು, ನೀತಿಪಾಠದ ಹೊರತು ಬೇರಾವುದೇ ಪಠ್ಯದ ಬೋಧನೆಯೇ ಇಲ್ಲದಿರುವುದು– ಸಿನಿಮಾದ ಶಿಥಿಲಭಿತ್ತಿಗೆ ಕನ್ನಡಿ ಹಿಡಿಯುತ್ತವೆ.

ಶಿವರಾಜ್‌ಕುಮಾರ್ ಅಭಿನಯಕ್ಕೂ ಸಿನಿಮಾ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅತಿ ನಟನೆಯಿಂದ ರಂಗಾಯಣ ರಘು ಅತ್ತ ಕೂಳನೂ ಆಗದೇ, ಹಾಸ್ಯಗಾರನೂ ಆಗದೆ ಕಿರಿಕಿರಿ ಉಂಟುಮಾಡಿದ್ದಾರೆ. ಖಳನಾಯಕ ಕಿಶನ್ ಅವರದ್ದು ಕೂಡ ಸಿನಿಮಾದಲ್ಲಿ ನಿರ್ಲಕ್ಷಿತ ಪಾತ್ರ.

ಹಾರಿಬಿಟ್ಟ ಗಾಳಿಪಟವೊಂದು ತಂತಿಗೆ ಸಿಕ್ಕಿಬಿಟ್ಟಿದೆ. ಅಂತಹ ಸ್ಥಿತಿಯೇ ಈ ಸಿನಿಮಾದ್ದೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT