ಶಿವಣ್ಣ ವೆಬ್ ಸಿರೀಸ್ ಮುಂದಿನ ವರ್ಷ

ಗುರುವಾರ , ಜೂಲೈ 18, 2019
23 °C

ಶಿವಣ್ಣ ವೆಬ್ ಸಿರೀಸ್ ಮುಂದಿನ ವರ್ಷ

Published:
Updated:
Prajavani

ಉಪೇಂದ್ರ ನಿರ್ದೇಶನದ, ಶಿವರಾಜ್‌ ಕುಮಾರ್‌ ಅಭಿನಯದ ‘ಓಂ’ ಸಿನಿಮಾ ನೆನಪಿದೆ ಅಲ್ವಾ?! ಶಿವರಾಜ್‌ ಕುಮಾರ್ ಹಾಗೂ ಉಪೇಂದ್ರ ಅಭಿಮಾನಿಗಳಿಗೆ ಈ ಸಿನಿಮಾ ಮರೆಯಲು ಎಂದಾದರೂ ಸಾಧ್ಯವೇ?

‘ಓಂಕಾರ’ ಎನ್ನುವ ಹೆಸರಿನಲ್ಲಿ ಈಗ ಶಿವಣ್ಣ ಒಂದು ವೆಬ್‌ ಸಿರೀಸ್‌ನಲ್ಲಿ ಅಭಿನಯಿಸಿದರೆ? ‘ಓಂ’ ಸಿನಿಮಾ ಪುನಃ ನೆನಪಾಗದೆ ಇದ್ದೀತೇ, ಅಭಿಮಾನಿಗಳಿಗೆ ಹಬ್ಬದೂಟ ದಕ್ಕದೆ ಇದ್ದೀತೇ? ಹೌದು, ಶಿವಣ್ಣ ಅವರು ಮುಂದಿನ ವರ್ಷ ಕನ್ನಡದ ಒಂದು ವೆಬ್‌ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಇದರ ನಿರ್ಮಾಣದ ಹೊಣೆಯನ್ನು ಅವರ ಪುತ್ರಿ ಹೊತ್ತುಕೊಂಡಿದ್ದಾರೆ.

ವೆಬ್‌ ಸಿರೀಸ್‌ಗಾಗಿ ಕಥೆ, ಚಿತ್ರಕಥೆ ಸಿದ್ಧವಾಗುತ್ತಿದೆ. ಆದರೆ, ಕಥೆಯ ಎಳೆ ಏನಿರುತ್ತದೆ, ನಿರ್ದೇಶನ ಯಾರು ಮಾಡುತ್ತಾರೆ ಎಂಬುದು ಇನ್ನೂ ಗುಟ್ಟಾಗಿಯೇ ಇದೆ. ಅಂದಹಾಗೆ, ಈ ವೆಬ್ ಸಿರೀಸ್‌ಗೆ ‘ಓಂಕಾರ’ ಎನ್ನುವ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಈ ಹೆಸರು ಇಟ್ಟರೆ ಸರಿಹೋಗಬಹುದೇ ಎಂಬ ಮಾತುಕತೆ ನಡೆದಿದೆ. ಹಾಗಾಗಿ, ಇದು ‘ಓಂ’ ಚಿತ್ರದ ಜೊತೆ ಸಂಬಂಧ ಹೊಂದಿರಲಿದೆ ಎಂದು ಭಾವಿಸಲು ಆಗದು.

‘ಸಿನಿಮಾಗಳ ಮೂಲಕ ಆಗದ ಅಭಿವ್ಯಕ್ತಿ ವೆಬ್‌ ಸಿರೀಸ್‌ ಮೂಲಕ ಸಾಧ್ಯವಾಗುತ್ತಿದೆ. ಹಾಗಾಗಿ ನಾನು ಇದರಲ್ಲಿ ನಟಿಸುತ್ತಿದ್ದೇನೆ’ ಎಂದು ಶಿವಣ್ಣ ತಿಳಿಸಿದ್ದಾರೆ.

ಜುಲೈನಲ್ಲಿ ಶಸ್ತ್ರಚಿಕಿತ್ಸೆ: ಭುಜದ ನೋವಿಗೆ ತುತ್ತಾಗಿರುವ ಶಿವಣ್ಣ, ಲಂಡನ್‌ಗೆ ತೆರಳಲಿದ್ದು, ಜುಲೈ 10ರಂದು ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹಾಗಾಗಿ ಅವರು ಈ ಬಾರಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವ ಅವಕಾಶ ಮಿಸ್ ಮಾಡಿಕೊಳ್ಳಲಿದ್ದಾರೆ.

‘ಶಸ್ತ್ರಚಿಕಿತ್ಸೆ ನಡೆದ ಮೊದಲ ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು. ಸೆಪ್ಟೆಂಬರ್‌ನಲ್ಲಿ ಸಣ್ಣಪುಟ್ಟ ದೃಶ್ಯಗಳ ಚಿತ್ರೀಕರಣ ಶುರು ಮಾಡಬಹುದು. ನವೆಂಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳಬಹುದು’ ಎಂದು ಶಿವಣ್ಣ ಸುದ್ದಿಗಾರರಿಗೆ ತಿಳಿಸಿದರು.

ಶಿವಣ್ಣ ಜನವರಿಯಲ್ಲಿ ಅಮೆರಿಕಕ್ಕೆ ಹೋಗಿದ್ದಾಗ, ಕಾಲು ಜಾರಿ ಬಿದ್ದಿದ್ದರು. ಅಲ್ಲಿಂದ ಈ ನೋವಿನ ಸಮಸ್ಯೆ ಅವರಿಗೆ ಎದುರಾಯಿತು.

Post Comments (+)