ಬುಧವಾರ, ಜುಲೈ 28, 2021
29 °C

‘ಟಗರು’ ಬಳಿಕ ಮತ್ತೆ ಒಂದಾದ ಶಿವಣ್ಣ–ಡಾಲಿ ಜೋಡಿ: ಯಾವುದಾ ಚಿತ್ರ? ಯಾರ ನಿರ್ದೇಶನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದುನಿಯಾ’ ಸೂರಿ ನಿರ್ದೇಶನದ ‘ಟಗರು’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿದ್ದು ಹಳೆಯ ಸುದ್ದಿ. ಈ ಚಿತ್ರ ಹಲವು ಕಲಾವಿದರ ವೃತ್ತಿಬದುಕಿಗೆ ಹೊಸ ತಿರುವು ನೀಡಿತ್ತು. ನಟ ಶಿವರಾಜ್‌ಕುಮಾರ್‌ ಮತ್ತು ಧನಂಜಯ್‌ ಕಾಂಬಿನೇಷನ್‌ ತೆರೆಯ ಮೇಲೆ ಭರ್ಜರಿಯಾದ ಫಲ ನೀಡಿತ್ತು. ‘ಡಾಲಿ’ ಪಾತ್ರದಲ್ಲಿ ಧನಂಜಯ್‌ ಅಬ್ಬರಿಸಿದ್ದರು.

ಈ ಸಿನಿಮಾ ತೆರೆಕಂಡು ಈಗಾಗಲೇ ಎರಡು ವರ್ಷಗಳು ಉರುಳಿವೆ. ಮತ್ತೆ ಶಿವಣ್ಣ ಮತ್ತು ಧನಂಜಯ್‌ ಯಾವಾಗ ಒಟ್ಟಾಗಿ ನಟಿಸುತ್ತಾರೆ ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದರು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕಾಲಿವುಡ್‌ನ ನಿರ್ದೇಶಕ ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ಈ ಇಬ್ಬರು ನಟಿಸುವುದು ಪಕ್ಕಾ ಆಗಿದೆ. ಕಥೆ, ಚಿತ್ರಕಥೆ ಮತ್ತು ಛಾಯಾಗ್ರಹಣದ ಹೊಣೆಯನ್ನು ಮಿಲ್ಟನ್‌ ಅವರೇ ಹೊತ್ತಿದ್ದಾರೆ.

ಇದಕ್ಕೆ ಕೃಷ್ಣ ಸಾರ್ಥಕ್‌ ಬಂಡವಾಳ ಹೂಡಲಿದ್ದಾರೆ. ಅನೂಪ್ ಸಿಳೀನ್ ಸಂಗೀತ ಸಂಯೋಜಿಸಲಿದ್ದಾರೆ. ಅಂದಹಾಗೆ ಈ ಚಿತ್ರ 2021ಕ್ಕೆ ಸೆಟ್ಟೇರಲಿದೆಯಂತೆ. ಈ ಬಗ್ಗೆ ಧನಂಜಯ್‌ ಟ್ವಿಟರ್‌ನಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಸಿನಿಮಾದ ಟೀಸರ್‌ ಇಂದು ಸಂಜೆ 7:20ಕ್ಕೆ ಬಿಡುಗಡೆಯಾಗಲಿದೆ.

ಶಿವಣ್ಣ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ

ಜುಲೈ 12ರಂದು ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಅವರ ಜನ್ಮ ದಿನ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಕೆಲವು ದಿನಗಳ ಹಿಂದೆಯೇ ಅಭಿಮಾನಿಗಳಿಗೆ ಸಂದೇಶ ಕೂಡ ನೀಡಿದ್ದಾರೆ.

‘ನಾನು ಚೆನ್ನಾಗಿದ್ದೇನೆ. ನೀವು ಚೆನ್ನಾಗಿರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಬರ್ತ್ ಡೇ ದಿನ ನಾನು ಮನೆಯಲ್ಲಿ ಇರುವುದಿಲ್ಲ. ನಿಮ್ಮೆಲ್ಲರಿಗೂ ಗೊತ್ತಿದೆ. ಏಕೆ ಅಂತಲೂ ಗೊತ್ತಿದೆ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಅಂದು ಮನೆಯ ಹತ್ತಿರ ಬರಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ಎಲ್ಲರೂ ಒಂದು ಕಡೆ ಭೇಟಿಯಾಗೋಣ’ ಎಂದು ಹೇಳಿದ್ದಾರೆ ಶಿವಣ್ಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು